ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಂಗಳವಾರ (ಜೂ.10) ದೆಹಲಿಗೆ ಬರುವಂತೆ ಹೈಕಮಾಂಡ್ ಬುಲಾವ್ ನೀಡಿದ್ದು, ಬೆಳಿಗ್ಗೆ 7 ಗಂಟೆಗೆ ಪ್ರಯಾಣ ಬೆಳಸಲಿದ್ದಾರೆ.
ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ 11 ಯುವಕರು ಸಾವನ್ನಪ್ಪಿದ್ದು, ಸರ್ಕಾರಕ್ಕೆ ಕೆಟ್ಟ ಹೆಸರು ಬಂದಿದೆ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಪಕ್ಷದ ವರಿಷ್ಠರನ್ನು ಭೇಟಿಯಾಗಲಿರುವ ಸಿದ್ದರಾಮಯ್ಯ ಅವರು ಇತ್ತೀಚಿನ ಬೆಳವಣಿಗೆಗಳ ಬಗ್ಗೆ ವಿವರ ನೀಡಲಿದ್ದಾರೆ.
ಆರ್ಸಿಬಿ ವಿಜಯೋತ್ಸವ ವೇಳೆ ಸಂಭವಿಸಿದ ಕಾಲ್ತುಳಿತ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಇದರಿಂದ ಕಾಂಗ್ರೆಸ್ ತೀವ್ರ ಮುಜುಗರಕ್ಕೀಡಾಗಿದೆ. ರಾಜ್ಯ ಸರ್ಕಾರ ತರಾತುರಿಯಲ್ಲಿ ವಿಜಯೋತ್ಸವಕ್ಕೆ ಅನುಮತಿ ನೀಡಿರುವ ಬಗ್ಗೆ ಪ್ರತಿಪಕ್ಷಗಳು ಗಂಭೀರ ಆರೋಪ ಮಾಡುತ್ತಿವೆ. ಕಾಲ್ತುಳಿತ ಸುತ್ತ ಎದ್ದಿರುವ ಗೊಂದಲ, ಆರೋಪಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಹೈಕಮಾಂಡ್ ಮುಂದೆ ಸ್ಪಷ್ಟನೆ ಕೊಡಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರೌಡಿಶೀಟರ್ ಸುಹಾಸ್ ಹತ್ಯೆ ತನಿಖೆಗೆ ಎನ್‌ಐಎ ಪ್ರವೇಶ: ಸಮಾಜಕ್ಕೆ ಕೊಟ್ಟ ಸಂದೇಶವೇನು?
ವಿಧಾನಸೌಧದಲ್ಲಿ ಆರ್ಸಿಬಿ ತಂಡದ ಸನ್ಮಾನದ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾ ಕಂಡುಬಂದಿದೆ. ಭದ್ರತಾ ವ್ಯವಸ್ಥೆ ಮಾಡದೇ ಆತುರ ಆತುರವಾಗಿ ವಿಜಯೋತ್ಸವ ನಡೆಸಲು ಅನುವು ಮಾಡಿಕೊಟ್ಟ ಸರ್ಕಾರದ ನಡೆಯನ್ನು ಪ್ರತಿಕ್ಷಗಳು ತೀವ್ರವಾಗಿ ಟೀಕಿಸಿವೆ. ಇದರಿಂದ ಕಾಂಗ್ರೆಸ್ ಪಕ್ಷ ತೀವ್ರ ಮುಜುಗರ ಎದುರಿಸುತ್ತಿದೆ.
ಎಂಎಲ್‌ಸಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ
ರಾಜ್ಯ ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳಿಗೆ ನಾಲ್ವರು ಎಂಎಲ್‌ಸಿಗಳ ನಾಮನಿರ್ದೇಶನಕ್ಕೆ ಕೊನೆ ಕ್ಷಣದಲ್ಲಿ ತಡೆಬಿದ್ದಿದೆ. ದಲಿತ ಮುಖಂಡ ಡಿ.ಜಿ.ಸಾಗರ್, ಹಿರಿಯ ಪತ್ರಕರ್ತ ದಿನೇಶ್ ಅಮಿನ್‌ಮಟ್ಟು, ಮಾಜಿ ಎಂಎಲ್‌ಸಿ ರಮೇಶ್ ಬಾಬು ಹಾಗೂ ಎನ್‌ಆರ್‌ಐ ಅಧ್ಯಕ್ಷೆಯಾಗಿರುವ ಆರತಿ ಕೃಷ್ಣ ಹೆಸರುಗಳು ಹೈಕಮಾಂಡ್ ಕಡೆಯಿಂದ ಫೈನಲ್ ಆಗಿದೆ ಎಂದು ತಿಳಿದುಬಂದಿತ್ತು. ಆದರೆ, ಕೊನೆ ಕ್ಷಣದಲ್ಲಿ ಹೈಕಮಾಂಡ್ ಬ್ರೇಕ್ ಹಾಕಿದೆ. ಈ ಕುರಿತು ಸಹ ಸಿಎಂ ಸಿದ್ದರಾಮಯ್ಯ ಅವರು ಹೈಕಮಾಂಡ್ ಜೊತೆ ಚರ್ಚೆ ನಡೆಸಲಿದ್ದಾರೆ.