- ಶಾಸಕರ ಅಮಾನತು ಖಂಡಿಸಿ ರಾಜ್ಯಪಾಲರಿಗೆ ದೂರು ನೀಡಲು ಬಿಜೆಪಿ ನಿರ್ಧಾರ
- ಸಿದ್ದರಾಮಯ್ಯ ಮೇಲೆ ಮಾತ್ರ ಬಸಪ್ಪ, ಆದರೆ ಒಳಗೆ ಮಾತ್ರ ವಿಷಪ್ಪ: ಛಲವಾದಿ
ಬಿಜೆಪಿಯ ಹತ್ತು ಜನ ಸದಸ್ಯರನ್ನು ವಿಧಾನಸಭೆ ಕಲಾಪದಿಂದ ಅಮಾನತು ಮಾಡಿರುವ ಸ್ಪೀಕರ್ ಯು ಟಿ ಖಾದರ್ ಆದೇಶ ಖಂಡಿಸಿ ಬಿಜೆಪಿ ಸದಸ್ಯರು ವಿಧಾನಸೌಧದ ಆವರಣದ ಗಾಂಧಿ ಪ್ರತಿಮೆ ಎದುರು ಗುರುವಾರ ಧರಣಿ ನಡೆಸಿದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಆರಗ ಜ್ಞಾನೇಂದ್ರ, ಸುನಿಲ್ ಕುಮಾರ್, ಎಸ್ ಸುರೇಶ್ ಕುಮಾರ್, ಮುನಿರತ್ನ ಸೇರಿದಂತೆ ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಮಾಜಿ ಸಚಿವ ಆರ್.ಅಶೋಕ್ ಮಾತನಾಡಿ, “ಸ್ಪೀಕರ್ ಪೀಠಕ್ಕೆ ಯು ಟಿ ಖಾದರ್ ಅಗೌರವ ತೋರಿದ್ದಾರೆ. ಸ್ಪೀಕರ್ ಆದವರು ಒಂದು ಪಾರ್ಟಿ ಪರವಾಗಿ ಇರಬಾರದು. ಸೋನಿಯಾ, ರಾಹುಲ್ರನ್ನು ಸ್ಪೀಕರ್ ಭೇಟಿಯಾಗಿದ್ದಾರೆ. ಐಎಎಸ್ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಇದರ ವಿರುದ್ಧ ನಾವು ಹೋರಾಟ ಮಾಡಿ ನ್ಯಾಯ ಕೇಳಿದ್ದೆವು. ಪ್ರಶ್ನೆ ಮಾಡಿದ್ದಕ್ಕೆ ನಮ್ಮನ್ನು ಅಮಾನತು ಮಾಡಿದ್ದಾರೆ. ಸ್ಪೀಕರ್ ಕ್ರಮ ಖಂಡಿಸಿ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ” ಎಂದು ಹರಿಹಾಯ್ದರು.
ಸಿದ್ದರಾಮಯ್ಯ ಒಬ್ಬ ಗೋಮುಖ ವ್ಯಾಘ್ರ: ಛಲವಾದಿ ನಾರಾಯಣಸ್ವಾಮಿ
“ಸಿದ್ದರಾಮಯ್ಯ ಒಬ್ಬ ಗೋಮುಖ ವ್ಯಾಘ್ರ. ಬಿಜೆಪಿಯ ಹೋರಾಟ ನ್ಯಾಯಯುತವಾಗಿತ್ತು. ಡೆಪ್ಯುಟಿ ಸ್ಪೀಕರ್ ಅಂತ ದಲಿತರ ಮೇಲೆ ಪ್ರೀತಿ ತೋರಿಸುವ ಸಿದ್ದರಾಮಯ್ಯ ನವರೇ ದಲಿತರ ಸಮಾಧಿ ಮೇಲೆ ಕುಳಿತಿರೋದು ನೀವೇ ತಾನೇ? ನೀವು ಸಿಎಂ ಆಗಿ ಕುಳಿತಿರೋದು ನಿಮ್ಮ ಜಾಗದಲ್ಲಿ ಅಲ್ಲ, ದಲಿತರ ಸ್ಥಾನದಲ್ಲಿ. ನಿಮಗೆ ತಾಕತ್ ಇದ್ರೆ ಘೋಷಣೆ ಮಾಡಿ. ನೀವು ಅನುಭವಿಸಿರುವ ಎಲ್ಲಾ ಅಧಿಕಾರ ದಲಿತರಿಗೆ ಸೇರಬೇಕಿದೆ” ಎಂದು ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದರು.
“ನಿಮಗೆ ಸ್ವಲ್ಪ ದಲಿತ ಕಾಳಜಿ ಇದ್ರೆ ಇವತ್ತು ರಾಜೀನಾಮೆ ನೀಡಿ. ದಲಿತರಿಗೆ ಸಿಎಂ ಸ್ಥಾನ ಬಿಟ್ಟು ಕೊಡಿ. ಇಲ್ಲವಾದಲ್ಲಿ ನೀವು ಒಬ್ಬ ಗೋಮುಖ ವ್ಯಾಘ್ರ. ಸಿದ್ದರಾಮಯ್ಯ ಮೇಲೆ ಮಾತ್ರ ಬಸಪ್ಪ, ಆದರೆ ಒಳಗೆ ಮಾತ್ರ ವಿಷಪ್ಪ” ವಾಗ್ದಾಳಿ ನಡೆಸಿದರು.
ರಾಜ್ಯಪಾಲರಿಗೆ ದೂರು
ವಿಧಾನಸಭೆಯಿಂದ ಬಿಜೆಪಿಯ 10 ಶಾಸಕರ ಅಮಾನತು ಹಿನ್ನೆಲೆ ರಾಜ್ಯಪಾಲ ಗೆಹ್ಲೋಟ್ಗೆ ದೂರು ನೀಡಲು ಬಿಜೆಪಿ ಶಾಸಕರು ನಿರ್ಧರಿಸಿದ್ದಾರೆ. ವಿಧಾನಸೌಧದಿಂದ ರಾಜಭವನದವರೆಗೂ ಬಿಜೆಪಿ ನಾಯಕರು ಪಾದಯಾತ್ರೆ ಮೂಲಕ ತೆರಳಿ ದೂರು ನೀಡಲು ಮುಂದಾಗಿದ್ದಾರೆ.