ಸದನದ ಬಾವಿಯಲ್ಲಿ ಧರಣಿ ನಡೆಸಿ, ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಮೇಲೆ ವಿಧೇಯಕ ಪ್ರತಿಗಳನ್ನು ಹರಿದು ಪೀಠಕ್ಕೆ ಎಸೆದ ಹಿನ್ನೆಲೆಯಲ್ಲಿ ಬಿಜೆಪಿಯ 10 ಶಾಸಕರನ್ನು ಅಮಾನತು ಮಾಡಿ ವಿಧಾನ ಸಭಾಧ್ಯಕ್ಷ ಯು ಟಿ ಖಾದರ್ ಆದೇಶಿಸಿದ್ದಾರೆ.
ಅಧಿವೇಶನ ಮುಗಿಯುವವರೆಗೂ ಭಾಗವಹಿಸದಂತೆ ಅಮಾನತು ಮಾಡಲಾಗಿದೆ. ಅಸಭ್ಯ ನಡವಳಿಕೆ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಸದನದಲ್ಲಿ ಅಗೌರವ ತೋರಿದ 10 ಬಿಜೆಪಿ ಶಾಸಕರನ್ನು ಅಮಾನತು ಮಾಡಲಾಗಿದೆ. ಡಾ.ಅಶ್ವತ್ಥ್ ನಾರಾಯಣ, ವೇದವ್ಯಾಸ ಕಾಮತ್, ಅರವಿಂದ ಬೆಲ್ಲದ್, ಧೀರಜ್ ಮುನಿರಾಜು, ಯಶ್ಪಾಲ್ ಸುವರ್ಣ, ಸುನೀಲ್ ಕುಮಾರ್, ಆರ್.ಅಶೋಕ್, ಉಮಾನಾಥ್ ಕೋಟ್ಯಾನ್, ಆರಗ ಜ್ಞಾನೇಂದ್ರ, ವೈ ಭರತ್ ಶೆಟ್ಟಿ ಈ ಅಧಿವೇಶನ ಮುಗಿಯುವವರೆಗೂ ಅಮಾನತು ಮಾಡಲಾಗಿದೆ.
ಜುಲೈ 21ರವರೆಗೆ ಅಧಿವೇಶನ ನಡೆಯಲಿದೆ.
ಘಟನೆಯ ಹಿನ್ನೆಲೆ
ಇಂದಿನ (ಜು.19) ನಡೆದ ವಿಧಾನಸಭಾ ಅಧಿವೇಶನ ಕಲಾಪದಲ್ಲಿ ಬಿಜೆಪಿ ಸದಸ್ಯರು ಸಚಿವರು ಮಂಡಿಸಿದ ಐದು ವಿಧೇಯಕ ಪ್ರತಿಗಳನ್ನು ಹರಿದು ಸ್ಪೀಕರ್ ಪೀಠಕ್ಕೆ ಎಸೆದ ಘಟನೆ ನಡೆಯಿತು.
ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ನಡೆದ ವಿರೋಧ ಪಕ್ಷಗಳ ಸಭೆಗೆ ಆಗಮಿಸಿದ್ದ ಗಣ್ಯರಿಗೆ ರಾಜ್ಯ ಸರ್ಕಾರ ಐಎಎಸ್ ಅಧಿಕಾರಿಗಳ ನಿಯೋಜನೆ ವಿಚಾರವಾಗಿ ಬೆಳಿಗ್ಗೆಯಿಂದಲೇ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಗಲಾಟೆ ಮಾಡಲು ಆರಂಭಿಸಿದರು.
ನಂತರ ಸಭಾಧ್ಯಕ್ಷ ಯು ಟಿ ಖಾದರ್ ಅವರು ಸದನವನ್ನು ಕೆಲ ಕಾಲ ಮುಂದೂಡಿದ್ದರು. ಮತ್ತೆ ಆರಂಭವಾದ ಸದನದಲ್ಲಿ ಬಿಜೆಪಿ ಸದಸ್ಯರು ಪ್ರತಿಭಟನೆ ಹಿಂಪಡೆಯದೆ ಜೋರು ಧ್ವನಿಯಲ್ಲಿ ಸರ್ಕಾರದ ನಡೆಯನ್ನು ಖಂಡಿಸಿದರು. ಸಭಾಧ್ಯಕ್ಷರು ವಿನಂತಿಸಿಕೊಂಡರು ಪ್ರತಿಪಕ್ಷಗಳ ಸದಸ್ಯರು ತಮ್ಮ ಆಸನಗಳಿಗೆ ತೆರಳಲಿಲ್ಲ.
ಈ ವೇಳೆ ಸದನ ನಡೆಯಲು ಸಭಾಧ್ಯಕ್ಷರು ಅವಕಾಶ ಮಾಡಿಕೊಟ್ಟರು. ಬಿಜೆಪಿ ಸದಸ್ಯರ ಗಲಾಟೆ ನಡುವೆಯೇ ಎಚ್ ಕೆ ಪಾಟೀಲ್, ಕೃಷ್ಣಭೈರೇಗೌಡ ಅವರು ಐದು ವಿಧೇಯಕ ಮಂಡಿಸಿದರು. ಗಲಾಟೆ ನಡುವೆಯೇ ಐದು ಮಸೂದೆಗಳನ್ನು ಸದನದಲ್ಲಿ ಅಂಗೀಕರಿಸಲಾಯಿತು.
ಸದನದ ಬಾವಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಧರಣಿ ಹಿನ್ನೆಲೆಯಲ್ಲಿ ಭೋಜನ ವಿರಾಮ ರದ್ದುಪಡಿಸಿ ಕಲಾಪ ಮುಂದುವರಿಸಿದ ಸ್ಪೀಕರ್ ಯು ಟಿ ಖಾದರ್, ಬಳಿಕ ಸದನ ನಡೆಸುವಂತೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಸೂಚಿಸಿದರು. ಪೀಠ ಸ್ವೀಕರಿಸಿದ ಬಳಿ ಬಜೆಟ್ ಮೇಲಿನ ಚರ್ಚೆಯನ್ನು ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಮುಂದುವರಿಸಿದರು.
ಈ ವೇಳೆ ಸದನದ ಬಾವಿಯಲ್ಲಿ ಧರಣಿ ಮುಂದುವರಿಸಿದ ಬಿಜೆಪಿ ಶಾಸಕರು, ಏಕಾಏಕಿ ಮಸೂದೆಯ ಪ್ರತಿಗಳನ್ನು ಹರಿದು ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಮೇಲೆ ಎಸೆದರು. ಇದಕ್ಕೆ ಉಪ ಸ್ಪೀಕರ್ ರುದ್ರಪ್ಪ ಲಮಾಣಿ ಕಿಡಿಕಾರಿದರು.
“ಜನಪ್ರತಿನಿಧಿಗಳಾಗಿ ಈ ರೀತಿ ವರ್ತಿಸುತ್ತಿರುವುದು ಸರಿಯಲ್ಲ. ನಿಮಗೆ ಗೌರವ ತರುವಂಥದ್ದಲ್ಲ ಎಂದು ಆಕ್ರೋಶ ಹೊರಹಾಕಿ, ಕೂಡಲೇ ಬಿಜೆಪಿ ಶಾಸಕರನ್ನು ಕಲಾಪದಿಂದ ಹೊರಹಾಕುವಂತೆ ಮಾರ್ಷಲ್ಗಳಿಗೆ ಸೂಚಿಸಿದರು. ಇದೇ ವೇಳೆ ಉಪ ಸ್ಪೀಕರ್ಗೆ ರಕ್ಷಣೆ ಕೊಡದ ಮಾರ್ಷಲ್ಗಳ ವಿರುದ್ಧ ಸಚಿವ ಕೃಷ್ಣಬೈರೇಗೌಡ ಸೇರಿದಂತೆ ಕಾಂಗ್ರೆಸ್ ಸದಸ್ಯರು ಕಿಡಿಕಾರಿದರು.
ಬಳಿಕ ಸಭೆಯನ್ನು ಮೂರು ಗಂಟೆಯವರೆಗೆ ಉಪ ಸಭಾಧ್ಯಕ್ಷರು ಮುಂದೂಡಿದರು. ಆ ಬಳಿಕವೂ ಕೆಲ ನಿಮಿಷಗಳವರೆಗೆ ಬಿಜೆಪಿ-ಕಾಂಗ್ರೆಸ್ ಶಾಸಕರ ನಡುವೆ ವಾಗ್ವಾದ ನಡೆಯಿತು.
ತಲೆಬರಹ ( ಶೀರ್ಷಿಕೆ) ಇರೋದೆ ಬೇರೆ, ಒಳಗೆ ಸುದ್ದಿ ಇರೋದೆ ಬೇರೆ, ಸರಿಪಡಿಸಿ.