ಅಖಿಲ ಭಾರತ ವಕೀಲರ ಸಂಘ(AILU)ದ ರಾಜ್ಯ ಕರೆಯ ಅನ್ವಯ ಇಂದು ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ನೇತ್ರತ್ವದಲ್ಲಿ ಮಂಗಳೂರಿನ ನ್ಯಾಯಾಲಯದ ಆವರಣದಲ್ಲಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಅಖಿಲ ಭಾರತ ವಕೀಲರ ಒಕ್ಕೂಟದ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರು ಹಾಗೂ ಹಿರಿಯ ವಕೀಲ ಯಶವಂತ ಮರೋಳಿಯವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, “ಕರ್ನಾಟಕ ರಾಜ್ಯ AILU ಸಂಘಟನೆಯು ರಾಜ್ಯದಲ್ಲಿ ವಕೀಲರ ಮತ್ತು ಕಾನೂನು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಚರ್ಚಿಸಿ ಹಲವು ಬೇಡಿಕೆಗಳನ್ನು ಸರ್ಕಾರದ ಮುದಿಡುತ್ತಿದೆ. ಪೊಲೀಸರ ಏಕಪಕ್ಷೀಯ ವರ್ತನೆಗಳಿಂದ ವಕೀಲರಿಗೆ ರಕ್ಷಣೆ ನೀಡಬೇಕು ಮತ್ತು ವಕೀಲರ ಸಂರಕ್ಷಣೆ ಕಾಯ್ದೆ-2024ಕ್ಕೆ ಸೂಕ್ತ ತಿದ್ದುಪಡಿಯಾಗಬೇಕು. ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯದ ಮಾರ್ಗಸೂಚಿಯನ್ನು ಪಾಲಿಸಬೇಕು. ಕಾನೂನು ವಿದ್ಯಾರ್ಥಿಗಳನ್ನು ಗೊಂದಲಕ್ಕೆ ತಳ್ಳುವ ಮತ್ತು ಅವರ ಭವಿಷ್ಯವನ್ನು ಅಭದ್ರತೆಯಲ್ಲಿಡುವ ಅವೈಜ್ಞಾನಿಕ ಅಖಿಲ ಭಾರತ ಬಾರ್ ಪರೀಕ್ಷೆ(AIBE) ರದ್ದು ಪಡಿಸಬೇಕು” ಎಂದು ಸಂಘಟನಾಕಾರರು ಒತ್ತಾಯಿಸಿದರು.
“ಕಿರಿಯ ವಕೀಲರ ವೃತ್ತಿ ಆರಂಭದ ಬದುಕಿಗೆ ಪೂರಕವಾಗುವಂತೆ 2 ವರ್ಷಗಳ ಕಾಲ ಮಾಸಿಕ ₹10,000 ಸಹಾಯಧನ ನೀಡಬೇಕು. ರಾಜ್ಯದ ಎಲ್ಲ ತಾಲೂಕು ವಕೀಲರ ಸಂಘಗಳಿಗೆ ವರ್ಷಕ್ಕೆ ₹5 ಲಕ್ಷ ಅನುದಾನ ಮಂಜೂರು ಮಾಡಬೇಕು. ಜಿಲ್ಲಾ ವಕೀಲರ ಸಂಘಗಳಿಗೆ ₹10 ಲಕ್ಷ ರೂಪಾಯಿಗಳ ಅನುದಾನ ಮಂಜೂರು ಮಾಡಬೇಕು. ರಾಜ್ಯ ಸರ್ಕಾರವು ವಕೀಲರಿಗೆ ಕಡ್ಡಾಯವಾಗಿ ವೈದ್ಯಕೀಯ ಮತ್ತು ಜೀವ ವಿಮಾ ಸೌಲಭ್ಯವನ್ನು ಒದಗಿಸಬೇಕು” ಎಂದು ಆಗ್ರಹಿಸಿದರು.
“ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣಗಳಲ್ಲಿ ವಕೀಲರ ಅಕಾಡೆಮಿಗಳನ್ನು ಸ್ಥಾಪಿಸಬೇಕು. ಕರ್ನಾಟಕ ರಾಜ್ಯದಲ್ಲಿ ಹೆಚ್ಚುವರಿ ನ್ಯಾಯಾಲಯಗಳನ್ನು ಸ್ಥಾಪಿಸಲು ಮುಂದಾಗಬೇಕು. ಹಾಗೆಯೇ ಈಗಿರುವ ನ್ಯಾಯಾಲಯಗಳಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸಬೇಕು. ರಾಜ್ಯದ ಎಲ್ಲ ನ್ಯಾಯಾಲಯದ ಆವರಣದಲ್ಲಿ ವಕೀಲರಿಗೆ ಚೇಂಬರ್‌ಗಳನ್ನು ಸ್ಥಾಪಿಸಬೇಕು. ವ್ಯಾಪಕ ಭ್ರಷ್ಟಾಚಾರವನ್ನು ತಡೆದು ಕಂದಾಯದ ವಿಚಾರಗಳನ್ನು ಕಾನೂನು ಪಾಲನೆಗೆ ಒಗ್ಗಿಸಿಕೊಳ್ಳುವ ನಿಟ್ಟಿನಲ್ಲಿ ರೆವೆನ್ಯೂ ಎಸಿ, ಡಿಸಿ ನ್ಯಾಯಾಲಯಗಳಲ್ಲಿ ನಡೆಯುವ ಕಂದಾಯ ಪ್ರಕರಣಗಳಲ್ಲಿ ಬೇರೆ ಬೇರೆ ರೀತಿಯ ಒತ್ತಡಗಳು ಮತ್ತು ವಿಳಂಬದ ಕಾರಣ ಸರಿಯಾದ ರೀತಿಯಲಿ ವಿಚಾರಣೆ ನಡೆಯದೆ, ಸಕ್ರಮವಾದ ತೀರ್ಪುಗಳು ಆಗದೇ ಇರುವುದರಿಂದ ಕಂದಾಯ ಪ್ರಕಣಗಳನ್ನು ಸಿವಿಲ್ ನ್ಯಾಯಾಲಯಗಳಿಗೆ ವರ್ಗಾಯಿಸಲು ಕ್ರಮ ತೆಗೆದುಕೊಳ್ಳಬೇಕು” ಎಂದು ಒತ್ತಾಯಿಸಿದರು.
“ವಕೀಲರಿಗೆ ಟೋಲ್ ಶುಲ್ಕ ರಹಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕು. ರಾಜ್ಯದ ಪ್ರತಿ ಜಿಲ್ಲೆಗೆ ಒಂದರಂತೆ ಸರ್ಕಾರಿ ಕಾನೂನು ಕಾಲೇಜುಗಳನ್ನು ಸ್ಥಾಪಿಸಬೇಕು ಹಾಗೂ ಈಗಿರುವ ಅನುದಾನಿತ ಮತ್ತು ಖಾಸಗಿ ಕಾನೂನು ಕಾಲೇಜುಗಳ ಶುಲ್ಕವನ್ನು ಸರ್ಕಾರ ನಿಯಂತ್ರಣ ಮಾಡಬೇಕು. ಹಾಲಿ ಇರುವ ಸರ್ಕಾರಿ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಕಚೇರಿಯನ್ನು ವಿಭಾಗೀಯ ಮಟ್ಟದಲ್ಲಿ ಸ್ಥಾಪಿಸಬೇಕು. ವಕೀಲರ ಸಂಘದ/ಪರಿಷತ್ತಿನ ಚುನಾವಣೆಯಲ್ಲಿ ಮಹಿಳಾ ವಕೀಲರಿಗೆ ಶೇ.33ರಷ್ಟು ಮೀಸಲಾತಿ ನೀಡಬೇಕು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರಿಗೆ ಮೀಸಲಾತಿ ಅನುಸಾರ ಪ್ರಾತಿನಿಧ್ಯ ನೀಡಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಮಂಗಳೂರು | ಸಂಭಾವ್ಯ ಮಳೆ ಅನಾಹುತ ಪ್ರದೇಶಗಳನ್ನು ಗುರುತಿಸಲು ಜಿಲ್ಲಾಧಿಕಾರಿ ಸೂಚನೆ
“ಅಖಿಲ ಭಾರತ ವಕೀಲರ ಸಂಘವು ಈ ಅಭಿಯಾನದ ಮೂಲಕ ತಿಳಿಸಿರುವ ಬೇಡಿಕೆಗಳನ್ನು ಒಂದು ತಿಂಗಳೊಳಗಾಗಿ ಈಡೇರಿಸಬೇಕು. ಇಲ್ಲದಿದ್ದಲ್ಲಿ ವಕೀಲರುಗಳು ತಮ್ಮ ಹೋರಾಟವನ್ನು ತೀವ್ರಗೊಳಿಸಿ, ನಮ್ಮ ನಡೆಯನ್ನು ವಿಧಾನಸೌಧ, ವಕೀಲರ ಪರಿಷತ್‌ಗಳ ಕಡೆ ನಡೆಸಬೇಕಾಗುತ್ತದೆ” ಎಂದು ಎಚ್ಚರಿಸಿದರು.
ಅಖಿಲ ಭಾರತ ವಕೀಲರ ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ ರಾಮಚಂದ್ರ ಬಬ್ಬುಕಟ್ಟೆ, ಕಾರ್ಯದರ್ಶಿ ನಿತಿನ್ ಕುತ್ತಾರ್, ಪದಾಧಿಕಾರಿಗಳಾದ ಶಾಲಿನಿ ಮನೋಹರ್, ಮನೋಜ್ ವಾಮಂಜೂರು, ಸುನಂದ ಕೊಂಚಾಡಿ, ಚರಣ್ ಶೆಟ್ಟಿ ಪಂಜಿಮೊಗರು ಇದ್ದರು.