ತನ್ನ ಪತ್ನಿಯು ವಿವಾಹೇತರ ಸಂಬಂಧ ಹೊಂದಿರಬಹುದು ಎಂದು ಅನುಮಾನಗೊಂಡಿದ್ದ ವ್ಯಕ್ತಿಯೊಬ್ಬ ತಮ್ಮ ನಾಲ್ವರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ವ್ಯಕ್ತಿ ಮತ್ತು ಮಕ್ಕಳು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತರನ್ನು ಬಿಹಾರ ಮೂಲದ ಮನೋಜ್ ಮಹಾತೋ ಮತ್ತು ಆತನ ಮಕ್ಕಳು ಎಂದು ಗುರುತಿಸಲಾಗಿದೆ. ಘಟನೆ ದೆಹಲಿಯ ಫರೀದಾಬಾದ್ ಪ್ರದೇಶದಲ್ಲಿ ನಡೆದಿದೆ. ದೆಹಲಿಗೆ ತೆರಳುತ್ತಿದ್ದ ಗೋಲ್ಡನ್ ಟೆಂಪಲ್ ಎಕ್ಸ್‌ಪ್ರೆಸ್ ರೈಲಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅವರ ಸಾವನ್ನಪ್ಪಿದ ಸ್ಥಳದಲ್ಲಿ ಆಧಾರ್ ಕಾರ್ಡ್ ಪತ್ತೆಯಾಗಿದ್ದರಿಂದ ಪೊಲೀಸರು ಅವರ ಗುರುತನ್ನು ಪತ್ತೆ ಹಚ್ಚಿಸಿದ್ದಾರೆ. ಬಳಿಕ, ಮೃತದ ಸಂಬಂಧಿಕರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಕುಟುಂಬಸ್ಥರು ಮೃತದೇಹಗಳನ್ನು ಗುರುತಿಸಿದ್ದಾರೆ ಎಂದು ವರದಿಯಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ತನ್ನ ಪತಿ ಮತ್ತು ಮಕ್ಕಳ ಸಾವಿನ ಬಗ್ಗೆ ಪ್ರತಿಕ್ರಿಯಿಸಿರುವ ಮನೋಜ್ ಅವರ ಪತ್ನಿ, “ಮಕ್ಕಳನ್ನು ಪಾರ್ಕ್‌ಗೆ ಕರೆದೊಯ್ಯುವುದಾಗಿ ಹೇಳಿ ಮನೋಜ್ ಮನೆಯಿಂದ ಹೊರಹೋಗಿದ್ದರು” ಎಂದು ತಿಳಿಸಿದ್ದಾರೆ. ಅಲ್ಲದೆ, ನನ್ನ ಸೋದರ ಸಂಬಂಧಿಯೊಂದಿಗೆ ಫೋನ್‌ನಲ್ಲಿ ಆಗ್ಗಾಗ್ಗೆ ಮಾತನಾಡುತ್ತಿದ್ದೆ. ಆ ಕಾರಣಕ್ಕೆ ನಾನು ವಿವಾಹೇತರ ಸಂಬಂಧ ಹೊಂದಿದ್ದೇನೆಂದು ತನ್ನ ಪತಿ ಶಂಕಿಸಿದ್ದರು” ಎಂದು ಹೇಳಿಕೊಂಡಿದ್ದಾರೆ.