ಬೆಳಕಣಿ-ಮುಂಗನಾಳ ಮಾರ್ಗದಲ್ಲಿ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಬೀದರ್ ಜಿಲ್ಲೆ ಔರಾದ್ ತಾಲೂಕು ಕೇಂದಕ್ಕೆ ತೆರಳುವ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
“ಬೆಳಕುಣಿ(ಚೌ) ಮಾರ್ಗವಾಗಿ ಔರಾದ್ ಪಟ್ಟಣಕೆ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಮಳೆಗೆ ಕೊಚ್ಚಿ ಹೋದ ರಸ್ತೆ ಮಧ್ಯೆ ಅಲ್ಲಲ್ಲಿ ಗುಂಡಿ ಬಿದ್ದಿವೆ. ಇದರಿಂದ ವಾಹನ ಸವಾರರು ಮತ್ತು ಪ್ರಯಾಣಿಕರು ಪರಿತಪಿಸುವಂತಾಗಿದೆ. ರಸ್ತೆಯ ಗುಂಡಿ ತಪ್ಪಿಸಲು ಹೋಗಿ ಹಲವು ಬೈಕ್ ಸವಾರರು ಆಯಾ ತಪ್ಪಿ ಬಿದ್ದು ಗಾಯಗೊಂಡಿದ್ದಾರೆ. ಹಗಲು ರಾತ್ರಿ ಓಡಾಡುವ ಮರಳು ಲಾರಿ ಸಂಚಾರದಿಂದ ರಸ್ತೆ ಹದಗೆಡಲು ಕಾರಣ. ಈಗಲಾದರೂ ಸಂಭಂದಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆ ದುರಸ್ತಿಗೆ ಮುಂದಾಗಬೇಕು” ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಬೆಳಕುಣಿ ನಿವಾಸಿ ಅರವಿಂದ ಮಲ್ಲಿಗೆ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಔರಾದ್-ಬೆಳಕುಣಿ ನಡುವಿನ ರಸ್ತೆ ಕಾಮಗಾರಿ ಮಂಜೂರಾಗಿದೆ. ಟೆಂಡರ್ ಪ್ರಕ್ರಿಯೆ ಕೂಡ ಮುಗಿದಿದೆ. ಆದರೆ ಈ ರಸ್ತೆ ಔರಾದನಿಂದ ಮುಂಗನಾಳ ಗ್ರಾಮದವರೆಗೆ ಮಾತ್ರ ಕಾಮಗಾರಿ ಮುಗಿದಿದ್ದು, ಮುಂದೆ ಬೆಳಕುಣಿ ಗ್ರಾಮದವರೆಗಿನ ಹದಗೆಟ್ಟ ರಸ್ತೆ ಹಾಗೇ ಇದೆ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಈ ಬಗ್ಗೆ ಕ್ಷೇತ್ರದ ಶಾಸಕರು ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಕಾರ್ಖಾನೆ ತ್ಯಾಜದಿಂದ ಅಂತರ್ಜಲ ಮಲಿನ; ಅಧಿಕಾರಿಗಳ ಭೇಟಿ
ಗ್ರಾಮಸ್ಥ ವಿಜಯಕುಮಾರ ಮಾತನಾಡಿ, “ಹಲವು ವರ್ಷಗಳಿಂದ ರಸ್ತೆ ಕಿತ್ತು ಬಂದಿದೆ. ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಸೇರಿದಂತೆ ಅಧಿಕಾರಿಗಳೂ ಇತ್ತ ಗಮನಹರಿಸುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಬೆಳಕುಣಿ ಗ್ರಾಮದವರೆಗೆ ಕೂಡಲೇ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಬೇಕಾಗುತ್ತದೆ” ಎಂದು ಎಚ್ಚರಿಸಿದರು.