ಕರ್ನಾಟಕ ರಾಜ್ಯ ಪೋಲಿಸ್ ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ಸಲ್ಲಿಸಿರುವ ನೂತನ ಕಾರಾಗೃಹ ನಿರ್ಮಾಣ ಕಾಮಗಾರಿಗಾಗಿ ವಿವಿಧ ಜಾತಿಯ 626 ಮರಗಳನ್ನು ಸಂಪೂರ್ಣವಾಗಿ ಕತ್ತರಿಸಲು ಬೆಂಗಳೂರು ಗ್ರಾಮಾಂತರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮುಂದಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ವ್ಯಾಪ್ತಿಯ ಸರ್ವೇ ನಂ. 100 ರ ಜಮೀನಿನಲ್ಲಿ 600 ಬಂದಿಗಳ ಸಾಮರ್ಥ್ಯದ ನೂತನ ಕೇಂದ್ರ ಕಾರಾಗೃಹದ ವಸತಿಯೇತರ ಕಟ್ಟಡ ಮತ್ತು ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯು ಅರಣ್ಯ ಇಲಾಖೆಗೆ ಪ್ರಸ್ತಾವಣೆ ಸಲ್ಲಿಸಿದೆ.
ಪ್ರಸ್ತಾಪಿತ ಪ್ರಸ್ತಾವಣೆಯಲ್ಲಿ ಸರ್ವೇ ನಂ. 100 ರ ಜಮೀನಿನಲ್ಲಿ ಕಾರಾಗೃಹ ನಿರ್ಮಣದ ಕಾಮಗಾರಿಗೆ ಅಡ್ಡಬರುತ್ತಿರುವ ವಿವಿಧ ಜಾತಿಯ 626 ಮರಗಳನ್ನು ಬುಡಸಮೇತ ನಾಶಗೊಳಿಸುವಂತೆ ದೇವನಹಳ್ಳಿಯ ಬಯಲು ಕಾರಾಗೃಹ ಅಧೀಕ್ಷಕರು ಅರಣ್ಯ ಇಲಾಖೆಯನ್ನು ಕೋರಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ‘ಮೋದಿ ಶರಣಾಗಿದ್ದಾರೆ’ ಎಂಬ ರಾಹುಲ್ ಹೇಳಿಕೆಯು ಹಲವು ಪ್ರಶ್ನೆಗಳನ್ನು ಎತ್ತುತ್ತದೆ
ಈಗ ಅರಣ್ಯ ಇಲಾಖೆ 626 ಮರಗಳಿಗೆ ಕೊಡಲಿ ಏಟು ಹಾಕಲು ಸಜ್ಜಾಗಿ ನಿಂತಿದೆ. ಪ್ರಸ್ತಾಪಿತ ಸರ್ವೇ ನಂಬರ್‌ನಲ್ಲಿ ಮರಗಳನ್ನು ತೆರವುಗೊಳಿಸುವ ಸಂಬಂಧ ಸಾರ್ವಜನಿಕರ ಆಕ್ಷೇಪಣೆ / ಸಲಹೆಗಳಿದ್ದಲ್ಲಿ ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯಿದೆ 1976 ಸೆಕ್ಷನ್ 8(3)(vii) ಪ್ರಕಾರ ಸಲಹೆ ಸೂಚನೆ ನೀಡಲು ಬೆಂಗಳೂರು ಗ್ರಾಮಾಂತರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಇಂದು (ಜೂ. 9) ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.
ಪ್ರಕಟಣೆ ಹೊರಡಿಸಿದ ದಿನಾಂಕದಿಂದ 10 ದಿನಗಳೊಳಗಾಗಿ ಸೂಚನೆ, ಆಕ್ಷೇಪಣೆಗಳು ಪ್ರಸ್ತಾವಿತ ಯೋಜನೆಗೆ ಮಾತ್ರ ಸಲ್ಲಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.
ಸಸಿಗಳು ಪೂರ್ಣ ಪಕ್ವತೆಯನ್ನು ತಲುಪಿ ಮರವಾಗಲು 10-20 ವರ್ಷಗಳು ಅಥವಾ ಅದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತವೆ. ಅರಣ್ಯವನ್ನು ರಕ್ಷಿಸಬೇಕಾದ ಇಲಾಖೆಯೇ ಬರೊಬ್ಬರಿ 626 ಮರಗಳ ಮಾರಣಹೋಮಕ್ಕೆ ಮುಂದಾಗಿರವುದು ಇಲಾಖೆಗೆ ಒಪ್ಪುವ ನಡೆಯಲ್ಲ.
