ಬ್ಯಾನರ್ ತೆರವುಗೊಳಿಸುವ ವಿಷಯವಾಗಿ ಹಾವೇರಿ ನಗರಸಭೆ ಪೌರಕಾರ್ಮಿಕರಾದ ರಾಜು ದೊಡ್ಮನಿ ಹಾಗೂ ಪೀರಪ್ಪ ಶಿರಬಡಗಿ ಮತ್ತಿತರರ ಮೇಲೆ ಮಾರಕಾಸ್ತ್ರಗಳಿಂದ ಅಮಾನುಷವಾಗಿ ಮಾರಣಾಂತಿಕ ಹಲ್ಲೆ ನಡೆಸಿದವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಹಾಗೂ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಜಿಲ್ಲಾ ಸಮಿತಿಗಳು ಒತ್ತಾಯಿಸಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಸಂಘಟನೆಗಖು, ನಗರದ ಸ್ವಚ್ಛತೆ ಕಾಪಾಡುವ ಪೌರ ಕಾರ್ಮಿಕರ ಮೇಲಿನ ಹಲ್ಲೆಯನ್ನು ಡಿವೈಎಫ್ಐ, ಎಸ್ಎಫ್ಐ ಜಿಲ್ಲಾ ಸಮಿತಿಗಳು ತೀವ್ರವಾಗಿ ಖಂಡಿಸುತ್ತವೆ. ಶಾಂತಿ ಸೌಹಾರ್ದತೆಗೆ ಹೆಸರುವಾಸಿಯಾದ ಹಾವೇರಿ ನಗರದಲ್ಲಿ ಹಾಡಹಗಲೇ ಇಂತಹ ಅಮಾನುಷ ಘಟನೆಗಳು ನಡೆಯುತ್ತಿರುವುದು ದುರದೃಷ್ಟಕರ. ಜಿಲ್ಲಾ ಕೇಂದ್ರ ನಗರದಲ್ಲಿ ಕಾನೂನು ಸುವ್ಯವಸ್ಥೆಯು ಎಷ್ಟರ ಮಟ್ಟಿಗೆಯಿದೆ ಎಂಬುದನ್ನು ಈ ಗಲಾಟೆ ಸೂಚಿಸುತ್ತದೆ ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಹಾವೇರಿ | ಪೌರ ಕಾರ್ಮಿಕನ ಮೇಲೆ ಹಲ್ಲೆ: ಆರೋಪಿಗಳ ಬಂಧನ
ಈ ಪ್ರಕರಣದಲ್ಲಿ ಪೌರಕಾರ್ಮಿಕರಿಗೆ ಹಲ್ಲೆ ಎಸಗಿದವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಜೊತೆಗೆ ಪೌರ ಕಾರ್ಮಿಕರಿಗೆ ಸೂಕ್ತ ರಕ್ಷಣೆಯನ್ನು ಒದಗಿಸುವ ಜೊತೆಯಲ್ಲಿ ನಿರ್ಭೀತರಾಗಿ ಕಾರ್ಯನಿರ್ವಹಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಡಿವೈಎಫ್ಐ, ಎಸ್ಎಫ್ಐ ಜಿಲ್ಲಾ ಸಮಿತಿಗಳು ಆಗ್ರಹಿಸುತ್ತವೆ ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ಡಿವೈಎಫ್ಐ ಜಿಲ್ಲಾ ಸಂಚಾಲಕ ನಾರಾಯಣ ಕಾಳೆ, ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಒತ್ತಾಯಿಸಿದ್ದಾರೆ.