ಯಾವುದೇ ವೈದ್ಯಕೀಯ ಪದವಿ ಪಡೆಯದೆ ಔಷಧಿಗಳ ಮಾಹಿತಿ ಪಡೆದುಕೊಂಡು ತಾವು ವೈದ್ಯರೆಂದು ಸುಳ್ಳು ಹೇಳಿಕೊಂಡು ಕೊಳಗಲ್ಲು ಗ್ರಾಮದಲ್ಲಿ ವೈದ್ಯ ವೃತ್ತಿ ಮಾಡುತ್ತಿದ್ದ ಇಬ್ಬರು ನಕಲಿ ವೈದ್ಯರ ಕ್ಲಿನಿಕ್‌ಗಳನ್ನು ಸೀಜ಼್ ಮಾಡಲಾಗಿದೆ ಎಂದು ಬಳ್ಳಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಹೇಳಿದ್ದಾರೆ.
“ಸಾರ್ವಜನಿಕರಿಂದ ದೂರು ಬಂದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರ ಸೂಚನೆ ಮೇರೆಗೆ ಬಳ್ಳಾರಿ ತಾಲೂಕು ಆರೋಗ್ಯಾಧಿಕಾರಿ ಡಾ.ಅಬ್ದುಲ್ಲಾ ಆರ್ ನೇತೃತ್ವದ ತಂಡವು ಕುರುಗೋಡು ತಾಲೂಕಿನ ಕೊಳಗಲ್ಲು ಗ್ರಾಮದಲ್ಲಿ ಎರಡು ನಕಲಿ ಕ್ಲಿನಿಕ್‌ಗಳನ್ನು ಸೀಜ಼್ ಮಾಡಿದೆ” ಎಂದು ಡಿಎಚ್‌ಒ ಯಲ್ಲಾ ರಮೇಶ್ ಬಾಬು ತಿಳಿಸಿದರು.
“ಸಾರ್ವಜನಿಕರಿಗೆ ತಾವು ವೈದ್ಯರೆಂದು ನಂಬಿಸಿ ಯಾವುದೇ ವೈದ್ಯಕೀಯ ಪದವಿ ಪಡೆಯದೆ ಕೇವಲ ಪಿಯುಸಿವರೆಗೂ ಓದಿಕೊಂಡು ಔಷಧಿಗಳ ಬಗ್ಗೆ ಮಾಹಿತಿ ಪಡೆದು, ಜನತೆಗೆ ಚಿಕಿತ್ಸೆ ನೀಡುತ್ತಿದ್ದ ಮಹೇಶ್ ಕ್ಲಿನಿಕ್, ಮೆಹಬೂಬ್ ಭಾಷಾ ಕ್ಲಿನಿಕ್‌ಗಳನ್ನು ಸೀಜ್ ಮಾಡಿ ಜಿಲ್ಲಾಧಿಕಾರಿಗಳ ಮುಂದಿನ ಕ್ರಮಕ್ಕಾಗಿ ವರದಿ ನೀಡಲಾಗಿದೆ” ಎಂದು ತಿಳಿಸಿದ್ದಾರೆ.
“ಸಾರ್ವಜನಿಕರು ತಮ್ಮ ಆರೋಗ್ಯದ ದೃಷ್ಟಿಯಿಂದ ಅಧಿಕೃತ ಎಂಬಿಬಿಎಸ್ ಪದವಿ ಪಡೆದ ವೈದ್ಯರ ಬಳಿ ತಪಾಸಣೆ ಮಾಡಿಸಬೇಕು. ಅವರಿಂದಲೇ ಚಿಕಿತ್ಸೆ ಪಡೆಯುವುದರಿಂದ ಆರೋಗ್ಯದ ಮೇಲೆ ಉಂಟಾಗಬಹುದಾದ ಗಂಭೀರ ಪರಿಣಾಮಗಳನ್ನು ತಡೆಯಬಹುದಾಗಿದೆ” ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ವೃಕ್ಷಥಾನ್ ಹೆರಿಟೇಜ್ ರನ್ ಸಿದ್ಧತೆಗೆ ಮಹಾಂತೇಶ ಬಿರಾದಾರ ಸೂಚನೆ
“ಗ್ರಾಮಗಳಲ್ಲಿ ವೈದ್ಯ ವೃತ್ತಿ ಮಾಡುತ್ತಿರುವವರು ಕಂಡುಬಂದಲ್ಲಿ ಅವರ ವೈದ್ಯಕೀಯ ಪದವಿ ಮಾಹಿತಿ ಪಡೆದುಕೊಂಡು ಚಿಕಿತ್ಸೆ ಪಡೆಯಬೇಕು. ಒಂದು ವೇಳೆ ನಕಲಿ ವೈದ್ಯರೆಂದು ಕಂಡುಬಂದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯಾಲಯಕ್ಕೆ ದೂರು ನೀಡಿದರೆ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ 2007 ರಡಿ ಕ್ರಮ ಜರುಗಿಸಬಹುದಾಗಿದೆ” ಎಂದು ಹೇಳಿದ್ದಾರೆ.
ಕುರುಗೋಡು ವೈದ್ಯಾಧಿಕಾರಿ ಡಾ ಮಂಜುನಾಥ ಜವಳಿ, ಜಿಲ್ಲಾ ಕೆಪಿಎಂಇ ವಿಭಾಗದ ಆರೋಗ್ಯ ನಿರೀಕ್ಷಣಾಧಿಕಾರಿ ಅರುಣ್ ಕುಮಾರ್, ಗೋಪಾಲ್ ಕೆ ಹೆಚ್ ಸೇರಿದಂತೆ ಇತರರು ಇದ್ದರು.