ಹನಿಮೂನ್‌ಗೆ ಹೋಗಿದ್ದ ವೇಳೆ ಸುಪಾರಿ ಕೊಟ್ಟು ತನ್ನ ಪತಿ ರಾಜ ರಘುವಂಶಿಯನ್ನು ಕೊಲೆ ಮಾಡಿಸಿದ ಆರೋಪವನ್ನು ಹೊತ್ತಿರುವ ಪತ್ನಿ ಸೋನಮ್ ರಘುವಂಶಿ “ದರೋಡೆಕೋರರು ನನ್ನ ಗಂಡನನ್ನು ಕೊಂದರು. ನನ್ನ ಆಭರಣಗಳನ್ನು ದೋಚಲು ದರೋಡೆಕೋರರು ಯತ್ನಿಸಿದ್ದರು” ಎಂದು ಹೇಳಿಕೊಂಡಿದ್ದಾರೆ. ಹನಿಮೂನ್ ಕೊಲೆ ಪ್ರಕರಣ ಎಂದೆ ಕರೆಯಲಾಗುತ್ತಿರುವ ಈ ಪ್ರಕರಣವು ಸದ್ಯ ದೇಶದಾದ್ಯಂತ ಸಂಚಲನ ಮೂಡಿಸಿದೆ.
ಮಧ್ಯಪ್ರದೇಶದ ಇಂದೋರ್ ಮೂಲದ ರಾಜ ರಘುವಂಶಿ ಮತ್ತು ಸೋನಮ್ ರಘುವಂಶಿಯು ಮೇ 11ರಂದು ವಿವಾಹವಾಗಿದ್ದು ತಮ್ಮ ಹನಿಮೂನ್‌ಗಾಗಿ ಶಿಲ್ಲಾಂಗ್‌ಗೆ ಹೋಗಿದ್ದರು, ಬಳಿಕ ಮೇ 23ರಂದು ಇಬ್ಬರೂ ನಾಪತ್ತೆಯಾಗಿದ್ದರು. ಈ ಪೈಕಿ ರಾಜಾ ಅವರ ಮೃತದೇಹವು ಜೂನ್ 2ರಂದು ಪೂರ್ವ ಖಾಸಿ ಬೆಟ್ಟದ ಜಿಲ್ಲೆಯ ಕಮರಿಯಲ್ಲಿ ಪತ್ತೆಯಾಗಿತ್ತು. ಆದರೆ ಸೋನಮ್ ಪತ್ತೆಯಾಗಿರಲಿಲ್ಲ.
ಇದನ್ನು ಓದಿದ್ದೀರಾ? ಜಾತಿ ಸಮೀಕ್ಷೆ ವಿರೋಧಿಸುತ್ತಿರುವವರು ಲೂಟಿಕೋರರು, ದರೋಡೆಕೋರರು: ಪ್ರೊ.ರವಿವರ್ಮಕುಮಾರ್
ಸೋನಮ್‌ಗಾಗಿ ಹುಡುಕಾಟ ನಡೆಯುತ್ತಿರುವಾಗಲೇ ಸೋಮವಾರ ಉತ್ತರ ಪ್ರದೇಶ ಗಾಜಿಪುರದ ಪೊಲೀಸರ ಮುಂದೆ ಸೋಮವಾರ ಸೋನಮ್ ಶರಣಾಗಿದ್ದರು. ಆಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಮೇಘಾಲಯ ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ಆರೋಪಿಗಳು ಈ ಕೊಲೆಗೆ ಸೋನಮ್ ಅವರೇ ಸುಪಾರಿ ನೀಡಿದ್ದಾರೆ ಎಂದಿದ್ದಾರೆ.
ಹಾಗಾಗಿ ಪೊಲೀಸರು ಸೋನಮ್ ಬಂಧನ ಮಾಡಿದ್ದಾರೆ. ಢಾಬಾ ಒಂದರಲ್ಲಿ ಸಹಾಯ ಕೋರಿ ಸೋನಮ್ ಬಂದಿದ್ದರು. ಬಳಿಕ ಅಲ್ಲಿಂದಲೇ ತಮ್ಮ ಕುಟುಂಬಸ್ಥರಿಗೆ ಕರೆ ಮಾಡಿದ್ದರು ಎನ್ನಲಾಗಿದೆ. “ಸೋನಮ್ ತುಂಬಾ ದುಖಿಃತರಾಗಿದ್ದರು” ಎಂದು ಢಾಬಾ ಮಾಲೀಕ ಸಾಹಿಲ್ ಹೇಳಿದ್ದಾರೆ.
ಮೇಘಾಲಯ ಪೊಲೀಸರು ಸೋನಮ್ ತನ್ನ ಪತಿಯ ಕೊಲೆಗಾಗಿ ಸುಪಾರಿ ನೀಡಿದ್ದರು ಎಂದು ಹೇಳಿದ್ದಾರೆ. ಈ ಸಂಬಂಧ ಸೋನಂ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಇತ್ತ ಘಾಜಿಪುರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, “ಸೋನಮ್ ಯಾವುದೇ ಹೇಳಿಕೆ ನೀಡುವ ಸ್ಥಿತಿಯಲ್ಲಿಲ್ಲ” ಎಂದಿದ್ದಾರೆ.
