ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಪ್ರಕರಣವು ದೇಶದಲ್ಲಿ ಕೋಲಾಹಲ ಎಬ್ಬಿಸಿರುವ ನಡುವೆಯೇ, ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ.
‘ಸರ್ಕಾರ ಕ್ರಮ ಕೈಗೊಳ್ಳದೇ ಇದ್ದರೆ ನ್ಯಾಯಾಲಯವೇ ಕ್ರಮ ಕೈಗೊಳ್ಳಲಿದೆ’ ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಸರ್ಕಾರವನ್ನು ಎಚ್ಚರಿಸಿದ್ದಾರೆ.
ಅಪರಾಧಿಗಳ ವಿರುದ್ಧ ತೆಗೆದುಕೊಂಡ ಕಾನೂನು ಕ್ರಮಗಳ ಬಗ್ಗೆ ನ್ಯಾಯಾಲಯಕ್ಕೆ ತಿಳಿಸುವಂತೆ ಸುಪ್ರೀಂ ಕೋರ್ಟ್, ಮಣಿಪುರದ ಬಿಜೆಪಿ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
“ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿದ ವಿಡಿಯೋ ಗಮನಿಸಿ, ನಾವು ತುಂಬಾ ವಿಚಲಿತರಾಗಿದ್ದೇವೆ. ಇದು ತುಂಬಾ ವಿಷಾದನೀಯ. ಇದು ಸ್ವೀಕಾರಾರ್ಹವಲ್ಲ” ಎಂದು ಡಿ ವೈ ಚಂದ್ರಚೂಡ್ ಹೇಳಿದರು.
“ಮತೀಯ, ಜನಾಂಗೀಯ ಸಂಘರ್ಷಗಳು ನಡೆಯುತ್ತಿರುವ ಸ್ಥಳಗಳಲ್ಲಿ ಮಹಿಳೆಯರನ್ನು ಸಾಧನವಾಗಿ ಬಳಸಲಾಗುತ್ತಿದೆ. ಇದು ಸಂವಿಧಾನದ ನಿಂದನೆ. ಈ ವಿಡಿಯೋ ಆಘಾತಕಾರಿಯಾಗಿದೆ” ಎಂದು ಮುಖ್ಯ ನ್ಯಾಯಮೂರ್ತಿಗಳು ಕಳವಳ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಮಣಿಪುರ | ಮಹಿಳೆಯರನ್ನು ಬೆತ್ತಲೆಗೊಳಿಸಿ ವಿಕೃತಿ ಮೆರೆದ ದುಷ್ಟರ ಗುಂಪು; ದೇಶಾದ್ಯಂತ ಆಕ್ರೋಶ
ಇದೇ ವೇಳೆ ಸುಪ್ರೀಂ ಕೋರ್ಟಿನಲ್ಲಿ ಕೇಂದ್ರ ಸರ್ಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೂಡ ಈ ಘಟನೆಯನ್ನು ಖಂಡಿಸಿ ಹೇಳಿಕೆ ನೀಡಿದ್ದು, ‘ಇದು ಸ್ವೀಕಾರಾರ್ಹವಲ್ಲ. ನಾವೂ ಕೂಡ ನಿಮ್ಮ ಜೊತೆಗಿದ್ದೇವೆ’ ಎಂದು ಸಿಜೆಐಗೆ ತಿಳಿಸಿದರು.
ಸುಪ್ರೀಂ ಕೋರ್ಟ್ ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 28ಕ್ಕೆ ನಿಗದಿಪಡಿಸಿದೆ.
ಮಣಿಪುರದಲ್ಲಿ ಹಿಂಸಾಚಾರ ಶುರುವಾಗಿ 79 ದಿನ ಕಳೆದರೂ ಪ್ರಧಾನಿ ನರೇಂದ್ರ ಮೋದಿ ಮಾತನಾಡಿರಲಿಲ್ಲ. ಸುಪ್ರೀಂ ಕೋರ್ಟ್ ಆಕ್ರೋಶ ವ್ಯಕ್ತಪಡಿಸಿದ ನಂತರ ಮೊದಲ ಬಾರಿಗೆ ಮಾತನಾಡಿ ಬೆತ್ತಲೆ ಮೆರವಣಿಗೆಯನ್ನು ಖಂಡಿಸಿದ್ದಾರೆ.
ಹಾಗೆಯೆ ಹಿಂಸಾಚಾರ ಶುರುವಾಗಿ ಎರಡೂವರೆ ತಿಂಗಳವರೆಗೂ ಬಾಯಿ ಬಿಡದಿದ್ದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೂಡ ಮೊದಲ ಬಾರಿಗೆ ಮಾತನಾಡಿರುವುದಕ್ಕೆ ವಿಪಕ್ಷಗಳು ಟೀಕೆ ವ್ಯಕ್ತಪಡಿಸಿವೆ.