“ಅಂದು ಅನಂತಮೂರ್ತಿ ಅವರು ಆರಂಭಿಸಿದ ಚಲನೆಯು ಇಂದು ಬಾನು ಮುಷ್ತಾಕ್‌ರಿಂದ ಪೂರ್ಣವಾಗಿದೆ. ಬಾನು ಮತ್ತು ಭಾಸ್ತಿ ಈಗ ಕನ್ನಡಕ್ಕೆ ಬೂಕರ್ ಪ್ರಶಸ್ತಿ ತಂದು ಕನ್ನಡ ಭಾಷೆಯ ಕಂಪನ್ನು ಜಗತ್ತಿಗೆ ಪಸರಿಸಿದ್ದಾರೆ ಹಾಗೂ ಈ ಪ್ರೇರಣೆಯಿಂದ, ಬಾನು ಅವರ ಕಥೆಗಳ ಪ್ರಭಾವದಿಂದ ಇನ್ನಷ್ಟು ಕನ್ನಡ ಮೂಲ ಸಾಹಿತ್ಯವನ್ನು ಓದುವ ಆಸಕ್ತಿ ಬೆಳೆಯಲಿದೆ” ಎಂದು ಹಿರಿಯ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ತಿಳಿಸಿದರು.
ತುಮಕೂರು ನಗರದ ಕನ್ನಡ ಭವನದಲ್ಲಿ ಕರ್ನಾಟಕ ಲೇಖಕಿಯರ ಸಂಘ ಜಿಲ್ಲಾ ಶಾಖೆ ತುಮಕೂರು, ತುಮಕೂರಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮಿಲಿಟರಿ ಪ್ರಕಾಶನ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಕುಂಡದ ಬೇರು ಕಥಾ ಸಂಕಲನನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, “ಲೇಖಕಿ ಪ್ರತಿಭಾ ನಂದಕುಮಾರ್ ಅವರ ಮಾತನ್ನು ನೆನೆಯುತ್ತಾ ಬದುಕು ಮತ್ತು ಸಾಹಿತ್ಯದ ನಡುವಿನ ಗೆರೆಯನ್ನು ಅಳಿಸಿದಾಗ ಕನ್ನಡದ ಅಪ್ಪಟ ಸಾಹಿತ್ಯದ ಗುರುತಿಸುವಿಕೆ ಸಾಧ್ಯ” ಎಂದರು.
“ಜಾತಿಯ ಪ್ರಜ್ಞೆಯನ್ನು, ಹರೆಯದ ಭಾವಗಳನ್ನು ಸೂಕ್ಷ್ಮವಾಗಿ ತೆರೆದಿಡುವ ಇಲ್ಲಿನ ಕಥೆಗಳು ಚೊಚ್ಚಲ ಕೃತಿ ಅನ್ನಿಸದಷ್ಟು ಸಶಕ್ತವಾಗಿವೆ” ಎಂದರು.
ಮಹಿಳಾ ಅಭಿವ್ಯಕ್ತಿಯ ಹಂಬಲ ಆಸೆ ಆಕಾಂಕ್ಷೆಗಳು ರೂಪಕವಾಗಿ ಈ ಕಥೆಗಳಲ್ಲಿ ಇವೆ. ಹೆಣ್ಣು ಮಕ್ಕಳು ಬರೆಯುವ ಚರಿತ್ರೆಯನ್ನು ನೋಡಿದರೆ ಎಷ್ಟು ಕಷ್ಟ ಪಟ್ಟಿದ್ದಾರೆ ಎಂಬುದು ತಿಳಿಯುತ್ತದೆ. ಕದ್ದುಮುಚ್ಚಿ ಬರೆದು, ಬರೆಯುವ ನಿಷಿದ್ದ ವಾತಾವರಣ ಮನೋಭಾವದ ಸಾಮಾಜಿಕ ವಾತಾವರಣವನ್ನು ಈ ಕಥೆಯಲ್ಲಿ ನೋಡಬಹುದು. ಕುಟುಂಬದ ಒಳಗಡೆ ಇರುವ ಕ್ರೌರ್ಯ ಚಿತ್ರಿತವಾಗಿದೆ. ಅಪ್ಪ ಶಾಲೆಯ ಬ್ಯಾಗನ್ನು ಚೆಕ್ ಮಾಡುತ್ತಾನೆ. ಆಕೆಯ ಖಾಸಗಿ ವಸ್ತುಗಳನ್ನು ಎಸೆಯುತ್ತಾನೆ. ಇದು ಒಂದು ಸೂಕ್ಷ್ಮವಾದಂತಹ ವಿಚಾರವನ್ನು ತಿಳಿಸುತ್ತದೆ. ಸಾಮಾಜಿಕ ಜಾತಿಪ್ರಜ್ಞೆಯನ್ನು ಚನ್ನಾಗಿ ಕಟ್ಟಿಕೊಟ್ಟಿದ್ದಾರೆ ಎಂದರು.

ಸಾಮಾಜಿಕ ವ್ಯವಸ್ಥೆ, ಜಾತಿ ಪ್ರಜ್ಞೆ ಮತ್ತು ಅವಾಂತರಗಳನ್ನು ‘ಕುಂಡದ ಬೇರು’ ಬಹಳ ಸೂಕ್ಷ್ಮವಾಗಿ ಕಟ್ಟಿ ಕೊಟ್ಟಿದೆ. ಜಾತಿ ಪದ್ಧತಿ ಕುರಿತ ನೋವು. ನಿರ್ಲಕ್ಷ್ಯ, ತಳಮಳ ಎಲ್ಲವೂ ಇದರಲ್ಲಿ ಅಡಕವಾಗಿವೆ. ಕುಟುಂಬದ ಒಳಗಿರುವ ಕ್ರೌರ್ಯ ಕಥೆಗಳಲ್ಲಿದೆ. ಮಹಿಳೆಯರ ಅಭಿವ್ಯಕ್ತ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟು ಮಾಡು ತ್ತಿರುವುದನ್ನು ಬಹಳ ಸೂಕ್ಷ್ಮವಾಗಿ ಹೇಳಿದ್ದಾರೆ. ಸಾಹಿತ್ಯ ಮತ್ತು ಬರವಣಿಗೆ ಕುರಿತು ಮಹಿಳೆಯರ ಹಂಬಲ ಕಾಣುತ್ತದೆ. ಬಾನು ಮುಷ್ತಾಕ್ ಅವರ ಕಥೆಗೆ ಬೂಕರ್ ಪ್ರಶಸ್ತಿ ದೊರೆತ ನಂತರ ಮಹಿಳೆಯರ ಕಥಾ ಜಗತ್ತು ಮತ್ತಷ್ಟು ವಿಸ್ತಾರವಾಗುತ್ತಿದೆ ಎಂದು ಹೇಳಿದರು.
ವಿಮರ್ಶಕಿ ಗೀತಾ ವಸಂತ ಮಾತನಾಡಿ “ಹೆಣ್ಣು ಮಕ್ಕಳ ಕಥನ ವಿಸ್ತಾರವಾಗುತ್ತಿದೆ ಅಂದರೆ ಅವರ ಜಗತ್ತು ಸಹ ವಿಸ್ತಾರವಾಗುತ್ತಿದೆ ಎಂದರ್ಥ. ಬಾನು ಮುಷ್ತಾಕ್ ಅವರ ಕಥೆಗಳಲ್ಲಿ ಪ್ರಾದೇಶಿಕ – ಸಾಂಸ್ಕೃತಿಕ ವ್ಯತ್ಯಾಸವಿದ್ದರೂ ಜಾಗತಿಕ ಮಟ್ಟದ ಬೂಕರ್ ಪ್ರಶಸ್ತಿ ದೊರೆತಿರುವುದು ಎಲ್ಲಾ ಹಣ್ಣುಗಳ ಕೇಂದ್ರ ಸಂವೇದನೆ ಒಂದೇ ಆಗಿರುವುದರಿಂದ. ಅವರು ಕನ್ನಡ ಜಗತ್ತನ್ನು ಮತ್ತು ಮುಸ್ಲಿಂ ಹೆಣ್ಣು ಮಕ್ಕಳ ಜಗತ್ತನ್ನು ವಿಶ್ವಾತ್ಮಕ ಭಾಷೆಯಾಗಿಸಿದ್ದಾರೆ. ಜಗತ್ತಿನ ಎಲ್ಲಾ ಹೆಣ್ಣು ಮಕ್ಕಳ ನೋವಿನ ಮತ್ತು ಕ್ರೌರ್ಯದ ಭಾಷೆ ಒಂದೇ ಆಗಿರುತ್ತದೆ” ಎಂದರು. ನಂತರ ಕೃತಿಯ ಕುರಿತು “ಇಲ್ಲಿನ ಎಲ್ಲಾ ಕಥೆಗಳಲ್ಲಿ ಬಹು ಸೂಕ್ಷ್ಮವಾದ ಮಾನವೀಯ ನೆಲೆಗಳುಳ್ಳವಾಗಿದ್ದು ಹೆಣ್ಣು ಮತ್ತು ಗಂಡಿನ ಜಗತ್ತೆರಡನ್ನೂ ಸಹ ಸೂಕ್ಷ್ಮವಾಗಿ ಚಿತ್ರಿಸಲಾಗಿದೆ. ಇಲ್ಲಿ ದಟ್ಟವಾದ, ವೈವಿಧ್ಯಮಯವಾದ, ಸಾಂಸ್ಕೃತಿಕವಾಗಿ ಗ್ರಹಿಸುವ ಅನುಭವ ಲೋಕವಿದೆ”. “ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳು ತಮ್ಮ ದೇಹ ಭಾಷೆಯ ಕುರಿತು ಮಾತನಾಡುವುದು ಸಾಧ್ಯವಾಗಿದ್ದರೂ ಪ್ರಸ್ತುತ ಸನ್ನಿವೇಶದಲ್ಲಿ ತನ್ನ ದೇಹದ ಬಗ್ಗೆ, ಭಾವನೆಗಳ ಬಗ್ಗೆ ಹೆಣ್ಣು ಮುಕ್ತವಾಗಿ ಮಾತನಾಡುವುದು ವ್ಯರ್ಜ್ಯವಾಗದೆ. ಅದರಿಂದ ಅನೇಕ ಟ್ರೋಲ್ ಗಳನ್ನು ಹೆಣ್ಣುಮಕ್ಕಳು ಈಗಲೂ ಎದುರಿಸಬೇಕಾಗಿರುವುದು ವಿಪರ್ಯಾಸ” ಎನ್ನುತ್ತಾ ಮಮತಾ ಸಾಗರ್ ಅವರ ಕವನವು ಸಾಮಾಜಿಕ ಜಾಲತಾಣದಲ್ಲಿ ಸೃಷ್ಟಿಸಿದ ಸಾಮಾಜಿಕ ತಲ್ಲಣವನ್ನು ಪ್ರಸ್ತಾಪಿಸಿದರು.
ಲೇಖಕಿಯರ ಸಂಘದ ಅಧ್ಯಕ್ಷೆ ಮಲ್ಲಿಕಾ ಬಸವರಾಜು ಮಾತನಾಡಿ “ಸಾಮಾಜಿಕ ಒತ್ತಡಗಳೂ ಸಹ ಗಂಡನ್ನು ಮಾನವೀಯತೆಯಿಂದ ದೂರವಾಗಿಸಿ, ಗಂಡಾಳ್ವಿಕೆಯನ್ನು ಮುಂದುವರೆಸುವ ಕ್ರೌರ್ಯವನ್ನು ಇಲ್ಲಿನ ಕಥೆಗಳು ಸಶಕ್ತವಾಗಿ ತೆರೆದಿಡುತ್ತವೆ. ತುಮಕೂರಿನ ಕಥೆಗಳು ಹೀಗೆ ಹಬ್ಬಲಿ” ಎಂದು ತುಮಕೂರಿನ ಕಥೆಗಾರರ ಪ್ರಾಮುಖ್ಯತೆಯನ್ನು ತಿಳಿಸಿದರು.
“ಇಲ್ಲಿನ ಕಥೆಗಳು ನಗರ ಮತ್ತು ಗ್ರಾಮೀಣ ಪ್ರದೇಶಗಳ ದಟ್ಟವಾದ ನಿರೂಪಣೆಯಿಂದ ಕೂಡಿದ್ದು ಯಾವುದೇ ಸಿದ್ಧಾಂತ ತತ್ವ ಮತ್ತು ಹೇಳಿಕೆಗಳ ಹೇರಿಕೆಗಳಿಲ್ಲ” ಎಂದು ಕವಿ ಶ್ರುತಿ ಬಿ. ಆರ್. ಕಥಾ ಸಂಕಲನದ ಕುರಿತು ಸ್ಪಂದಿಸಿದರು.
ಸಂಶೋಧನಾರ್ಥಿ ನವೀನ್ ಪೂಜಾರಳ್ಳಿ ಮಾತನಾಡಿ “ತುಮಕೂರು ಜಿಲ್ಲೆಯು ಕನ್ನಡ ಕಥಾ ಲೋಕಕ್ಕೆ ಹೆಚ್ಚು ಕಥೆಗಾರರನ್ನು ನೀಡಿದೆ. ಈಗ ಎಡೆಯೂರು ಪಲ್ಲವಿ ಹೊಸಸಂಕಲನ ನೀಡುತ್ತಿರುವುದು ಸಂತಸ ಮತ್ತು ಹೆಮ್ಮೆಯ ಕ್ಷಣ. ಇಲ್ಲಿನ ಎಲ್ಲಾ ಕಥೆಗಳಲ್ಲಿ ಹೆಣ್ಣಿನ ಲೋಕಗಳು ದರ್ಶನವಾಗುತ್ತದೆ, ಈ ಕಥೆಗಳಲ್ಲಿ ಹೆಣ್ಣಿನ ತಲ್ಲಣ, ಸಂಕಷ್ಟಗಳನ್ನು ಹೇಳುತ್ತಲೇ ಜಾತಿ ಅಸ್ಪೃಶ್ಯತೆಯ ಕೌರ್ಯಗಳನ್ನು ಬಿಚ್ಚಿಡುತ್ತಾರೆ. ಪುರುಷರಿಗೆ ಈ ಹೆಣ್ಣು ಲೋಕದ ಸಮಸ್ಯೆಯನ್ನು ತೋರಿಸುತ್ತಲೇ ಓದುಗರನ್ನು ಮಾನವೀಯರನ್ನಾಗಿಸುತ್ತಾರೆ” ಎಂದರು
ಸಮಾರಂಭದ ನಿರೂಪಣೆಯನ್ನು ಹೆಬ್ಬೂರಿನ ಸಹಾಯಕ ಪ್ರಾಧ್ಯಾಪಕ ಮಧುಸೂಧನ ಕೆ. ಪಿ. ನಿರ್ವಹಿಸಿದರೆ, ಬರಹಗಾರರಾದ ಬಾ. ಹ. ರಮಾಕುಮಾರಿ, ರಂಗಮ್ಮ ಹೊದೇಕಲ್, ಸಿದ್ಧಲಿಂಗಪ್ಪ, ಗುರುಪ್ರಸಾದ್ ಕಂಟಲಗೆರೆ, ರವಿಕುಮಾರ್ ನೀಹ, ಗೋವಿಂದರಾಜು ಎಂ ಕಲ್ಲೂರು, ರೂಮಿ ಹರೀಶ್, ತುಂಬಾಡಿ ರಾಮಯ್ಯ, ಲತಾ ಶ್ರೀನಿವಾಸ್ ಮುಂತಾದ ಸಾಹಿತ್ಯ ಮನಸ್ಸುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.