ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣ ಸೇರಿದಂತೆ ಜಿಲ್ಲೆಯ ವಿವಿಧ ಕಡೆ ಬುಧವಾರ ಮುಂಗಾರು ಹಂಗಾಮಿನ ಮೊದಲ ಹಬ್ಬ ಕಾರ ಹುಣ್ಣಿಮೆ ಸಂಭ್ರಮದಿಂದ ಆಚರಿಸಲಾಯಿತು.
ಜೇವರ್ಗಿಯಲ್ಲಿ ರೈತರು ಪಟ್ಟಣದ ಷಣ್ಮುಖ ಶಿವಯೋಗಿ ವಿರಕ್ತ ಮಠದ ಆವರಣ ಸೇರಿದಂತೆ ವಿವಿಧೆಡೆ ಎತ್ತುಗಳ ಮೈತೊಳೆದು ಕೋಡುಗಳಿಗೆ ಕೆಂಪು, ನೀಲಿ, ಹಸಿರು ಬಣ್ಣ ಹಚ್ಚಿದರು. ಅಲಂಕಾರಿಕ ವಸ್ತುಗಳಾದ ಗೆಜ್ಜೆಸರ, ಹಣೆಕಟ್ಟು, ರಿಬ್ಬನ್, ಬಲೂನ್ ಕಟ್ಟಿ ಶೃಂಗರಿಸಿ ಪೂಜೆ ಸಲ್ಲಿಸಿದರು.
ಕೆಲವರ ರೈತರು ತಮ್ಮ ನೆಚ್ಚಿನ ನಾಯಕರು ಹೋರಾಟಗಾರ, ಚಲನಚಿತ್ರ ನಟರ ಭಾವಚಿತ್ರ ಹೆಸರನ್ನು ಎತ್ತುಗಳ ಮೇಲೆ ಬರೆಸಿ ಅಭಿಮಾನ ತೋರಿದರು. ಕೆಲ ಯುವ ರೈತರು ಜೈ ಆರ್‌ಸಿಬಿ ಎಂದು ಬರೆಸಿ ಅಭಿಮಾನ ತೋರಿದರು.
ಬೀದರ್, ಭಾಲ್ಕಿಯಲ್ಲಿ ಕಾರ ಹುಣ್ಣಿಮೆ :
ಈ ವರ್ಷದ ಮುಂಗಾರಿನ ಹಂಗಾಮಿನಲ್ಲಿ ಉತ್ತಮಜ ಮಳೆಯಾಗಿ ರೈತರು ಸಮೃದ್ಧ ಬೆಳೆ ಬೆಳೆಯುವಂತಾಗಲಿ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಆಶಿಸಿದರು.
ಭಾಲ್ಕಿ ಪಟ್ಟಣದ ಹಿರೇಮಠ ಸಂಸ್ಥಾನದ ಆವರಣದಲ್ಲಿ ಕಾರ ಹುಣ್ಣಿಮೆ ನಿಮಿತ್ತ ಬುಧವಾರ ಎತ್ತುಗಳಿಗೆ ಪೂಜೆ ಸಲ್ಲಿಸಿ
ಅವರು ಮಾತನಾಡಿ, ʼಮುಂಗಾರಿನ ಮೊದಲ ಹಬ್ಬ ಕಾರ ಹುಣ್ಣಿಮೆ ರೈತರು ಸಂಭ್ರಮದಿಂದ ಆಚರಿಸುತ್ತಾರೆ. ವರ್ಷಪೂರ್ತಿ ರೈತರೊಂದಿಗೆ ದುಡಿಯುವ ಎತ್ತುಗಳು, ರಾಸುಗಳಿಗೆ ಅಲಂಕರಿಸಿ ಪೂಜೆ ಸಲ್ಲಿಸುವುದು ಕಾರ ಹುಣ್ಣಿಮೆ ವಿಶೇಷ. ಆದರೆ
ಇಂದಿನ ಯಾಂತ್ರೀಕರಣದ ಪ್ರಭಾವದಿಂದ ರಾಸುಗಳ ಸಂಖ್ಯೆ ಕಡಿಮೆಗೊಳ್ಳುತ್ತಿದೆ. ಹಬ್ಬದ ಸಂಭ್ರಮ ಮರೆಯಾಗುತ್ತಿದೆ ಎಂದು
ಕಳವಳ ವ್ಯಕ್ತಪಡಿಸಿದರು.

ಪ್ರತಿವರ್ಷ ಸಕಾಲಕ್ಕೆ ಮಳೆಯಾಗದೇ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಆದರೆ ಈ ಬಾರಿ ಮುಂಗಾರಿನ ಆರಂಭದಿಂದಲೇ ಉತ್ತಮ ಮಳೆಯಾಗುತ್ತಿದೆ. ಇದು ರೈತರಲ್ಲಿ ಮೊಗದಲ್ಲಿ ಸಂತಸ ತರಿಸಿದೆ. ಈ ಬಾರಿ ಉತ್ತಮ ಮಳೆಯಾಗಿ ರೈತರು ಉತ್ತಮ ಬೆಳೆ ಬೆಳೆದು ಎಲ್ಲ ಸಂಕಷ್ಟದಿಂದ ಹೊರ ಬರುವಂತಾಗಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಸವಲಿಂಗ ಸ್ವಾಮೀಜಿ, ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಕಾಶಿನಾಥ ಭೂರೆ, ಪ್ರಮುಖರಾದ ಬಸವರಾಜ ಮರೆ, ಜಗನ್ನಾಥ ಜಮಾದಾರ, ಅಶೋಕ ಅಂಬಿಗಾರ, ಮಲ್ಲಮ್ಮ ನಾಗನಕೇರೆ ಸೇರಿದಂತೆ ಮುಂತಾದವರು ಇದ್ದರು.
ಮುಂಗಾರು ಆರಂಭದ ಮೊದಲ ಹಬ್ಬವಾದ ಕಾರ ಹುಣ್ಣಿಮೆ, ಬೇಸಿಗೆ ಕಳೆದು ಮುಂಗಾರು ಹೊಸ್ತಿಲಿಗೆ ರೈತನೊಂದಿಗೆ ದುಡಿಯುವ ಎತ್ತುಗಳಿಗೆ ಪೂಜೆ ಸಲ್ಲಿಸುವ ಸಂಭ್ರಮದ ಹಬ್ಬ ಕಾರ ಹುಣ್ಣಿಮೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸ ಡಾ.ಶೈಲೇಂದ್ರ ಬೆಲ್ದಾಳೆ ಅವರು ಹೇಳಿದರು.

ಕಾರ ಹುಣ್ಣಿಮೆ ನಿಮಿತ್ತ ಇಂದು ಬೀದರ ದಕ್ಷಿಣ ಕ್ಷೇತ್ರದ ಬಕ್ಕಚೌಡಿ ಗ್ರಾಮದದಲ್ಲಿ ಅದ್ಭುತವಾಗಿ ಅಲಂಕಾರಗೊಂಡ ಎತ್ತುಗಳ, ಗೋವುಗಳ ಮೆರವಣಿಗೆ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.
ರೈತಾಪಿ ಜನರಿಗೆ ಸಾಂಸ್ಕೃತಿಕ ಮತ್ತು ಧಾರ್ಮಿಕ ಹಬ್ಬ. ಈ ಹಬ್ಬವು ಎತ್ತುಗಳ ಪ್ರಾಮುಖ್ಯತೆಯನ್ನು ಗೌರವಿಸಿ, ಮಳೆಗಾಲದ ಆರಂಭವನ್ನು ಸೂಚಿಸುತ್ತದೆ. ದೇಶದ ಬೆನ್ನೆಲುಬಾಗಿರುವ ರೈತರಿಗೆ ಕಾರ ಹುಣ್ಣಿಮೆ ಶುಭಾಶಯ ಕೋರಿದರು.

ಮುಖಂಡರಾದ ನಾಗಭೂಷಣ ಕಮಠಾಣಾ, ಸುರೇಶ ಮಾಶೆಟ್ಟಿ, ಚಂದ್ರಯ್ಯ ಸ್ವಾಮಿ, ವಿಜಯಕುಮಾರ ಬಕ್ಕಚೌಡಿ, ಅನೀಲ ಗುನ್ನಳ್ಳಿ, ನಾಗಶೆಟ್ಟಿ ಚಟ್ನಳ್ಳಿ, ಸಂಗಮೇಶ ಉದಗೀರೆ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ : ಬೀದರ್ | ಕಳೆದ ಮೂರು ವರ್ಷದಲ್ಲಿ 39 ಬಾಲ ಕಾರ್ಮಿಕರ ರಕ್ಷಣೆ : ಬೇಕಿದೆ ಇನ್ನಷ್ಟು ಬಿಗಿ ಕ್ರಮ!