ಎಲ್ಲಾ ಬಸ್ ನಿಲ್ದಾಣಗಳಲ್ಲೂ ಸ್ವಚ್ಛತೆ, ಕುಡಿಯುವ ನೀರು, ಶೌಚಾಲಯಗಳ ಸಮರ್ಪಕ ನಿರ್ವಹಣೆಗೆ ಮತ್ತಷ್ಟು ಆದ್ಯತೆ ನೀಡಿ ಕ್ರಮ ವಹಿಸಲಾಗುತ್ತಿದೆ. ನಿಲ್ದಾಣಗಳ ಸ್ವಚ್ಛತೆ ಕಾಪಾಡುವಲ್ಲಿ ಪ್ರಯಾಣಿಕರೂ ಕೈಜೋಡಿಸಬೇಕು ಎಂದು ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಮನವಿ ಮಾಡಿದ್ದಾರೆ.
“ಜಿಲ್ಲಾ ಕೇಂದ್ರ ಬಸ್ ನಿಲ್ದಾಣ ಹಾಗೂ ಸ್ಯಾಟ್‌ಲೈಟ್ ಬಸ್ ನಿಲ್ದಾಣ ಸೇರಿದಂತೆ ಒಟ್ಟು 26 ಬಸ್ ನಿಲ್ದಾಣಗಳು ಒಳಪಡುತ್ತವೆ. ಬಸ್ ನಿಲ್ದಾಣಗಳ ಸ್ವಚ್ಛತೆ ಹಾಗೂ ಪ್ರಯಾಣಿಕ ಸ್ನೇಹಿ ಶೌಚಾಲಯ ನಿರ್ವಹಣೆಗಾಗಿ ಕಾರ್ಮಿಕ ಇಲಾಖೆಯಡಿ ನೋಂದಾಯಿತ ಗುತ್ತಿಗೆದಾರರಿಗೆ ಇ-ಟೆಂಡರ್ ಮೂಲಕ ಆಯ್ಕೆಮಾಡಿ ಪರವಾನಿಗೆ ನೀಡಲಾಗಿದೆ. ಪರವಾನಿಗೆದಾರರು ಪ್ರತಿ ನಿತ್ಯ ಬಸ್ ನಿಲ್ದಾಣ ಸ್ವಚ್ಛಗೊಳಿಸಿರುವುದನ್ನು ಪರಿಶೀಲಿಸಲು ಸಹ ಕ್ರಮವಹಿಸಲಾಗಿದೆ” ಎಂದಿದ್ದಾರೆ.
“ಬಸ್ ನಿಲ್ದಾಣದ ಪರಿವೀಕ್ಷಣಾ ಸಮಯದಲ್ಲಿ ಸ್ವಚ್ಛತೆಯ ಬಗ್ಗೆ ನ್ಯೂನ್ಯತೆಗಳು ಕಂಡು ಬಂದಲ್ಲಿ ಸಂಬಂಧಪಟ್ಟ ಸ್ವಚ್ಛತಾ ಪರವಾನಿಗೆದಾರರಿಗೆ ನೋಟಿಸ್ ಜಾರಿ ಮಾಡುವುದಲ್ಲದೇ ದಂಡ ಕೂಡ ವಿಧಿಸಲಾಗುವುದು. ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ನಿಲ್ದಾಣಗಳಲ್ಲಿ ಮಣ್ಣಿನ ಮಡಿಕೆಗಳ ಮೂಲಕ ತಂಪಾದ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ತೀವ್ರ ಬಿಸಿಲಿನಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿರುವುದನ್ನು ಗಮನಿಸಿ ಇಂಡಸ್ಟ್ರಿಯಲ್ ಫ್ಯಾನ್‌ಗಳನ್ನು ಅಳವಡಿಸಲಾಗಿದೆ” ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: ವಿಜಯಪುರ | ಕೃಷಿ ಉಪಕರಣಗಳ ಸಮರ್ಪಕ ಪೂರೈಕೆಗೆ ರೈತ ಸಂಘ ಆಗ್ರಹ
“ಘನತ್ಯಾಜ್ಯ ವಿಲೇವಾರಿಗಾಗಿ ಡಸ್ಟ್ ಬಿನ್‌ಗಳನ್ನೂ ಅಳವಡಿಸಲಾಗಿದೆ. ಮಹಿಳಾ ವಿಶ್ರಾಂತಿ ಕೊಠಡಿ ಸೌಲಭ್ಯ ಹಾಗೂ ತಾಯಂದಿಯರ ಅನುಕೂಲಕ್ಕಾಗಿ ಹಾಲುಣಿಸುವ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮೊಬೈಲ್ ಚಾರ್ಜರ್ ಪಾಯಿಂಟ್ ಅಳವಡಿಸಲಾಗಿದೆ. ಬಸ್ ನಿಲ್ದಾಣವನ್ನು ಸ್ವಚ್ಛ ಮತ್ತು ಸುಂದರವಾಗಿ ನಿರ್ವಹಿಸಲು ಯೋಜನೆ ಸಿದ್ಧಪಡಿಸಿಕೊಂಡು ಆ ದಿಸೆಯಲ್ಲಿ ಕಾರ್ಯ ನಿರ್ವಹಿಸಲಾಗುತ್ತದೆ. ತ್ಯಾಜ್ಯಗಳನ್ನು ಬಸ್ ನಿಲ್ದಾಣದ ಆವರಣದಲ್ಲಿ ಎಲ್ಲೆಂದರಲ್ಲಿ ಬಿಸಾಕದೇ ಡಸ್ಟ್‌ಬಿನ್ ಬಳಸಬೇಕು. ಬಸ್ ನಿಲ್ದಾಣಗಳನ್ನು ಸ್ವಚ್ಛವಾಗಿಡುವಲ್ಲಿ ಪ್ರಯಾಣಿಕರು ಸಹ ಕೈ ಜೋಡಿಸಬೇಕು” ಎಂದು ತಿಳಿಸಿದ್ದಾರೆ.