ಅಹಮದಾಬಾದ್ ಹೊರವಲಯದಲ್ಲಿ ಸಂಭವಿಸಿದ ಭೀಕರ ಏರ್ ಇಂಡಿಯಾ ವಿಮಾನ ಅಪಘಾತದ ಬಗ್ಗೆ ಆಘಾತ ಮತ್ತು ದುಃಖ ವ್ಯಕ್ತಪಡಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಕೆಲವು ಪ್ರಯಾಣಿಕರು ಇಂಗ್ಲೆಂಡ್‌ಗೆ ಹೋಗುವ ಆತುರದಲ್ಲಿದ್ದರು ಮತ್ತು ಬೇಗ ಟೇಕ್ಆಫ್ ಆಗುವಂತೆ ಸಿಬ್ಬಂದಿ ಮೇಲೆ ಒತ್ತಡ ಹೇಳಿದ್ದರು ಎಂದು ವರದಿಯಾಗಿವೆ. ಆದ್ದರಿಂದ ಈ ಘಟನೆಯ ಬಗ್ಗೆ ಸುಪ್ರೀಂ ಕೋರ್ಟ್‌ನ ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರು ತನಿಖೆ ನಡೆಸಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ.
ಇದನ್ನು ಓದಿದ್ದೀರಾ? ವಿಮಾನ ದುರಂತ | ಘಟನಾ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ
“ಇದರಲ್ಲಿ ತಾಂತ್ರಿಕ ದೋಷವಿದೆಯೇ? ಪೈಲಟ್ ತಪ್ಪು ಮಾಡಿದ್ದಾರೆಯೇ? ಪ್ರಯಾಣಿಕರ ಒತ್ತಡವಿದೆಯೇ? ಯಾರ ಕಡೆಯಿಂದಾದರೂ ನಿರ್ಲಕ್ಷ್ಯವಿದೆಯೇ? ಈ ಎಲ್ಲಾ ಅಂಶಗಳನ್ನು ಪರಿಶೀಲಿಸಲು ಸರ್ಕಾರವು ಹಾಲಿ ಅಥವಾ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ ತನಿಖೆಗೆ ಆದೇಶಿಸಬೇಕು” ಎಂದು ಖರ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡುತ್ತಾ ಹೇಳಿದ್ದಾರೆ.
Absolutely shocked to know about the devastating Air India plane crash in Ahmedabad, Gujarat where several passengers and crew members were on board.
— Mallikarjun Kharge (@kharge) June 12, 2025
It’s heart-wrenching to see the horrific visuals.
Our heartfelt sympathies, thoughts and prayers with the families of the…
ಇನ್ನು ಇದಕ್ಕೂ ಮೊದಲು ಏರ್ ಇಂಡಿಯಾ ದುರಂತದ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಖರ್ಗೆ ಅವರು, “ಗುಜರಾತ್‌ನ ಅಹಮದಾಬಾದ್‌ನಲ್ಲಿ ಹಲವು ಪ್ರಯಾಣಿಕರು ಮತ್ತು ಸಿಬ್ಬಂದಿ ಇದ್ದ ಏರ್ ಇಂಡಿಯಾ ವಿಮಾನ ಅಪಘಾತದ ಬಗ್ಗೆ ತಿಳಿದು ಆಘಾತವಾಯಿತು. ಇದು ಹೃದಯ ವಿದ್ರಾವಕ ಘಟನೆ. ಪ್ರಯಾಣಿಕರು, ಪೈಲಟ್ ಮತ್ತು ಸಿಬ್ಬಂದಿಗಳ ಕುಟುಂಬಕ್ಕಾಗಿ ನಾವು ಪ್ರಾರ್ಥಿಸುತ್ತೇವೆ” ಎಂದು ಖರ್ಗೆ ಪೋಸ್ಟ್‌ನಲ್ಲಿ ಬರೆದಿದ್ದಾರೆ.
230 ಮಂದಿ ಪ್ರಯಾಣಿಕರು ಮತ್ತು 12 ಮಂದಿ ಸಿಬ್ಬಂದಿಗಳ ದಾರುಣ ಸಾವಿಗೆ ಕಾರಣವಾದ ಅಹಮದಾಬಾದ್ ವಿಮಾನ ದುರಂತ ಕುರಿತು ಈಗಾಗಲೇ ತನಿಖೆ ಆರಂಭವಾಗಿದೆ. ವಿಮಾನ ಅಪಘಾತ ತನಿಖಾ ಬ್ಯೂರೋ ಔಪಚಾರಿಕ ತನಿಖೆಯನ್ನು ಪ್ರಾರಂಭಿಸಿದೆ ಎಂದು ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜರಾಪು ತಿಳಿಸಿದ್ದಾರೆ. ಆದರೆ ಈ ಬಗ್ಗೆ ಹಾಲಿ ಅಥವಾ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಖರ್ಗೆ ಆಗ್ರಹಿಸಿದ್ದಾರೆ.
