ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಸಂಬಂಧಿಸಿದಂತೆ ಬಳ್ಳಾರಿ ಸಂಸದ ಇ. ತುಕಾರಾಂ, ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಕಂಪ್ಲಿ ಶಾಸಕ ಜೆ ಎನ್ ಗಣೇಶ್ ಬಂಧನ ಸಾಧ್ಯತೆ ಹೆಚ್ಚಿದೆ ಎಂದು ತಿಳಿದು ಬಂದಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ಜಾರಿ ನಿರ್ದೇಶಾನಾಲಯ (ಇ.ಡಿ.) ಅಧಿಕಾರಿಗಳು ಬುಧವಾರ ಬೆಳ್ಳಂಬೆಳಿಗ್ಗೆ ಬಳ್ಳಾರಿ ಸಂಸದರು ಮತ್ತು ಶಾಸಕರ ಮನೆಗಳ ಮೇಲೆ ದಾಳಿ ಮಾಡಿದ್ದಾರೆ.
ಸಂಡೂರು ಪಟ್ಟಣದಲ್ಲಿರುವ ಸಂಸದ ತುಕಾರಾಂ ಅವರ ನಿವಾಸ, ಸಂಡೂರು ಶಾಸಕಿ ಅನ್ನಪೂರ್ಣ, ಬಳ್ಳಾರಿ ನಗರದ ನೆಹರು ಕಾಲೋನಿಯಲ್ಲಿರುವ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ನಿವಾಸ, ಕಂಪ್ಲಿ ಶಾಸಕ ಜೆಎನ್ ಗಣೇಶ್ ಅವರ ಕುರುಗೋಡು ಪಟ್ಟಣದ ನಿವಾಸ, ಇವರ ಆಪ್ತ ಸಹಾಯಕ ಗೋವರ್ಧನ್ ಅವರ ನಿವಾಸ ಹಾಗೂ ಕೂಡ್ಲಿಗಿ ಶಾಸಕ ಡಾ. ಎನ್. ಟಿ. ಶ್ರೀನಿವಾಸ್ ಅವರ ಸ್ವಗ್ರಾಮ ನರಸಿಂಹಗಿರಿ ಮನೆ ಸೇರಿದಂತೆ ಹಲವೆಡೆ ಏಕಕಾಲಕ್ಕೆ ಇಡಿ ದಾಳಿ ಮಾಡಿದೆ.
10ಕ್ಕೂ ಹೆಚ್ಚು ಅಧಿಕಾರಿಗಳಿರುವ ಇ.ಡಿ ತಂಡವು ದಾಖಲೆಗಳ ಪರಿಶೀಲನೆ ಮುಂದುವರೆಸಿದ್ದಾರೆ. ಶಾಸಕರ ಭವನದಲ್ಲಿರುವ ನಾಗೇಂದ್ರ ಅವರ ಕೊಠಡಿ ಮೇಲೆ ದಾಳಿ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಸಿಆರ್ಪಿಎಫ್ ಪೊಲೀಸರ ಭದ್ರತೆಗೆ ನಿಯೋಜಿಸಲಾಗಿದೆ.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಸೇರಿದ 187 ಕೋಟಿ ರೂಪಾಯಿ ಹಣ ದುರ್ಬಳಕೆಯಾಗಿರುವ ಆರೋಪ ಕೇಳಿ ಬಂದಿತ್ತು. ಲೋಕಸಭಾ ಚುನಾವಣೆ ವೇಳೆ ವಾಲ್ಮೀಕಿ ನಿಗಮದ ಹಣ ಬಳಕೆಯಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದೇ ಆರೋಪದ ಹಿನ್ನೆಲೆಯಲ್ಲಿ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿ ದಾಖಲೆಗಳನ್ನ ಪರಿಶೀಲನೆ ಮಾಡುತ್ತಿದ್ದಾರೆ.
ಭರತ್ ರೆಡ್ಡಿಗೆ ಇಡಿ ಡ್ರೀಲ್
ದಾಳಿ ವೇಳೆ ಇಡಿ ಅಧಿಕಾರಿಗಳ ತನಿಖೆಗೆ ಭರತ್ ರೆಡ್ಡಿ ಸೂಕ್ತವಾಗಿ ಸ್ಪಂದಿಸದ ಕಾರಣ ಅಧಿಕಾರಿಗಳು ಸಿಟ್ಟಾಗಿ ದೀರ್ಘ ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.
ಏನಿದು ಪ್ರಕರಣ?
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ ಬಳಿಕ ಬಹುಕೋಟಿ ಹಗರಣ ಬೆಳಕಿಗೆ ಬಂದಿತ್ತು. ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ನಿಗಮದ 90 ಕೋಟಿ ಖಾಸಗಿ ಕಂಪನಿಗಳು ಮತ್ತು ವ್ಯಕ್ತಿಗಳ ಖಾತೆಗಳಿಗೆ ಅಕ್ರಮ ವರ್ಗಾವಣೆ ಆಗಿದೆ. ಆ ಅಕ್ರಮದಲ್ಲಿ ತಮ್ಮ ಪಾತ್ರವಿಲ್ಲ. ಎಲ್ಲವೂ ನಿಗಮದ ಅಧಿಕಾರಿಗಳು ಮತ್ತು ಬ್ಯಾಂಕ್ ಅಧಿಕಾರಿಗಳ ಸೂಚನೆಯಂತೆ ಆಗಿದೆ ಎಂದು ಬರೆಯಲಾಗಿತ್ತು. ಅಲ್ಲದೆ ತಮ್ಮ ಆತ್ಮಹತ್ಯೆಗೆ ಪ್ರಕರಣವೇ ಕಾರಣವೆಂದು, ನಿಗಮದ ಎಂಡಿ ಸೇರಿದಂತೆ ಐದು ಮಂದಿಯನ್ನು ಹೆಸರಿಸಿ, ಅವರೇ ಸಾವಿಗೆ ನೇರ ಹೊಣೆ ಎಂದು ಹೇಳಿದ್ದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದಲ್ಲಿ ಆರೋಪಿಯಾಗಿರುವ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.