ಬಿಜೆಪಿ, ಆರ್‌ಎಸ್‌ಎಸ್ ಹಾಗೂ ಸಂಘ ಪರಿವಾರದ ಚಿತಾವಣೆಯಿಂದ ಛಲವಾದಿ ನಾರಾಯಣಸ್ವಾಮಿ ಹಾಗೂ ರವಿಕುಮಾರ್ ಪ್ರಿಯಾಂಕ್ ಖರ್ಗೆರವರನ್ನು ವೈಯಕ್ತಿಕವಾಗಿ ಅವಹೇಳನ ಮಾಡಿರುವುದು ತೀವ್ರ ಖಂಡನೀಯ. ಈ ಕೂಡಲೇ ಇಬ್ಬರನ್ನೂ ವಿಧಾನ ಪರಿಷತ್ ಸ್ಥಾನದಿಂದ ವಜಾಗೊಳಿಸಬೇಕು ಎಂದು ಡಿಎಸ್‌ಎಸ್ ಮುಖಂಡ ಎ ಮಾನಸಯ್ಯ ಆಗ್ರಹಿಸಿದರು.
ಬಳ್ಳಾರಿ ನಗರದಲ್ಲಿ ಜಿಲ್ಲಾಡಳಿತ ಕಚೇರಿ ಎದುರು ಬೃಹತ್ ಸಂಖ್ಯೆಯಲ್ಲಿ ಪ್ರತಿಭಟಿಸಿ, ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಮಾತನಾಡಿದರು.
“ದಲಿತ, ಹಿಂದುಳಿದ, ಅಲ್ಪಸಂಖ್ಯಾತ ನಾಯಕರ ಏಳಿಗೆಯನ್ನು ಸಹಿಸದ ಬಿಜೆಪಿಗರ ದಲಿತ ವಿರೋಧಿ ನೀತಿ ಖಂಡನಿಯ. ಪ್ರಸ್ತುತ ಕರ್ನಾಟಕದ ರಾಜಕಾರಣದಲ್ಲಿ ಸಂವಿಧಾನಬದ್ಧ ಪ್ರಗತಿಪರ ಚಿಂತನೆ ಮಾಡುತ್ತ ಸಮಾಜಪರ, ಜನಪರ, ಜೀವಪರ ಚಿಂತನೆಯುಳ್ಳ ಸ್ವಾಭಿಮಾನಿ ಪ್ರಿಯಾಂಕ್ ಖರ್ಗೆಯವರು ಮನುವಾದಿ ಬಿಜೆಪಿ, ಆರ್‌ಎಸ್‌ಎಸ್, ಕೋಮುವಾದಿ ಸಂಘ ಪರಿವಾರದವರನ್ನು ವಿಧಾನಸೌಧದ ಒಳಗೆ ಹಾಗೂ ಹೊರಗೆ ಸಿಂಹಸ್ವಪ್ನವಾಗಿ ಕಾಡುತ್ತಿದ್ದಾರೆ. ಖರ್ಗೆಯವರು ಸಾರ್ವಜನಿಕವಾಗಿ ಕೇಳಿರುವ ಸಂವಿಧಾನಬದ್ಧವಾದ ಸೈದ್ಧಾಂತಿಕ ಪ್ರಶ್ನೆಗಳಿಗೆ ಉತ್ತರ ನೀಡುವ ನೈತಿಕತೆ ಇಲ್ಲದ ಮನುವಾದಿಗಳು ವೈಯಕ್ತಿಕ ನಿಂದನೆಗೆ ಇಳಿದಿರುವುದು ನಾಚಿಕೆಗೇಡಿನ ಸಂಗತಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಖರ್ಗೆರವರ ದಿಟ್ಟತನದೆದುರು ಸೋತಿರುವ ಮನುವಾದಿಗಳು ಸೋಲನ್ನು ಮುಚ್ಚಿಕೊಳ್ಳುವ ಸಲುವಾಗಿ ಮನುವಾದಿ ಬಿಜೆಪಿ, ಆರ್‌ಎಸ್‌ಎಸ್, ಸಂಘ ಪರಿವಾರಕ್ಕೆ ತಮ್ಮ ಸ್ವಾಭಿಮಾನವನ್ನು ಅಡವಿಟ್ಟು, ಮಾನಸಿಕ ಗುಲಾಮಗಾರಿಕೆಗೆ ಒಳಗಾಗಿ ಸ್ವಾರ್ಥಕ್ಕಾಗಿ ಜೀತ ಮಾಡುತ್ತಿರುವ ಅಂಬೇಡ್ಕರ್ ವಿರೋಧಿ ಅನೇಕ ದಲಿತ ಮನುವಾದಿಗಳಲ್ಲಿ ಒಬ್ಬರಾಗಿರುವ ಅಂಬೇಡ್ಕರ್ ದ್ರೋಹಿ, ದಲಿತ ಸಮುದಾಯ ವಂಚಕ ಛಲವಾದಿ ಅಲ್ಲ, ಮನುವಾದಿ ನಾರಾಯಣಸ್ವಾಮಿಯಿಂದ ಪ್ರಿಯಾಂಕ್ ಖರ್ಗೆಯವರ ವಿರುದ್ಧ ಹೇಳಿಕೆಗಳನ್ನು ಕೊಡಿಸುತ್ತಿದೆ” ಎಂದು ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ಹಲವು ಬೇಡಿಕೆ ಈಡೇರಿಕೆಗೆ ಅಖಿಲ ಭಾರತ ವಕೀಲರ ಸಂಘದ ಸಹಿ ಸಂಗ್ರಹ ಅಭಿಯಾನ
ಛಲವಾದಿ ಮಹಾಸಭಾ ರಾಜ್ಯ ಉಪಾಧ್ಯಕ್ಷ ಸಿ ನರಸಪ್ಪ ಮಾತನಾಡಿ, “ವಿರೋಧ ಪಕ್ಷದ ನಾಯಕರೆನಿಸಿಕೊಂಡಿರುವ ನಾರಾಯಣಸ್ವಾಮಿ ಸಂವಿಧಾನಬದ್ಧ ಹುದ್ದೆಗೆ ಚ್ಯುತಿ ತರುವ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಆ ಹುದ್ದೆಯ ಘನತೆಗೆ ಧಕ್ಕೆ ತಂದಿರುವ ಕಾರಣ ವಿಧಾನ ಪರಿಷತ್ ಸದಸ್ಯತ್ವದಿಂದ ಹಾಗೂ ವಿರೋಧ ಪಕ್ಷದ ನಾಯಕ ಸ್ಥಾನದಿಂದ ಅವರನ್ನು ಈ ಕೂಡಲೇ ವಜಾಗೊಳಿಸಬೇಕು. ಕಲಬುರಗಿಯ ದಕ್ಷ ಜಿಲ್ಲಾಧಿಕಾರಿಗೆ ಅವಮಾನಕರ ಹೇಳಿಕೆ ನೀಡಿರುವ ರವಿಕುಮಾರ್‌ಗೆ ರಾಜ್ಯ ಉಚ್ಚ ನ್ಯಾಯಾಲಯ ಕ್ಷಮೆಯಾಚಿಸುವಂತೆ ತಾಕೀತು ಮಾಡಿದೆ. ಆತನನ್ನು ವಿಧಾನ ಪರಿಷತ್ ಸದಸ್ಯ ಸ್ಥಾನದಿಂದ ವಜಾಗೊಳಿಸಿ” ಎಂದು ಆಗ್ರಹಿಸಿದರು.
ಹೆಚ್ ಆಂಜನೇಯ, ಮಲ್ಲಯ್ಯ ಕೊಳಗಲ್, ಬಿ ರಮೇಶ್, ಹೆಚ್ ಶಂಕರ್, ಮಹೇಶ್ ಬತ್ರಿ, ಎರಿಸ್ವಾಮಿ ಹಲುಕುಂದಿ, ಬಳ್ಳಾರಿ, ಹೆಚ್ ದೊಡ್ಡಬಸಪ್ಪ, ಸಿರುಗುಪ್ಪ, ಜಗದೀಶ್ ಕುಮಾರ್, ಕಂಪ್ಲಿ, ಮಾರೆಪ್ಪ ಕುರುಗೋಡು, ಎಸ್ ಕೆಂಚಪ್ಪ, ಜಿ ಪಂಪಾಪತಿ, ಮಹೇಶ್ ಇಂದಿರಾ ನಗರ, ಟಿ.ಎಂ ಎರಿಸ್ವಾಮಿ, ಹುಲುಗಪ್ಪ ಬೆಳಗಲ್ಲು, ಗಂಗಾಧರ ವೇಣಿವೀರಾಪುರ, ಎಂ ಎಸ್ ಭೀಮಶಂಕರ್, ಸೂರಿ, ಪರಶುರಾಮ, ಸಿದ್ದಾರ್ಥಕಾಲೋನಿ ಸೇರಿದಂತೆ ಇತರರು ಇದ್ದರು.