ಹನ್ನೊಂದು ವರ್ಷಗಳಲ್ಲಿ ಹಲವಾರು ಸಾಧನೆ ಮಾಡಿದ್ದೇನೆಂದು ಬಣ್ಣಿಸಿಕೊಳ್ಳುವ ಮೋದಿಯವರ ಪಟ್ಟಿಯಲ್ಲಿ 'ಪತ್ರಿಕಾಗೋಷ್ಠಿಗಳು' ಇಲ್ಲವಾಗಿರುವುದು 'ಅಚ್ಛೇದಿನ'ಗಳ ಸೂಚನೆಯಲ್ಲ
ಭಾರತದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡು 11 ವರ್ಷಗಳು ಕಳೆದಿದ್ದರೂ, ನರೇಂದ್ರ ಮೋದಿ ಅವರು ಒಂದೇ ಒಂದು ಔಪಚಾರಿಕ ಪತ್ರಿಕಾಗೋಷ್ಠಿ ನಡೆಸಿಲ್ಲ. ಇದು ಮಾಧ್ಯಮ ಮತ್ತು ರಾಜಕೀಯ ವಲಯದಲ್ಲಿ ನಿರಂತರ ಚರ್ಚೆಗೆ ಗ್ರಾಸವಾಗಿದೆ. ಪ್ರಜಾಪ್ರಭುತ್ವದ ಮುಖ್ಯ ಆಧಾರಸ್ತಂಭಗಳಲ್ಲಿ ಒಂದಾದ ಮಾಧ್ಯಮದೊಂದಿಗೆ ನಾಯಕರು ನೇರ ಸಂವಹನ ನಡೆಸದಿರುವುದು ಭಾರತದ ಪತ್ರಿಕಾ ಸ್ವಾತಂತ್ರ್ಯ ಮತ್ತು ಪಾರದರ್ಶಕತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕ ಕುಸಿಯುತ್ತಿರುವ ಮತ್ತು ದನಿಯೆತ್ತಿದ ಪತ್ರಕರ್ತರಿಗೆ ಕಿರುಕುಳ ನೀಡುತ್ತಿರುವ ಈ ಸಂದರ್ಭದಲ್ಲಿ, ಪ್ರಧಾನಿಯವರ ಈ ನಡೆ ಹೆಚ್ಚು ಟೀಕೆಗೆ ಒಳಗಾಗಿದೆ. 2025ರ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 180 ರಾಷ್ಟ್ರಗಳ ಪೈಕಿ 151ನೇ ಸ್ಥಾನದಲ್ಲಿ ಭಾರತದ ಹೆಸರಿದೆ.159ನೇ ಸ್ಥಾನದಿಂದ 151ಕ್ಕೆ ಏರಿಕೆಯಾದರೂ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಎಂದು ಬಣ್ಣಿಸಿಕೊಳ್ಳುವ ನಮಗೆ ಇತ್ತೀಚಿನ ವರ್ಷಗಳ ಅಂಕಿ-ಅಂಶಗಳು ಒಳ್ಳೆಯ ಸೂಚನೆಯನ್ನಂತೂ ನೀಡಿಲ್ಲ. 151ನೇ ಸ್ಥಾನದಲ್ಲಿರುವ ಭಾರತವು ಕಳೆದ ಹತ್ತು ವರ್ಷಗಳಿಂದ ಭಾರೀ ಕುಸಿತ ಕಾಣುತ್ತಲೇ ಇದ್ದದ್ದನ್ನು ಗಮನಿಸಬಹುದು. 2019ರಲ್ಲಿ 140ನೇ ಸ್ಥಾನದಲ್ಲಿದ್ದ ಭಾರತ 2020 ಮತ್ತು 2021ರಲ್ಲಿ 142ನೇ ಸ್ಥಾನಕ್ಕೆ ಕುಸಿಯಿತು. 2022ರಲ್ಲಿ 150ಕ್ಕೂ 2023ರಲ್ಲಿ 161ನೇ ಸ್ಥಾನಕ್ಕೂ ಇಳಿಕೆಯಾಗಿತ್ತು.
ತಮ್ಮ ಅಂತಾರಾಷ್ಟ್ರೀಯ ಸ್ನೇಹಿತರಾದ ಅಮೆರಿಕ ಅಧ್ಯಕ್ಷ ಟ್ರಂಪ್ ಹಾಗೂ ಮಸ್ಕ್ ಅವರ ಆಪ್ತ ಲೆಕ್ಸ್ ಫೀಡ್‌ಮನ್ ಅವರೊಂದಿಗೆ ಇತ್ತೀಚೆಗೆ ಪ್ರಧಾನಿ ಮೋದಿ ಅವರು ಪಾಡ್‌ಕಾಸ್ಟ್‌ವೊಂದರಲ್ಲಿ ಭಾಗವಹಿಸಿದ್ದು ನೆನಪಿರಬಹುದು. ವಿಜ್ಞಾನ, ತಂತ್ರಜ್ಞಾನ ಮತ್ತು ಭೂರಾಜಕೀಯ ವಿಷಯಗಳ ಬಗ್ಗೆ ಪಾಡ್‌ಕಾಸ್ಟ್ ನಡೆಸುವ ಫ್ರೀಡ್‌ಮನ್, ಅಮೆರಿಕದಲ್ಲಿ ಬಲಪಂಥೀಯರ ನೆಚ್ಚಿನ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದಾರೆ. ಫೀಡ್‌ಮನ್ ಅವರು ಭಾರತದ ಕುರಿತು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸಂಬಂಧ ಅಥವಾ ಅವರದ್ದೇ ವಿಷಯವಾದ ಭೂ ರಾಜಕೀಯ ಕುರಿತ ಕೇಳಬಹುದಾದ ಹತ್ತಾರು ಜಟಿಲ ಪ್ರಶ್ನೆಗಳಿದ್ದರೂ ಅವುಗಳನ್ನೆಲ್ಲ ಬದಿಗೊತ್ತಿ ತೀರಾ ಸಾಮಾನ್ಯ ಕೆಲ ಸೌಮ್ಯ ಪ್ರಶ್ನೆಗಳನ್ನು ಕೇಳಿ ಸಂದರ್ಶನ ಮುಗಿಸಿದರು. ಅದನ್ನು ಸ್ವತಃ ಮೋದಿಯವರೇ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಪ್ರಜ್ಞಾವಂತರ ಕೆಂಗಣ್ಣಿಗೆ ಗುರಿಯಾಗಿತ್ತು. ‘ಇದು ಪ್ರಧಾನಿಗೆ ಸಂದರ್ಶನ ನೀಡಲು ಸೂಕ್ತವಾದ ವೇದಿಕೆ’ ಎಂಬ ವ್ಯಂಗ್ಯ ಮಾಡಲಾಯಿತು. ನಮ್ಮ ಹೆಮ್ಮೆಯ ಪ್ರಧಾನಿಯವರು ಕಠಿಣ ಪ್ರಶ್ನೆಗಳಿಂದ ದೂರವಿರುವ ಮಾದರಿಯನ್ನು ಈ ಸಂದರ್ಶನ ಮತ್ತಷ್ಟು ಸ್ಪಷ್ಟಪಡಿಸಿದೆ ಎಂದೂ ಹಲವರು ಅಭಿಪ್ರಾಯಪಟ್ಟರು.

ತಮ್ಮ ನರೇಟಿವ್‌ಗಳ ಕುರಿತು ಕೇಳಲ್ಪಡುವ ಪ್ರಶ್ನೆಗಳಿಂದ ಬಚಾವಾಗಲೆಂದೇ ಪ್ರಧಾನಿ ಮೋದಿ ಅವರು ಪತ್ರಿಕಾಗೋಷ್ಠಿಗಳಿಂದ ದೂರವಿದ್ದಾರೆಂದು ಹೇಳಲಾಗುತ್ತದೆ. ಟ್ವಿಟರ್, ಫೇಸ್‌ಬುಕ್‌ನಂತಹ ವೇದಿಕೆಗಳಲ್ಲಿ ತಮ್ಮ ಸಂದೇಶಗಳನ್ನು ನೇರವಾಗಿ ಹಂಚಿಕೊಳ್ಳುತ್ತಾರೆ. ಆಯ್ದ ಮಾಧ್ಯಮ ವ್ಯಕ್ತಿಗಳು, ಸೆಲೆಬ್ರಿಟಿಗಳು ಅಥವಾ ಪ್ರಭಾವಿಗಳೊಂದಿಗೆ ಕೆಲ ಸಂದರ್ಶನಗಳನ್ನೂ ನೀಡುತ್ತಾರೆ. ಈ ಸಂದರ್ಶನಗಳು ಸಾಮಾನ್ಯವಾಗಿ ಸೌಹಾರ್ದಯುತ ವಾತಾವರಣದಲ್ಲಿ ನಡೆಯುತ್ತವೆ. ಅಲ್ಲಿ ಕಠಿಣ ಪ್ರಶ್ನೆಗಳಿಗೆ ಅವಕಾಶವಿರುವುದಿಲ್ಲ. ಸಾರ್ವಜನಿಕ ಸಭೆಗಳು ಮತ್ತು ಸರ್ಕಾರಿ ಕಾರ್ಯಕ್ರಮಗಳಲ್ಲಿ ಸಿದ್ಧಪಡಿಸಿದ ಭಾಷಣಗಳನ್ನು ಮಾತ್ರ ನಿರೂಪಿಸಿ, ಚಪ್ಪಾಳೆ ಗಿಟ್ಟಿಸಿ ತೆರಳುತ್ತಾರೆ. ಆದರೆ ಆ ಸಿದ್ಧ ಪ್ರತಿಯ ಸುತ್ತಲೂ, ಅದರಾಚೆಗೂ ಸೃಷ್ಟಿಯಾಗುವ ಪ್ರಶ್ನೆಗಳಿಗೆ ಮೌನವಷ್ಟೇ ಅವರ ಉತ್ತರ. ಇನ್ನು ಮನ್‌ಕಿ ಬಾತ್ ಕುರಿತು ತಿಳಿದೇ ಇದೆ.
ಇದನ್ನೂ ಓದಿರಿ: ಗುಜರಾತ್ | ಅಕ್ರಮ ವಲಸೆ ಹಣೆಪಟ್ಟಿ: 8,500 ಕುಟುಂಬಗಳ ನಿರ್ನಾಮ!
2024ರ ಲೋಕಸಭಾ ಚುನಾವಣೆಗೂ ಮುನ್ನ ಪ್ರಧಾನಿ ಮೋದಿಯವರ ಅಣಕು ಸಂದರ್ಶನವನ್ನು ‘ದಿ ವೈರ್’ ಯೂಟ್ಯೂಬ್ ಚಾನೆಲ್ ನಡೆಸಿದ್ದು ನೆನಪಿರಬಹುದು. ಖ್ಯಾತ ಮಿಮಿಕ್ರಿ ಕಲಾವಿದ ಶ್ಯಾಮ್ ರಂಗೀಲಾ ಅವರು ಮೋದಿಯವರನ್ನು ಇಮಿಟೇಟ್ ಮಾಡುವುದರಲ್ಲಿ ನಿಷ್ಣಾತರು. ಮೋದಿಯವರ ತದ್ರೂಪವಾಗಿಸಿ ರಂಗೀಲಾ ಅವರನ್ನು ಕೂರಿಸಿ ನಡೆಸಲಾಗಿದ್ದ ಸಂದರ್ಶನ ಭಾರೀ ಗಮನ ಸೆಳೆದಿತ್ತು. ಶ್ಯಾಮ್ ಅವರ ಅದ್ಭುತ ಅನುಕರಣೆ ಹಾಸ್ಯವನ್ನು ಹೊಮ್ಮಿಸುವುದರ ಜೊತೆಗೆ, ಮೋದಿಯವರಿಗಿರುವ ಮಾಧ್ಯಮ ಭೀತಿಯನ್ನು ಬಯಲಿಗೆಳೆಯಾಗಿತ್ತು.
ಎರಡು ಅವಧಿಗೆ ಪ್ರಧಾನಿಯಾಗಿದ್ದ ಖ್ಯಾತ ಅರ್ಥಶಾಸ್ತ್ರಜ್ಞ ಮನಮೋಹನ್ ಸಿಂಗ್ ಅವರನ್ನು ‘ಆಕಸ್ಮಿಕ ಪ್ರಧಾನಿ’ ಎಂದು ಹೀಗಳೆದು, ಜರಿದು ಬಿಸಾಕಿದ ವ್ಯವಸ್ಥೆ ನಮ್ಮ ಮುಂದೆ ಇದೆ. ಆದರೆ ಸಿಂಗ್ ಅವರ ಪತ್ರಿಕಾ ಸಂವಾದಗಳನ್ನು ಅವರ ಟೀಕಾಕಾರರೂ ಅಲ್ಲಗಳೆಯಲಾರರು. “ನಾನು ಮೌನಿ ಪ್ರಧಾನಿ ಎಂದು ಜನರು ಹೇಳುತ್ತಾರೆ. ಆದರೆ ಕೆಲಸಗಳು ತಾವಾಗಿಯೇ ಮಾತನಾಡುತ್ತವೆ ಎಂದು ನಾನು ಭಾವಿಸುತ್ತೇನೆ. ನಾನು ಖಂಡಿತವಾಗಿಯೂ ಪತ್ರಿಕಾಗೋಷ್ಠಿಗೆ ಹೆದರುತ್ತಿದ್ದ ಪ್ರಧಾನಿಯಾಗಿರಲಿಲ್ಲ ಎಂದು ಹೇಳಲು ಬಯಸುತ್ತೇನೆ. ನಾನು ಕಾಲಕಾಲಕ್ಕೆ ಮಾಧ್ಯಮಗಳನ್ನು ಎದುರಾಗುತ್ತಿದ್ದೆ. ನಾನು ಯಾವುದೇ ವಿದೇಶದ ಪ್ರವಾಸ ಕೈಗೊಂಡಾಲೂ ವಿಮಾನದಲ್ಲಿ ಅಥವಾ ವಿಮಾನದಿಂದ ಇಳಿದ ತಕ್ಷಣ ಪತ್ರಿಕಾಗೋಷ್ಠಿ ನಡೆಸುತ್ತಿದ್ದೆ” ಎಂದು ಮನಮೋಹನ್ ಸಿಂಗ್ ಅವರು 2018ರಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು. ಪ್ರಧಾನಿಯಾಗಿ ಹತ್ತು ವರ್ಷ ಆಡಳಿತ ನಡೆಸಿದ ಸಿಂಗ್ ಅವರು 2014ರ ಜನವರಿ 3ರಂದು ಕೊನೆಯ ಪತ್ರಿಕಾಗೋಷ್ಠಿ ನಡೆಸಿದ್ದರು. ನೂರಾರು ಪತ್ರಕರ್ತರಿಂದ ಪ್ರಶ್ನೆಗಳನ್ನು ಎದುರಿಸಿದ್ದರು. ಆ ಪ್ರಶ್ನೆಗಳು ಪೂರ್ವನಿರ್ಧರಿತವಾಗಿರಲಿಲ್ಲ. ತಮ್ಮ ಅಧಿಕಾರವಧಿಯಲ್ಲಿ 117 ಪತ್ರಿಕಾಗೋಷ್ಠಿಗಳನ್ನು ನಡೆಸಿದ ಹೆಗ್ಗಳಿಕೆ ಸಿಂಗ್ ಅವರಿಗೆ ಸಲ್ಲುತ್ತದೆ.
ಪತ್ರಿಕಾಗೋಷ್ಠಿಗಳು ಮೋದಿಯವರ ಸೆಲೆಕ್ಟಿವ್ ಸಂದರ್ಶನಗಳಿಗಿಂತ ಸಂಪೂರ್ಣವಾಗಿ ವಿಭಿನ್ನವಾಗಿರುವುದು ನಿಶ್ಚಿತ. ಅವು ಆರ್ಥಿಕತೆ, ಧಾರ್ಮಿಕ ಉದ್ವಿಗ್ನತೆಗಳು ಅಥವಾ ಸರ್ಕಾರದ ತಪ್ಪು ಹೆಜ್ಜೆಗಳಂತಹ ಕ್ಲಿಷ್ಟಕರ ವಿಷಯಗಳ ಕುರಿತು ಕಠಿಣ ಹಾಗೂ ಪೂರ್ವಸಿದ್ಧತೆಯಿಲ್ಲದ ಪ್ರಶ್ನೆಗಳನ್ನು ಒಳಗೊಂಡಿರುತ್ತವೆ. ನೇರ ಪ್ರಸಾರವಾಗುವ ಇಂತಹ ಪತ್ರಿಕಾಗೋಷ್ಠಿಗಳಲ್ಲಿ, ಮಾಹಿತಿಗಳನ್ನು ಫಿಲ್ಟರ್ ಮಾಡುವುದು ಅಥವಾ ನಿಯಂತ್ರಿಸುವುದು ಕಷ್ಟ. ಈ ಅಪಾಯವನ್ನು ತನಗಿಷ್ಟವಿಲ್ಲದಿದ್ದರೂ ನಾಯಕ ಎದುರಿಸಬೇಕು. ಇವೇ ಮೊದಲಾದವು ಅವರಿಗೆ ಅಹಿತಕರ ಕ್ಷಣಗಳನ್ನು ಸೃಷ್ಟಿಸಬಹುದು.
ಇದನ್ನೂ ಓದಿರಿ: ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನ | ಬಡತನದಲ್ಲಿ ಬಾಲ್ಯ ಉರಿದಾಗ…
ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗುವ ಮೊದಲು ಅವರು ಮಾಧ್ಯಮ ಸ್ನೇಹಿ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದರು. 2002ರ ಗುಜರಾತ್ ಗಲಭೆಯ ನಂತರ ಅವರ ಮಾಧ್ಯಮ ಸಂಬಂಧದಲ್ಲಿ ದೊಡ್ಡ ಬದಲಾವಣೆಯಾಯಿತು. ಗಲಭೆಯ ನಂತರ ಅವರ ವಿರುದ್ಧ ಭಾರೀ ಟೀಕೆಗಳು ವ್ಯಕ್ತವಾದವು. ಮಾನವ ಹಕ್ಕುಗಳ ಕಾರ್ಯಕರ್ತರಿಗೆ, ಭಿನ್ನಾಭಿಪ್ರಾಯದ ಧ್ವನಿಗಳಿಗೆ ಇಂಗ್ಲಿಷ್ ಮಾಧ್ಯಮಗಳು ವೇದಿಕೆ ಕಲ್ಪಿಸಿದ್ದು ಮೋದಿಯವರಿಗೆ ಅಸಮಾಧಾನ ತಂದಿತ್ತು. ಅಲ್ಲಿಂದ ಮಾಧ್ಯಮಗಳ ಬಗ್ಗೆ ಅವರ ಅಸಹನೆ ಹೆಚ್ಚಾಯಿತು ಎನ್ನಲಾಗುತ್ತದೆ.
ಭಾರತದ ಪ್ರಧಾನ ಮಂತ್ರಿಗಳು ವಿದೇಶ ಪ್ರವಾಸಗಳಿಂದ ಹಿಂತಿರುಗಿದ ನಂತರ ಪತ್ರಿಕಾಗೋಷ್ಠಿ ನಡೆಸಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸುವ ಸಂಪ್ರದಾಯವನ್ನು ಹೊಂದಿದ್ದರು. ಆದರೆ ಪ್ರಧಾನಿ ಮೋದಿ ಈ ಸಂಪ್ರದಾಯವನ್ನು ಕೈಬಿಟ್ಟರು. 2019ರಲ್ಲಿ ಅವರು ಭಾಗವಹಿಸಿದ ಏಕೈಕ ಪತ್ರಿಕಾಗೋಷ್ಠಿಯಲ್ಲಿ, ಅವರು ಕೇವಲ ಉಪಸ್ಥಿತರಿದ್ದು, ಗೃಹ ಸಚಿವ ಅಮಿತ್ ಶಾ ಅವರೇ ಮಾತನಾಡಿದರು. ಯಾವುದೇ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸಲಿಲ್ಲವಷ್ಟೆ. ಹೀಗಾಗಿ, ನಿಜವಾದ ಪತ್ರಿಕಾಗೋಷ್ಠಿ ನಡೆಸದ ಏಕೈಕ ಭಾರತೀಯ ಪ್ರಧಾನಿ ನರೇಂದ್ರ ಮೋದಿ ಆಗಿದ್ದಾರೆ ಎನ್ನುವುದು ಬಹುತೇಕ ದೇಶವಾಸಿಗಳ ಮಾತು.
ನೋಟ್ ಬ್ಯಾನ್ ಮಾಡಿದ ನಂತರ ದೇಶ ಎದುರಿಸಿದ ಆರ್ಥಿಕ ಬಿಕ್ಕಟ್ಟಿನ ವೇಳೆ, ಕೋವಿಡ್ ಲಾಕ್‌ಡೌನ್ ಬಳಿಕ ಕಾರ್ಮಿಕರ ಬದುಕು ನಿತ್ರಾಣವಾದ ಬಗ್ಗೆ, ಪುಲ್ವಾಮ- ಪಹಲ್ಗಾಮದಲ್ಲಾದ ಭಯೋತ್ಪಾದನಾ ದಾಳಿಗಳ ಸಂದರ್ಭದಲ್ಲಿಯಾದರೂ ಮೋದಿ ಮಾಧ್ಯಮಗಳ ಮುಂದೆ ಬರುತ್ತಾರೆಂದು ನಿರೀಕ್ಷಿಸಿದ್ದು ಹುಸಿಯಾಯಿತು. ‘ಮೌನಿ ಬಾಬಾ’ ಎಂಬ ಮೂದಲಿಕೆ ಎದುರಿಸಿದ ಮನಮೋಹನ್ ಸಿಂಗ್ ಅವರ ದಾಖಲೆಯನ್ನು ಮಾತಿನ ಮೋಡಿಗಾರ ಮೋದಿ ಮುರಿಯುವಂತೆ ಕಾಣುತ್ತಿಲ್ಲ! ಹನ್ನೊಂದು ವರ್ಷಗಳಲ್ಲಿ ಹಲವಾರು ಸಾಧನೆ ಮಾಡಿದ್ದೇನೆಂದು ಬಣ್ಣಿಸಿಕೊಳ್ಳುವ ಮೋದಿಯವರ ಪಟ್ಟಿಯಲ್ಲಿ ‘ಪತ್ರಿಕಾಗೋಷ್ಠಿಗಳು’ ಇಲ್ಲವಾಗಿರುವುದು ‘ಅಚ್ಛೇದಿನ’ಗಳ ಸೂಚನೆಯಲ್ಲ.