ಅಕ್ರಮ ಗಣಿಗಾರಿಕೆ ಹಗರಣ ಪ್ರಕರಣದಲ್ಲಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿಗೆ ತೆಲಂಗಾಣ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.
ಅವಿಭಜಿತ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ನಡೆದ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಮತ್ತು ಅವರ ಸಂಬಂಧಿ ಓಬಳಾಪುರಂ ಮೈನಿಂಗ್ ಕಾರ್ಪೊರೇಷನ್ (ಒಎಂಸಿ) ವ್ಯವಸ್ಥಾಪಕ ನಿರ್ದೇಶಕ ಬಿ.ವಿ. ಶ್ರೀನಿವಾಸ್ ರೆಡ್ಡಿ ಸೇರಿದಂತೆ ನಾಲ್ವರಿಗೆ ಹೈದರಾಬಾದ್‌ನಲ್ಲಿರುವ ಕೇಂದ್ರೀಯ ತನಿಖಾ ದಳ (ಸಿಬಿಐ) ವಿಶೇಷ ನ್ಯಾಯಾಲಯ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.
ಸುಮಾರು 16 ವರ್ಷಗಳ ಹಿಂದೆ ಈ ಪ್ರಕರಣವನ್ನು ಸಿಬಿಐ ದಾಖಲಿಸಿತ್ತು. ಪ್ರಕರಣ ದಾಖಲಾಗುವ ಸಮಯದಲ್ಲಿ ಆಂಧ್ರಪ್ರದೇಶ ಗೃಹ ಸಚಿವೆಯಾಗಿದ್ದ ಸಬಿತಾ ಇಂದ್ರಾ ರೆಡ್ಡಿ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಬಿ ಕೃಪಾನಂದಂ ವಿರುದ್ಧದ ಆರೋಪಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಖುಲಾಸೆಗೊಳಿಸಲಾಗಿತ್ತು.
ಮತ್ತೆ ಈ ಅಕ್ರಮ ಗಣಿಗಾರಿಕೆ ಬಗ್ಗೆ ಕೋರ್ಟ್ ಸಾಕ್ಷ್ಯಗಳನ್ನು ಸಂಗ್ರಹಿಸಿ ತನಿಖೆ ನಡೆಸುತ್ತಲೇ ಇತ್ತು.29 ಲಕ್ಷ ಟನ್ ಅಕ್ರಮ ಅಧಿರು ಲೂಟಿ ಮಾಡಿದ ಆರೋಪದಲ್ಲಿ ಅವರಿಗೆ ಅಪರಾಧಿ ಎಂದು ಹೈದ್ರಾಬಾದ್ ಸಿಬಿಐ ಕೋರ್ಟ್ ಶಿಕ್ಷೆ ವಿಧಿಸಿದೆ. ಈ ಅಕ್ರಮ ಗಣಿಗಾರಿಕೆಯಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ರೂಪಾಯಿಗಳ ರಾಯಲ್ಟಿ ಮತ್ತು ತೆರಿಗೆ ನಷ್ಟವಾಗಿದೆ ಎಂದು ಆರೋಪಿಸಲಾಗಿದೆ.
ಈ ಹಿಂದೆ ಕೂಡ 2011 ಸೆಪ್ಟೆಂಬರ್‌ನಲ್ಲಿ ಗಾಲಿ ಜನಾರ್ಧನ ರೆಡ್ಡಿ ಬರೋಬ್ಬರಿ ಮೂರುವರೆ ವರ್ಷಗಳ ಕಾಲ ಚಂಚಲಗೂಡಿನಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದರು. ಆ ಬಳಿಕ ಜಾಮೀನು ಪಡೆದು ಹೊರಬರ್ತಾರೆ. ಆ ಬಳಿಕ ಈ ಕೇಸ್ ಬಗ್ಗೆ ತೀವ್ರ ವಿಚಾರಣೆ ನಡೆಸಲಾಗುತ್ತಿತ್ತು. ಮತ್ತೆ ಜನಾರ್ದನ ರೆಡ್ಡಿಗೆ ಸಿಬಿಐ ವಿಶೇಷ ನ್ಯಾಯಾಲಯ ಶಿಕ್ಷೆ ಪ್ರಕಟಿಸಿತ್ತು.