ಮುಂಗಳೂರು ಭಾಗದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಕಾಮಗಾರಿಯಿಂದ ರಸ್ತೆಗಳು ಸಂಪೂರ್ಣ ಹದಗಟ್ಟಿದ್ದು ವಾಹನ ಸವಾರರು ಅಪಘಾತದಿಂದ ಸಾವಿಗೀಡಾಗುತ್ತಿರುವ ಘಟನೆ ನಡೆಯುತ್ತಿದೆ. ಆದರೂ, ಎಚ್ಚೆತ್ತುಕೊಳ್ಳದಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಜ್ ಒತ್ತಾಯಿಸಿದ್ದಾರೆ.
ಮಂಗಳೂರಿನ ನಂತೂರು ಜಂಕ್ಷನ್ ನಿಂದ ಸುರತ್ಕಲ್ ವರೆಗಿನ ರಾಷ್ಟ್ರೀಯ ಹೆದ್ದಾರಿ 66 ಸಂಪೂರ್ಣ ಹದಗೆಟ್ಟಿರುವ ಹಿನ್ನೆಲೆ ಹೆದ್ದಾರಿಯಲ್ಲಿ ಸೃಷ್ಟಿ ಆಗಿರುವ ಗುಂಡಿಗಳು ಮರಣ ಗುಂಡಿಗಳಾಗಿ, ದ್ವಿಚಕ್ರ ವಾಹನ ಸವಾರರ ಸಾವಿಗೆ ಕಾರಣವಾಗುತ್ತಿದೆ. ಕೆಲವೆಡೆ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಗುಂಡಿಗಳು ಸಾವನ್ನು ಆಹ್ವಾನಿಸುತ್ತಿದೆ. ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿದೆ ದ್ವಿಚಕ್ರ ವಾಹನ ಸವಾರರು ಸಾವಿಗೀಡಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಪಣಂಬೂರು ಬಳಿ ರಸ್ತೆ ಅಪಘಾತದಲ್ಲಿ ಜನತಾಕಾಲೋನಿ ನಿವಾಸಿ ಅಶ್ರಫ್ ಸಾವಿಗೀಡಾಗಿದ್ದು ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಕಾಮಗಾರಿಯಿಂದ ರಸ್ತೆಯಲ್ಲಿರುವ ಗುಂಡಿಯಿಂದಾಗಿ ಈ ಅಪಘಾತ ಸಂಭವಿಸಿದೆ ಎಂದು ಡಿವೈಎಫ್ಐ ಆರೋಪಿಸಿದೆ. ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯದಿಂದಾಗಿ ನಡೆದಿರುವ ಅಪಘಾತಗಳಿಗೆ ಹೆದ್ದಾರಿ ಇಲಾಖೆಯ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಅವರ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನು ಓದಿದ್ದೀರಾ? ಮಂಗಳೂರು | ಬಸದಿ ಸಿಖ್ ಗುರುದ್ವಾರ ಅರ್ಚಕರಿಗೆ ಗೌರವಧನ : ಅರ್ಜಿ ಆಹ್ವಾನ
ಅಪಘಾತ ಘಟನೆಯಲ್ಲಿ ಸಾವನ್ನಪ್ಪಿದ ಅಶ್ರಫ್ ಕುಟುಂಬಕ್ಕೆ ಪರಿಹಾರ ನೀಡಬೇಕು ಮತ್ತು ಹೆದ್ದಾರಿ ಇಲಾಖೆಯ ನಿರ್ಲಕ್ಷ್ಯದಿಂದ ಸಂಭವಿಸಿದ ಎಲ್ಲಾ ಅಪಘಾತ ಸಂತ್ರಸ್ತರಿಗೆ ಪರಿಹಾರ ನೀಡಬೇಕೆಂದು ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಆಗ್ರಹಿಸಿದ್ದಾರೆ.