ಬಡ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ವಿಳಂಬದ ಕುರಿತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ದಲಿತ, ಎಸ್‌ಟಿ, ಇಬಿಸಿ, ಒಬಿಸಿ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಸತಿ ನಿಲಯಗಳಲ್ಲಿನ ‘ಶೋಚನೀಯ’ ಪರಿಸ್ಥಿತಿ ಮತ್ತು ಬಡ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ವಿಳಂಬವನ್ನು ಈ ಪತ್ರದಲ್ಲಿ ರಾಹುಲ್ ಗಾಂಧಿ ಟೀಕಿಸಿದ್ದಾರೆ
ಶೋಷಿತ ಸಮುದಾಯಗಳ ಶೇಕಡ 90ರಷ್ಟು ವಿದ್ಯಾರ್ಥಿಗಳ ಶಿಕ್ಷಣ ಅವಕಾಶಗಳಿಗೆ ಅಡ್ಡಿಯಾಗಿರುವುದು ಈ ಎರಡು ಸಮಸ್ಥೆಗಳಾಗಿದ್ದು, ಇವನ್ನು ಪರಿಹರಿಸುವಂತೆ ಗಾಂಧಿಯವರು ಪ್ರಧಾನಿಯನ್ನು ಒತ್ತಾಯಿಸಿದ್ದಾರೆ.
ಇದನ್ನು ಓದಿದ್ದೀರಾ? ರಾಯಚೂರು | ಕವಿವಿ ಶುಲ್ಕ ಹೆಚ್ಚಳ, ವಿದ್ಯಾರ್ಥಿವೇತನ ವಿಳಂಬಕ್ಕೆ ಎಐಆರ್‌ಎಸ್‌ಒ ವಿರೋಧ
“ಮೊದಲನೆಯದಾಗಿ, ವಸತಿ ನಿಲಯಗಳಲ್ಲಿ ದಲಿತ, ಎಸ್‌ಟಿ, ಇಬಿಸಿ, ಒಬಿಸಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳ ಪರಿಸ್ಥಿತಿ ಶೋಚನೀಯವಾಗಿವೆ. ಬಿಹಾರದ ದರ್ಭಾಂಗದಲ್ಲಿರುವ ಅಂಬೇಡ್ಕರ್ ಹಾಸ್ಟೆಲ್‌ಗೆ ಇತ್ತೀಚೆಗೆ ಭೇಟಿ ನೀಡಿದ್ದೆ. ಈ ವೇಳೆ ಒಂದು ಕೊಠಡಿಯನ್ನು 6-7 ವಿದ್ಯಾರ್ಥಿಗಳು ಹಂಚಿಕೊಳ್ಳಬೇಕಾಗಿರುವುದು, ನೈರ್ಮಲ್ಯವಿಲ್ಲದ ಶೌಚಾಲಯ, ಅಸುರಕ್ಷಿತ ಕುಡಿಯುವ ನೀರು, ಸೌಲಭ್ಯಗಳ ಕೊರತೆ, ಗ್ರಂಥಾಲಯಗಳು ಅಥವಾ ಇಂಟರ್ನೆಟ್ ಇಲ್ಲದಿರುವುದು ಗಮನಕ್ಕೆ ಬಂದಿದೆ” ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಪತ್ರದಲ್ಲಿ ಬರೆದಿದ್ದಾರೆ.
“ಎರಡನೆಯದಾಗಿ ಬಡ ಸಮುದಾಯಗಳ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಗಳು ವಿಳಂಬವಾಗುತ್ತಿದೆ” ಎಂದಿದ್ದಾರೆ. ಇದಕ್ಕೆ ಬಿಹಾರದ ಉದಾಹರಣೆಯನ್ನು ಉಲ್ಲೇಖಿಸಿದ್ದಾರೆ. ಬಿಹಾರದಲ್ಲಿ ವಿದ್ಯಾರ್ಥಿವೇತನ ಪೋರ್ಟಲ್ ಮೂರು ವರ್ಷಗಳ ಕಾಲ ಕಾರ್ಯನಿರ್ವಹಿಸಿಲ್ಲ. 2021-22ರಲ್ಲಿ ಯಾವುದೇ ವಿದ್ಯಾರ್ಥಿಗೆ ವಿದ್ಯಾರ್ಥಿವೇತನ ಸಿಗಲಿಲ್ಲ ಎಂದು ರಾಹುಲ್ ಪತ್ರದಲ್ಲಿ ದೂರಿದ್ದಾರೆ.
“ಅದರ ನಂತರವೂ, ವಿದ್ಯಾರ್ಥಿವೇತನವನ್ನು ಪಡೆಯುವ ದಲಿತ ವಿದ್ಯಾರ್ಥಿಗಳ ಸಂಖ್ಯೆ ಸುಮಾರು ಅರ್ಧದಷ್ಟು ಕಡಿಮೆಯಾಗಿದೆ. ಹಣಕಾಸು ವರ್ಷ 2023ರಲ್ಲಿ 1.36 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ದೊರೆತರೆ, 2024ರಲ್ಲಿ 0.69 ಲಕ್ಷ ವಿದ್ಯಾರ್ಥಿಗಳಿಗೆ ಮಾತ್ರ ಸಿಕ್ಕಿದೆ. ವಿದ್ಯಾರ್ಥಿವೇತನದ ಮೊತ್ತವೂ ಕಡಿಮೆಯಾಗಿದೆ ಎಂದು ವಿದ್ಯಾರ್ಥಿಗಳು ದೂರುತ್ತಿದ್ದಾರೆ” ಎಂದು ಜೂನ್ 10ರಂದು ಮೋದಿಗೆ ಬರೆದ ಪತ್ರದಲ್ಲಿ ರಾಹುಲ್ ಗಾಂಧಿ ತಿಳಿಸಿದ್ದಾರೆ.
Leader of Opposition Rahul Gandhi (@RahulGandhi) writes a letter to PM Modi on improving hostel conditions and timely scholarships for marginalised students. pic.twitter.com/M0hMnjtCPa
— Press Trust of India (@PTI_News) June 11, 2025
“ನಾನು ಬಿಹಾರದ ಉದಾಹರಣೆಗಳನ್ನು ಮಾತ್ರ ಉಲ್ಲೇಖಿಸಿದ್ದರೂ, ಈ ವೈಫಲ್ಯ ದೇಶಾದ್ಯಂತ ವ್ಯಾಪಕವಾಗಿದೆ. ಈ ವೈಫಲ್ಯಗಳನ್ನು ಸರಿಪಡಿಸಲು ಸರ್ಕಾರವು ತಕ್ಷಣ ಕ್ರಮ ತೆಗೆದುಕೊಳ್ಳಬೇಕೆಂದು ನಾನು ಒತ್ತಾಯಿಸುತ್ತೇನೆ. ಕೊರತೆಗಳನ್ನು ನಿವಾರಿಸಲು ಸಾಕಷ್ಟು ಹಣವನ್ನು ನಿಗದಿಪಡಿಸಿ” ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಗಳನ್ನು ಸಮಯಕ್ಕೆ ಸರಿಯಾಗಿ ವಿತರಿಸಬೇಕು, ವಿದ್ಯಾರ್ಥಿವೇತನದ ಮೊತ್ತವನ್ನು ಹೆಚ್ಚಿಸಬೇಕು ಮತ್ತು ರಾಜ್ಯ ಸರ್ಕಾರಗಳೊಂದಿಗೆ ನಿಕಟವಾಗಿ ಸಂಪರ್ಕದಲ್ಲಿದ್ದು ಕೆಲಸ ಮಾಡಬೇಕು ಎಂದು ಕಾಂಗ್ರೆಸ್ ನಾಯಕ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
“ಬಡತನದ ಅಂಚಿನಲ್ಲಿರುವ ಸಮುದಾಯಗಳ ಯುವಕರು ಪ್ರಗತಿ ಹೊಂದದ ಹೊರತು ಭಾರತ ಪ್ರಗತಿ ಹೊಂದಲು ಸಾಧ್ಯವಿಲ್ಲ ಎಂದು ನೀವು ಒಪ್ಪುತ್ತೀರಿ ಎಂದು ನನಗೆ ಖಚಿತವಾಗಿ ತಿಳಿದಿದೆ. ನಿಮ್ಮ ಸಕಾರಾತ್ಮಕ ಪ್ರತಿಕ್ರಿಯೆಗಾಗಿ ನಾನು ಎದುರು ನೋಡುತ್ತಿದ್ದೇನೆ” ಎಂದು ರಾಹುಲ್ ಮೋದಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.
2016ರಲ್ಲಿ ಆನ್‌ಲೈನ್‌ಗೊಳಿಸಿದ ಮೋದಿ ಸರ್ಕಾರ
ವಿದ್ಯಾರ್ಥಿವೇತನ ಅರ್ಜಿಯನ್ನು 2016ರಲ್ಲಿ ಮೋದಿ ಸರ್ಕಾರ ಆನ್‌ಲೈನ್‌ಗೊಳಿಸಿದ ಬಳಿಕ ಸಾಕಷ್ಟು ಸಮಸ್ಯೆಗಳು ಉಂಟಾಗಿದೆ. ಅದೆಷ್ಟೋ ವಿದ್ಯಾರ್ಥಿಗಳು ಆನ್‌ಲೈನ್ ಅರ್ಜಿ ಹಾಕಲು ಸೈಬರ್‌ನಲ್ಲಿ ಸರತಿ ಸಾಲಿನಲ್ಲಿ ನಿಲ್ಲುವ ಗೋಜಿನಿಂದ ಬೇಸತ್ತಿದ್ದಾರೆ. ಇನ್ನೊಂದೆಡೆ ತಾವಾಗಿಯೇ ಅರ್ಜಿ ಸಲ್ಲಿಸುವ ಎಂದರೆ ಆಗಾಗ ಕಾಡುವ ಸರ್ವರ್ ಸಮಸ್ಯೆಗಳು. ಪ್ರತಿ ದಿನ ಪ್ರಯತ್ನಿಸಿ ಕೊನೆಗೆ ಗಡುವು ಮುಗಿಯುವವರೆಗೂ ಅರ್ಜಿ ಸಲ್ಲಿಸಲು ಸಾಧ್ಯವಾಗದ ಅದೆಷ್ಟೋ ಪ್ರಕರಣಗಳಿವೆ.
2016ಕ್ಕೂ ಮುನ್ನ ಬೀಡಿ, ಕಟ್ಟಡ ಕಾರ್ಮಿಕರು, ದಲಿತ, ಅಲ್ಪಸಂಖ್ಯಾತ – ಹೀಗೆ ಬಹುತೇಕ ಎಲ್ಲಾ ವಿದ್ಯಾರ್ಥಿವೇತನಗಳನ್ನು ಕೆಲವು ಕಾರ್ಮಿಕ ಸಂಘಟನೆಗಳು ಮುತುವರ್ಜಿ ತೆಗೆದುಕೊಂಡು ನಿರ್ವಹಿಸುತ್ತಿದ್ದವು. ಕಾರ್ಮಿಕರಿಗೆ, ದಲಿತ -ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅರ್ಜಿ ಭರ್ತಿ ಮಾಡಿ ಅದರ ಎಲ್ಲಾ ಪ್ರಕ್ರಿಯೆಯನ್ನು ನಡೆಸುವ ಹೊಣೆಯನ್ನು ಕೆಲವು ಕಾರ್ಮಿಕ, ದಲಿತ ಸಂಘಟನೆಗಳ ನಾಯಕರುಗಳು ತಾವಾಗಿಯೇ ಹೊತ್ತುಕೊಂಡಿದ್ದರು. ಆದರೆ ಈ ಎಲ್ಲಾ ಪ್ರಕ್ರಿಯೆಗಳು ಆನ್‌ಲೈನ್‌ಗೊಳಿಸಿದ ಬಳಿಕ ಸರ್ವರ್ ಸಮಸ್ಯೆಯಿಂದಾಗಿ ಅದೆಷ್ಟೋ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಬಂದಿಲ್ಲ. ಇನ್ನು ಅರ್ಜಿ ಸಲ್ಲಿಸಿದರೂ ಮುಂದಿನ ವರ್ಷದವರೆಗೆ ಬಕ ಪಕ್ಷಿಯಂತೆ ಕಾಯಬೇಕಾದ ಸ್ಥಿತಿ ವಿದ್ಯಾರ್ಥಿಗಳದ್ದು, ಸಾಲ ಮಾಡಿ ಶುಲ್ಕ ಪಾವತಿಸಿದ ಕುಟುಂಬದ್ದು ಆಗಿದೆ. ಜೊತೆಗೆ ಇಂದಿನ ಹಣದುಬ್ಬರಕ್ಕೆ ಸಮನಾಗಿ ವಿದ್ಯಾರ್ಥಿವೇತನ ಏರಿಕೆಯೂ ಆಗಿಲ್ಲ. ಜೊತೆಗೆ ಹಲವು ವಿದ್ಯಾರ್ಥಿವೇತನಗಳನ್ನು ಕೇಂದ್ರ-ರಾಜ್ಯ ಸರ್ಕಾರಗಳು ಕೈಬಿಟ್ಟಿವೆ.
