ಮಣಿಪುರದಲ್ಲಿ ವಿಕೃತ ಪುರುಷರ ಗುಂಪೊಂದು ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ, ಅಮಾನವೀಯವಾಗಿ ಮೆರವಣೆಗೆ ಮಾಡಿ, ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ನಡೆದಿದೆ. ಇಬ್ಬರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ‘ದೇಶೀಯ ಬುಡಕಟ್ಟು ನಾಯಕರ ವೇದಿಕೆ’ (ಐಟಿಎಲ್‌ಎಫ್) ಆರೋಪಿಸಿದೆ.
ಮಣಿಪುರದ ಕಾಂಗ್‌ಪೊಕ್ಪಿ ಜಿಲ್ಲೆಯಲ್ಲಿ ಮೇ 4ರಂದು ಮಹಿಳೆಯರ ಮೇಲೆ ದುಷ್ಕರ್ಮಿಗಳ ಗುಂಪು ದೌರ್ಜನ್ಯ ಎಸಗಿದೆ. ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಮುಖ ಆರೋಪಿ ಹೆರಾದಾಸ್ (32) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬುಧವಾರ ಕೃತ್ಯದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ವ್ಯಾಪಕ ಖಂಡನೆ ವ್ಯಕ್ತವಾಗಿದೆ. ದುರುಳರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದೇಶಾದ್ಯಂತ ಆಗ್ರಹ ವ್ಯಕ್ತವಾಗಿದೆ.
ಕೃತ್ಯವನ್ನು ಖಂಡಿಸಿ, ದುಷ್ಠರನ್ನು ಬಂಧಿಸುವಂತೆ ಆಗ್ರಹಿಸಿ ಐಟಿಎಲ್‌ಎಫ್ ಸಂಘಟನೆ ಗುರುವಾರ ಪ್ರತಿಭಟನೆ ನಡೆಸುತ್ತಿದೆ. ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸರು, “ಥೌಬಲ್ ಜಿಲ್ಲೆಯ ನಾಂಗ್‌ಪೋಕ್ ಸೆಕ್ಮೈ ಪೊಲೀಸ್ ಠಾಣೆಯಲ್ಲಿ ಅಪಹರಣ, ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲಿಸಲಾಗಿದೆ. ದುಷ್ಕರ್ಮಿಗಳನ್ನು ಬಂಧಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಬಂಧಿಸುತ್ತೇವೆ” ಎಂದು ಹೇಳಿದ್ದಾರೆ.
ಸಂತ್ರಸ್ತ ಮಹಿಳೆಯರು ಕುಕಿ-ಜೋ ಬುಡಕಟ್ಟಿಗೆ ಸೇರಿದವರಾಗಿದ್ದು, ವಿಕೃತ ಮನಸ್ಸಿನ ಪುರುಷರ ಗುಂಪು ಅವರ ಮೇಲೆ ದೌಜನ್ಯ ಎಸಗಿ, ವಿಡಿಯೋವನ್ನು ಹರಿಬಿಟ್ಟಿದೆ. ವಿಡಿಯೋದಲ್ಲಿ ಮಹಿಳೆಯರು ಅಸಹಾಯತೆಯಿಂದ ಅಂಗಲಾಚುತ್ತಿದ್ದರೂ, ಅವರನ್ನು ಆ ದುರುಳರು ಎಳೆದೊಯ್ಯುತ್ತಿರುವುದು ಕಂಡುಬಂದಿದೆ.
ಈ ಸುದ್ದಿ ಓದಿದ್ದೀರಾ?: ದಲಿತ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜಿಸಿ ಥಳಿತ: ಆಂಧ್ರಪ್ರದೇಶದಲ್ಲಿ ಅಮಾನುಷ ಘಟನೆ
ಪ್ರಕರಣವನ್ನು ಆದ್ಯತೆ ಮೇರೆಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಪೊಲೀಸರಿಗೆ ಆದೇಶಿಸಿದ್ದಾರೆ. ಕೃತ್ಯ ಎಸಗಿದ ಅಪರಾಧಿಗಳ ವಿರುದ್ಧ ತ್ವರಿತವಾಗಿ ಕ್ರಮ ತೆಗೆದುಕೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ.
“ಈ ಮುಗ್ಧ ಮಹಿಳೆಯರು ಅನುಭವಿಸಿದ ಭಯಾನಕ ಹಿಂಸೆಯನ್ನು ವಿಡಿಯೋ ಮಾಡಿ ದುಷ್ಕರ್ಮಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಸಂತ್ರಸ್ತರ ಗುರುತುಗಳನ್ನು ಬಹಿರಂಗ ಪಡಿಸಿದ್ದಾರೆ. ಕೃತ್ಯವು ಇಡೀ ದೇಶವೇ ತಲೆತಗ್ಗಿಸುವ ಕೃತ್ಯವಾಗಿದೆ” ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಹಿಳಾ ಆಯೋಗ ಹಾಗೂ ರಾಷ್ಟ್ರೀಯ ಪರಿಶಿಷ್ಟ ಪಂಗಡದ ಆಯೋಗವನ್ನು ಐಟಿಎಲ್‌ಎಫ್ ಆಗ್ರಹಿಸಿದೆ.