ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ 2021ರ ಮೇ 2ರ ಮಧ್ಯರಾತ್ರಿ ಆಕ್ಸಿಜನ್ ದೊರಕದೇ ಮೃತಪಟ್ಟ 36 ಮಂದಿಯ ಕುಟುಂಬಗಳಿಗೂ, ಬೆಂಗಳೂರು ಕಾಲ್ತುಳಿತದಿಂದ ಮೃತಪಟ್ಟ ಕುಟುಂಬದವರಿಗೆ ನೀಡಿದಂತೆ ತಲಾ 25 ಲಕ್ಷ ರೂ. ಪರಿಹಾರ ನೀಡಬೇಕು. ಈ ಕುಟುಂಬಗಳ ಓರ್ವರಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಒತ್ತಾಯಿಸಿ ಸರ್ಕಾರದ ವಿರುದ್ಧ ನಾನಾ ಹಂತದ ಪ್ರತಿಭಟನೆಗಳನ್ನು ಕೈಗೊಳ್ಳಲು ಮಂಗಳವಾರ ನಡೆದ ಪ್ರಗತಿಪರ ಒಕ್ಕೂಟದ ಮುಖಂಡರ ಸಭೆಯಲ್ಲಿ ನಿರ್ಧರಿಸಲಾಯಿತು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಪ್ರಗತಿ ಪರ ಸಂಘಟನೆಗಳ ಒಕ್ಕೂಟದಿಂದ ಸಭೆ ನಡೆಸಲಾಯಿತು.
ಪ್ರಗತಿ ಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಸಿ.ಎಂ. ಕೃಷ್ಣಮೂರ್ತಿ ಮಾತನಾಡಿ, ಆರ್‌ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟಿರುವವರ ಕುಟುಂಬಕ್ಕೆ ರಾಜ್ಯ ಸರ್ಕಾರ 25 ಲಕ್ಷ ರೂ. ಪರಿಹಾರ ನೀಡಿದೆ. ಆದರೆ 2021ರಲ್ಲಿ ಅಂದಿನ ಸರ್ಕಾರದ ನಿರ್ಲಕ್ಷ್ಯದಿಂದ ಮೃತಪಟ್ಟ 36 ಜನರ ಕುಟುಂಬಗಳಿಗೆ 2 ಲಕ್ಷ, 5 ಲಕ್ಷ ಇನ್ನೂ ಕೆಲವರಿಗೆ ಪರಿಹಾರವನ್ನೇ ನೀಡಿಲ್ಲ. ಸಂತ್ರಸ್ತರ ಪರವಾಗಿ ಅನೇಕ ಹೋರಾಟ ನಡೆದರೂ, ನೂರೆಂಟು ಅರ್ಜಿಗಳನ್ನು ಕೊಟ್ಟರೂ, ಈ ಕುಟುಂಬಗಳಿಗೆ ನ್ಯಾಯ ದೊರೆತಿಲ್ಲ ಎಂದರು.
ಬೆಂಗಳೂರಿಗೆ ಒಂದು ನ್ಯಾಯ, ಚಾಮರಾಜನಗರಕ್ಕೇ ಒಂದು ನ್ಯಾಯವೇ?
ಬೆಂಗಳೂರಿನ ಕಾಲ್ತುಳಿತ ಹಾಗೂ ಕೋಮು ಗಲಭೆಯಲ್ಲಿ ಮೃತಪಟ್ಟವರಿಗೆ 25 ಲಕ್ಷ ರೂ. ಪರಿಹಾರ ನೀಡಲಾಗಿದೆ. ಅಲ್ಲದೇ ಬೆಂಗಳೂರಿನಲ್ಲಿ ಐದಾರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಆದರೆ ಚಾಮರಾಜನಗರ ಪ್ರಕರಣದಲ್ಲಿ ಒಬ್ಬ ಅಧಿಕಾರಿಯನ್ನೂ ಅಮಾನತು ಮಾಡಿಲ್ಲ. ಈ ಸರ್ಕಾರಕ್ಕೆ ಪಂಚೇಂದ್ರಿಯಗಳಿಲ್ಲವೇ? ಎಂದು ಪ್ರಶ್ನಿಸಿದರು.
36 ಕುಟುಂಬಗಳು ಬೀದಿ ಪಾಲಾಗಿವೆ. ಸರ್ಕಾರ ಎಲ್ಲರನ್ನೂ ಒಂದೇ ಸಮನಾಗಿ ನೋಡಬೇಕು. ಮಾನವೀಯತೆ ದೃಷ್ಟಿಯಿಂದ ಇವರಿಗೆಲ್ಲ ತಲಾ 25 ಲಕ್ಷ ರೂ. ಪರಿಹಾರ ನೀಡಬೇಕು ಎಂದರು.
ಕರ್ನಾಟಕ ಸೇನಾ ಪಡೆಯ ಅಧ್ಯಕ್ಷ ಚಾ.ರಂ. ಶ್ರೀನಿವಾಸಗೌಡ ಮಾತನಾಡಿ, ಆಕ್ಸಿಜನ್ ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ನ್ಯಾಯ ಮರೀಚಿಕೆಯಾಗಿದೆ. ಹೀಗಾಗಿ ಜಿಲ್ಲೆಯಾದ್ಯಂತ ಜನಾಂದೋಲನ ರೂಪುಗೊಳ್ಳಬೇಕಾಗಿದೆ. ಧರಣಿ, ಸತ್ಯಾಗ್ರಹಗಳನ್ನು ಹಮ್ಮಿಕೊಂಡು ಕೊನೆಗೆ ಚಾಮರಾಜನಗರ ಬಂದ್ ನಡೆಸುವ ಮೂಲಕ ಸರ್ಕಾರದ ಗಮನಕ್ಕೆ ತರಬೇಕಾಗಿದೆ ಎಂದರು.
ರೈತ ಸಂಘದ ರಾಜ್ಯ ಸಂಚಾಲಕ ಗುರುಪ್ರಸಾದ್ ಮಾತನಾಡಿ, ಈ ಪ್ರಕರಣದಲ್ಲಿ ನಾವು ಆರಿಸಿ ಕಳುಹಿಸಿದ ಶಾಸಕರು ಏನು ಮಾಡುತ್ತಿದ್ದಾರೆ? ಅವರ ಕ್ಷೇತ್ರದಲ್ಲಿ ಮೃತಪಟ್ಟಿರುವ ಜನರಿಗೆ ನ್ಯಾಯ ದೊರಕಿಸಬೇಕಾದದ್ದು ಅವರ ಕರ್ತವ್ಯವಲ್ಲವೇ? ಶಾಸಕರನ್ನು ಎಚ್ಚರಿಸಲು ಅವರ ಮನೆಗೆ ಮುತ್ತಿಗೆ ಹಾಕೋಣ ಎಂದರು.
ದುರಂತದಲ್ಲಿ ತನ್ನ ಪತಿಯನ್ನು ಕಳೆದುಕೊಂಡಿರುವ ಸಂತ್ರಸ್ತೆ ನಾಗರತ್ನ ಮಾತನಾಡಿ, ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ಬೆಳಗಾವಿ ಅಧಿವೇಶನದಲ್ಲಿ ಈ ದುರಂತದ ಬಗ್ಗೆ ಮಾತನಾಡಿದರು. ಶಾಸಕ ಪುಟ್ಟರಂಗಶೆಟ್ಟಿ ಅವರು ಈ ವಿಷಯದಲ್ಲಿ ನಮ್ಮ ಪರ ದನಿ ಎತ್ತಬೇಕು. ಕಾಲ್ತುಳಿತದಲ್ಲಿ ಸತ್ತವರಿಗೆ 25 ಲಕ್ಷ ರೂ. ನೀಡಿದ್ದಾರೆ. ಸರ್ಕಾರದ ನಿರ್ಲಕ್ಷ್ಯದಿಂದ ಸತ್ತ ನಮ್ಮ ಕುಟುಂಬಗಳಿಗೂ 25 ಲಕ್ಷ ರೂ. ಪರಿಹಾರ ನೀಡಿ ಎಂದು ಒತ್ತಾಯಿಸಿದರು.
ರಂಗಕರ್ಮಿ ಕೆ. ವೆಂಕಟರಾಜು ಮಾತನಾಡಿ, ನ್ಯಾಯಮೂರ್ತಿ ವೇಣುಗೋಪಾಲ್ ಸಮಿತಿ ಈ ದುರಂತದಲ್ಲಿ 37 ಜನರು ಮೃತಪಟ್ಟಿದ್ದಾರೆ ಎಂದು ವರದಿ ನೀಡಿದೆ. ಈ 37 ಜನರಿಗೂ 25 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಅಬ್ರಾರ್ ಅಹಮದ್, ಅಧ್ಯಕ್ಷ ಖಲೀಲ್‌ಉಲ್ಲಾ, ಗಾಳಿಪುರ ಮಹೇಶ್, ನಯಾಜುಲ್ಲಾ, ನಸ್ರುಲ್ಲಾ ವಿವಿಧ ಸಂಘಟನೆಗಳ ಮುಖಂಡರಾದ ಸುರೇಶ್ ವಾಜಪೇಯಿ, ಆಟೋ ಮಹದೇವಸ್ವಾಮಿ, ಇಂಡಯ್ಯ, ಸಿ.ಎನ್. ಗೋವಿಂದರಾಜು, ಬ್ರಿಜೇಶ್‌ಒಲಿವೆರಾ, ಬಂಗಾರಸ್ವಾಮಿ, ಅಮಚವಾಡಿ ಶಿವಣ್ಣ, ದೊಡ್ಡರಾಯಪೇಟೆ ಮಹೇಶ್, ಅರುಣ್‌ಕುಮಾರ್ ಗೌಡ ಹಾಗೂ ದುರಂತ ಸಂತ್ರಸ್ತರ ಕುಟುಂಬದವರು ಭಾಗವಹಿಸಿದ್ದರು.
ಹಂತ ಹಂತದ ಪ್ರತಿಭಟನೆ ಕೈಗೊಳ್ಳಲು ನಿರ್ಧಾರ
ಜೂ.13ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲು ತೀರ್ಮಾನಿಸಿತು.
ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ, ಜಿಲ್ಲಾಧಿಕಾರಿಯವರಿಗೆ ಹಕ್ಕೊತ್ತಾಯ ಸಲ್ಲಿಸಲಾಗುವುದು.
ಇದಾದ ಕೆಲವು ದಿನಗಳ ಬಳಿಕ, ಶಾಸಕರ ಮನೆಗೆ ಮುತ್ತಿಗೆ, ಚಾಮರಾಜನಗರ ಬಂದ್ ನಡೆಸಲು ನಿರ್ಧರಿಸಲಾಯಿತು.