ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಂತಹ ‘ಸಾಮಾನ್ಯ ವ್ಯಕ್ತಿಗಳಿಗೆ’ ಡಿಎಂಕೆ ಹೆದರಲ್ಲ. ಬಿಜೆಪಿ ತಮಿಳುನಾಡಿನಲ್ಲಿ ನೆಲೆಗೊಳ್ಳದಂತೆ ನೋಡಿಕೊಳ್ಳುವ ಬಿಜೆಪಿ ವಿರೋಧಿ ಸಿದ್ಧಾಂತ ನಮ್ಮ ರಾಜ್ಯದಲ್ಲಿದೆ ಎಂದು ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಹಿರಿಯ ನಾಯಕ, ಸಂಸದ ಎ ರಾಜಾ ಸೋಮವಾರ ಹೇಳಿದರು.
ಭಾನುವಾರ ಮಧುರೈನಲ್ಲಿ ಆಡಳಿತಾರೂಢ ಡಿಎಂಕೆ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ. ಮುಂದಿನ ವರ್ಷ ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಎನ್‌ಡಿಎ ಸರ್ಕಾರ ರಚಿಸಲಿದೆ ಎಂದು ಪ್ರತಿಪಾದಿಸಿದರು.
ಇದನ್ನು ಓದಿದ್ದೀರಾ? ತಮಿಳುನಾಡು | ಬಿಜೆಪಿ ನಾಯಕನ ಕೊಲೆ; ಡಿಎಂಕೆ ಸರ್ಕಾರದ ವಿರುದ್ಧ ವಿಪಕ್ಷಗಳ ವಾಗ್ದಾಳಿ
ಇದಕ್ಕೆ ಪ್ರತಿಕ್ರಿಯೆಯಾಗಿ ಡಿಎಂಕೆ ನಾಯಕ ರಾಜಾ ಅವರು ಸೋಮವಾರ ಚೆನ್ನೈನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ. “ಬಿಜೆಪಿಯ ಹಿರಿಯ ನಾಯಕರ ಹೇಳಿಕೆಗಳು ಶುದ್ಧ ಸುಳ್ಳು, ಅಸಹ್ಯಕರ. ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗಳಲ್ಲಿ ದೆಹಲಿ ಅಥವಾ ಮಹಾರಾಷ್ಟ್ರವಲ್ಲದೆ ದ್ರಾವಿಡ ಸಿದ್ಧಾಂತವನ್ನು ಎದುರು ಹಾಕಿ ಬಿಜೆಪಿ ತಮಿಳುನಾಡಿನಲ್ಲಿ ನೆಲೆಗೊಳ್ಳಲು ಸಾಧ್ಯವಿಲ್ಲ” ಎಂದರು.
“ಅರವಿಂದ್ ಕೇಜ್ರಿವಾಲ್(ದೆಹಲಿಯಲ್ಲಿ) ಅಧಿಕಾರಕ್ಕೆ ಹೇಗೆ ಬಂದರು? ಅವರು ಭ್ರಷ್ಟಾಚಾರವನ್ನು ಮಾತ್ರ ವಿರೋಧಿಸಿದರು. ಅವರಿಗೆ ಸಿದ್ಧಾಂತವಿದೆಯೇ? ಅವರ ಹಿಂದೆ ನಾಯಕರು ಇದ್ದರಾ? ನಾವು ಅಮಿತ್ ಶಾ ಮತ್ತು ಮೋದಿಗೆ ಹೆದರುವುದಿಲ್ಲ. ಅವರು ಸಾಮಾನ್ಯ ವ್ಯಕ್ತಿಗಳು” ಎಂದು ತಿಳಿಸಿದರು.
“ಅವರ(ಮೋದಿ-ಶಾ) ರಾಜಕೀಯ ಸಿದ್ಧಾಂತವು ಎಲ್ಲೆಡೆ ಆಕ್ರಮಣ ಮಾಡಿ ಗೆಲ್ಲುತ್ತಿದೆ. ಆದರೆ ಅದು ಇಲ್ಲಿ(ತಮಿಳುನಾಡು) ಗೆಲ್ಲಲು ಏಕೆ ಸಾಧ್ಯವಾಗುತ್ತಿಲ್ಲ? ಏಕೆಂದರೆ ಬಿಜೆಪಿಯ ಸಿದ್ಧಾಂತಕ್ಕೆ ನಮ್ಮಲ್ಲಿ ಪರ್ಯಾಯ ಸಿದ್ಧಾಂತವಿದೆ. ದ್ರಾವಿಡ ಸಿದ್ಧಾಂತವು ಇರುವವರೆಗೆ ಅವರು ತಮಿಳುನಾಡಿನಲ್ಲಿ ನೆಲೆಗೊಳ್ಳಲು ಅವಕಾಶ ನೀಡಿಲ್ಲ. ನಾವು ದೆಹಲಿ, ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿಲ್ಲ. ನಾವು ತಮಿಳುನಾಡು ಜನರು, ನಾವು ದ್ರಾವಿಡರು. ಬಿಜೆಪಿ ಇಲ್ಲಿಗೆ ಬರಲು ಸಾಧ್ಯವಿಲ್ಲ” ಎಂದು ತಿರುಗೇಟು ನೀಡಿದರು.
2026ರಲ್ಲಿ ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಚುನಾವಣೆಗೆ ಈಗಾಗಲೇ ಎಲ್ಲಾ ಪಕ್ಷಗಳು ತಯಾರಿ ನಡೆಸುತ್ತಿದೆ. ಆಡಳಿತಾರೂಢ ಡಿಎಂಕೆ ವಿರುದ್ಧ ಬಿಜೆಪಿ, ಬಿಜೆಪಿ ವಿರುದ್ಧ ಡಿಎಂಕೆ ನಿರಂತರ ವಾಗ್ದಾಳಿ ನಡೆಸುತ್ತಿದೆ.
