ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗುಲ್ವಾಡಿ ಗ್ರಾಮದ ಮಾವಿನಕಟ್ಟೆ ಸರ್ಕಲ್ ಬಳಿ ಇರುವ ಮೆಡಿಕಲ್ ಶಾಪ್ ನಲ್ಲಿ ಕೆಲಸ ಮಾಡುವ ಯುವತಿಗೆ ಚಿಲ್ಲರೆ ನೀಡುವ ವಿಷಯಕ್ಕೆ ಜಗಳವಾಗಿ ಯುವತಿಗೆ ಹಲ್ಲೆ ನಡೆಸಿದ ಪ್ರಕರಣದ ಆರೋಪಿ ಮಹಿಳೆಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಸ್ಥಳೀಯ ನಿವಾಸಿ ಯಾಸ್ಮೀನ್ ಬಂಧಿತ ಆರೋಪಿ. ಜೂ.9ರಂದು ಔಷಧಿ ಖರೀದಿಸಿದ ಯಾಸ್ಮಿನ್, 500 ರೂ. ಚಿಲ್ಲರೆ ವಿಚಾರದಲ್ಲಿ ಮೆಡಿಕಲ್‌ನ ಉದ್ಯೋಗಿ ಯುವತಿ ಜೊತೆ ಗಲಾಟೆ ಮಾಡಿದ್ದರು. ಬಳಿಕ ಯಾಸ್ಮೀನ್ ಯುವತಿಗೆ ಹಲ್ಲೆ ನಡೆಸಿ, ಅವಾಚ್ಯವಾಗಿ ಜಾತಿ ನಿಂದನೆ ನಡೆಸಿದ್ದಾರೆಂದು ದೂರಲಾಗಿದೆ.
ಈ ಕುರಿತ ಸಿಸಿಟಿವಿ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣ ದಲ್ಲಿ ವೈರಲ್ ಆಗಿತ್ತು. ಅದರಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಭೇಟಿ
ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಾವಿನಕಟ್ಟೆಯಲ್ಲಿ ಮೆಡಿಕಲ್ ಶಾಪ್ ನಲ್ಲಿ ಚಿಲ್ಲರೆ ವಿಷಯಕ್ಕಾಗಿ ಇಬ್ಬರು ಮಹಿಳೆಯರ ನಡುವೆ ಮಾತಿನ ಚಕಮಕಿ ನಡೆದು ಆರೋಪಿ ಮಹಿಳೆಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸದರಿ ಪ್ರಕರಣದ ಸಂತ್ರಸ್ತೆ ಮಹಿಳೆಯನ್ನು ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಐಪಿಎಸ್ ರವರು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.