ಪ್ರತಿ ಮಗುವೂ ಶಾಲೆಯಿಂದ ಹೊರಗುಳಿಯಬಾರದು ಎಂಬ ಉದ್ದೇಶದಿಂದ ಸರ್ಕಾರ ಉಚಿತ ಮತ್ತು ಕಡ್ಡಾಯ ಶಿಕ್ಷಣ ಜಾರಿಗೊಳಿಸಿ ಕಟ್ಟಾಜ್ಞೆ ಹೊರಡಿಸಿದೆ. ಆದಾಗ್ಯೂ ಬಾಲ ಕಾರ್ಮಿಕ ಪದ್ಧತಿ ಸಂಪೂರ್ಣ ನಿರ್ಮೂಲನೆ ಆಗದಿರುವುದು ಆತಂಕ ಮೂಡಿಸಿದೆ.
ಇತ್ತೀಚೆಗೆ ಬೈಕ್ ಮೇಲೆ ಹೋಗುವಾಗ ಓರ್ವ ಪರಿಚಿತ ಅಜ್ಜಿ ಸಿಕ್ಕಿದ್ರು, ಅವರೂ ನನ್ನೊಂದಿಗೆ ಸಮೀಪದ ಊರಿಗೆ ಬೈಕ್ ಮೇಲೆ ಬಂದ್ರು. ಹಾಗೇ ಮಾತಿಗಿಳಿದು, ʼಆಯೀ, ಈಗ ನಿಮ್ಮ ಮೊಮ್ಮಗ ಎಲ್ಲಿ ಓದುತ್ತಿದ್ದಾನೆ, ಯಾವ ತರಗತಿಯಲ್ಲಿ ಇದ್ದಾನೆʼ ಎಂದು ಕೇಳ್ದೆ. ʼಅಯೋ..! ಅವ್ನದೇನ್ ಕೇಳ್ತಿ ಮಗಾ, ಅವಾ ಹೋದ ವರ್ಷ ಶಾಲೆ ಬಿಟ್ಟು ಪಕ್ಕದ ತೆಲಂಗಾಣದ ಹೈದರಾಬಾದ್‌ಗೆ ಕೆಲ್ಸಾ ಮಾಡೋಕೆ ಹೋಗಿದ್ದಾನೆʼ ಅಂತ ಹೇಳಿದ್ರು. ʼಇನ್ನೂ ಹತ್ತನೇ ತರಗತಿ ಸಹ ಮುಗಿದಿಲ್ಲ ಇಷ್ಟು ಬೇಗ ಯಾಕೆ ಶಾಲೆ ಬಿಟ್ಟಿದ್ದಾನೆʼ ಅಂತ ಕೇಳಿದಕ್ಕೆ, ʼಚನ್ನಾಗಿ ಓದಿಸ್ಬೇಕು ಅಂತನೇ ಹೇಳಿ ಕಳಿಸಿದ್ರು, ಅವ್ನಿಗೆ ಬರೆಯೋದು, ಓದೋ ಮೇಲೆ ಧ್ಯಾನನೇ ಇರಲಿಲ್ಲ. ಎಷ್ಟು ಬುದ್ಧಿವಾದ ಹೇಳಿದ್ರು ಶಾಲೆಗೆ ಹೋಗಲ್ಲಾ..ಅಂದ್ರೆ ಹೋಗಲ್ಲ…ಅಂತ ಹಠ ತೆಗೆಯುತ್ತಿದ್ದನು, ಕೊನೆಗೆ ನಿನ್ನಿಚ್ಛೆ ಅಂದೆವುʼ ಅಂತ ಅಜ್ಜಿ ಹೇಳುವ ಮಾತಿನಲ್ಲಿ ನಿರಾಸೆ….ನೋವು…ಕಂಡಿತು.
ಇದು ಒಂದು ಮಗುವಿನ ಉದಾಹರಣೆ ಅಷ್ಟೇ. ಗ್ರಾಮೀಣ, ನಗರ ಪ್ರದೇಶದ ಅನೇಕ ಕಡೆ ಇಂತಹ ಬಾಲ, ಕಿಶೋರ್ ಮಕ್ಕಳು ಶಾಲೆಗೆ ಗುಡ್ ಬೈ ಹೇಳಿ, ನಗರ, ಪಟ್ಟಣದಲ್ಲಿನ ಹೋಟೆಲ್, ಬೇಕರಿ, ಧಾಬಾ, ಪಾನಿಪುರಿ ಮುಂತಾದ ಕಡೆಗಳಲ್ಲಿ ಕೆಲಸಕ್ಕೆ ದುಡಿಯುತ್ತಿದ್ದಾರೆ. ಕೆಲವರು ತಮ್ಮ ಪೋಷಕರೊಂದಿಗೆ ಹಳ್ಳಿಗಳಲ್ಲಿ ಕೃಷಿ, ಕೂಲಿ ಕೆಲಸಕ್ಕೂ ಸೈ ಎಂದು ಹೋಗುವುದು ವಾಸ್ತವ. ಎಸ್‌ಎಸ್‌ಎಲ್‌ಸಿ ಪೂರೈಸುವ ಮುನ್ನವೇ ಮಕ್ಕಳ ಪ್ರತಿಭೆ ಕಮರಿ ಹೋಗುತ್ತಿದ್ದು, ಮಕ್ಕಳನ್ನು ಬಾಲ್ಯಾವಸ್ಥೆಗೆ ಕಾರ್ಮಿಕರಾಗಿ ದುಡಿಯುತ್ತಿರುವುದು ಪೋಷಕರ ಆತಂಕಕ್ಕೂ ಕಾರಣವಾಗಿದೆ.
ಗ್ರಾಮೀಣ ಭಾಗದಲ್ಲಿ ಕೃಷಿ, ಕೂಲಿ ಕಾರ್ಮಿಕರ ವೇತನ ಹೆಚ್ಚಳವಾಗಿದ್ದು, ಹಣದಾಸೆಗಾಗಿ ಅಲ್ಲಲ್ಲಿ ಕೆಲ ಬಡ ಪಾಲಕರು ಮಕ್ಕಳನ್ನು ಕೆಲಸಕ್ಕೆ ಕಳುಹಿಸುತ್ತಿದ್ದಾರೆ. ತಮ್ಮೊಂದಿಗೆ ಮಕ್ಕಳು ಕೆಲಸ ಮಾಡಿದರೆ ಹೆಚ್ಚು ಹಣ ದೊರೆಯುತ್ತದೆ ಎನ್ನುವ ಕಾರಣದಿಂದ ಪಾಲಕರು ಪರೋಕ್ಷವಾಗಿ ಮಕ್ಕಳನ್ನು ಬಾಲ ಕಾರ್ಮಿಕರನ್ನಾಗಿ ಮಾಡುತ್ತಿರುವುದು ಕಾಣಬಹುದು. ಶಾಲೆಗೆ ಹೋಗುವ ಮಕ್ಕಳನ್ನು ಹೋಟೆಲ್, ಪಾನಿಪುರಿ ಭಂಡಿ, ಬೇಕರಿ ಮೊದಲಾದವುಗಳಲ್ಲಿ ಕೆಲಸಕ್ಕೆ ಸೇರಿಸುತ್ತಿದ್ದಾರೆ. ಕಬ್ಬು ಕಟಾವಿಗೆ ತೆರಳುವ ಕಾರ್ಮಿಕರು, ಅಲೆಮಾರಿಗಳು ಕೆಲ ತಿಂಗಳು ಮಕ್ಕಳನ್ನು ಶಾಲೆ ಬಿಡಿಸಿ ತಮ್ಮೊಂದಿಗೆ ಕರೆದೊಯ್ಯುತ್ತಾರೆ. ಅಲ್ಲಿ ಮಕ್ಕಳಿಗೆ ಬೇರೆ ಕೆಲಸ ಇಲ್ಲದಕ್ಕೆ ಪಾಲಕರ ಕೆಲಸಕ್ಕೆ ನೆರವಾಗುವುದು ಅಲ್ಲಲ್ಲಿ ಕಣ್ಣಿಗೆ ಕಾಣಸಿಗುತ್ತದೆ.
ಕಾರ್ಮಿಕ ಇಲಾಖೆಯ ಸಾಧನೆ ಎಷ್ಟು?
ಕಳೆದ ಮೂರು ವರ್ಷಗಳಲ್ಲಿ ಬೀದರ್ ಜಿಲ್ಲೆಯ ವಿವಿಧೆಡೆ ಬಾಲಕಾರ್ಮಿಕರಾಗಿ ದುಡಿಯುತ್ತಿದ್ದ 39 ಮಕ್ಕಳನ್ನು ಜಿಲ್ಲೆಯ ಕಾರ್ಮಿಕ ಇಲಾಖೆಯ ಅಧಿಕಾರಿಗಳು ರಕ್ಷಿಸಿದ್ದಾರೆ.
ʼ2024ರ ಏಪ್ರಿಲ್ 1ರಿಂದ 2025ರ ಮಾರ್ಚ್ 31ರವರೆಗೆ ಕೈಗೊಂಡ ಕಾರ್ಯಾಚರಣೆಯಲ್ಲಿ ಒಟ್ಟು 13 ಬಾಲ ಹಾಗೂ ಕಿಶೋರ ಕಾರ್ಮಿಕ ಪ್ರಕರಣಗಳು ಪತ್ತೆ ಹಚ್ಚಿ, 7 ಪ್ರಕರಣ ದಾಖಲಿಸಿದ್ದಾರೆ. 8 ಬಾಲ ಕಾರ್ಮಿಕರನ್ನು ರಕ್ಷಿಸಲಾಗಿದೆ. ತಪಾಸಣೆ ವೇಳೆ ಪತ್ತೆ ಹಚ್ಚಲಾದ 13 ಮಕ್ಕಳನ್ನು ರಕ್ಷಿಸಿ ಪಾಲನೆ ಹಾಗೂ ಪೋಷಣೆಗಾಗಿ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿ ಪುನರ್ವಸತಿ ಕೇಂದ್ರಗಳಿಗೆ ತಲುಪಿಸಲಾಗಿದೆʼ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ʼಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಬಾಲ ಕಾರ್ಮಿಕ ರಕ್ಷಣಾ ಅಭಿಯಾನ ಜಿಲ್ಲೆಯಾದ್ಯಂತ ಜಾಗೃತಿ ಕಾರ್ಯಕ್ರಮ, ಜಾಥಾ, ಬೀದಿ ನಾಟಕಗಳನ್ನು ಆಯೋಜಿಸಿದ್ದರೂ ಈ ಅನಿಷ್ಠ ಪದ್ಧತಿಯನ್ನು ಸಂಪೂರ್ಣ ನಿಷೇಧಿಸಲು ಸಾಧ್ಯವಾಗುತ್ತಿಲ್ಲ. ಜಿಲ್ಲೆಯ ವಿವಿಧ ತಾಲ್ಲೂಕಿನಲ್ಲಿ ಬಾಲ ಕಾರ್ಮಿಕ ಮಕ್ಕಳನ್ನು 2022–23ರಲ್ಲಿ 9 ಪ್ರಕರಣ, 2023-24ರಲ್ಲಿ 23 ಪ್ರಕರಣ ಹಾಗೂ 2024-25ರಲ್ಲಿ 7 ಪ್ರಕರಣಗಳು ದಾಖಲಿಸಲಾಗಿದೆʼ ಎಂದು ತಿಳಿಸಿದರು.
2024-25ರಲ್ಲಿ ಹುಮನಾಬಾದ್ ತಾಲ್ಲೂಕು ವ್ಯಾಪ್ತಿಯಲ್ಲಿ ಬಾಲ ಮತ್ತು ಕಿಶೋರ್ ಸೇರಿ ಐವರು ಬಾಲಕಾರ್ಮಿಕರು ಪತ್ತೆಯಾಗಿದ್ದಾರೆ. ಬೀದರ್ ಕಾರ್ಮಿಕ ನಿರೀಕ್ಷಕರ ವ್ಯಾಪ್ತಿಯಲ್ಲಿ ಮೂವರು, ಬಸವಕಲ್ಯಾಣ ಮತ್ತು ಔರಾದ್ ತಲಾ ಇಬ್ಬರು ಬಾಲಕರನ್ನು ಕಾರ್ಮಿಕರು ದುಡಿಮೆಯಲ್ಲಿ ತೊಡಗಿರುವುದು ಗೊತ್ತಾಗಿ ರಕ್ಷಿಸಲಾಗಿದೆ. ಭಾಲ್ಕಿ ತಾಲ್ಲೂಕಿನಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ.
ʼಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗಾಗಿ ಕಾರ್ಮಿಕ ಇಲಾಖೆ ವತಿಯಿಂದ ನಿರಂತರ ಅಭಿಯಾನ ನಡೆಸಲಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪೊಲೀಸ್ ಇಲಾಖೆ ಸಹಕಾರದೊಂದಿಗೆ ಬಾಲಕಾರ್ಮಿಕರನ್ನು ರಕ್ಷಿಸಲಾಗುತ್ತಿದೆ. ಬಾಲಕಾರ್ಮಿಕರು ಹೆಚ್ಚಾಗಿ ಸಣ್ಣಪುಟ್ಟ ಅಂಗಡಿಗಳು, ಬೀದಿಬದಿ ತಿನಿಸು ಗಾಡಿಗಳ ಬಳಿ ಕಾಣಸಿಗುತ್ತಾರೆ. ಅಂತಹ ಕಡೆಗಳಲ್ಲಿ ನಾವು ದಾಳಿ ನಡೆಸಿ, ಮಕ್ಕಳನ್ನು ರಕ್ಷಿಸುತ್ತಿದ್ದೇವೆ. ಬಳಿಕ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರು ಪಡಿಸುತ್ತೇವೆ. ಅವರು ಮುಂದಿನ ಕ್ರಮ ಕೈಗೊಳ್ಳುತ್ತಾರೆ. ಜಿಲ್ಲೆಯ ವಿವಿಧೆಡೆ ದಾಳಿ ನಡೆಸಿ ಪ್ರಕರಣಗಳನ್ನೂ ದಾಖಲಿಸುತ್ತಿದ್ದೇವೆʼ ಎಂದು ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಮಹೇಶ ಕುಳಲಿ ʼಈದಿನ.ಕಾಮ್ʼಗೆ ತಿಳಿಸಿದ್ದಾರೆ.
ಮಾಲಿಕರ ವಿರುದ್ಧ ಕಾನೂನು ಕ್ರಮ :
14 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುವುದು ಹಾಗೂ 18 ವರ್ಷದೊಳಗಿನ ಕಿಶೋರರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ದುಡಿಮೆಗೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ.
ಬಾಲ್ಯಾವಸ್ಥೆ ಮಕ್ಕಳ ದುಡಿಮೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಬಾಲ ಮತ್ತು ಕಿಶೋರ ಕಾರ್ಮಿಕರನ್ನು ಕೆಲಸಕ್ಕೆ ಬಳಸಿಕೊಂಡರೆ ಮಾಲೀಕರು ₹20 ಸಾವಿರದಿಂದ ₹50 ಸಾವಿರವರೆಗೆ ದಂಡ ಅಥವಾ 6 ತಿಂಗಳಿಂದ 2 ವರ್ಷದವರೆಗೆ ಜೈಲು ಶಿಕ್ಷೆ ಕೆಲವೊಮ್ಮೆ ಎರಡನ್ನೂ ವಿಧಿಸಬಹುದಾಗಿದೆ. ಮಕ್ಕಳನ್ನು ಕೆಲಸಕ್ಕೆ ಕಳುಹಿಸುವ ಪಾಲಕರ ಮೇಲೂ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಾಗೃತಿ ಅಭಿಯಾನ :
ಜಿಲ್ಲೆಯಲ್ಲಿ ಬಾಲ ಕಾರ್ಮಿಕ ಪದ್ಧತಿ ತಡೆಯುವ ಉದ್ದೇಶದಿಂದ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಸಹಯೋಗದೊಂದಿಗೆ ನಿರಂತರ ಜಾಗೃತಿ ಅಭಿಯಾನ ಕಾರ್ಯಕ್ರಮಗಳು ನಡೆಯುತ್ತಿವೆ.
ಜಿಲ್ಲೆಯಲ್ಲಿ ಗೋಡೆ ಬರಹ, ಧ್ವನಿವರ್ಧಕಗಳ ಮೂಲಕ ಪ್ರಚಾರ 56 ಗೋಡೆ ಬರಹಗಳು, 2 ದಿನ ಆಟೋ ಮೂಲಕ ಪ್ರಚಾರ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಕಾನೂನು ಅರಿವು, ವಿವಿಧ ತಾಲ್ಲೂಕಿನ 664 ಕಡೆ ತಪಾಸಣೆ ಹಾಗೂ ಪ್ಯಾನ್ ಇಂಡಿಯಾ ಅಭಿಯಾನ ಹಮ್ಮಿಕೊಂಡು ಜಾಗೃತಿ ಮೂಡಿಸಲಾಗಿದೆ.
ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿನ ಕೆಲವು ಕುಟುಂಬಗಳ ಒತ್ತಡ ಪರಿಸ್ಥಿತಿ ಹಾಗೂ ಆರ್ಥಿಕ ಸಮಸ್ಯೆಗಳಿಂದ ಮಕ್ಕಳು ಈಗಲೂ ಬಾಲಕಾರ್ಮಿಕ ಪದ್ಧತಿಗೆ ಬಲಿಯಾಗುತ್ತಿದ್ದಾರೆ. ಕಟ್ಟುನಿಟ್ಟಾದ ನಿಯಮಗಳು ಮತ್ತು ಪ್ರಯತ್ನಗಳ ಹೊರತಾಗಿಯೂ ಮಕ್ಕಳನ್ನು ವಿವಿಧ ಉದ್ಯೋಗದಲ್ಲಿ ತೊಡಗಿಸುವುದು ನಿಂತಿಲ್ಲ. ನಮ್ಮ ಜಿಲ್ಲೆಯ ಪರಿಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ನಿಯಂತ್ರಣಕ್ಕೆ ಇನ್ನಷ್ಟು ಬಿಗಿಕ್ರಮಗಳನ್ನು ಅನುಸರಿಸಬೇಕು ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಜಗದೀಶ್ವರ ಬಿರಾದರ್.
ಜೂನ್ 12ರಂದು ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ :
ಜೂನ್ 12ರಂದು ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ಬೀದರ್ ನಗರದಲ್ಲಿ ಬೃಹತ್ ಜಾಥಾ ಮತ್ತು ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 9ಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಾಥಾಕ್ಕೆ ಚಾಲನೆ ನೀಡಲಾಗುವುದು. ಪ್ರಮುಖ ಮಾರ್ಗಗಳ ಮೂಲಕ ರಂಗಮಂದಿರಕ್ಕೆ ಜಾಥಾ ತಲುಪಲಿದೆ. 10ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದ್ದಾರೆ.
ʼಅಂಗನವಾಡಿ ಮೇಲ್ವಿಚಾರಕಿಯರು ಮತ್ತು ಕಾರ್ಯಕರ್ತೆಯರು, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು, ದಾಬಾ ಮತ್ತು ಕೈಗಾರಿಕೆ ಮಾಲೀಕರು ಭಾಗವಹಿಸುವಂತೆ ನೋಡಿಕೊಳ್ಳಬೇಕು. ಪ್ರಬಂಧ, ಚಿತ್ರಕಲೆ, ಭಾಷಣ, ಕಿರು ನಾಟಕ ಪ್ರದರ್ಶನ ಸ್ಪರ್ಧೆಗಳನ್ನು ಏರ್ಪಡಿಸಬೇಕು. ಎಲ್ಲ ತಾಲೂಕು ಮಟ್ಟದ ಅಧಿಕಾರಿಗಳು ಅಥವಾ ತಾಲ್ಲೂಕು ಟಾಸ್ಕ್‌ಫೋರ್ಸ್ ಸಮಿತಿ ಅಧಿಕಾರಿಗಳು ಜೂನ್ 13 ರಿಂದ ಜೂನ್ 30ರ ವರೆಗೆ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ರಕ್ಷಣಾ ಅಭಿಯಾನ ಹಮ್ಮಿಕೊಳ್ಳಬೇಕುʼ ಎಂದು ತಿಳಿಸಿದರು.
ಇದನ್ನೂ ಓದಿ : ಬೀದರ್ | ಛಲವಾದಿ ನಾರಾಯಣಸ್ವಾಮಿ, ಎನ್.ರವಿಕುಮಾರ್ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ
ʼಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬೆಳಿಗ್ಗೆ 11ಕ್ಕೆ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಯ ಪ್ರಮಾಣ ವಚನ ಬೋಧಿಸಬೇಕು. ಎಲ್ಲ ಗ್ರಾಮಗಳಲ್ಲಿ ಪಂಚಾಯಿತಿ ವತಿಯಿಂದ ಡಂಗುರ ಸಾರಿಸಬೇಕು. ಕಸ ವಿಲೇವಾರಿ ವಾಹನಗಳಲ್ಲಿ ಬಾಲ ಹಾಗೂ ಕಿಶೋರ ಕಾರ್ಮಿಕ ನಿರ್ಮೂಲನೆ ಕುರಿತು ಧ್ವನಿವರ್ಧಕ ಮೂಲಕ ಪ್ರಚಾರ ಕೈಗೊಳ್ಳಬೇಕುʼ ಎಂದು ಸೂಚಿಸಿದ್ದಾರೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.