ರೈತರ ಬೇಡಿಕೆಗಳನ್ನು ಈಡೇರಿಸಿದಿದ್ದರೆ ಅನಿರ್ದಿಷ್ಟಾವಧಿ ಧರಣಿ ಹೋರಾಟ ಮಾಡಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಈಶಪ್ಪ ಸಬರದ ಎಚ್ಚರಿಕೆ ನೀಡಿದ್ದಾರೆ.
ಕುಕನೂರು ಪಟ್ಟಣದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರೈತರ ವಿವಿಧ ಬೇಡಿಕೆ ಈಡೇರಿಸುವಂತೆ ಪಟ್ಟಣದ ರಾಘವಾನಂದ ಮಠದಿಂದ ಅಂಬೇಡ್ಕರ್ ವೃತ್ತದ ಮೂಲಕ ವೀರಭದ್ರಪ್ಪ ವೃತ್ತದ ವರೆಗೆ ಪ್ರತಿಭಟನೆಯ ಮೂಲಕ ತಹಶೀಲ್ದಾರ್ ಎಚ್ ಪ್ರಾಣೇಶ್‌ರವರಿಗೆ ಮನವಿ ಸಲ್ಲಿಸಲಾಯಿತು.
“ಕುಕನೂರು ಪಟ್ಟಣದ ಎಪಿಎಂಸಿಯಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಬೇಕು ಹಾಗೂ ಮುಂದೆ ಬರುವ ಹೆಸರು, ಮೆಕ್ಕೆಜೋಳ ಮುಂತಾದ ಬೆಳೆಗಳಿಗೆ ಬೆಂಬಲ ಬೆಲೆಯಡಿ ನೋಂದಣಿ ಪ್ರಕ್ರಿಯೆ ಆರಂಭಿಸಬೇಕು. ಪ್ರತಿ ಬಾರಿ ಬೆಳೆ ಬಂದ ಮೇಲೆ ಬೆಂಬಲ ಬೆಲೆ ಘೋಷಣೆ ಮಾಡುತ್ತೀರಿ, ಇದರಿಂದ ರೈತರಿಗೆ ತೊಂದರೆಯಾಗುತ್ತಿದ್ದು, ಈಗಿನಿಂದಲೇ ಬೆಂಬಲ ಬೆಲೆ ಕುರಿತು ತಯಾರಿ ಮಾಡಿಕೊಳ್ಳಬೇಕು. ಈಗ ಸುಮಾರು 40 ವರ್ಷಗಳಿಂದ ಕುಕನೂರು ಪಟ್ಟಣದ ಎಪಿಎಂಸಿಯಲ್ಲಿ ಟೆಂಡರ್ ಪ್ರಕ್ರಿಯೆ ನಡೆಯುತ್ತಿಲ್ಲ. ಈ ಬಗ್ಗೆ ಖುದ್ದು ನೆಪ ಮಾತ್ರಕ್ಕೆ ರೈತರೇ ದೇಶದ ಬೆನ್ನೆಲುಬು ಎನ್ನುವ ಜನಪ್ರತಿನಿಧಿಗಳು ಗಮನಹರಿಸಬೇಕು” ಎಂದು ಆಗ್ರಹಿಸಿದರು.
ಪಟ್ಟಣದ ಕಸ ವಿಲೇವಾರಿ ಘಟಕದ ಕಾಮಗಾರಿ ಕಳಪೆಯಾಗಿ ನಡೆಯುತ್ತಿದ್ದು, ಸಾಕಷ್ಟು ಬಾರಿ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಿಗೂ ಮನವಿ ಸಲ್ಲಿಸಿದರೂ ಜಾಣ ಕುರುಡನಂತೆ ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ. ಇನ್ನು ಮುಂದಾದರು ಪಟ್ಟಣದ ಎಪಿಎಂಸಿಯಲ್ಲಿ ಟೆಂಡರ್ ಪ್ರಕ್ರಿಯೆ ಮಾಡಬೇಕು ಮತ್ತು ಕಳಪೆ ಮಟ್ಟದ ಕಸ ವಿಲೇವಾರಿ ಘಟಕದ ಕಾಮಗಾರಿಯ ಬಗ್ಗೆ ಆರ್ಥಿಕ ಸಲಹೆಗಾರರು, ಶಾಸಕ ಬಸವರಾಜ ರಾಯರಡ್ಡಿ ಮತ್ತು ಜಿಲ್ಲಾಧಿಕಾರಿಗಳು, ಕೃಷಿ ಮಂತ್ರಿಗಳು ಗಮನಹರಿಸಿ ಬೇಗನೇ ರೈತರಿಗೆ ಅನುಕೂಲ ಮಾಡಿಕೊಡಬೇಕು” ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಕೊಪ್ಪಳ | ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ; ಅಪರಾಧಿಗೆ 4 ವರ್ಷ ಜೈಲು ಶಿಕ್ಷೆ
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಗಂಗಮ್ಮ ಹೂಡೆದ ಮಾತನಾಡಿ, “ಮುಂದೆ ಬರುವ ಬೆಳೆಗಳಿಗೆ ಬೆಂಬಲ ಬೆಲೆ ಮತ್ತು ಎಪಿಎಂಸಿಯಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಬೇಕು. ಎಪಿಎಂಸಿ ಆವರಣದಲ್ಲಿ ರೈತರಿಗೆ ರೈತ ಭವನವನ್ನು ನಿರ್ಮಿಸಿಕೊಡಬೇಕು ಮತ್ತು ರೈತರ ಎಲ್ಲಾ ಬೇಡಿಕೆಗಳನ್ನು ಈಡೇರಿಸುಬೇಕು. ಈಡೇರಿಸದೆ ಇದ್ದ ಪಕ್ಷದಲ್ಲಿ ಕುಕುನೂರು ಯಲಬುರ್ಗಾ ಬಂದ್‌ಗೆ ಕರೆ ಕೊಟ್ಟು ಅನಿರ್ದಿಷ್ಟಾವಧಿ ಧರಣಿ ಹಾಗೂ ಹೋರಾಟ ಮಾಡಲಾಗುವುದು” ಎಂದರು.
ಈ ವೇಳೆ ನಗರ ಘಟಕ ಅಧ್ಯಕ್ಷ ಶಿವು ಬಂಗಿ, ಬಸವರಾಜ ಸಬರದ, ಹನುಮಪ್ಪ ಮರಡಿ, ಬಸಪ್ಪ ಲಾಲ್ ಗುಂಡೂರ, ವೀರಯ್ಯ ತೋಂಟದಾರ್ಯ ಮಠ, ಈರಪ್ಪ ಈ ಬೇರಿ, ಮಹಮ್ಮದ್ ರಫಿ ಸವಣೂರು, ಉಮೇಶ್ ಬಿದವಟ್ಟಿ, ಶಿವಪ್ಪ ಯತ್ನಟ್ಟಿ, ಕೆಂಚಪ್ಪ, ಈರಪ್ಪ ಗುಳಗಣ್ಣನವರ್, ಮಹದೇವಪ್ಪ ಕುರಿ, ವೀರಪ್ಪ ಕೂಡ್ಲೂರು, ಬಸಪ್ಪ ಮಂಡಲಗೇರಿ, ಮಲ್ಲಪ್ಪ ಮೂಲಿಮನಿ, ಎಚ್ ಎಮ್ ಮರಡಿ, ಮಲ್ಲಪ್ಪ ಯತ್ನಟ್ಟಿ, ಶರಣಪ್ಪ ಚೆಂಡೂರ, ರಾಮಣ್ಣ ಬಳ್ಳಾರಿ, ಬಸಪ್ಪ ಬಂಗಿ, ಯಲ್ಲಪ್ಪ ಕಲಾಲ್, ಬಸವರಾಜ್ ಸಬರದ, ಚಂದ್ರಶೇಖರ ವಸ್ತ್ರದ, ಶರಣಪ್ಪ ಯತ್ನಟ್ಟಿ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಪದಾಧಿಕಾರಿಗಳು ಕಾರ್ಯಕರ್ತರು ಮತ್ತು ಇತರರಿದ್ದರು.