ಪ್ರಯಾಣಿಕರ ದಟ್ಟಣೆಯಿಂದಾಗಿ ರೈಲಿನಿಂದ ಹೊರಬಿದ್ದು ಸುಮಾರು ಐವರ ಸಾವು ನಡೆದ ಥಾಣೆ ದುರಂತದ ಬೆನ್ನಲ್ಲೇ ಭಾರತೀಯ ರೈಲ್ವೆ ಮಂಡಳಿಯು ಮುಂಬೈನ ಸ್ಥಳೀಯ ರೈಲುಗಳಲ್ಲಿ ‘ಸ್ವಯಂಚಾಲಿತ ಡೋರ್ ಕ್ಲೋಸ್’ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಿದೆ.
ಈ ಬಗ್ಗೆ ರೈಲ್ವೆ ಮಂಡಳಿಯು ಅಧಿಕೃತ ಹೇಳಿಕೆಯನ್ನು ನೀಡಿದ್ದು, “ಚಲಿಸುವ ರೈಲುಗಳಿಂದ ಪ್ರಯಾಣಿಕರು ಬಿದ್ದು ನಡೆಯುವ ಅಪಘಾತದ ಹಿನ್ನೆಲೆ ಮುಂಬೈನಲ್ಲಿ ತಯಾರಿಸಲಾಗುತ್ತಿರುವ ಎಲ್ಲಾ ಬೋಗಿಗಳಲ್ಲಿ ಸ್ವಯಂಚಾಲಿತವಾಗಿ ಬಾಗಿಲು ಮುಚ್ಚುವ ಸೌಲಭ್ಯಗಳನ್ನು ಕಲ್ಪಿಸಲಾಗುವುದು” ಎಂದು ದೃಢಪಡಿಸಿದೆ.
ಇದನ್ನು ಓದಿದ್ದೀರಾ? ಮುಂಬೈ | ಪ್ರಯಾಣಿಕರ ದಟ್ಟಣೆ: ರೈಲಿನಿಂದ ಬಿದ್ದು ಐವರು ಸಾವು, ಹಲವರಿಗೆ ಗಾಯ
ಪ್ರಯಾಣಿಕರ ದಟ್ಟಣೆಯಿಂದಾಗಿ ರೈಲಿನಿಂದ ಬಿದ್ದು ಐವರು ಸಾನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ. ಸೋಮವಾರ ಬೆಳಿಗ್ಗೆ ಮುಂಬೈನಲ್ಲಿ ರೈಲಿನಲ್ಲಿ ಪ್ರಯಾಣಿಕರ ಸಂಖ್ಯೆ ಅಧಿಕವಾಗಿದ್ದ ಕಾರಣ ಜನರು ಹೊರಬಿದ್ದಿದ್ದಾರೆ. ಐವರು ಮೃತಪಟ್ಟರೆ ಹಲವು ಮಂದಿ ಗಾಯಗೊಂಡಿದ್ದಾರೆ. ಕೇಂದ್ರ ರೈಲ್ವೆಯ ದಿವಾ ಮತ್ತು ಕೋಪರ್ ರೈಲು ನಿಲ್ದಾಣಗಳ ನಡುವೆ ಈ ಘಟನೆ ಸಂಭವಿಸಿದೆ.
ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್(CSMT) ಕಡೆಗೆ ಹೋಗುತ್ತಿದ್ದ ಸ್ಥಳೀಯ(ಲೋಕಲ್) ರೈಲಿನಲ್ಲಿ 10ರಿಂದ 12 ಪ್ರಯಾಣಿಕರು ಬೋಗಿಗಳಿಂದ ಹೊರ ಬಿದ್ದಿದ್ದಾರೆ. ರೈಲು ತುಂಬಾ ಜನದಟ್ಟಣೆಯಿಂದ ತುಂಬಿತ್ತು. ಘಟನೆ ಸಂಭವಿಸಿದಾಗ ಪ್ರಯಾಣಿಕರು ಬಾಗಿಲಿನಲ್ಲಿ ನೇತಾಡುತ್ತಿದ್ದರು.
ಈ ಘಟನೆ ಬೆನ್ನಲ್ಲೇ ಸ್ವಯಂಚಾಲಿತ ಡೋರ್ ಕ್ಲೋಸ್ ವ್ಯವಸ್ಥೆ ಅಳವಡಿಸಬೇಕು ಎಂದು ಎನ್‌ಸಿಪಿ ನಾಯಕ ಶರದ್ ಪವಾರ್ ಸೇರಿದಂತೆ ಹಲವು ನಾಯಕರು ಆಗ್ರಹಿಸಿದ್ದಾರೆ. ಈ ನಡುವೆ ರೈಲುಗಳಲ್ಲಿ ಸ್ವಯಂಚಾಲಿತವಾಗಿ ಬಾಗಿಲು ಮುಚ್ಚುವ ಸೌಲಭ್ಯಗಳನ್ನು ರೈಲ್ವೆ ಮಂಡಳಿ ಘೋಷಿಸಿದೆ.
ಮುಂಬೈನ ಸ್ಥಳೀಯ ರೈಲು ವ್ಯವಸ್ಥೆಯನ್ನು ನಗರದ ಜೀವನಾಡಿ ಎಂದೇ ಕರೆಯಬಹುದು. ಪ್ರತಿದಿನ 75 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಈ ವ್ಯವಸ್ಥೆಯ ಮೇಲೆ ಅವಲಂಭಿತರಾಗಿದ್ದಾರೆ. ವಿಶೇಷವಾಗಿ ಮುಂಜಾನೆ ಮತ್ತು ಸಂಜೆಯ ಅವಧಿಯಲ್ಲಿ ಹೆಚ್ಚು ಜನದಟ್ಟಣೆ ಇರುತ್ತದೆ. ಹೀಗಾಗಿ ರೈಲುಗಳ ಸಂಖ್ಯೆಯನ್ನೂ ಹೆಚ್ಚಿಸಬೇಕು ಎಂಬ ಆಗ್ರಹಗಳಿವೆ.
