ಗುಜರಾತ್ ರಾಜಧಾನಿ ಅಹಮದಾಬಾದ್ ವಿಮಾನ ನಿಲ್ದಾಣದಿಂದ 242 ಪ್ರಯಾಣಿಕರೊಂದಿಗೆ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ಮೇಲೇರಿರುವ ಸಮಯದಲ್ಲಿ ಅಪಘಾತಕ್ಕೀಡಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ವಿಮಾನವು ಅಹಮದಾಬಾದ್‌ನ ಮೇಘನಿ ನಗರ ಬಳಿ ಪತನಗೊಂಡಿದ್ದು, ಹೊತ್ತಿ ಉರಿಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ವೈದ್ಯಕೀಯ ಸಿಬ್ಬಂದಿಗಳು ಹಾಗೂ ಆ್ಯಂಬುಲೆನ್ಸ್‌ಗಳು ಸ್ಥಳಕ್ಕೆ ದಾವಿಸಿವೆ. ಹಲವು ಸಾವು ನೋವು ಸಂಭವಿಸಿರುವ ಸಾಧ್ಯತೆ ಇದೆ. ಕೆಲವು ಜನಪ್ರತಿನಿಧಿಗಳು ಇದ್ದರು ಎನ್ನಲಾಗಿದೆ.
ಎಐ 171 ಬೋಯಿಂಗ್ ವಿಮಾನ ಪತನವಾಗಿದೆ. ಮೇಲೇರಿರುವ ಸಮಯದಲ್ಲಿ ಬಹುಮಹಡಿಯ ಕಟ್ಟಡಕ್ಕೆ ಬಡಿದು ವಿಮಾನ ಪತನಗೊಂಡಿದೆ ಎಂದು ಸದ್ಯಕ್ಕೆ ತಿಳಿದುಬಂದಿದೆ. ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಇದ್ದರು ಎನ್ನುವ ಮಾಹಿತಿ ವರದಿಯಾಗಿದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ನತ್ತ ಈ ವಿಮಾನ ತೆರಳುತ್ತಿತ್ತು.
ಘಟನೆಯ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ರಾಜ್ಯ ಗೃಹ ಸಚಿವ ಹರ್ಷ ಸಾಂಘವಿ ಹಾಗೂ ಅಹಮದಾಬಾದ್ ಪೊಲೀಸ್ ಆಯುಕ್ತರೊಂದಿಗೆ ಮಾತನಾಡಿದ್ದಾರೆ. ಕೇಂದ್ರ ಸರ್ಕಾರದಿಂದ ರಕ್ಷಣಾ ಕಾರ್ಯಾಚರಣೆಗೆ ಅಗತ್ಯ ನೆರವಿನ ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ.
ಬೋಯಿಂಗ್ ಕಂಪನಿಗೆ ಸೇರಿದ 787 ಗ್ರೀಮ್‌ಲೈನರ್ ವಿಮಾನ ಇದಾಗಿದ್ದು, ಒಟ್ಟು 300 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಇದರದ್ದು. ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು ತನಿಖೆಗೆ ಆದೇಶಿಸಿದೆ. ಬೋಯಿಂಗ್ ಕಂಪನಿಯ ತಾಂತ್ರಿಕ ಅಧಿಕಾರಿಗಳು ಸ್ಥಳಕ್ಕೆ ಧಾವಿಸುವ ಸಾಧ್ಯತೆ ಇದೆ. ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ವಿಚಾರ ತಿಳಿಯುತ್ತಿದ್ದಂತೆ ನಿಲ್ದಾಣಕ್ಕೆ ಧಾವಿಸಿದ್ದಾರೆ.
ವಿಮಾನದಲ್ಲಿ 242 ಪ್ರಯಾಣಿಕರು ಮತ್ತು ಸಿಬ್ಬಂದಿ ಇದ್ದರು. ಈ ಪೈಕಿ 169 ಭಾರತೀಯ ಪ್ರಜೆಗಳು, 53 ಬ್ರಿಟಿಷ್ ಪ್ರಜೆಗಳು, 1 ಕೆನಡಾ ಪ್ರಜೆ ಮತ್ತು 7 ಪೋರ್ಚುಗೀಸ್ ಪ್ರಜೆಗಳು ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಪ್ರಾಥಮಿಕ ಮಾಹಿತಿಯ ಪ್ರಕಾರ, ವಿಮಾನ 825 ಅಡಿ ಎತ್ತರದಲ್ಲಿದ್ದಾಗ ಇದ್ದಕ್ಕಿದ್ದಂತೆ ಕೆಳಗಿಳಿದು ಹಾಸ್ಟೆಲ್ ಕಟ್ಟದ ಮೇಲೆ ವಿಮಾನ ಬಿದ್ದಿದೆ. ತಕ್ಷಣವೇ ಜ್ವಾಲಾಮುಖಿ ತರ ಸ್ಫೋಟಗೊಂಡಿದೆ.
ವಿಮಾನ ಸ್ಫೋಟದ ವಿಡಿಯೋ ಗಮನಿಸಿದರೆ ನೂರಾರು ಸಾವು ಸಂಭವಿಸರುವ ಸಾಧ್ಯತೆ ಇದೆ. ಬೆಂಕಿಯ ಕೆನ್ನಾಲಿಗೆಗೆ ಹಾಸ್ಟೆಲ್ ಕಟ್ಟಡ ಸಹ ಹೊತ್ತಿ ಉರಿದಿದೆ. ಘಟನೆಯಲ್ಲಿನ ಸಾವು-ನೋವಿನ ಸಂಖ್ಯೆ ಇನ್ನಷ್ಟೇ ತಿಳಿಯಬೇಕಿದೆ. ಹಾಸ್ಟೆಲ್‌ನಲ್ಲಿ ಊಟ ಮಾಡುತ್ತಿದ್ದ ವಿದ್ಯಾರ್ಥಿಗಳಲ್ಲಿ 20ಕ್ಕೂ ಹೆಚ್ಚು ಸಾವು ಆಗಿದೆ ಎನ್ನಲಾಗಿದೆ.
ಸಿಎಂ ಸಿದ್ದರಾಮಯ್ಯ ಟ್ವೀಟ್
“ಸುಮಾರು 200ಕ್ಕೂ ಅಧಿಕ ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಗುಜರಾತ್‌ನ ಅಹ್ಮದಾಬಾದ್ ನಗರದಲ್ಲಿ ಅಪಘಾತಕ್ಕೀಡಾದ ಸುದ್ದಿ ತಿಳಿದು ಆಘಾತವಾಗಿದೆ. ಇದು ಅತ್ಯಂತ ದುರದೃಷ್ಟಕರ ಮತ್ತು ನೋವಿನ ಗಳಿಗೆ. ಈ ಅಪಘಾತದಿಂದ ಹೆಚ್ಚಿನ ಹಾನಿಯಾಗದಿರಲಿ, ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿರಲಿ ಎಂದು ಪ್ರಾರ್ಥಿಸೋಣ” ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಮೋದಿ, ಅಮಿತ್ ಶಾ, ನಾಯ್ಡು ರಾಜೀನಾಮೆ ನೀಡಲಿ: ಸುಬ್ರಮಣಿಯನ್ ಸ್ವಾಮಿ
“1950 ರ ದಶಕದಲ್ಲಿ ರೈಲು ಹಳಿ ತಪ್ಪಿದಾಗ ಲಾಲ್ ಬಹದ್ದೂರ್ ಶಾಸ್ತ್ರಿ ರಾಜೀನಾಮೆ ನೀಡಿದರು. ಅದೇ ನೈತಿಕತೆಯ ಆಧಾರದ ಮೇಲೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ನಾಗರಿಕ ವಿಮಾನಯಾನ ಸಚಿವ ನಾಯ್ಡು ಅವರು ರಾಜೀನಾಮೆ ನೀಡಬೇಕು. ಇದರಿಂದ ಮುಕ್ತ ಮತ್ತು ನ್ಯಾಯಯುತ ತನಿಖೆ ನಡೆಯಲಿದೆ” ಎಂದು ಕೇಂದ್ರದ ಮಾಜಿ ಸಚಿವ ಸುಬ್ರಮಣಿಯನ್ ಸ್ವಾಮಿ ಆಗ್ರಹಿಸಿದ್ದಾರೆ.
#BREAKING | Air India Ahmedabad-London flight crashes near airport in Gujarat's Meghani area
— The Times Of India (@timesofindia) June 12, 2025
More details awaited 🔗https://t.co/h1DrVJXaWq pic.twitter.com/MiuFVuB4AC
ಬೊಮ್ಮಾಯಿ ಸಂತಾಪ
“ಗುಜರಾತ್ ನ ಅಹಮದಾಬಾದ್ ನಲ್ಲಿ ಭೀಕರ ವಿಮಾನ ದುರಂತಕ್ಕೆ ಈಡಾಗಿರುವ ಸುದ್ದಿ ಕೇಳಿ ಅತ್ಯಂತ ಆಘಾತವಾಗಿದೆ. ಈ ಅವಗಢದಲ್ಲಿ ನೂರಾರು ಜನರು ಜೀವ ಕಳೆದುಕೊಂಡಿರುವುದು ಅತ್ಯಂತ ದುಖದ ಸಂಗತಿ. ಈ ಘೋರ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಆತ್ಮಕ್ಕೆ ದೇವರು ಚಿರ ಶಾಂತಿ ನೀಡಲಿ, ಮೃತರ ಕುಟುಂಬಸ್ಥರಿಗೆ ಅವರ ಅಗಲಿಕೆಯ ದುಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಮಾಜಿ ಸಿಎಂ ಮತ್ತು ಸಂಸದ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.
