ದೆಹಲಿಯ ಕಲ್ಕಾಜಿಯ ಭೂಮಿಹೀನ್ ಶಿಬಿರದ ನಿವಾಸಿಗಳನ್ನು ಭೇಟಿ ಮಾಡಲು ಹೋದಾಗ ದೆಹಲಿ ಮಾಜಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ನಾಯಕಿ ಆತಿಶಿ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಎಎಪಿ ಹೇಳಿಕೊಂಡಿದೆ. ಆದರೆ ಪೊಲೀಸರು ಮಾತ್ರ ಇದನ್ನು ನಿರಾಕರಿಸಿದ್ದಾರೆ.
ಜುಗ್ಗಿ-ಜೋಪ್ರಿ ಶಿಬಿರದಲ್ಲಿರುವ ಮನೆಗಳಿಗೆ ದೆಹಲಿ ಅಭಿವೃದ್ಧಿ ಪ್ರಾಧಿಕಾರವು ನೋಟಿಸ್ ಅಂಟಿಸಿದೆ. ಈ ಮನೆಯು ಅತಿಕ್ರಮಣವಾಗಿದ್ದು ಮೂರು ದಿನಗಳಲ್ಲಿ ಮನೆ ಖಾಲಿ ಮಾಡಬೇಕು. ಇಲ್ಲವಾದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನೋಟಿಸ್‌ನಲ್ಲಿ ಎಚ್ಚರಿಸಲಾಗಿದೆ.
ಇದನ್ನು ಓದಿದ್ದೀರಾ? ‘ದೆಹಲಿ ಸಿಎಂ ಆತಿಶಿ ಬಂಧನಕ್ಕೆ ಸಿದ್ಧತೆ!’
ಜೂನ್ ಮತ್ತು ಜುಲೈ 2023ರಲ್ಲಿ, ಈ ವರ್ಷ ಮೇ ತಿಂಗಳಲ್ಲಿ ಮೂರು ಬಾರಿ ನೆಲಸಮ ಕಾರ್ಯಾಚರಣೆ ಮಾಡಲಾಗಿದೆ. ಇಲ್ಲಿ ನೆಲೆಸಿರುವವರು ಹೆಚ್ಚಿನವರು ವಲಸೆ ಕಾರ್ಮಿಕರು ಆಗಿದ್ದಾರೆ, ಅವರಿಗೆ ಶಿಬಿರ ಇದಾಗಿದೆ. ಇವರನ್ನು ಭೇಟಿ ಮಾಡಲು ಹೋದಾಗ ಆತಿಶಿ ಬಂಧನ ನಡೆದಿದೆ ಎನ್ನಲಾಗಿದೆ. ಆದರೆ ಪೊಲೀಸರು ಮಾತ್ರ ನಾವು ಬಂಧಿಸಿಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಹಿಂದಿಯಲ್ಲಿ ಪೋಸ್ಟ್ ಮಾಡಿರುವ ಆತಿಶಿ, “ನಾಳೆ, ಬಿಜೆಪಿ ಭೂಮಿಹೀನರ ಶಿಬಿರದ ಮೇಲೆ ಬುಲ್ಡೋಜರ್‌ಗಳನ್ನು ಓಡಿಸಲಿದೆ. ಇಂದು, ಅಲ್ಲಿನ ಕೊಳೆಗೇರಿ ನಿವಾಸಿಗಳು ಪ್ರತಿಭಟನೆ ನಡೆಸಲು ಯೋಜಿಸುತ್ತಿದ್ದರು. ಆದ್ದರಿಂದ ಬಿಜೆಪಿ ಸರ್ಕಾರ ಸಾವಿರಾರು ಪೊಲೀಸರು ಮತ್ತು ಸಿಆರ್‌ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಿದೆ” ಆರೋಪಿಸಿದ್ದಾರೆ.
“ರೇಖಾ ಗುಪ್ತಾ ಅವರೇ ಯಾವುದೇ ಕೊಳೆಗೇರಿಗಳನ್ನು ಕೆಡವಲಾಗುವುದಿಲ್ಲ ಎಂದು ನೀವು ಹೇಳಿದ್ದೀರಿ ಅಲ್ಲವೇ? ಹಾಗಾದರೆ ಇಷ್ಟೊಂದು ಬೃಹತ್ ಪೊಲೀಸ್ ಮತ್ತು ಸಿಆರ್‌ಪಿಎಫ್ ಪಡೆ ಏಕೆ ನಿಯೋಜಿಸಲಾಗಿದೆ” ಆತಿಶಿ ದೆಹಲಿ ಸಿಎಂ ರೇಖಾ ಅವರನ್ನು ಪ್ರಶ್ನಿಸಿದ್ದಾರೆ.
ಆದರೆ ರೇಖಾ ಮಾತ್ರ ನ್ಯಾಯಾಲಯಗಳು ಹೊರಡಿಸಿದ ಆದೇಶವನ್ನು ಅಧಿಕಾರಿಗಳು ವಿರೋಧಿಸಲು ಸಾಧ್ಯವಿಲ್ಲ. ಸ್ಥಳಾಂತರಗೊಂಡ ನಿವಾಸಿಗಳಿಗೆ ವಸತಿ ಒದಗಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ.
