ಸೇನೆಯ ಸಮಚಿತ್ತದ, ಭಾವನೆಗಳನ್ನು ಉದ್ರಿಕ್ತಗೊಳಿಸದ ಮಿತಿಯೊಳಗಿನ ಅಧಿಕೃತ ಮಾಹಿತಿಯ ನಿರೂಪಣೆ ಒಂದೆಡೆಯಾದರೆ, ಗೋದಿ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣವು ಹರಡುತ್ತಿದ್ದ ಸುಳ್ಳು ನಿರೂಪಣೆಗಳು ಜನರನ್ನು ಉದ್ರಿಕ್ತಗೊಳಿಸುತ್ತಾ ಗೊಂದಲಕ್ಕೆ ತಳ್ಳಿತ್ತು. ರಾಜತಾಂತ್ರಿಕವಾಗಿ ಈ ಸುಳ್ಳು ಸುದ್ದಿಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ನಷ್ಟವನ್ನೆ ಉಂಟುಮಾಡಿತು.
ಆಪರೇಷನ್ ಸಿಂಧೂರ್, ಮತ್ತದಕ್ಕೆ ಕಾರಣವಾದ ಪಹಲ್ಗಾಮ್‌ನ ಉಗ್ರರ ದಾಳಿ ಕುರಿತು ಇನ್ನೂ ಉತ್ತರ ಸಿಗದ ಪ್ರಶ್ನೆಗಳು ಜನರನ್ನು ಕಾಡುತ್ತಿವೆ. ಈಗಾಗಲೇ ಕೆಲವರು ಇಂತಹ ಪ್ರಶ್ನೆಗಳನ್ನು ಮುಂದಿಟ್ಟು ದೇಶಭಕ್ತರಿಂದ ಪಾಕಿಸ್ತಾನಿ ಏಜೆಂಟರೆಂಬ ಬಿರುದನ್ನು ಗಳಿಸಿದ್ದಾಗಿದೆ. ಕದನವಿರಾಮದ ನಂತರವಾದರೂ ಈ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಬೇಕಿತ್ತು. ಆದರೆ, ಯಾರಿಗೂ ಮತ್ತು ಎಂದಿಗೂ ಏನನ್ನೂ ಹೇಳಲು ಅಥವಾ ಕೇಳಲು ಬದ್ಧರಲ್ಲ ಎಂಬ ಧೋರಣೆಯು ಎಂದಿನಂತೆ ಮುಂದುವರಿದ ಕಾರಣ ಮತ್ತೆ ಮತ್ತೆ ಪ್ರಶ್ನಿಸುವುದು ಮತ ನೀಡಿ ಗದ್ದುಗೆ ಏರಿಸಿದ ಜನರ ಕರ್ತವ್ಯವಾಗಿದೆ.
ಪ್ರಶ್ನೆಗಳ ಮೊದಲಿಗೊಂದು ಪೀಠಿಕೆ
ಎಪ್ರಿಲ್ 22ರಂದು ಪಹಲ್ಗಾಮದ ಬೈಸರನ್‌ಗೆ ಪ್ರವಾಸ ಹೋಗಿದ್ದ 26 ಪುರುಷರನ್ನು ಅವರ ಕುಟುಂಬದ ಕಣ್ಮುಂದೆಯೆ ಪಾಕಿಸ್ತಾನಿ ಬೆಂಬಲಿತ ಭಯೋತ್ಪಾದಕರು ಕೊಲ್ಲುತ್ತಾರೆ. ಈ ಆಕ್ರಮಣಕ್ಕೆ ಪ್ರತಿಕಾರವಾಗಿ ಯುದ್ಧವನ್ನೇ ಸಾರಬೇಕೆಂಬ ಸಾರ್ವಜನಿಕರ ಭಾವುಕ ಅಪೇಕ್ಷೆ ಮತ್ತು ಈ ಭಾವುಕತೆಗೆ ಪೂರಕವಾದ ಸರ್ಕಾರದ ಹೇಳಿಕೆಗಳು ತಕ್ಷಣದ ಮಿಲಿಟರಿ ಕ್ರಮದ ಅಗತ್ಯವನ್ನು ಹುಟ್ಟುಹಾಕುತ್ತದೆ. ಆದರೆ, ಮಿಲಿಟರಿ ಕ್ರಮದ ಉಲ್ಬಣತೆಗಳ ಅರಿವಿದ್ದ ಭಾರತೀಯ ಸೇನೆಯು ಇಂತಹ ಭಾವುಕತೆಗೆ ಒಳಗಾಗದೆ, ಪಾಕಿಸ್ತಾನಿ ಬೆಂಬಲಿತ ಭಯೋತ್ಪಾದನೆಗೆ ಶಾಶ್ವತ ಅಂತ್ಯ ಹಾಡುವ ಉದ್ದೇಶದಿಂದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿ, ಮೇ 7ರಂದು ಅಲ್ಲಿನ ಒಂಬತ್ತು ಭಯೋತ್ಪಾದಕರ ನೆಲೆಗಳನ್ನು ಧ್ವಂಸಗೊಳಿಸುತ್ತದೆ.
ಗಡಿರೇಖೆಯನ್ನು ದಾಟದೆ, ನಿರ್ದಿಷ್ಟ ಭಯೋತ್ಪಾದಕರ ನೆಲೆಗಳನ್ನು ಗುರಿಯಾಗಿಸಿ ಬಹು ನಿಖರ ಪ್ರಮಾಣದ ಹಠಾತ್ ದಾಳಿ ನಡೆಸುವ ಮೂಲಕ ನೆಲೆಗಳ ಮೂಲಸೌಕರ್ಯಗಳನ್ನು ನಾಶಪಡಿಸಿದ್ದಲ್ಲದೆ, 100ಕ್ಕೂ ಹೆಚ್ಚು ಉಗ್ರಗಾಮಿಗಳು ಹತರಾಗಿದ್ದನ್ನು ಅಧಿಕೃತ ಮಾಹಿತಿ ತಿಳಿಸುತ್ತದೆ. ಇದು ಭಯೋತ್ಪಾದಕರ ನೆಲೆಗಳ ಮೇಲಿನ ದಾಳಿಯೇ ಹೊರತು, ಪಾಕಿಸ್ತಾನದ ಮಿಲಿಟರಿ ನೆಲೆಗಳ ಮೇಲಿನ ಆಕ್ರಮಣವಲ್ಲ ಎಂದು ಭಾರತೀಯ ಸೇನೆಯು ಸ್ಪಷ್ಟಪಡಿಸಿದರೂ ಸಹ ಪಾಕಿಸ್ತಾನವು ಭಾರತದ ಮಿಲಿಟರಿ ನೆಲೆಗಳ ಮೇಲೆ ನೇರ ದಾಳಿ ನಡೆಸುತ್ತದೆ. ಭಾರತದ ಸೇನೆಯು ಅದನ್ನು ಯಶಸ್ವಿಯಾಗಿ ತಡೆಗಟ್ಟುತ್ತದೆ. ಈ ದಾಳಿ, ಮರುದಾಳಿಗಳ ನಡುವೆ ಗಡಿಗಳಲ್ಲಿ ಸಾವು ನೋವುಗಳಾಗಿದ್ದನ್ನು ಎರಡೂ ದೇಶಗಳು ವರದಿ ಮಾಡುತ್ತವೆ. ಇನ್ನೇನು ಪರಿಸ್ಥಿತಿಯು ಉಲ್ಬಣಿಸುತ್ತದೆ ಎಂದುಕೊಳ್ಳುತ್ತಿರುವಾಗ ಮೇ ಹತ್ತರಂದು ಕದನ ವಿರಾಮದ ಘೋಷಣೆಯಾಗಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮದ ಮಧ್ಯಸ್ಥಿಕೆ ಮಾಡಿದ್ದಾಗಿ ಹೇಳಿಕೊಂಡರೆ, ಇದು ಪಾಕಿಸ್ತಾನ ಮತ್ತು ಭಾರತದ ನಡುವಿನ ಒಪ್ಪಂದ ಮಾತ್ರವೆಂದು ಸರ್ಕಾರದ ಅಧಿಕೃತ ಮಾಹಿತಿಯು ಹೇಳುತ್ತದೆ. ಈ ಎಲ್ಲಾ ಆಗುಹೋಗುಗಳು ಕೆಲವು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಪ್ರಶ್ನೆಯು ಸಹಜವಾಗಿ ಎಪ್ರಿಲ್ 22ರಂದು ಪಹಲ್ಗಾಮದಲ್ಲಿ ನಡೆದ ದಾಳಿಯಿಂದ ಹುಟ್ಟಿಕೊಳ್ಳುತ್ತದೆ.

ಎಪ್ರಿಲ್ 22ರಂದು ಕಾಶ್ಮಿರ ಕಣಿವೆಯ ಬೈಸರನ್ ಪ್ರವಾಸಿ ತಾಣಕ್ಕೆ ಭಯೋತ್ಪಾದಕರು ಅಷ್ಟು ಸುಲಭವಾಗಿ ಬಂದು, ಕೊಂದು, ಸುರಕ್ಷಿತವಾಗಿ ಮರಳಲು ಹೇಗೆ ಸಾಧ್ಯವಾಯಿತು? ರಕ್ಷಣಾ ವಿಷಯವನ್ನು ತನ್ನ ಅಧಿಕಾರದಡಿ ಹೊಂದಿರುವ ಕೇಂದ್ರ ಸರ್ಕಾರವು ಅಲ್ಲಿ ರಕ್ಷಣಾ ವ್ಯವಸ್ಥೆ ಮಾಡಿರಲಿಲ್ಲವೇಕೆ? ಭೂಸೇನೆಯ ಮಾಜಿ ಚೀಫ್ ಜನರಲ್ ವಿ.ಪಿ. ಮಲ್ಲಿಕ್‍ರವರು ಎಪ್ರಿಲ್ 23ರಂದು ಹಿರಿಯ ಪತ್ರಕರ್ತ ರಾಜ್‍ದೀಪ್ ಸರ್ದೇಸಾಯಿಯವರಿಗೆ ನೀಡಿದ ಸಂದರ್ಶನದಲ್ಲಿ ‘ಈ ಪ್ರವಾಸಿ ತಾಣದಲ್ಲಿ ಅಗತ್ಯವಿದ್ದ ರಕ್ಷಣಾ ಸಿಬ್ಬಂದಿ ಇರದ ಬಗ್ಗೆ ಮತ್ತು ಗಡಿಯೊಳಗೆ ನುಗ್ಗಿದ ಉಗ್ರರ ಬಗ್ಗೆ ಬೇಹುಗಾರಿಗೆ ಮಾಹಿತಿ ಇರಲಿಲ್ಲವೇಕೆ ಎಂಬುದರ ಕುರಿತು ತನಿಖೆ ಆಗಬೇಕು’ ಎಂದಿದ್ದಾರೆ.
ಕಾಶ್ಮೀರ ಮತ್ತು ಜಮ್ಮುವಿನ ಇತರೆ ಎಲ್ಲಾ ಕಡೆಗಳಲ್ಲಿ ರಕ್ಷಣಾ ವ್ಯವಸ್ಥೆ ಇದ್ದರೂ, ಜನವಸತಿಯಿಂದ ದೂರವಿದ್ಧ ಈ ಬಹುಸುಂದರ ಹುಲ್ಲುಗಾವಲಿಗೆ ಹೆಚ್ಚು ಪ್ರವಾಸಿಗರು ಬರುತ್ತಿದ್ದ ಬಗ್ಗೆ ಸರ್ಕಾರಕ್ಕೆ ಗೊತ್ತಿರಲಿಲ್ಲವೇ? ಇಲ್ಲಿಗೆ ಪ್ರವೇಶದ ಅನುಮತಿ ಇರಲಿಲ್ಲವೆಂಬ ಕೇಂದ್ರ ಸರ್ಕಾರದ ಹೇಳಿಕೆಯು ಸತ್ಯಕ್ಕೆ ದೂರವಾದುದೆಂದು ಸ್ಥಳಿಯ ಸರ್ಕಾರ ಮತ್ತು ಪ್ರವಾಸಿ ವ್ಯವಸ್ಥಾಪಕರು ಅನೇಕ ಪುರಾವೆ ನೀಡಿರುತ್ತಾರೆ. ಮಾರ್ಚ್ ಒಂದರಿಂದ ಎಪ್ರಿಲ್ 22ರ ತನಕ (2025ರ) ಒಟ್ಟು 72,000 ಪ್ರವಾಸಿಗರು ತಲಾ 35ರೂ.ಗಳ ಪ್ರವೇಶ ಶುಲ್ಕ ನೀಡಿ ಇಲ್ಲಿಗೆ ಭೇಟಿ ನೀಡಿದ್ದರ ಬಗ್ಗೆ ನಿಖರ ಮಾಹಿತಿ ಇರುತ್ತದೆ.
ಯುದ್ಧವು ಪ್ರಾರಂಭವಾದರೆ, ಹಿಡಿತ ತಪ್ಪಿ ಅದು ಉಲ್ಬಣಿಸುವ ಹಂತಕ್ಕೆ ಹೋಗಬಹುದೆಂಬ ಅರಿವಿದ್ದ ಮತ್ತು ಪಾಕಿಸ್ತಾನಕ್ಕೆ ತಾಂತ್ರಿಕ ಹಾಗೂ ಶಸ್ತ್ರಾಸ್ತ್ರಗಳನ್ನು ಒದಗಿಸಲು ಚೈನಾ ತುದಿಗಾಲಲ್ಲಿ ನಿಂತಿದೆ ಎಂಬ ಮಾಹಿತಿ ಹೊಂದಿದ್ದ ಸೇನೆಯು ತಕ್ಷಣದಲ್ಲಿ ಆಪರೇಷನ್ ಸಿಂಧೂರ್ ನಡೆಸಲು ನಿಜಕ್ಕೂ ತಯಾರಿತ್ತೇ? ಭಯೋತ್ಪಾದಕರ ಆಕ್ರಮಣಗಳಿಗೆ ಶಾಶ್ವತ ಅಂತ್ಯ ಹಾಡಲು ಆಪರೇಷನ್ ಸಿಂಧೂರ್ ಘೋಷಣೆಯಾಯಿತೇ? ಅಥವಾ ಇದು ಜನಾಕ್ರೋಶದ ಹಿಂದಿನ ಭಾವುಕತೆಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ನೆಪವಾಗಿತ್ತೇ?
ನಿರ್ದಿಷ್ಟವಾಗಿ ಭಯೋತ್ಪಾದಕರ ಪಾಕಿಸ್ತಾನಿ ನೆಲೆಗಳನ್ನು ಮಾತ್ರ ಗುರಿಯಾಗಿಸಿ, ಬಹು ನಿಖರ ಪ್ರಮಾಣದ ಹಠಾತ್ ದಾಳಿ ನಡೆಸಿ ಅವರ ನೆಲೆಗಳನ್ನು ದ್ವಂಸ ಮಾಡುವಲ್ಲಿ ಯಶಸ್ವಿಯಾದ ಭಾರತೀಯ ಸೇನೆಯ ಕ್ಷಮತೆಯನ್ನು ಮೆಚ್ಚಲೇಬೇಕು. ಆದರೆ, ಈ ದಾಳಿಗೆ ಪ್ರತ್ಯುತ್ತರವಾಗಿ ಪಾಕಿಸ್ತಾನವು ತಕ್ಷಣದಲ್ಲಿಯೇ ಭಾರತದ ಮೇಲೆ ನೇರ ಆಕ್ರಮಣ ಮಾಡಬಹುದಾದ ಸಾಧ್ಯತೆಗಳನ್ನು ಮೊದಲೇ ಊಹಿಸಿರಲಿಲ್ಲವೇ? ಊಹಿಸಿದ್ದಲ್ಲಿ, ಗಡಿಪ್ರದೇಶಗಳಲ್ಲಿನ ಜನರ ರಕ್ಷಣಾ ವ್ಯವಸ್ಥೆಯನ್ನು ಮೊದಲೇ ಮಾಡಿರಲಿಲ್ಲವೇಕೆ? ಅಲ್ಲಿನ ಸಾವು, ನೋವು, ನಷ್ಟಗಳಿಗೆ ಬೆಲೆಯೇ ಇಲ್ಲವೆ?
ಸೇನೆಯ ಸಮಚಿತ್ತದ, ಭಾವನೆಗಳನ್ನು ಉದ್ರಿಕ್ತಗೊಳಿಸದಂತಹ ಮಿತಿಯೊಳಗಿನ ಅಧಿಕೃತ ಮಾಹಿತಿಯ ನಿರೂಪಣೆ ಒಂದೆಡೆಯಾದರೆ, ಗೋದಿ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣವು ಹರಡುತ್ತಿದ್ದ ಮತ್ತೊಂದೆಡೆಯ ಸುಳ್ಳು ನಿರೂಪಣೆಗಳು ಜನರನ್ನು ಉದ್ರಿಕ್ತಗೊಳಿಸುತ್ತಾ ಗೊಂದಲಕ್ಕೆ ತಳ್ಳಿತ್ತು. ರಾಜತಾಂತ್ರಿಕವಾಗಿ ಈ ಸುಳ್ಳು ಸುದ್ದಿಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ನಷ್ಟವನ್ನೆ ಉಂಟುಮಾಡಿತು ಎನ್ನಬಹುದು. ಯುದ್ಧದಂತಹ ಗಂಭೀರ ಪರಿಸ್ಥಿತಿಯಲ್ಲಿಯೂ ಕಥೆಗೂ ನಿಜಕ್ಕೂ ವ್ಯತ್ಯಾಸವೇ ಇಲ್ಲದಂತೆ, ಯಾವುದೇ ಭಯ ಹಾಗೂ ಅಡೆತಡೆಗಳಿಲ್ಲದೆ ಹಳೆ ವಿಡಿಯೋ / ಎಐ ಚಿತ್ರಗಳನ್ನು ಬಳಸಿ ‘ಭಾರತವು ಪಾಕಿಸ್ತಾನದೊಳಗೆ ನುಗ್ಗಿದೆ, ಇಸ್ಲಾಮಬಾದ್ ಕಬ್ಜಾ, ಕರಾಚಿ ಪೋರ್ಟ್ ಧ್ವಂಸ, ಪಾಕಿಸ್ತಾನದ 500 ಜನರ ಸಾವು’. . . . ಇತ್ಯಾದಿಯಾದ ಕಟ್ಟುಕಥೆಗಳನ್ನು ಹರಡುವುದೇ ದೇಶಭಕ್ತಿ ಎಂಬಂತಹ ಭ್ರಮೆ ಹುಟ್ಟಿಸಿದ ಈ ನಿರೂಪಣೆಗಳು ಆಕಸ್ಮಿಕವೇ? ಕಾಕತಾಳಿಯವೇ ಅಥವಾ ನಿರ್ದೇಶಿತವೆ? ಅಥವಾ ಮಿತಿಯಲ್ಲಿನ ಅಧಿಕೃತ ನಿರೂಪಣೆ ಮತ್ತು ರಾಜಕೀಯ ಲಾಭಕ್ಕಾಗಿ ದಿಕ್ಕುತಪ್ಪಿಸುವ ಸುಳ್ಳು ನಿರೂಪಣೆ – ಹೀಗೆ ಎರಡು ಸಮಾನಾಂತರ ನಿರೂಪಣೆಗಳು ಯೋಜಿತ ಸಂವಹನ ತಂತ್ರವಾಗಿತ್ತೆ ಎಂಬುದು ರಾಜಕೀಯ ವಿಶ್ಲೇಷಕರ ಪ್ರಶ್ನೆಯಾಗಿದೆ.

ಹಾನಿ ಎಷ್ಟಾಯಿತು ಎಂಬುದನ್ನು ಹೇಳಲು ಸೇನೆಗೆ ಕಷ್ಟವಾದಂತೆ ಕಾಣಲಿಲ್ಲವಾದರೂ, ನಿಖರವಾಗಿ ಹೇಳಲಿಲ್ಲವಷ್ಟೇ. ಹಿಂದಿನ ಯುದ್ಧಗಳ ಸಂದರ್ಭದಲ್ಲಿ ಇಂತಹ ಮಾಹಿತಿಗಳನ್ನು ಸಾರ್ವಜನಿಕರಿಗೆ ಕೊಡಲಾಗುತಿತ್ತು. ಸೇನೆ ಹೇಳಿದಂತೆ ನಷ್ಟವು ಯುದ್ಧದ ಭಾಗವಾಗಿದ್ದು, ಫಲಿತಾಂಶ ಮತ್ತು ಕಲಿಕೆಗಳಷ್ಟೇ ಮುಖ್ಯ. ಆದರೆ, ಹಾನಿ ಎಷ್ಟಾಯಿತು ಎಂಬ ಲೆಕ್ಕದಿಂದ ಯಾರಿಗೆ ನಷ್ಟ; ರಾಜಕೀಯ ನಷ್ಟವೇ? ನುಗ್ಗಿ ಹೊಡೆಯುವ, ಮಣ್ಣುಗೂಡಿಸುವ ವೀರಾವೇಶದ ಮಾತುಗಳ ಜೊತೆಗೆ ಪಾಕಿಸ್ತಾನವು ಮುಳುಗಿಯೇ ಹೋಯಿತು ಎಂಬ ಗೋದಿ ಮಾಧ್ಯಮಗಳ ನಡುವೆ ಒಂದೆರಡು ಮಿಲಿಟರಿ ವಿಮಾನಗಳ ಪತನವಾಯಿತೆಂಬ ಅಥವಾ ಇಷ್ಟು ಜನರು ಸತ್ತಿದ್ದಾರೆಂಬ ಮಾಹಿತಿಯು ಬೆಳೆಸಿದ ಭ್ರಮೆಯನ್ನು ಕರಗಿಸುವುದೆಂಬ ಭಯವೇ?
ಕದನವಿರಾಮದ ಘೋಷಣೆ ವೈಯಕ್ತಿಕವಾಗಿ ಸಂತೋಷವನ್ನೇ ತಂದಿದೆ. ಯುದ್ಧವು ಎಂದಿಗೂ ಪರಿಹಾರವಲ್ಲ. ಆದರೆ, ಇದು ಘಟಿಸಿದ ರೀತಿಯು ಭಾರತದ ಘನತೆಗೆ ಧಕ್ಕೆಯಾಗುವಂತಿದ್ದು, ಅದು ಭಾರತೀಯರೆಲ್ಲರಿಗೂ ಅಸಮಧಾನ ತಂದಿದೆ. ಕದನವಿರಾಮವು ಎರಡೂ ದೇಶಗಳ ನಡುವಿನ ಒಪ್ಪಂದವಾಗಿದ್ದು, ಇದರ ಪ್ರಸ್ತಾವನೆಯು ಮೊದಲು ಪಾಕಿಸ್ತಾನದಿಂದ ಬಂದಿತ್ತು ಎಂಬುದು ಭಾರತದ ಅಧಿಕೃತ ಹೇಳಿಕೆಯಾದರೆ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಾಪಾರದ ಭರವಸೆ ನೀಡುವ ಮೂಲಕ ತಾನು ಎರಡೂ ದೇಶಗಳನ್ನು ಕದನವಿರಾಮಕ್ಕೆ ಒಪ್ಪಿಸಿದ್ದೇನೆ ಎಂದು ಸರಣಿ ಟ್ವೀಟ್ ಮಾಡಿರುತ್ತಾರೆ. ಹಾಗಾದರೆ, ಯಾವುದು ಸರಿ? ನಾವು ಭಾರತೀಯರು ನಮ್ಮದೇ ಹೇಳಿಕೆಯನ್ನು ನಂಬಲು ಇಷ್ಷಪಡುವ ಕಾರಣ, ಟ್ರಂಪ್ ಹೇಳಿಕೆಗಳನ್ನು ನೇರವಾಗಿ ಅಲ್ಲಗೆಳೆಯುವ ಮತ್ತು ಹಿಂದಿನಿಂದಲೂ ಇದ್ದ ಭಾರತದ ದ್ವಿ-ರಾಷ್ಟ್ರ ನೀತಿಯ ನಿಲುವಿಗೆ ವಿರುದ್ಧವಾದ ಮೂರನೇ ವ್ಯಕ್ತಿಯ ಹಸ್ತಕ್ಷೇಪದ ಅಗತ್ಯವಿಲ್ಲ ಎಂಬ ಅಧಿಕೃತ ಹೇಳಿಕೆಯನ್ನು ಇನ್ನೂ ತನಕ ನೀಡಿಲ್ಲವೇಕೆ ಎಂಬುದು ನಮ್ಮ ಪ್ರಶ್ನೆ. ಆಪರೇಷನ್ ಸಿಂಧೂರ್ ಸಂದರ್ಭದಲ್ಲಿ ಭಾರತದ ವಿದೇಶಾಂಗ ನೀತಿಯ ಕುರಿತಾಗಿ ಘಟಿಸಿದ ಈ ಆರು ಬೆಳವಣಿಗೆಗಳನ್ನು ದಿ ವೈರ್ ಪತ್ರಿಕೆಯ ವಿಶ್ಲೇಷಣೆಯು ಇದೇ ಜೂನ್ 7ರಂದು ಪ್ರಕಟವಾಗಿದ್ದು, ಇವು ಭಾರತದ ರಾಜತಾಂತ್ರಿಕತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟಿಸುತ್ತವೆ.
1)ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಡಿ (UNSC) ತಾಲಿಬಾನ್ ನಿರ್ಬಂಧ ಸಮಿತಿಯಲ್ಲಿ ಪಾಕಿಸ್ತಾನವು ಅಧ್ಯಕ್ಷ ಸ್ಥಾನವನ್ನೂ ಹಾಗೂ ಭಯೋತ್ಪಾದನಾ ವಿರೋಧಿ ಸಮಿತಿಯಲ್ಲಿ ಉಪಾಧ್ಯಕ್ಷ ಸ್ಥಾನವನ್ನು ಚೈನಾ ಬೆಂಬಲದಿಂದ ಪಡೆದಿರುತ್ತದೆ.
2) ಡೊನಾಲ್ಡ್ ಟ್ರಂಪ್ ಅವರು ಕದನವಿರಾಮದಲ್ಲಿ ಮಧ್ಯಸ್ಥಿಕೆ ವಹಿಸಿದ್ದರು ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದೃಢಪಡಿಸಿರುತ್ತಾರೆ.
3) ಭಾರತದ ಆಕ್ಷೇಪಣೆಯ ಹೊರತಾಗಿಯೂ ಎಡಿಬಿ, ಐಎಂಎಫ್ ಮತ್ತು ವಿಶ್ವಬ್ಯಾಂಕ್‍ಗಳು ದೊಡ್ಡ ಮೊತ್ತದ ಸಾಲಗಳನ್ನು ಪಾಕಿಸ್ತಾನಕ್ಕೆ ನೀಡಿವೆ.
4)UNSC ಹೇಳಿಕೆಗಳಲ್ಲಿ ಪಾಕಿಸ್ತಾನಿ ಮೂಲದ ಭಯೋತ್ಪಾನೆ ಎಂಬ ನಿರ್ದಿಷ್ಟ ಉಲ್ಲೇಖವನ್ನು ಮಾಡದಂತೆ ತಡೆಯುವಲ್ಲಿ ಚೈನಾ ಪಾಕಿಸ್ತಾನಕ್ಕೆ ಬೆಂಬಲಿಸಿದ ಕಾರಣ ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ರಾಜತಾಂತ್ರಿಕ ಹಿನ್ನಡೆಯಾಗಿರುತ್ತದೆ.
5) ಅಫ್ಘಾನಿಸ್ತಾನ್ ನೆರವಿನಿಂದ ಪಾಕಿಸ್ತಾನದ ಮೇಲೆ ಒತ್ತಡ ತರುವ ಭಾರತದ ಪ್ರಯತ್ನವನ್ನು ಚೈನಾ ತಡೆಯುತ್ತದೆ. ಹೀಗೆ, ಆಪರೇಷನ್ ಸಿಂಧೂರ್ ಸಮಯದಲ್ಲಿ ಮತ್ತು ನಂತರದಲ್ಲಿ ಚೈನಾವು ಪಾಕಿಸ್ತಾನಕ್ಕೆ ನೀಡಿದ ಅನೇಕ ಸಹಾಯಗಳು ಅವರ ನಡುವಿನ ರಾಜತಾಂತ್ರಿಕ ಸಂಬಂಧನ್ನು ಮತ್ತೂ ಗಟ್ಟಿಗೊಳಿಸುವ ಮೂಲಕ ಭಾರತದ ಗಡಿ ಸವಾಲನ್ನು ಹೆಚ್ಚಿಸಿದೆ.
6) ಭಯೋತ್ಪಾನೆಯ ಹಿಂದಿನ ಪಾಕಿಸ್ತಾನಿ ಕೈವಾಡ ಹಾಗೂ ಭಾರತದ ಮೇಲಿನ ನೇರ ದಾಳಿಯ ಮೂಲಕ ಅದು ಪರಿಸ್ಥಿತಿಯ ಉಲ್ಬಣಕ್ಕೆ ಕಾರಣವಾಗಿದ್ದನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಖಂಡನೆಯಾಗುವಂತೆ ಪ್ರಭಾವಿಸಲು ತನ್ನ ಹೆಚ್ಚಿನ ಪ್ರಯತ್ನದ ನಂತರವೂ ಭಾರತವು ಸೋಲುತ್ತದೆ. ಅನೇಕ ದೇಶಗಳು ಭಯೋತ್ಪಾದನೆಯನ್ನು ಸಾಮಾನ್ಯ ರೀತಿಯಲ್ಲಿ ಖಂಡಿಸಿದರೂ, ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್‍ನಂತಹ ವೇದಿಕೆಗಳಲ್ಲಿ ಪಾಕಿಸ್ತಾನವನ್ನು ನೇರವಾಗಿ ಖಂಡಿಸಲಿಲ್ಲ ಮತ್ತು ಕಪ್ಪು ಪಟ್ಟಿಗೆ ಸೇರಿಸಬೇಕೆಂಬ ಭಾರತದ ಬೇಡಿಕೆಯನ್ನು ಬೆಂಬಲಿಸಲಿಲ್ಲ. ಹಲವು ದೇಶಗಳಿಗೆ ಹೋಗಿರುವ ಭಾರತದ ನಿಯೋಗವೂ ಸಹ ಈ ನಿಟ್ಟಿನಲ್ಲಿ ಹೆಚ್ಚಿನದನ್ನು ಸಾಧಿಸಿದಂತೆ ಕಂಡುಬರುವುದಿಲ್ಲ.

ಈ ಮೇಲಿನ ಬೆಳವಣಿಗೆಗಳು ನಮ್ಮ ಸೇನೆಯ ಮಿಲಿಟರಿ ಯಶಸ್ಸಿನ ಹೊರತಾಗಿಯೂ, ಅದನ್ನು ಪಾಕಿಸ್ತಾನ ವಿರುದ್ಧದ ರಾಜತಾಂತ್ರಿಕ ಉಪಯೋಗವನ್ನಾಗಿ ಮಾಡಿಕೊಳ್ಳಲು ಭಾರತವು ಸೆಣಸಾಡಿದೆ ಎನ್ನುತ್ತದೆ ದಿ ವೈರ್ ವಿಶ್ಲೇಷಣೆ. ತುಂಬಲಾಗದ ಈ ರಾಜತಾಂತ್ರಿಕ ನಷ್ಟವನ್ನು ಭಾರತವು ಹೇಗೆ ಸರಿಪಡಿಸಿಕೊಳ್ಳಲಿದೆ ಮತ್ತು ಹೆಚ್ಚಾಗಬಹುದಾದ ಗಡಿ ಸವಾಲುಗಳನ್ನು ಹೇಗೆ ನಿರ್ವಹಿಸಲಿದೆ?
ಆಪರೇಷನ್ ಸಿಂಧೂರ್ ಪಾಕಿಸ್ತಾನಿ ಉಗ್ರಗಾಮಿಗಳ ನೆಲೆಯನ್ನು ಧ್ವಂಸ ಮಾಡಿದ ಮತ್ತು ಪಾಕಿಸ್ತಾನದ ನೇರ ಆಕ್ರಮಣವನ್ನು ಹಿಮ್ಮೆಟ್ಟಿದ ಕಾರ್ಯವೈಖರಿಯನ್ನು ಶ್ಲಾಘಿಸುವ ಜೊತೆಗೆ, ದೂರಗಾಮಿತ್ವದ ಯಾವ ಉದ್ದೇಶವನ್ನು ಆಪರೇಷನ್ ಸಿಂಧೂರ್ ಸಾಧಿಸಿತು ಎಂಬುದು ತಜ್ಞರನೇಕರ ಪ್ರಶ್ನೆಯಾಗಿದೆ. ಇದು ಶಾಶ್ವತವಾಗಿ ಉಗ್ರಗಾಮಿಗಳ ಆಕ್ರಮಣವನ್ನು ತಡೆಯುವಲ್ಲಿ ಯಶಸ್ವಿಯಾಗಿದೆಯೇ? ಯಶಸ್ವಿಯಾಗಿದ್ದಲ್ಲಿ 2016ರ ಸರ್ಜಿಕಲ್ ಸ್ಟ್ರೈಕ್ ಮತ್ತು ಬಾಲಾಕೋಟ್ ದಾಳಿಗಳು ಪಹಲ್ಗಾಮ್ ದಾಳಿಯನ್ನು ತಡೆಯಲಿಲ್ಲವೇಕೆ ಎಂಬುದು ಅನೇಕರ ಪ್ರಶ್ನೆಯಾಗಿದೆ.
ತಮ್ಮ ಜೀವನ ಸಂಗಾತಿಗಳನ್ನು ಕಳೆದುಕೊಂಡ ನೋವಿನ ನಡುವೆಯೂ ಆತ್ಮವಿಶ್ವಾಸದಿಂದ ಬದುಕುತ್ತಿರುವ ಆ ಮಹಿಳೆಯರಿಗೆ ತಾವು ‘ವಿಧವೆ’ ಎಂದು ನೆನಪಿಸುವ ‘ಸಿಂಧೂರ್’ ಎಂಬ ಕೆಂಪು ಮಾತುಗಳನ್ನು ನಿಲ್ಲಿಸಿ, ಅವರ ಪ್ರೀತಿಪಾತ್ರರನ್ನು ಕೊಂದ ಭಯೋತ್ಪಾದಕರನ್ನು ಎಂದು ಹಿಡಿಯುತ್ತಿರಿ ತಿಳಿಸಿ?

ಲತಾಮಾಲ
ಗ್ರಾಮೀಣಾಭಿವೃದ್ಧಿ ತಜ್ಞರು ಮತ್ತು ಲೇಖಕರು