ಗುಜರಾತ್ ವಿಮಾನ ದುರಂತದ ಬೆನ್ನಲ್ಲೇ ಬೋಯಿಂಗ್ 787 ವಿಮಾನಗಳ ತಾಂತ್ರಿಕ ದೋಷಗಳ ಬಗ್ಗೆ ಎಚ್ಚರಿಸಿದ್ದ ಎಂಜಿನಿಯರ್ ಜಾನ್ ಬರ್ನೆಟ್ ನಿಗೂಢ ಸಾವು ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ.
ಅಹಮದಾಬಾದ್‌ನಿಂದ ಲಂಡನ್‌ಗೆ ಹಾರಿದ ಏರ್ ಇಂಡಿಯಾದ ಬೋಯಿಂಗ್ 787 ವಿಮಾನ(AI 171) ವಿಮಾನ ಗುರುವಾರ(ಜೂನ್ 12) ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಅಪಘಾತಕ್ಕೀಡಾಗಿದ್ದು, 230 ಮಂದಿ ಪ್ರಯಾಣಿಕರು ಮತ್ತು 12 ಸಿಬ್ಬಂದಿಗಳು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಬೋಯಿಂಗ್‌ನ ಮಾಜಿ ಕ್ವಾಲಿಟಿ ಮ್ಯಾನೇಜರ್(ಗುಣಮಟ್ಟ ಪರಿಶೀಲಿಸುವುದು) ಜಾನ್ ಬರ್ನೆಟ್ ಹಲವು ಬಾರಿ ಕಳವಳ ವ್ಯಕ್ತಪಡಿಸಿದ್ದರು. ಗಡುವಿನೊಳಗಡೆ ವಿಮಾನ ನಿರ್ಮಾಣ ಮಾಡುವ ಒತ್ತಡದಲ್ಲಿ ಕಳಪೆ ಗುಣಮಟ್ಟದ ಭಾಗಗಳನ್ನು ನಿರ್ಮಿಸಿದ್ದಾರೆ ಎಂದು ಜಾನ್ ಆರೋಪಿಸಿದ್ದರು. ಹಾಗೆಯೇ ಶೇಕಡ 25ರಷ್ಟು ಹಾರಾಟದಲ್ಲಿ ತುರ್ತು ಆಮ್ಲಜನಕ ವ್ಯವಸ್ಥೆ ವಿಫಲವಾಗಬಹುದು ಎಂದೂ ಎಚ್ಚರಿಕೆ ನೀಡಿದ್ದರು. ಬೋಯಿಂಗ್ ವಿರುದ್ಧ ಅವರು ಹೂಡಿದ್ದ ಮೊಕದ್ದಮೆಯ ವಿಚಾರಣೆ ನಡೆಯಲಿತ್ತು. ಆದರೆ 2024ರ ಮಾರ್ಚ್‌ನಲ್ಲಿ ದಕ್ಷಿಣ ಕೆರೋಲಿನಾದಲ್ಲಿ ಬರ್ನೆಟ್ ನಿಗೂಢವಾಗಿ ಶವವಾಗಿ ಪತ್ತೆಯಾಗಿದ್ದರು. ಆದರೆ ಪೊಲೀಸರು ಮಾತ್ರ ಇದು ಕೊಲೆಯಲ್ಲ ಆತ್ಮಹತ್ಯೆ ಎಂದು ಹೇಳಿಕೆ ನೀಡಿದ್ದರು.
ಇದನ್ನು ಓದಿದ್ದೀರಾ? ಊಟ ಮಾಡುತ್ತಿದ್ದಾಗಲೇ ಹಾಸ್ಟೆಲ್ ಮೇಲೆ ಬಿದ್ದ ವಿಮಾನ; 7 ವೈದ್ಯಕೀಯ ವಿದ್ಯಾರ್ಥಿಗಳ ಸಾವು
ಬೋಯಿಂಗ್ 787 ವಿಮಾನದಲ್ಲಿರುವ ಹಲವು ತಾಂತ್ರಿಕ ಸಮಸ್ಯೆಗಳ ಬಗ್ಗೆ ಬೋಯಿಂಗ್ ಎಂಜಿನಿಯರ್ ಸ್ಯಾಮ್ ಸಲೆಹ್‌ಪೋರ್, ಜಾನ್ ಬರ್ನೆಟ್ ಮತ್ತು ಸ್ಪಿರೀಟ್ ಏರೋಸಿಸ್ಟಮಮ್ಸ್‌ನ ಗುತ್ತಿಗೆದಾರ ರಿಚರ್ಡ್ ಕ್ಯೂವಾಸ್ ಹಲವು ಬಾರಿ ಪ್ರಸ್ತಾಪಿಸಿದ್ದರು. ಈ ದೋಷಗಳ ಬಗ್ಗೆ ಬಹಿರಂಗವಾಗಿ ಪ್ರಶ್ನಿಸಿದ ಅವರನ್ನು ಬೆದರಿಸಲಾಗಿತ್ತು ಎಂದಿದ್ದರು. ಈ ಪೈಕಿ ಎಂಜಿನಿಯರ್ ಜಾನ್ ಬರ್ನೆಟ್ 2024ರ ಮಾರ್ಚ್ ತಿಂಗಳಲ್ಲಿ ನಿಗೂಢವಾಗಿ ಮೃತಪಟ್ಟಿದ್ದರು.
ಬೋಯಿಂಗ್ ಸಂಸ್ಥೆಯು 787 ಡ್ರೀಮ್ ಲೈನರ್ ಸಿರೀಸ್ ವಿಮಾನಗಳನ್ನು 2007ರಲ್ಲಿ ಪರಿಚಯಿಸಿದೆ. ಬೋಯಿಂಗ್ 777ಗಿಂತ ಹೆಚ್ಚು ಇಂಧನ ಸಾಮರ್ಥ್ಯ ಹೊಂದಿರುವ ಬೋಯಿಂಗ್ 787 ವಿಮಾನವು 2009ರ ಡಿಸೆಂಬರ್‌ನಲ್ಲಿ ಮೊದಲ ಬಾರಿಗೆ ಹಾರಾಟ ಆರಂಭಿಸಿದೆ. ಮೊದಲು ವಾಣಿಜ್ಯ ಬೋಯಿಂಗ್ 787 ಹಾರಾಟ 2012ರಲ್ಲಿ ಪ್ರಾರಂಭವಾಗಿದೆ. 2014ರಲ್ಲಿ ಏರ್ ಇಂಡಿಯಾ ಬೋಯಿಂಗ್ 787 ವಿಮಾನವನ್ನು ಖರೀದಿಸಿದೆ. ಅದಾದ ಬಳಿಕ ನಿರಂತರವಾಗಿ ಹಲವು ಸಮಸ್ಯೆಗಳು ಕಂಡುಬಂದಿವೆ.
ವಿಮಾನದಲ್ಲಿನ ಸಮಸ್ಯೆ ಬೊಟ್ಟು ಮಾಡಿದವರು
ಬೋಯಿಂಗ್ ಎಂಜಿನಿಯರ್ ಸ್ಯಾಮ್ ಸಲೆಹ್‌ಪೋರ್ ಕೂಡಾ ಬೋಯಿಂಗ್‌ನಲ್ಲಿರುವ ಸಮಸ್ಯೆಗಳ ಬಗ್ಗೆ ಬೊಟ್ಟು ಮಾಡಿದ್ದರು. ಸುಮಾರು 17 ವರ್ಷಗಳ ಅನುಭವವಿರುವ ಅವರು ವಿಮಾನಗಳನ್ನು ಸರಿಯಾಗಿ ಜೋಡಿಸಿಲ್ಲ ಎಂದು ಆರೋಪಿಸಿದ್ದರು. ಕಾರ್ಮಿಕರು ಒತ್ತಡದಿಂದಾಗಿ ವಿಮಾನದ ಭಾಗಗಳನ್ನು ಸರಿಯಾಗಿ ಜೋಡಿಸಿಲ್ಲ. ಇದರಿಂದಾಗಿ ಬಿರುಕುಗಳು ಉಂಟಾಗುವ ಸಾಧ್ಯತೆಯಿದೆ ಎಂದಿದ್ದರು. ಅವರು ಹೇಳಿದಂತೆ ಹಲವು ಬಾರಿ ಬೋಯಿಂಗ್ 787 ವಿಮಾನದ ವಿಂಡ್‌ಶೀಲ್ಡ್‌ನಲ್ಲಿ ಬಿರುಕು ಕಂಡುಬಂದಿದೆ. 29 ವಿಮಾನಗಳ ತಪಾಸಣೆ ಮಾಡಿದ್ದು ಈ ಪೈಕಿ ಶೇಕಡ 98.7ರಷ್ಟು ವಿಮಾನಗಳಲ್ಲಿ ಹೆಚ್ಚಿನ ಅಂತರಗಳಿವೆ ಎಂದೂ ಹೇಳಿದ್ದರು. ಈ ಎಲ್ಲ ಆರೋಪಗಳನ್ನು ಆಂತರಿಕವಾಗಿ ನಿರಾಕರಿಸಲಾಗಿದೆ ಮತ್ತು ಈ ವಿಷಯದ ಬಗ್ಗೆ ಮತ್ತೊಮ್ಮೆ ಮಾತನಾಡದಂತೆ ಎಚ್ಚರಿಸಲಾಗಿದೆ ಎಂದಿದ್ದರು.
ಇದನ್ನು ಓದಿದ್ದೀರಾ? ಅಹಮದಾಬಾದ್ ವಿಮಾನ ಪತನ: ಮಂಗಳೂರು ಮೂಲದ ಕೋ ಪೈಲಟ್ ಸಾವು
ಸ್ಪಿರಿಟ್ ಏರೋಸಿಸ್ಟಮ್ಸ್‌ನ ಗುತ್ತಿಗೆದಾರರಾದ ರಿಚರ್ಡ್ ಕ್ಯೂವಾಸ್ ವಿಮಾನದಲ್ಲಿ ಅಸಮರ್ಪಕವಾಗಿ ರಂಧ್ರಗಳನ್ನು ಕೊರೆಯಲಾಗುತ್ತಿದೆ ಎಂದು ದೂರಿದ್ದರು. 2023ರಲ್ಲಿ ಬೋಯಿಂಗ್ ಮತ್ತು ಸ್ಪಿರಿಟ್ ಏರೋಸಿಸ್ಟಮ್ಸ್‌ನ ಸಮಸ್ಯೆ ಬಗ್ಗೆ ಧ್ವನಿ ಎತ್ತಿದ್ದರು. ಆದರೆ 2024ರ ಆರಂಭದಲ್ಲೇ ಅವರನ್ನು ವಜಾಗೊಳಿಸಲಾಗಿದೆ. ‘ತಾನು ಮಾಡಿದ ಆರೋಪಕ್ಕಾಗಿ ಪ್ರತೀಕಾರ ತೀರಿಸಿಕೊಳ್ಳಲಾಗುತ್ತಿದೆ’ ಎಂದು ಆರೋಪಿಸಿ ರಿಚರ್ಡ್ ಕ್ಯೂವಾಸ್ ಎರಡು ಯುಎಸ್ ಏಜೆನ್ಸಿಗಳಿಗೆ ದೂರುಗಳನ್ನು ಸಲ್ಲಿಸಿದ್ದರು.
ಬೋಯಿಂಗ್ ವಿಮಾನದಲ್ಲಿನ ಸಮಸ್ಯೆಗಳು
ಬೋಯಿಂಗ್ 787-8 ಡ್ರೀಮ್‌ಲೈನರ್ 248 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯದ ವಿಮಾನ. ಇಂಧನ ಬಳಕೆಯನ್ನು 25% ರಷ್ಟು ಕಡಿಮೆ ಮಾಡುತ್ತದೆ. ಆದರೆ ಈ ವಿಮಾನದಲ್ಲಿ ಹಲವು ಸಮಸ್ಯೆಗಳು ಇರುವುದು ಹಲವು ಬಾರಿ ರುಜುವಾತಾಗಿದೆ. ಇತ್ತೀಚೆಗೆ 2024ರ ಡಿಸೆಂಬರ್‌ನಲ್ಲಿ ನವದೆಹಲಿಯಿಂದ ಬರ್ಮಿಂಗ್‌ಹ್ಯಾಮ್‌ಗೆ ಪ್ರಯಾಣಿಸುತ್ತಿದ್ದ AI-113 ವಿಮಾನದಲ್ಲಿ ಸೋರಿಕೆ ಕಾಣಿಸಿಕೊಂಡಿತ್ತು.
ವಿಮಾನ ಆರಂಭವಾದ ಎರಡು ವರ್ಷಗಳಲ್ಲಿ ಅಂದರೆ 2013ರ ಮಾರ್ಚ್‌ನಲ್ಲಿ ಜಪಾನ್ ಏರ್‌ಲೈನ್ಸ್ 787 ವಿಮಾನದಲ್ಲಿ ಎರಡು ಬಾರಿ ಇಂಧನ ಸೋರಿಕೆ ಕಂಡುಬಂದಿದ್ದು, ಹಾರಾಟ ನಿಲ್ಲಿಸಲಾಗಿತ್ತು. ಹಾಗೆಯೇ ಯುನೈಟೆಡ್ ಏರ್‌ಲೈನ್ಸ್‌ನ ಬೋಯಿಂಗ್ 787 ವಿಮಾನದಲ್ಲಿ ಬ್ಯಾಟರಿಗಳ ಸಮಸ್ಯೆ ಕಂಡುಬಂದಿದೆ. ಈ ಬಗ್ಗೆ ಸಮಗ್ರ ಪರಿಶೀಲನೆ ನಡೆಸುವ ನಿಟ್ಟಿನಲ್ಲಿ ಎರಡೂ ವಿಮಾನಯಾನ ಸಂಸ್ಥೆಗಳು ಬೋಯಿಂಗ್ 787 ವಿಮಾನ ಹಾರಾಟ ನಿಲ್ಲಿಸಿವೆ.
ಇನ್ನು ಭಾರತದಲ್ಲಿ ಹೆಚ್ಚಿನ ಮಟ್ಟದ ಗುಡುಗು ಸಹಿತ ಮಳೆ ಇರುವಾಗ ಈ ವಿಮಾನವನ್ನು ಹಾರಿಸದಂತೆ ಏರ್ ಇಂಡಿಯಾಗೆ ಬೋಯಿಂಗ್ ಸಲಹೆ ನೀಡಿತ್ತು. ಇದರಿಂದಾಗಿ ದೆಹಲಿ-ಟೋಕಿಯೊ ಮಾರ್ಗದಲ್ಲಿ ಬೋಯಿಂಗ್ 787 ಹಾರಾಟ ನಿಲ್ಲಿಸಲಾಗಿತ್ತು. ಏರ್ ಇಂಡಿಯಾ ದೆಹಲಿ-ಕೋಲ್ಕತ್ತಾ 787 ವಿಮಾನದ ವಿಂಡ್‌ಶೀಲ್ಡ್ ಬಿರುಕು ಬಿಟ್ಟಿರುವ ಘಟನೆಯೂ ನಡೆದಿತ್ತು. ಹಾರಾಟ ಆರಂಭಿಸಿದ 14 ತಿಂಗಳಲ್ಲೇ ಏರ್ ಇಂಡಿಯಾ ಬೋಯಿಂಗ್ 787ನಲ್ಲಿ 136 ಸಣ್ಣ ದೋಷಗಳು ಕಾಣಿಸಿಕೊಂಡಿತ್ತು.
2015ರಿಂದ 2024ರ ನಡುವೆ ಏರ್ ಇಂಡಿಯಾ ಬೋಯಿಂಗ್ 787 ವಿಮಾನಗಳಲ್ಲಿ ಎಂಜಿನ್ ಸ್ಥಗಿತ, ಹಾರಾಟದ ವೇಳೆ ನಿಯಂತ್ರಣ ಮಾಡಲು ಸಮಸ್ಯೆ, ಗೇರ್ ಸಮಸ್ಯೆ, ಕ್ಯಾಬಿನ್ ಒಳಗೆ ಹೊಗೆ, ವಿಂಡ್‌ಶೀಲ್ಡ್ ಬಿರುಕು ಬಿಡುವುದು, ಟೈರ್ ಸಿಡಿಯುವುದು, ಹೈಡ್ರಾಲಿಕ್ ಸೋರಿಕೆ ಸೇರಿದಂತೆ 32 ಘಟನೆಗಳು ವರದಿಯಾಗಿವೆ. ಇಷ್ಟೆಲ್ಲ ಸಮಸ್ಯೆಗಳು ಇರುವಾಗ ಈ ವಿಮಾನ ಹಾರಾಟ ನಿಲ್ಲಿಸುವ ಬದಲಾಗಿ ಅದೇ ವಿಮಾನದ ಬಳಕೆ ಮುಂದುವರೆಸಿದ್ದು, ಸದ್ಯ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
