ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆಯೆ?

Date:

Advertisements
ಮೂಲೆಗುಂಪಾಗಿರುವ ಜನರನ್ನು ಮೇಲೆತ್ತಬೇಕಾದುದು ನಿಗಮಗಳ ಕರ್ತವ್ಯ. ಆದರೆ ಭ್ರಷ್ಟರು, ವಂಚಕರು ಇಂತಹ ಅಭಿವೃದ್ಧಿ ನಿಗಮದೊಳಗೆ ಸೇರಿಕೊಂಡು ಸರ್ಕಾರದ ಹಾಗೂ ಅವಕಾಶ ವಂಚಿತರಿಗೆ ಸೇರಬೇಕಾದ ಹಣವನ್ನು ತಮ್ಮ ಜೇಬಿಗೆ ಇಳಿಸಿಕೊಳ್ಳುತ್ತಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧೀಕ್ಷಕರಾಗಿದ್ದ ಚಂದ್ರಶೇಖರನ್ ಪಿ ಅವರು ತಮ್ಮ ನಿವಾಸದಲ್ಲಿ 2024ರ ಮೇ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ನಂತರ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬೃಹತ್‌ ಹಗರಣ ಬೆಳಕಿಗೆ ಬಂತು. ಚಂದ್ರಶೇಖರ್‌ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತಮ್ಮ ಆತ್ಮಹತ್ಯಾ ಟಿಪ್ಪಣಿಯಲ್ಲಿ ನಿಗಮದಲ್ಲಿ ನಡೆದಿರುವ ಗಂಭೀರ ಆರ್ಥಿಕ ಅವ್ಯವಹಾರಗಳ ಬಗ್ಗೆ ಆರೋಪಿಸಿದ್ದರು. ಈ ಟಿಪ್ಪಣಿಯಲ್ಲಿ, ಲೆಕ್ಕಾಧಿಕಾರಿಯಾಗಿ ತಾವು ಕೆಲಸ ಮಾಡುವಾಗ ತಮ್ಮ ಮೇಲೆ ಒತ್ತಡವನ್ನು ಹೇರಲಾಗಿತ್ತು ಎಂದು ಉಲ್ಲೇಖಿಸಿದ್ದರು. ಅಲ್ಲದೆ ಕೆಲವು ರಾಜಕೀಯ ಮುಖಂಡರ ಹೆಸರನ್ನು ನೇರವಾಗಿ ಹೇಳದಿದ್ದರೂ, ತಮ್ಮ ಮೇಲೆ ಒತ್ತಡ ಹೇರಲಾಗುತ್ತಿದೆ ಪರೋಕ್ಷವಾಗಿ ಎಂದು ತಿಳಿಸಿದ್ದರು. ನಿಗಮದ ಮುಖ್ಯ ಖಾತೆಯಲ್ಲಿ 2023 ಹಾಗೂ 2024ನೇ ಸಾಲಿನ ವಿವಿಧ ಯೋಜನೆಗಳಿಗೆ ಮೀಸಲಿಟ್ಟ 187 ಕೋಟಿ ಮೊತ್ತದಲ್ಲಿ 89.62 ಕೋಟಿ ಹಣವನ್ನು ನಿಗಮದ ಅಧ್ಯಕ್ಷರ ಗಮನಕ್ಕೂ ಬಾರದೇ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಎಂಜಿ ರಸ್ತೆಯ ಶಾಖೆಯ ಅನಧಿಕೃತ ಖಾತೆಗೆ ವರ್ಗಾವಣೆ ಮಾಡಲಾಗಿದೆ ಎಂಬುದನ್ನು ಕೂಡ ಡೆತ್‌ ನೋಟ್‌ನಲ್ಲಿ ಬರೆದಿಟ್ಟಿದ್ದರು.

ಚಂದ್ರಶೇಖರನ್ ಅವರು ವಾಲ್ಮೀಕಿ ಅಭಿವೃದ್ಧಿ ನಿಗಮದ ಕಾರ್ಯನಿರ್ವಾಹಕ ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಆಡಳಿತದೊಳಗಿನ ಅಕ್ರಮ, ರಾಜಕೀಯ ಒತ್ತಡ ಮತ್ತು ಹಣಕಾಸು ದುರುಪಯೋಗದ ಕುರಿತು ಆಪ್ತ ಸ್ನೇಹಿತರು ಹಾಗೂ ಸಹೋದ್ಯೋಗಿಗಳೊಂದಿಗೆ ಹೇಳಿಕೊಂಡಿದ್ದರು. ನಿಗಮದ ವತಿಯಿಂದ ಘೋಷಿಸಲಾದ ಸಾಲ ಮನ್ನಾ ಯೋಜನೆ ಹಾಗೂ ಕೆಲವು ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಪಟ್ಟಂತೆ ಹಣಕಾಸು ವ್ಯವಹಾರಗಳಲ್ಲಿ ಅಕ್ರಮ ನಡೆದಿದೆ ಎಂಬ ಶಂಕೆ ವ್ಯಕ್ತವಾದ ನಂತರ ಅವರು ಮೇಲಧಿಕಾರಿಗಳಿಗೆ ಪತ್ರ ಬರೆದಿದ್ದರು. ಈ ಘಟನೆ ನಡೆದ ಕೆಲವು ದಿನಗಳ ನಂತರ ಚಂದ್ರಶೇಖರ್‌ ಅವರು ಆತ್ಮಹತ್ಯೆ ಮಾಡಿಕೊಂಡು ನಿಗಮದ ಎಂಡಿ ಸೇರಿದಂತೆ ಐದು ಮಂದಿಯನ್ನು ಹೆಸರಿಸಿ, ಅವರು ತಮ್ಮ ಸಾವಿಗೆ ನೇರ ಕಾರಣ ಎಂದು ಹೇಳಿದ್ದರು.

ಚಂದ್ರಶೇಖರನ್ ಆತ್ಮಹತ್ಯೆಯ ನಂತರ, ಹಗರಣಗಳು ನಡೆದಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿ ಬಂದ ನಂತರ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಈ ಆರೋಪಗಳ ಗಂಭೀರತೆಯನ್ನು ಅರಿತು ತನಿಖೆಗೆ ಆದೇಶಿಸಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಪ್ರಕರಣದ ಸಮಗ್ರ ತನಿಖೆಗಾಗಿ ಸಿಐಡಿಗೆ ವಿಶೇಷ ತನಿಖಾ ತಂಡವನ್ನು ರಚಿಸಲು ಸೂಚಿಸಿತು. ಸಿಐಡಿ ಕೈಗೊಂಡ ಪ್ರಾಥಮಿಕ ತನಿಖೆಯಲ್ಲಿ ಕೋಟ್ಯಂತರ ರೂಪಾಯಿಗಳ ಅಕ್ರಮ ವರ್ಗಾವಣೆಯ ಆರೋಪಗಳು ದೃಢಪಟ್ಟವು. ವಾಲ್ಮೀಕಿ ನಿಗಮದ ಖಾತೆಯಿಂದ ಕೋಟ್ಯಂತರ ರೂಪಾಯಿಗಳನ್ನು ವಿವಿಧ ಖಾಸಗಿ ಖಾತೆಗಳಿಗೆ ವರ್ಗಾಯಿಸಲಾಗಿತ್ತು ಎಂಬುದು ತನಿಖೆಯಿಂದ ಬಹಿರಂಗವಾಯಿತು. ಇದೇ ಸಂದರ್ಭದಲ್ಲಿ ನಿಗಮದ ಹಣವನ್ನು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ವೆಚ್ಚಕ್ಕಾಗಿ ದುರ್ಬಳಕೆ ಮಾಡಲಾಗಿದೆ ಎಂಬ ಆರೋಪ ರಾಜಕೀಯ ತಿರುವು ಪಡೆದುಕೊಂಡಾಗ ಜಾರಿ ನಿರ್ದೇಶನಾಲಯ 2024ರ ಜುಲೈನಲ್ಲಿ ಈ ಪ್ರಕರಣವನ್ನು ಕೈಗೆತ್ತಿಕೊಂಡಿತು.

Advertisements

ತನಿಖೆಯಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣದ ಬ್ಯಾಂಕ್‌ ಖಾತೆಗಳಿಗೆ ನಿಗಮದ ಖಾತೆಗಳಿಂದ ಸುಮಾರು 89.62 ಕೋಟಿ ರೂ.ಗಳನ್ನು ಶೆಲ್ ಕಂಪನಿಗಳ ಮೂಲಕ ನಕಲಿ ಖಾತೆಗಳಿಗೆ ವರ್ಗಾಹಿಸಲಾಗಿದೆ ಎಂದು ಇ.ಡಿ ವರದಿ ನೀಡಿತು. 18 ನಕಲಿ ಖಾತೆಗಳಿಗೆ ಹಣ ವರ್ಗಾವಣೆಯಾಗಿದೆ. ಬಳಿಕ ಇದನ್ನು ವಿತ್‌ಡ್ರಾ ಮಾಡಿ ಹವಾಲಾ ಮೂಲಕ ಹಂಚಿಕೆ ಮಾಡಲಾಗಿದೆ. ನಗದು ಮತ್ತು ಚಿನ್ನದ ರೂಪದಲ್ಲಿ ಸಾಗಾಟ ಮಾಡಿ ಹಣವನ್ನು ಹಂಚಿಕೊಳ್ಳಲಾಗಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದರು.

ಹಗರಣದ ಹಣವನ್ನು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮದ್ಯ ಖರೀದಿಗೆ ಬಳಕೆ ಮಾಡಿರುವುದು ಈ ಸಂದರ್ಭದಲ್ಲಿ ಪತ್ತೆಯಾಗಿತ್ತು. ಪತ್ರಿಕಾ ಪ್ರಕಟಣೆಯಲ್ಲಿ ಇ.ಡಿ ಅಧಿಕಾರಿಗಳು ಈ ವಿಚಾರವನ್ನು ತಿಳಿಸಿದ್ದರು. ಲೋಕಸಭಾ ಚುನಾವಣೆಗೂ ಮುನ್ನ ಮದ್ಯ ಸಂಗ್ರಹ ಮಾಡಲು ಹಣ ಬಳಕೆಯಾಗಿದೆ. ಹೆಚ್ಚುವರಿ ಹಣವನ್ನು ತಮ್ಮ ಖಾತೆಗೆ ಜಮಾ ಮಾಡಿಕೊಂಡು ವೈಯಕ್ತಿಕವಾಗಿ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಹಗರಣದಲ್ಲಿ ಭಾಗಿಯಾಗಿರುವ ಆರೋಪಿಗಳು ಐಷಾರಾಮಿ ಕಾರನ್ನು ಖರೀದಿಸಿದ್ದಾರೆ. ಪ್ರಕರಣ ಸಂಬಂಧ ದಾಳಿ ಮಾಡಿದಾಗ ಅನೇಕ ಸಾಕ್ಷಿಗಳು ಲಭ್ಯವಾಗಿವೆ ಎಂದು ಇ.ಡಿ ಹೇಳಿಕೊಂಡಿದೆ. ಹಗರಣ ಬಯಲಾದ ಬಳಿಕ ಬಿ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಜಾತಿ ಜನಗಣತಿ: ಬಲಾಢ್ಯ ಸಮುದಾಯಗಳಿಗೆ ಶರಣಾಯಿತೇ ಸರ್ಕಾರ?

ಇ.ಡಿ.ಯ ತನಿಖೆಯು ಆರಂಭವಾದ ಕೆಲವೇ ದಿನಗಳಲ್ಲಿ, ವಾಲ್ಮೀಕಿ ನಿಗಮದ ಅಧ್ಯಕ್ಷರಾಗಿದ್ದ ನಾಗೇಂದ್ರ ಅವರನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿತು. ಅದಕ್ಕೂ ಮುನ್ನ ಅವರಿಗೆ ಸಂಬಂಧಪಟ್ಟ ಹಲವು ಕಡೆಗಳಲ್ಲಿ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಬಳ್ಳಾರಿ ಶಾಸಕರಾಗಿದ್ದ ಬಿ. ನಾಗೇಂದ್ರ ನಿಗಮದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಇ.ಡಿ ತನಿಖೆಯಲ್ಲಿ, ನಾಗೇಂದ್ರ ಈ ಅವ್ಯವಹಾರದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂಬ ಆರೋಪವು ದೃಢಪಟ್ಟಿರುವುದಾಗಿ ವರದಿಗಳು ಹೇಳುತ್ತಿವೆ. ಮೂರು ತಿಂಗಳು ಜೈಲಿನಲ್ಲಿ ಕಳೆದ ನಂತರ ನಾಗೇಂದ್ರ ಅವರು ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ. ಇನ್ನೊಂದು ಪ್ರಮುಖ ವಿಷಯವೇನೆಂದರೆ ಕಾಂಗ್ರೆಸ್ ಸರ್ಕಾರ ರಚಿಸಿದ ವಿಶೇಷ ತನಿಖಾ ತಂಡ (ಎಸ್‌ಐಟಿ) ಹಗರಣದಲ್ಲಿ ನಾಗೇಂದ್ರ ಅವರಿಗೆ ಕ್ಲೀನ್ ಚಿಟ್ ನೀಡಿತ್ತು. ಆರೋಪ ಪಟ್ಟಿಯಲ್ಲೂ ಅವರ ಹೆಸರನ್ನು ಉಲ್ಲೇಖಿಸಿರಲಿಲ್ಲ.

ಈಗ ಸಂಸದರು ಹಾಗೂ ಕೆಲವು ಶಾಸಕರ ಹೆಸರುಗಳು ಕೇಳಿಬರುತ್ತಿದೆ. ಚಂದ್ರಶೇಖರನ್‌ ಅವರ ಆತ್ಮಹತ್ಯೆಯಿಂದ ಆರಂಭವಾದ ಈ ಹಗರಣದಲ್ಲಿ ಮೊದಲು ಸಚಿವರಾಗಿದ್ದ ಬಿ ನಾಗೇಂದ್ರ ತಲೆತಂಡವಾಯಿತು. ಈಗ ಬಳ್ಳಾರಿ ಸಂಸದ ಇ ತುಕಾರಾಂ ಮತ್ತು ಶಾಸಕರಾದ ನಾ ರಾ ಭರತ್ ರೆಡ್ಡಿ, ಜೆ ಎನ್ ಗಣೇಶ್ ಮತ್ತು ಎನ್ ಟಿ ಶ್ರೀನಿವಾಸ್ ಅವರ ನಿವಾಸಗಳು ಮತ್ತು ಕಚೇರಿಗಳ ಮೇಲೆ ದಾಳಿ ಇ.ಡಿ ದಾಳಿಯಾಗಿದ್ದು, ನಾಲ್ವರನ್ನು ಬಂಧಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.  

ಶೋಷಿತ ಸಮುದಾಯವನ್ನು ಅಭಿವೃದ್ಧಿಪಡಿಸಲು ಹಾಗೂ ಅವರನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ವಿವಿಧ ಸಮುದಾಯಗಳ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಲಾಗಿದೆ. ಮೂಲೆಗುಂಪಾಗಿರುವ ಜನರನ್ನು ಮೇಲೆತ್ತಬೇಕಾದುದು ನಿಗಮಗಳ ಕರ್ತವ್ಯ. ಆದರೆ ಭ್ರಷ್ಟರು, ವಂಚಕರು ಇಂತಹ ಅಭಿವೃದ್ಧಿ ನಿಗಮದೊಳಗೆ ಸೇರಿಕೊಂಡು ಸರ್ಕಾರದ ಹಾಗೂ ಅವಕಾಶ ವಂಚಿತರಿಗೆ ಸೇರಬೇಕಾದ ಹಣವನ್ನು ತಮ್ಮ ಜೇಬಿಗೆ ಇಳಿಸಿಕೊಳ್ಳುತ್ತಿದ್ದಾರೆ. ಸಮುದಾಯದ ಪ್ರಗತಿಗೆ ಬದ್ಧತೆ ತೋರಬೇಕಾದ ನಾಯಕರು ತಮ್ಮದೇ ಸಮುದಾಯದ ನಿಗಮಗಳಲ್ಲಿ ಪಾರದರ್ಶಕತೆ ತೋರದೆ, ತಮ್ಮ ರಾಜಕೀಯ ಹಾಗೂ ಸ್ವಾರ್ಥ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಇಂತಹ ಹಗರಣಗಳು ಬಯಲಾದ ನಂತರ ನಿಗಮಗಳ ಮರುಸ್ವರೂಪ, ಪ್ರಾಮಾಣಿಕ ನೇಮಕಾತಿ ಮತ್ತು ರಾಜಕೀಯ ಹಸ್ತಕ್ಷೇಪ ನಿವಾರಣೆಯ ಬಗ್ಗೆ ವ್ಯಾಪಕ ಚರ್ಚೆಗಳು ಶುರುವಾಗಿವೆ.

ಚಂದ್ರಶೇಖರನ್ ಅವರ ಸಾವಿನಿಂದ ಆರಂಭವಾದ ಈ ಘಟನಾವಳಿಯ ಸರಣಿ, ಕೇವಲ ಒಂದು ಅಧಿಕಾರಿ ಅಥವಾ ನಿಗಮದ ಅವ್ಯವಸ್ಥೆಯ ಕಥೆಯಲ್ಲ. ಆಡಳಿತ ವ್ಯವಸ್ಥೆಯ ದುರ್ಬಳಕೆ, ರಾಜಕೀಯ ಹಸ್ತಕ್ಷೇಪ, ಭ್ರಷ್ಟಾಚಾರ ಸೇರಿ ಹಲವು ಸ್ವರೂಪಗಳನ್ನು ಹೊಂದಿದೆ. ಭ್ರಷ್ಟ ವ್ಯವಸ್ಥೆಗೆ ಸಮುದಾಯ ಮಾತ್ರವಲ್ಲದೆ ಇಡೀ ನಾಗರಿಕ ಸಮಾಜವೆ ಪಾಠ ಕಲಿಸಬೇಕಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X