ದುಷ್ಕರ್ಮಿಗಳಿಂದ ಇತ್ತೀಚೆಗೆ ಕೊಲೆಗೀಡಾದ ಕೊಳತ್ತಮಜಲು ನಿವಾಸಿ ಅಬ್ದುಲ್ ರಹ್ಮಾನ್ ಹಾಗೂ ಗಾಯಾಳು ಕಲಂದರ್ ಶಾಫಿಯವರ ಮನೆಗೆ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರು ಬುಧವಾರ ಭೇಟಿ ನೀಡಿದರು.
ಘಟನೆಯ ಸಂದರ್ಭದಲ್ಲಿ ಹಜ್ ಯಾತ್ರೆಗೆ ತೆರಳಿದ್ದ ಯು ಟಿ ಖಾದರ್, ಮಂಗಳವಾರ ಮಂಗಳೂರಿಗೆ ಹಿಂದಿರುಗಿದ್ದರು. ಈ ಹಿನ್ನೆಲೆಯಲ್ಲಿ ಬುಧವಾರ ಕೊಳತ್ತಮಜಲುವಿಗೆ ಭೇಟಿ ನೀಡಿ, ರಹ್ಮಾನ್ ತಂದೆ ತಾಯಿ ಮತ್ತು ಕುಟುಂಬಸ್ಥರೊಂದಿಗೆ ಮಾತನಾಡಿ, ಸಾಂತ್ವನ ಹೇಳಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸ್ಪೀಕರ್ ಖಾದರ್, “ಯುವಕ ಅಬ್ದುಲ್ ರಹ್ಮಾನ್ ಅವರಲ್ಲಿ ಕೆಲಸ ಮಾಡಿಸಿ ವೇತನ ಕೊಡಬೇಕಾದವರು ಕೊಲೆ ಮಾಡಿದ್ದು ಹೇಡಿತನದ ಕೃತ್ಯ. ರಹ್ಮಾನ್ ಹತ್ಯೆಯನ್ನು ಸರ್ವ ಜನಾಂಗದವರು ಖಂಡಿಸಿದ್ದಾರೆ. ಯಾವ ಸಮಾಜ ಕೂಡ ಒಪ್ಪದಂತಹ ಕೃತ್ಯ ನಡೆಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರಗಿಸಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ” ಎಂದು ತಿಳಿಸಿದರು.

“ರಹ್ಮಾನ್ ಕುಟುಂಬಕ್ಕೆ ಪರಿಹಾರ ಕೊಡುವ ವಿಚಾರದ ಬಗ್ಗೆ ಉಸ್ತುವಾರಿ ಸಚಿವರು ಹಾಗೂ ಸಿಎಂ ಜೊತೆಗೆ ಚರ್ಚಿಸಲು ತಿಳಿಸಲಾಗಿದೆ. ನಾನು ಹಜ್ ಗೆ ಹೋಗುವ ಮುನ್ನವೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಗಳ ಬದಲಾವಣೆ ನಿರ್ಧಾರ ಆಗಿತ್ತು. ಹಜ್ ಯಾತ್ರೆಯಲ್ಲಿರುವಾಗ ಆದೇಶ ಬರುವಾಗ ತಡವಾಗಿತ್ತು. ಈ ಮಧ್ಯೆಯೇ ರಹ್ಮಾನ್ ಅವರ ಹತ್ಯೆಯಾಗಿರುವುದು ನೋವಿನ ಸಂಗತಿ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಬಂಟ್ವಾಳ | ಪಾಣೆಮಂಗಳೂರು ಹಳೆ ಸೇತುವೆ ಮೇಲೆ ಸಂಚಾರ ನಿಷೇಧ: ಆದೇಶ ಹೊರಡಿಸಿದ ತಹಶೀಲ್ದಾರ್
ಈ ಸಂದರ್ಭದಲ್ಲಿ ಕಣಚೂರು ಮೋನು, ನಿವೃತ್ತ ಪೊಲೀಸ್ ಅಧಿಕಾರಿ ಜಿ ಎ ಬಾವಾ ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
