- 700 ಮೀಟರ್ ಉದ್ದದ ರಾಜಕಾಲುವೆಯ ಮೇಲೆ 13 ಕಟ್ಟಡ ನಿರ್ಮಾಣ
- ರಾಜಕಾಲುವೆ ಒತ್ತುವರಿ ಮಾಡಿದವರಿಗೆ ತಹಶೀಲ್ದಾರ್ ಅವರಿಂದ ನೋಟಿಸ್
ಬೆಂಗಳೂರಿನ ಪುಲಕೇಶಿನಗರದ ಶಾಂಪುರನಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡಿದ್ದ ಸ್ಥಳದಲ್ಲಿ ಬುಧವಾರದಿಂದ ಒತ್ತುವರಿ ತೆರವು ಕಾರ್ಯಾಚರಣೆ ಪ್ರಾರಂಭಿಸಲಾಗಿದೆ.
ಶಾಂಪುರ ವ್ಯಾಪ್ತಿಯಲ್ಲಿ ಸುಮಾರು 700 ಮೀಟರ್ ಉದ್ದದ ರಾಜಕಾಲುವೆಯ ಮೇಲೆ 13 ಕಟ್ಟಡಗಳನ್ನು ನಿರ್ಮಾಣ ಮಾಡಿಕೊಳ್ಳಲಾಗಿದೆ. ಈಗಾಗಲೇ ಕಂದಾಯ ಇಲಾಖೆಯ ಭೂಮಾಪಕರಿಂದ ಒತ್ತುವರಿಯಾಗಿರುವ ಪ್ರದೇಶದಲ್ಲಿ ಸಮೀಕ್ಷೆ ನಡೆಸಿ ಒತ್ತುವರಿ ಮಾಡಿರುವವರಿಗೆ ತಹಶೀಲ್ದಾರ್ ಅವರಿಂದ ನೋಟಿಸ್ ನೀಡಲಾಗಿದೆ.
ಕಂದಾಯ ಇಲಾಖೆಯ ಭೂಮಾಪಕರು, ವಾರ್ಡ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಬೃಹತ್ ನೀರುಗಾಲುವೆ ವಿಭಾಗದ ಇಂಜಿನಿಯರ್ ನೇತೃತ್ವದಲ್ಲಿ ಬುಧವಾರ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗಿದೆ.
“ರಾಜಕಾಲುವೆಯ ಪ್ರದೇಶದಲ್ಲಿ ಕಟ್ಟಡಗಳನ್ನು ನಿರ್ಮಾಣ ಮಾಡಿಕೊಂಡಿರುವುದರಿಂದ ಎಲೆಕ್ಟ್ರಾನಿಕ್ ಟೋಟಲ್ ಸ್ಟೇಷನ್ (ಇಟಿಎಸ್) ಸರ್ವೇ ಮೂಲಕ ಮತ್ತೊಮ್ಮೆ ಸಮೀಕ್ಷೆ ನಡೆಸಿ ಒತ್ತುವರಿ ಜಾಗವನ್ನು ತೆರವುಗೊಳಿಸಬೇಕು. ಈಗಾಗಲೇ ಗುರುತಿಸಿರುವಂತಹ ಒತ್ತುವರಿ ಪ್ರದೇಶದಲ್ಲಿ ಮನೆಯ ಮಾಲೀಕರೇ ಸ್ವಯಂಪ್ರೇರಿತವಾಗಿ ತೆರವು ಮಾಡಿಕೊಳ್ಳುತ್ತಿದ್ದು, ಇಟಿಎಸ್ ಸಮೀಕ್ಷೆ ಪೂರ್ಣಗೊಂಡ ಬಳಿಕ ಸಂಪೂರ್ಣ ಒತ್ತುವರಿಯನ್ನು ತೆರವುಗೊಳಿಸಿ ರಾಜಕಾಲುವೆ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತದೆ” ಎಂದು ಪಾಲಿಕೆ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕಾರ್ಮಿಕರು, ಸಲಕರಣೆಗಳ ಸಮಸ್ಯೆಯಿಂದ ಕಾವೇರಿ 5ನೇ ಹಂತದ ಯೋಜನೆ ವಿಳಂಬ ಸಾಧ್ಯತೆ
ಚನ್ನಸಂದ್ರದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ
ಮಹದೇವಪುರ ವಲಯ ಕಾಡುಗೋಡಿ ವಾರ್ಡ್ ಚನ್ನಸಂದ್ರ ವ್ಯಾಪ್ತಿಯಲ್ಲಿ ಸುಮಾರು 30 ಮೀಟರ್ ಉದ್ದದ ರಾಜಕಾಲುವೆಯಲ್ಲಿ ಮಳಿಗೆಗಳನ್ನು ನಿರ್ಮಾಣ ಮಾಡಿಕೊಂಡಿದ್ದು, ಅನಧಿಕೃತವಾಗಿ ನಿರ್ಮಾಣ ಮಾಡಿಕೊಂಡಿರುವ ಮಳಿಗೆಗಳನ್ನು ಸ್ವಯಂ ಪ್ರೇರಿತವಾಗಿ ಒತ್ತುವರಿದಾರರು ತೆರವುಗೊಳಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದೆ.