ಧಾರ್ಮಿಕ ಪದ್ಧತಿಗಳನ್ನು ಬದಿಗೆ ಸರಿಸಿ, ಭಾರತೀಯ ಸಂವಿಧಾನದ ಪೀಠಿಕೆ ಪಠಣ ಮಾಡುವುದರ ಮೂಲಕ ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ಕನ್ನೆಕೋಳೂರಿನಲ್ಲಿ ಮದುವೆ ಸಮಾರಂಭ ಜರುಗಿತು.
ವಿಶಿಷ್ಠ ಮತ್ತು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಕೃಷಿಕ ಗುರುಲಿಂಗಪ್ಪ ಹೊಸಮನಿ ಅವರ ಹಿರಿಯ(ಜ್ಯೇಷ್ಠ) ಮಗನ ವಿವಾಹ ಸಮಾರಂಭ. ಸಂವಿಧಾನದ ಪ್ರಮಾಣವಚನದೊಂದಿಗೆ ವಿವಾಹ ನಡೆದಿದ್ದು, ಇದು ಸಾಮಾಜಿಕ ಮತ್ತು ಸೈದ್ಧಾಂತಿಕ ಕ್ಷೇತ್ರದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ ಎಂದರೆ ತಪ್ಪಾಗಲಾರದು.
ಉಪನ್ಯಾಸಕ ಮಾನಪ್ಪ ಹೊಸಮನಿ(ವರ) ಮತ್ತು ಶಿವಶಂಕರ ಚೆಲುವಾದಿಯವರ ದ್ವಿತೀಯ ಸುಪುತ್ರಿ ಲೆಕ್ಕಪರಿಶೋಧಕಿ ಸಮ್ರತಾ(ವಧು) ಇಬ್ಬರೂ ಜೂನ್ 8ರ ಭಾನುವಾರ ಜೊತೆಯಾದರು. ಶಹಾಪುರ ಪಟ್ಟಣದ ಖಲೀಲ್ ಪ್ಯಾಲೇಸ್ ಫಂಕ್ಷನ್ ಹಾಲ್‌ನಲ್ಲಿ ಕಾರ್ಯಕ್ರಮ ನಡೆಯಿತು.
ಈ ವಿವಾಹ ಸಮಾರಂಭದ ಪ್ರಮುಖ ಮತ್ತು ಕ್ರಾಂತಿಕಾರಿ ವೈಶಿಷ್ಟ್ಯವೆಂದರೆ ಬೌದ್ಧ ಭಿಕ್ಕುಗಳಾದ ಪೂಜ್ಯ ಭಂತೆ ಮೆತಪಾಲ್ ಅವರು ಮಾಂಗಲ್ಯಧಾರಣೆ ಹಾಗೂ ಪುಷ್ಪರೋಹಣವನ್ನು ನೆರವೇರಿಸಿದರು.
ಬಾಬುರಾವ್ ಭೂತಾಳೆ ಅವರು ಬೌದ್ಧ ಧರ್ಮದ 22 ಪ್ರತಿಜ್ಞೆಗಳನ್ನು ವಧು-ವರರಿಗೆ ಬೋಧಿಸಿದರು. ಬಳಿಕ ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳ ಬದಲಾಗಿ, ಹೊಸಮನಿ ಕುಟುಂಬವು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಆದರ್ಶಗಳನ್ನು ಅನುಸರಿಸಿ, ವಧು-ವರರು ಭಾರತೀಯ ಸಂವಿಧಾನ ಮತ್ತು ಅದರ ಮುನ್ನುಡಿ ಪೀಠಿಕೆಯ ಪ್ರಮಾಣವಚನ ಸ್ವೀಕರಿಸಿದರು.
ವಧು-ವರರಿಗೆ ಮೀನಾಕ್ಷಿ ಆರ್ ಹೊಸಮನಿ ಅವರು ಸಂವಿಧಾನದ ಪೂರ್ವ ಪೀಠಿಕೆಯನ್ನು ವಾಚಿಸಿದರು. ಸಂವಿಧಾನದ ಪ್ರಮಾಣವಚನ ಸ್ವೀಕರಿಸಿದ ನಂತರ ವಧು-ವರರು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಭಗವಾನ್ ಗೌತಮ ಬುದ್ಧನ ಚಿತ್ರಗಳ ಮುಂದೆ ನಮಸ್ಕರಿಸಿದರು. ಈ ಕ್ಷಣ ಅಲ್ಲಿದ್ದ ಎಲ್ಲರಿಗೂ ಭಾವನಾತ್ಮಕವಾಗಿತ್ತು. ವಿವಾಹ ಸಮಾರಂಭಕ್ಕಾಗಿ ನೆರೆದಿದ್ದ ಹೆಚ್ಚಿನ ಸಂಖ್ಯೆಯ ಸಾಮಾಜಿಕ ಕಾರ್ಯಕರ್ತರು ನಾಯಕರು ಮತ್ತು ನಾಗರಿಕರು ವಿಶಿಷ್ಟ ರೀತಿಯಲ್ಲಿ ನಡೆದ ಈ ವಿವಾಹವನ್ನು ಮೆಚ್ಚಿದರು.
ಈ ನಿರ್ಧಾರದ ಹಿಂದಿನ ಉದ್ದೇಶವನ್ನು ವರನ ಚಿಕ್ಕಪ್ಪ ದಸಂಸ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಡಾ. ರವೀಂದ್ರನಾಥ ಹೊಸಮನಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಹೊಸ ಪೀಳಿಗೆಗೆ ಭಾರತೀಯ ಸಂವಿಧಾನದ ಮಹತ್ವ ಮತ್ತು ಅದರ ಪೀಠಿಕೆಯಲ್ಲಿನ ಅಂಶಗಳನ್ನು ಅರ್ಥಮಾಡಿಕೊಳ್ಳುವುದು ನಮ್ಮ ಉದ್ದೇಶವಾಗಿತ್ತು. ಅದಕ್ಕಾಗಿಯೇ ನಾವು ಸಂವಿಧಾನದ ಪ್ರಮಾಣವಚನ ಸ್ವೀಕರಿಸುವ ಮೂಲಕ ವಿವಾಹವನ್ನು ನಡೆಸಲು ನಿರ್ಧರಿಸಿದ್ದೇವೆ. ಈ ಸಮಾರಂಭವು ಸಮಾನತೆಯ ತತ್ವದ ಆಧಾರದ ಮೇಲೆ ಹೊಸ ಸಮಾಜವನ್ನು ನಿರ್ಮಿಸುವ ಸಂಕೇತವಾಗಿದೆ” ಎಂದು ಸಂತಸ ವ್ಯಕ್ತಪಡಿಸಿದರು.
ಮದುಮಗ ಉಪನ್ಯಾಸಕ ಮಾನಪ್ಪ ಹೊಸಮನಿ ಮಾತನಾಡಿ, “ನಮ್ಮ ತಾತಾನ ಕಾಲದಿಂದಲೂ ನಮ್ಮ ಮನೆಯಲ್ಲಿ ಯಾವುದೇ ಪುರೋಹಿತ ಶಾಹಿ, ಮೌಢ್ಯಾಚರಣೆಗಳು, ಇತರೆ ಆಚರಣೆಗಳನ್ನು ಮಾಡದೆ ಅವುಗಳನ್ನು ಅಳಿಸಿಹಾಕುವ ನಿಟ್ಟಿನಲ್ಲಿ
ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವಗಳನ್ನು ಆದರ್ಶವನ್ನಾಗಿಟ್ಟುಕೊಂಡು ಬಂದಿದ್ದಾರೆ. ವಿವಾಹ ಎಂಬುದು ಸಂಪ್ರದಾಯ ಮತ್ತು ಧರ್ಮಗಳ ನಡುವೆ ಸಿಕ್ಕಿಹಾಕಿಕೊಂಡು ಸನಾತನ ವ್ಯವಸ್ಥೆಯಾಗಿ, ಆಚರಣೆಗಳೇ ಪ್ರಧಾನ ಎನ್ನುವಂತಾಗಿದೆ. ಬುದ್ಧ, ಬಸವ, ಅಂಬೇಡ್ಕರ್ ಅವರ ಪರಂಪರೆಯನ್ನು ಮುಂದುವರೆಸುವ ಹಿನ್ನೆಲೆಯಲ್ಲಿ ‘ಸಂವಿಧಾನ ಸಾಕ್ಷಿ’ ಮದುವೆ ನಡೆಯುತ್ತಿದ್ದು, ಅದರಂತೆ ಇಂದು ನನ್ನ ಮದುವೆ ಕೂಡ ಸಂವಿಧಾನ ಪೂರ್ವ ಪೀಠಿಕೆ ಓದುವುದರ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡಲಾಗಿದೆ” ಎಂದು ತಿಳಿಸಿದರು.
ಇದನ್ನೂ ಓದಿದ್ದೀರಾ? ಕೊಡಗು | ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ಘಟಕದಿಂದ ದೀಪಾ ಬಾಸ್ತಿಯವರಿಗೆ ಸನ್ಮಾನ
ಲೆಕ್ಕಪರಿಶೋಧಕಿಯಾದ ಮದುಮಗಳು ಸಮ್ರತಾ ಮಾತನಾಡಿ, “ಡಾ. ಬಿ ಆರ್ ಅಂಬೇಡ್ಕರ್ ಅವರಿಂದ ರಚಿತವಾದ ಭಾರತ ಸಂವಿಧಾನದ ಆಶಯದಂತೆ ಬಾಳ್ವೆ ಮಾಡಲು ಮುಂದಾಗಿದ್ದೇವೆ. ಈಗಿನ ಯುವಜನರು ಸಂವಿಧಾನದ ಮೌಲ್ಯಗಳನ್ನು ಅರಿತುಕೊಳ್ಳಬೇಕು. ಎಲ್ಲರೂ ಸಮಾನತೆ, ಸೌಹಾರ್ದತೆ ಪರಸ್ಪರ ಪ್ರೀತಿ, ವಿಶ್ವಾಸದಿಂದ ಬದುಕಲು ಅವಕಾಶ ಮಾಡಿಕೊಟ್ಟಿದ್ದು, ನಮ್ಮ ಸಂವಿಧಾನವೇ. ಹಾಗಾಗಿ ‘ಸಂವಿಧಾನ ಸಾಕ್ಷಿ’ಯಾಗಿ ನಾವು ನಮ್ಮ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದ್ದೇವೆ” ಎಂದರು.
ಈ ವಿಶೇಷ ಸಮಾರಂಭದಲ್ಲಿ ಎರಡೂ ಕುಟುಂಬಗಳು ಹಾಗೂ ನಗರದ ವಿವಿಧ ವಲಯಗಳ ಗಣ್ಯ ನಾಗರಿಕರು, ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು ಮತ್ತು ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ಈ ವಿನೂತನ ವಿವಾಹ ಪದ್ಧತಿಯು ಸಾಮಾಜಿಕ ಚಿಂತನೆಗೆ ಹೊಸ ದಿಕ್ಕನ್ನು ನೀಡಿದೆ ಎಂದು ಸಭಿಕರು ಅಭಿಪ್ರಾಯಪಟ್ಟರು.