ದೇವುಡು ಅವರ ಕತೆ | ಮೂರು ಕನಸು

Date:

Advertisements
ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.

ಸುಮಾರು ಮಧ್ಯಾಹ್ನ ಮೂರು ಗಂಟೆಯಾಗಿರಬಹುದು. ಕಿಟ್ಟಮ್ಮನು ಸುಬ್ಬಯ್ಯನ ರಂಗವಿಲಾಸ ಕ್ಲಬ್ಬಿನ ಹಿಂದುಗಡೆಯ ಭಾಗದಲ್ಲಿ ದೋಸೆಯ ಹಿಟ್ಟು ತಿರುವುತ್ತಾ ಕುಳಿತಿದ್ದಾಳೆ. ಒಳ್ಳೆಯ ಬಿಸಿಲು ಹೊತ್ತು. ಮೇಲುಗಡೆ ನೆರಳಿಗೆಂದು ಹೊದಿಸಿದ್ದ ಜಿಂಕ್‌ಷೀಟ್ ಕಾದು ಆ ಸುತ್ತಮುತ್ತಲೆಲ್ಲಾ ಕುಂಬಾರನ ಆವಿಗೆಯಂತೆ ಆಗಿದೆ. ಕಿಟ್ಟಮ್ಮನಿಗೆ ಬಿಸಿಲಿನ ಝಳದ ಜೊತೆಗೆ ಜಿಂಕ್‌ಷೀಟ್‌ನ ಹಬೆ. ಸಾಲದ್ದಕ್ಕೆ ಕೆಲಸದ ಆಯಾಸವೂ ಸೇರಿ ಬೆವರು ದಡುಗುಟ್ಟಿಕೊಂಡು ಹರಿಯುತ್ತಿದೆ. ಎಡಗೈಯೋ ಬಲಗೈಯೋ ಅಂತೂ ಯಾವ ಕೈಯು ಬಿಡುವಾಗಿದ್ದರೆ ಆ ಕೈಯಿಂದ ಬೆವರನ್ನು ಒರಸಿಕೊಳ್ಳುತ್ತಾ ಗುಂಡನ್ನು ತಿರುವುತ್ತಿದ್ದಾಳೆ. ಮೈಬೆವರು ದೋಸೆಯ ಹಿಟ್ಟಿಗೆ ಬೀಳಬಾರದು ಎಂಬ ಯೋಚನೆಯು ಕಿಟ್ಟಮ್ಮನಿಗೆ ಅಷ್ಟಾಗಿ ಇದ್ದಂತಿಲ್ಲ. ಅಂತೂ ರಂಗವಿಲಾಸದ ದೋಸೆ ಬೇರೆ ಅಂಗಡಿಗಳ ದೋಸೆಗಳಿಗಿಂತ ರುಚಿಯಾಗೇನೋ ಇರುತ್ತಿತ್ತು. ಎಲ್ಲರೂ “ಸುಬ್ಬಯ್ಯನು ದೋಸೆ ಹಿಟ್ಟಿಗೆ ಕೋಳಿ ಮೊಟ್ಟೆ ಹಾಕುತ್ತಿದ್ದ, ಅದರಿಂದಲೇ ಅಷ್ಟು ರುಚಿ” ಎಂದುಕೊಳ್ಳುತ್ತಿದ್ದರು. ಅಥವಾ ಹಿಟ್ಟು ತಿರುವವರ ಬೆವರಿನಲ್ಲಿ ದೋಸೆಯನ್ನು ರುಚಿಮಾಡುವ ಗುಣವಿತ್ತೇನೋ ಯಾರು ಬಲ್ಲರು?

ಮೂರು ಗಂಟೆ ಹೊಡೆಯಿತು. ಅವಳು ಎದ್ದು ಹೋಗಿ ಗಡಿಯಾರ ನೋಡಿದಳು. ಸುಬ್ಬಯ್ಯನು “ಏನು ಕಿಟ್ಟಮ್ಮ? ಆಗಲೇ ಗಡಿಯಾರ ನೋಡುತ್ತಿದ್ದಿಯೇ? ನಾಳಿಗೆ ಜಹಾಂಗೀರ್ ಆಗಬೇಕು. ಇವೊತ್ತೇ ಬೇಳೆ ಹಾಕಿಸಿದ್ದೇನೆ, ತಿರುವಿಟ್ಟು ಹೋಗು” ಎಂದನು. ಕಿಟ್ಟಮ್ಮನು ಮಾಡುತ್ತಿದ್ದ ಕೆಲಸವೇನೋ ದೋಸೆಯ ಹಿಟ್ಟು ತಿರುವುವುದು. ಆದರೂ ಅವಳೇ ಆ ಕ್ಲಬ್ಬಿನ ಯಜಮಾನಿಯಾಗಿದ್ದರೆ ಹೇಗೋ ಹಾಗೆ ಕತ್ತುಗಿತ್ತು ಸೊಟ್ಟ ಮಾಡಿಕೊಂಡು “ಇಲ್ಲರೀ ಇವತ್ತು ನಮ್ಮ ಹುಡುಗ ಬರುತ್ತಾನೆ. ಅವನಿಗೆ ಏನಾದರೂ ತಿಂಡಿಗಿಂಡಿ ಮಾಡಿಕೊಡಬೇಕು. ಅವನು ನಾಲ್ಕು ಗಂಟೆಗೆ ಹೊರಟು ಹೋಗುತ್ತಾನೆ. ಬೇಕಾದರೆ ಹೋಗಿ ಮತ್ತೆ ಆರು ಗಂಟೆಗೆ ಬರುತ್ತೇನೆ” ಎಂದಳು. ಮಾಲೀಕನಿಗೆ ಕೋಪ ಬಂತು. ತನ್ನ ಮಾತಿಗೆ ಪ್ರತಿ ಹೇಳಿದಳಲ್ಲಾ ಎನ್ನಿಸಿತು. ಆದರೂ ಕಿಟ್ಟಮ್ಮ ಕತ್ತೆ ಹಾಗೆ ದುಡಿಯುವುದು ಮಾತ್ರವೇ ಅಲ್ಲದೆ, ದೋಸೆಯ ಹಿಟ್ಟು ತಿರುವುದರಲ್ಲಿ ಮೈಸೂರಿನಲ್ಲೇ ಅವಳ ಸಮ ಇರಲಿಲ್ಲ. ಅದರಿಂದ ಬೇರೆ ಮಾತಾಡದೆ “ನಿನ್ನ ಇಷ್ಟ ಬಂದಹಾಗೆ ಮಾಡು. ಯಾವೊತ್ತು ತಾನೆ ನಾನು ಆಡಿದ ಮಾತಿಗೊಂದು ಮಾತು ಜೋಡಿಸದೆ ಬಿಡೋದು” ಎಂದ ತಾನು ಬಾಂಡ್ಲಿಯ ಕಡೆಗೆ ತಿರುಗಿದ. ಕಿಟ್ಟಮ್ಮ ದುರದುರನೆ ನೋಡಿದಳು. ಆ ಕಣ್ಣಿನಿಂದ ಹೊರಬಿದ್ದ ನೋಟದಲ್ಲಿದ್ದ ಬೆಂಕಿಯ ಕಾವೇ ಏನೋ ಆ ವಡೆಗಳನ್ನೆಲ್ಲ ಕೊಂಚ ಹೆಚ್ಚು ಬೇಯಿಸಿ ಕಪ್ಪು ಮಾಡಿದ್ದುದು.

ಇದನ್ನು ಓದಿದ್ದೀರಾ?: ಭಾರತೀಪ್ರಿಯ ಅವರ ಕತೆ | ಒಂದು ಹಳೆಯ ಕತೆ

Advertisements

ಕಿಟ್ಟಮ್ಮನು ಅಲ್ಲಿಂದ ಬಂದು ಒರಳಲ್ಲಿದ್ದ ಹಿಟ್ಟು ಮುಗಿಸಿ ತೆಗೆದಿಟ್ಟು ಹೊರಟಳು. ಸುಮಾರು ಮೂರುಕಾಲು ಗಂಟೆಯಾಗಿರಬಹುದು. ಅವಳಿಗೆ ಅವಸರ. “ಆ ನನ್ನಪ್ಪ ಸ್ಕೂಲಿನಿಂದ ಈ ಬಿಸಿಲಿನಲ್ಲಿ ಹೇಗೆ ಬರುತ್ತಾನೋ, ಆ ಕಾಲು ಎಷ್ಟು ಉರಿಯುತ್ತೋ, ದೇವರೇ, ಏನು ಬಿಸಿಲಪ್ಪ, ಇದರ ಮನೆ ಉರಿದುಹೋಗ” ಎಂದು ದಾರಿಯುದ್ದಕ್ಕೂ ಬಿಸಿಲಿಗೆ ಶಾಪ ಹಾಕುತ್ತಾ ಬಂದಳು. ಮನೆಯ ಹತ್ತಿರ ಬರುತ್ತಿದ್ದ ಹಾಗೆಯೇ ಒಂದು ಯೋಚನೆ ಬಂತು, ”ಇರಲಿ” ಎಂದುಕೊಂಡು ತನ್ನ ಹೃದಯದ ಆಲೋಚನೆಯಿಂದ ಆದ ಆನಂದದ ಅನುಭವದಿಂದ ಸಣ್ಣಗೆ ನಗುತ್ತಾ, ಆ ನಗುವಿನ ತಂಪಿನಲ್ಲಿ ಬಿಸಿಲಿನ ಬೇಗೆಯನ್ನು ಮರೆತು ಮನೆಗೆ ಬಂದಳು.

ಸುಮಾರು ನಾಲ್ಕು ಗಂಟೆಯಾಯಿತು. ಸುಬ್ಬ ಬಂದಿಲ್ಲ. ಕಿಟ್ಟಮ್ಮನು ಗಳಿಗೊಂದು ಸಲ ಬಾಗಿಲ ಕಡೆ ನೋಡುತ್ತಾಳೆ. ಆಗಾಗ ಎದ್ದು ಹೋಗಿ ಬಾಗಿಲಲ್ಲಿ ನಿಂತು ಅವನು ಬರುವ ಹಾದಿಯ ಕಡೆ ನೋಡುತ್ತಾಳೆ. ಹೀಗಿರುವಾಗ ಇನ್ನೊಬ್ಬ ಮುದುಕಿ ಬಂದಳು. ಅವಳೂ ಕಿಟ್ಟಮ್ಮನ ಗೆಳತಿ. ಕಿಟ್ಟಮ್ಮನಿಗೆ ಈ ಲೋಕದಲ್ಲಿ ಬಂಧುಬಾಂಧವರು ಯಾರೂ ಇರಲಿಲ್ಲ. ಅವಳ ಗಂಡ ಹದಿನೈದು ವರ್ಷದ ಕೆಳಗೆ ಸತ್ತಾಗ ನೆಂಟರಿಷ್ಟರೆಲ್ಲ ಮುಂದೆ ಬಂದರು. ಆಸ್ತಿ ಇರುವವರೆಗೆ ಆ ಕಾಗೆಯ ಬಳಗ ನಲಿದು ನರ್ತಿಸುತ್ತಿದ್ದು ಆಸ್ತಿಯು ಮುಗಿಯುತ್ತಲೂ ಎಲ್ಲಿಯದಲ್ಲೆ ಮಂಗಮಾಯವಾಯಿತು. ಅಂದಿನಿಂದ ಯಾವಾಗಲಾದರೊಬ್ಬ ದೂರದ ನೆಂಟನು ತನಗೆ ಬೇಕಾದಾಗ ಇವಳನ್ನು ಹುಡುಕಿಕೊಂಡು ಬರುವನು. ಅವಳ ಹತ್ತಿರ ತಿಂದು ತೇಗಿ, ಕೊನೆಗೆ ಇವಳನ್ನೇ ಬಾಯಿತುಂಬ ಬೈದು ಎದ್ದು ಹೋಗುವನು. ಬಳಗೆ ಬೇಕಾದ ಹಾಗೆ ಇದ್ದರೂ ಹುಟ್ಟಿದರೆ ಒಬ್ಬೊಟ್ಟಿನ ಚೂರಿಲ್ಲ, ಸತ್ತರೆ ವಡೆ ಚೂರಿಲ್ಲ. ಇವಳಿಗೆ ಅದೇ ಸಂಕಟ. ಇಷ್ಟಾದರೂ ಯಾರಾದರೂ ನೆಂಟರು ಎಂದು ಬಂದರೆ ಕಿಟ್ಟಮ್ಮನಿಗೆ ಚತುರ್ಭುಜ.

ಆ ಮುದುಕಿ ಕಿಟ್ಟಮ್ಮನಿಗೆ ಗೆಳತಿಯೋ, ಇವಳು ಆ ಮುದುಕಿಗೆ ಗೆಳತಿಯೋ ದೇವರು ಬಲ್ಲ. ಅಂತೂ ಅವಳು ಆಗಾಗ ಕಿಟ್ಟಮ್ಮನನ್ನು ಹುಡುಕಿಕೊಂಡು ಬರುವಳು. ಮನೆಯಲ್ಲಿ ಮಕ್ಕಳು ಮೊಮ್ಮಕ್ಕಳು ಬೇಕಾದ ಹಾಗೆ ಬಾಳುತ್ತಿದ್ದರೂ ಮುದುಕಿಗೆ ಮಾತ್ರ ಇವಳ ಮನೆಗೆ ಬಂದು ಕೂತುಕೊಂಡು ಹರಟದಿದ್ದರೆ ತೃಪ್ತಿಯಿಲ್ಲ. ಆದ್ದರಿಂದ ಆ ‘ಬಾತಖಾನಿ’ ಮುದುಕಿಗೆ ತನ್ನ ಮಾತು ಕೇಳುವವರು ಒಬ್ಬರು ಬೇಕು. ಕಿಟ್ಟಮ್ಮನಿಗೆ ತನಗೆ ಒಂದೆರಡಾದರೂ ಒಳ್ಳೆಯ ಮಾತು ಆಡುವವರು ಒಬ್ಬರು ಬೇಕು. ಅದರಿಂದ ಇಬ್ಬರಿಗೂ ಗಂಟುಬಿದ್ದಿತು. ಕಿಟ್ಟಿಮ್ಮನು ಮನೆಗೆ ಬರುವಾಗ ತಪ್ಪದೆ ಏನಾದರೂ ಹಣ್ಣನ್ನು ತರುವಳು. ಒಂದು ಸೇರು ಅಕ್ಕಿ ತಿರುವಿದರೆ ಒಂದು ದುಡ್ಡು ಬರುವುದು. ಆ ಒಂದು ದುಡ್ಡಿನಲ್ಲಿ ಮೂರು ಕಾಸು ಮುದುಕಿಯ ವಳ್ಳೆಯ ಮಾತಿಗೆ ಮೀಸಲು. ಕಿಟ್ಟಮ್ಮನ ಮಾತಿನಲ್ಲಿ ಹೇಳಬೇಕು ಎಂದರೆ, ಮುದುಕಿಯ ಸ್ನೇಹದ ಬೆಲೆ ದಿನಕ್ಕೊಂದು ಸೇರು ಅಕ್ಕಿಯನ್ನು ತಿರುವುವುದು.

ಇದನ್ನು ಓದಿದ್ದೀರಾ?: ಬಾಗಲೋಡಿ ದೇವರಾಯ ಅವರ ಕತೆ | ಅವರವರ ಸುಖದುಃಖ

ಕಿಟ್ಟಮ್ಮನು ಮುದುಕಿಯನ್ನು ತನ್ನ ಅಂತರಂಗದ ಗೆಳತಿಯನ್ನಾಗಿ ಮಾಡಿಕೊಂಡಿದ್ದಳು. ತನ್ನ ಒಳ್ಳೆಯದು ಕೆಟ್ಟದೆಲ್ಲ ಅವಳೊಡನೆ ಹೇಳಿಕೊಳ್ಳುವಳು. ತಾನು ಗಂಡನ ಜೊತೆಯಲ್ಲಿ ಸಂಸಾರ ಮಾಡುತ್ತಿದ್ದಾಗ ತನಗಿದ್ದ ವೈಭವ, ಆ ಮುದಿ ಗಂಡನು ತನ್ನ ಮೇಲೆ ಇಟ್ಟುಕೊಂಡಿದ್ದ ಪ್ರೇಮ, ತನಗೆ ಮಗುವಾದಾಗ ಆ ವರ್ಷವೆಲ್ಲ ಹಬ್ಬಗಳನ್ನು ಮಾಡಿದ ಸಂಭ್ರಮ, ಇವುಗಳನ್ನೆಲ್ಲ ಹೇಳುವುದರ ಜೊತೆಗೆ ತನ್ನ ಅಂತರಂಗದಲ್ಲಿ ಆಗಾಗ ತಲೆದೋರುತ್ತಿದ್ದ ಸಂಸಾರದ ಆಶೆಗಳು, ಗಂಡನ ಯೋಚನೆ, ಎಲ್ಲವನ್ನೂ ಹೇಳುವಳು. ಒಂದೊಂದು ದಿನ “ಏನಜ್ಜಿ? ಈ ಮುಂಡೆತನ ಯಾವ ಮುಂಡೇ ಮಗ ಮಾಡಿದ ಅಜ್ಜಿ! ಮೊದಲು ಈ ಹಣೆಯ ಮೇಲೆ ಇಷ್ಟಗಲ ಕುಂಕುಮವಿದ್ದರೆ ಶುಭವಂತೆ, ಶುಭಕ್ಕೆ ಆಗಬಹುದಂತೆ. ಅದು ಹೋದರೆ ಈ ಜನ್ಮ ಒಡೆದ ಮಡಿಕೆಯಾಗಿ ಹೋಯಿತಂತೆ. ಹೋದ ಗಂಡ ಅರಿಶಿನ ಕುಂಕುಮ ಮಾತ್ರ ಅಳಿಸಿ ಹೋಗ್ತಾನೆ. ಮನಸ್ಸಿನಲ್ಲಿರೋ ಆಶೆಗಳನ್ನೆಲ್ಲ ಅಳಿಸಿ ಹೋಗ್ತಾನೆಯೇ?” ಎನ್ನುವಳು. ಮುದುಕಿ “ನೋಡೇ, ಕಿಟ್ಟಮ್ಮ ಈಗ ನಿನಗೆ ಮೈಲಿ ಹುಳಿರಕ್ತ, ಏನೇನೋ ಚಪಲ ಆಗುತ್ತೆ. ನೀನು ನನ್ನ ಹಾಗೆ ಆಗು! ಆಗ ಈಗ ಮಾಡಿರೋದೆ ಸರಿ ಅನ್ನಿಸುತ್ತೆ. ಏನು ಮಾಡೋದೆ? ನಮ್ಮ ಪ್ರಾಚೀನ” ಎಂದು ವೇದಾಂತ ಹೇಳುವಳು.

ಕಿಟ್ಟಮ್ಮನಿಗೆ ಒಂದೊಂದು ಸಲ ಈ ವೇದಾಂತ ಕೇಳಿ ರೇಗಿಹೋಗುವುದು. ”ಸುಮ್ಮನಿರು ಅಜ್ಜಿ, ನಮ್ಮ ಅಪ್ಪ ಅಮ್ಮ ಅಜ್ಜಿ ಅಜ್ಜ ಕೂಡ ಸಂಸಾರ ಮಾಡಿಕೊಂಡಿರುವಾಗ ನಾವು ಮಾತ್ರ ಉಸ್ಸಪ್ಪಾ ಅಂತ ಕಣ್ಣೀರು ಸುರಿಸಿಕೊಂಡು ಒಂಟಿಯಾಗಿ ಬಾಳಬೇಕು. ನಮಗೇನು ಹುಟ್ಟುತ್ತಲೇ ದೇವರು ಈ ಮುಂಡೆತನ ಮಡಿಲಲ್ಲಿ ಕಟ್ಟೆ ಕಳಿಸಿದನೇ? ಹಾಗಿದ್ದರೆ ಮೊದಲಿನಿಂದ ನಮಗೇಕೆ ಅರಳು ಅವಲಕ್ಕಿ ಅಭ್ಯಾಸ ಮಾಡಿಸಬಾರದು?” ಎಂದು ಇನ್ನೂ ಏನೇನೋ ಹೇಳುವಳು. ಆಗ ಮುದುಕಿಯೂ ಸೋಲದೆ ಎಲ್ಲೆಲ್ಲಿಯದೋ ಕಥೆಗಳನ್ನೆಲ್ಲಾ ಹೇಳುವಳು; ಧರ್ಮ ಕರ್ಮ ವೇದಾಂತ ಏನೇನೋ ತಂದು ಕಿಟ್ಟಮ್ಮನಿಗೆ ಸಮಾಧಾನ ಹೇಳುವಳು.

ಇದನ್ನು ಓದಿದ್ದೀರಾ?: ಮೇವುಂಡಿ ಮಲ್ಲಾರಿ ಅವರ ಕತೆ | ಸುರಸುಂದರಿ

ಇನ್ನೊಂದೊಂದು ದಿನ ಕಿಟ್ಟಮ್ಮನಿಗೆ ಮುದುಕಿಯ ಕಥೆ ಕೇಳಿ ನಗು ಬರುವುದು. ಆಗ ಸಣ್ಣಗೆ ನಗುತ್ತಾ ”ಅಜ್ಜಿ, ಇಪ್ಪತ್ತು ಇಪ್ಪತ್ತೈದು ವರ್ಷದ ಕೆಳಗೆ, ನೀನು ನೋಡುವುದಕ್ಕೆ ಬಹಳ ಮುದ್ದಾಗಿದ್ದೆಯಲ್ಲವೇ?” ಎನ್ನುವಳು. ಮುದುಕಿಗೆ ಸಂತೋಷವಾಗಿ “ಬಿಡೇ ಕಿಟ್ಟು, ಈಗ್ಯಾಕೆ ಆ ಮಾತು. ನಾನು ನಲವತ್ತು ವರ್ಷದ ಮುದುಕಿಯಾದಾಗಲೂ ಅವಳ್ಯಾವಳೇ ಅವಳು ಹದಿನಾರು ವರ್ಷದ ಹುಡುಗಿ ನನ್ನ ಹಾಗೆ ಇದ್ದವಳು? ಅದಿರಲಿ ಕಿಟ್ಟು, ಈ ಬೀದೀಲಿ ಹೋಗೋ ಅದ್ಯಾವ ಗಂಡಸೇ ನನ್ನ ತಿರುಗಿ ನೋಡದೆ ಹೋಗುತ್ತಿದ್ದವನು? ಹುಂ ಬಿಡು. ಅದೇ ಒಂದು ಕಾಲ ಆಯ್ತು!” ಎಂದು ತನ್ನ ರೂಪ ಲಾವಣ್ಯಗಳನ್ನು ಹೊಗಳಿಕೊಳ್ಳುವಳು. ಕಿಟ್ಟಮ್ಮನ ತುಂಟತನ ಇನ್ನೂ ಮುಂದೆ ಹೋಗಿ “ಅಲ್ಲ ಕಾಣಜ್ಜಿ, ನನ್ನ ಕಣ್ಣಾಣೆ, ನಿಜ ಹೇಳು, ನೀನು ನಿನ್ನ ಗಂಡ ಹೋದ ಮೇಲೆ ನೇರವಾಗಿದ್ಯಾ?” ಎಂದುಬಿಡುವಳು. ಮುದುಕಿಗೆ ಪ್ರಾಣಕ್ಕೆ ಬರುವುದು. ನಿಜ ಹೇಳಿ ತನ್ನ ಪ್ರತಾಪ ಕೊಚ್ಚಿಕೊಳ್ಳುವ ಆಸೆ ಬೇಕಾದ ಹಾಗೆ ಒಂದು ಕಡೆ ವಿಜೃಂಭಿಸುವುದು; ತನ್ನಂತಹ ಪತಿವ್ರತೆ ಲೋಕದಲ್ಲುಂಟೆ ಎಂದೆನ್ನಿಸಿಕೊಳ್ಳಬೇಕು, ಎಂಬ ಆಸೆ ಇನ್ನೊಂದು ಕಡೆ ತುಯ್ಯುವುದು. ಇಷ್ಟಾದರೂ “ಅಯ್ಯೋ! ಹಾಳು ಹುಡುಗಿ ಕಣ್ಣಿನ ಮೇಲೆ ಆಣೆಯಿಟ್ಟು ಕೊಲ್ಲುತ್ತೀಯಲ್ಲೇ? ನಿಜ ಹೇಳದೆ ನಾನು ಸುಳ್ಳು ಹೇಳಿದರೆ ನಿನ್ನ ಕಣ್ಣಿಗೆ ಆಯ್ಕೊಂಡು ತಿನ್ನೋ ಕೋಳಿ ಕಾಲು ಮುರಿದ ಹಾಗೆ ಆಗುತ್ತೆ. ನಿಜ ಹೇಳಿದರೆ ನಾನು ಆ ಕಥೆಯೆಲ್ಲ ಹೇಳಬೇಕು. ಎಂಥ ಪಾಪಿಯೇ ನೀನು!” ಎಂದು ಗದರಿಸುವಳು. ಕಿಟ್ಟಮ್ಮನು ಕಥೆ ಹೇಳಜ್ಜಿ ಎನ್ನುವ ಮಗುವಿನ ಹಾಗೆ ಆ ಮುದುಕಿಯ ಹತ್ತಿರಕ್ಕೆ ಜರುಗಿಕೊಂಡು ಕೊಂಚ ನಲಿದು ನುಲಿದು ಹೇಳಜ್ಜಿ ಎಂದು ತೊಡೆಯ ಮೇಲೆ ಒಂದು ಸಲ ಹಾಗೆನ್ನುವಳು. ಮುದುಕಿಯು ”ಮೈಲಿಗೆಯಾಯಿತಲ್ಲೇ ಪ್ರಾರಬ್ಧವೇ? ಹಾಳು ತಲೆಯಾದರೂ ತೆಗೆಸೆ ಎಂದರೆ ನೀನು ಅದೂ ತೆಗೆಸೋದಿಲ್ಲ, ನಿನ್ನ ಕಟ್ಟಿಕೊಂಡು ಏನು ಸಾಯಬೇಕು? ಹೇಳು” ಎಂದು ಗೊಣಗಿಸಿಕೊಳ್ಳುವಳು. ಇವಲು ”ಸಾಕು ಸುಮ್ಮನಿರಜ್ಜಿ, ಹುಟ್ಟಿದಾಗ ಜೊತೇಲಿ ಹುಟ್ಟಿದ ಕೂದಲು ಏನು ಪಾಪ ಮಾಡಿತು! ಪಾಪ ಇರೋದೆಲ್ಲಾ ಮನಸ್ಸಿನಲ್ಲಿ; ಅದೆಲ್ಲ ಇರಲಿ, ಈಗ ಹೇಳುತೀಯೋ ಇಲ್ಲವೋ?” ಎಂದು ಬಲವಂತ ಮಾಡುವಳು. ಮುದುಕಿಯು “ಹೋಗಲಿ ಹೋಗು, ಮಾಡಿದವರ ಪಾಪ ಆಡಿದವರ ಬಾಯಲ್ಲಿ ಅಂತ. ತಾನು ಮಾಡಿದ್ದೆಲ್ಲ ಹೇಳಿಕೊಂಡರೆ ಪಾಪವೆಲ್ಲ ಹೋಗುತ್ತಂತೆ, ಹೇಳಿಬಿಡ್ತೀನಿ ಕೇಳು” ಎಂದು ತಾನು ಹಿಂದೆ ಅನುಭವಿಸಿದ ರಸಿಕಜೀವನದ ಕಥೆಯನ್ನೆಲ್ಲ ಹೇಳುವಳು.

ಇದನ್ನು ಓದಿದ್ದೀರಾ?: ‘ಹೊಯಿಸಳ’ ಅವರ ಕತೆ | ಭಯನಿವಾರಣೆ

“ನೋಡೆ ಕಿಟ್ಟು, ಏನು ಹೇಳಲಿ, ನನ್ನ ಗಂಡ ಧರ್ಮರಾಯ ಕಾಣೇ! ಬೀದಿಯೋರೆಲ್ಲ, ಮನೆಯೋರೆಲ್ಲ ಹಾರಾಡೋರು, ನನ್ನ ಗಂಡ ಮಾತ್ರ ತುಟಿ ಪಿಟಿಕ್ಕೆನ್ನುತ್ತಿರಲಿಲ್ಲ. ಪ್ರಸ್ತವಾದ ಹೊಸದರಲ್ಲಿ ಒಂದು ದಿನ ನನ್ನ ಹಿಡಿದುಕೊಂಡು ಹೊಡೆದುಬಿಟ್ಟರು. ಮೈಮೇಲೆ ರಟ್ಟೆ ರಟ್ಟೆ ಗಾತ್ರ ಬಾಸುಂಡೆ ಬಂದು ಬಿಟ್ಟು ನೀಲಿಗಟ್ಟಿಕೊಂಡು ಹೋಯ್ತು. ನಾನು ಹಾಸಿಗೆ ಮೇಲೆ ಅಳ್ತಾ ಬಿದ್ದುಕೊಂಡೆ. ಬಂದು ನೋಡಿದರು, ಆ ವೇಳೆಗೆ ಕೋಪವೆಲ್ಲ ಇಳಿದಿತ್ತು. ಮೈ ನೋಡಿ ಅವರಿಗೇ ಅಳು ಬಂತು: ಆವೊತ್ತು “ಇನ್ನು ಮೇಲೆ ನೀನು ಏನೇ ಮಾಡು, ನಾನು ನಿನ್ನ ಮೇಲೆ ಕೋಪ ಮಾಡಿಕೊಳ್ಳೋಲ್ಲ” ಅಂತ ಪ್ರಮಾಣ ಮಾಡಿಬಿಟ್ಟರು. ಆವೊತ್ತಿನಿಂದ ಆ ಪುಣ್ಯಾತ್ಮ ಕೊನೆಯವರೆಗೂ ಹಾಗೆಯೇ ಇದ್ದುಬಿಟ್ಟರು. ಹಾಗಿಲ್ಲದೆ ಅವರೇನಾದರೂ ಮಿಕ್ಕ ಕಪಿಗಳ ಹಾಗೆ ಗಳಿಗ್ಗೊಂದು ಸಲ ಕೋಪ ಮಾಡಿಕೊಳ್ಳುತ್ತಿದ್ದರೆ ನಾನೇನೋ ಬಲು ನೊಂದು ಹೋಗುತ್ತಿದ್ದೆ ಕಾಣೇ ಕಿಟ್ಟು; ಏನೋ ಆ ಧರ್ಮರಾಯನಂತಹ ಗಂಡನಾಗೋ ವೇಳೆಗೆ, ಕಂಡರೂ ಕಾಣದಿದ್ದ ಹಾಗೆ ಇದ್ದುಕೊಂಡು ಸತ್ತು ಸ್ವರ್ಗಕ್ಕೆ ಹೋದರು. ಅವರು ಹೋದಾಗ, ನೀನು ನನ್ನ ತಲೆಕೂದಲು ನೋಡಿರಲಿಲ್ಲ. ಏನು ಅಂತಿಯೆ ಒಳ್ಳೆಯ ಪಟ್ಟೆಯ ಕುಚ್ಚು ಇದ್ದಹಾಗೆ ಇತ್ತು. ಬೀದಿಯವರೆಲ್ಲ ಕಣ್ಣೀರು ಬಿಟ್ಟರು, ಮಗ್ಗಲ ಮನೆಯವರು ಬಂದು ಕೂದಲು ತೆಗೆಸಬೇಡಿ ಅಂತ ಎಷ್ಟು ಹೇಳಿದರೋ? ಕೊನೆಗೂ ಆ ಹಾಳು ಕೂದಲಿಟ್ಟುಕೊಂಡು ನನ್ನ ಗಂಡನ್ನ ನರಕಕ್ಕೆ ಕಳಿಸಲೇ ಅಂತ ತೆಗೆಸೇಬಿಟ್ಟೆ. ಏನೇ ಹೇಳೆ ಕಿಟ್ಟು, ಹೆಂಗಸಿಗೆ ಮಾನ ಬರಬೇಕಾದರೆ ಗಂಡ ಚೆನ್ನಾಗಿರಬೇಕು” ಎಂದು ಏನೇನೋ ಹೇಳುವಳು. ಕಿಟ್ಟಮ್ಮನು ಅದೆಲ್ಲವನ್ನು ಕೇಳಿ “ಹೋಗೇ ಹಾಳಜ್ಜಿ, ಆ ಸಿಪಾಯಿ ಕಥೆ ಹೇಳ್ತಿಯೇನೋ ಅಂದ್ರೆ ನೀನು ಹೇಳಲೇ ಇಲ್ಲ” ಎನ್ನುವಳು. ಮುದುಕಿಯು “ಯಾವುದು ಕರೀಘಟ್ಟಕ್ಕೆ ಹೋಗಿದ್ದದ್ದೇ ಆ? ಅಯ್ಯೋ ಹಾಳು ಮುಂಡೆದೆ, ನಿನಗೇಕೆ ಆ ಕಥೆ? ಅವಳು ಯಾವಳೋ ಆ ಪಿಶಾಚಿಯಂತ ಸಿಪಾಯಿನ ಕಟ್ಟಿಕೊಂಡು ಓಡಿಹೋಗಿದ್ದರೆ ಆ ಕಥೆ ಹೇಳಬೇಕಂತೆ ಇವಳಿಗೆ” ಎಂದು ಏನೋ ಗಾಬರಿ, ಅಸಹ್ಯ ಅಭಿನಯಿಸುವಳು. ಕಿಟ್ಟಮ್ಮ ಬೇಕೇಬೇಕು ಎಂದು ಬಲವಂತ ಮಾಡಿದರೆ, ತನಗೆ ಸಿಪಾಯಿ ಮೇಲೆ ಮನಸ್ಸಾಗಿ ಅವನ ಜೊತೆಯಲ್ಲಿ ಹೋಗಿ ಎಂಟು ದಿನ ಇದ್ದು ಬಂದುದು. ಎಲ್ಲರೂ ಎಲ್ಲಿ ಹೋಗಿದ್ದೆ ಎಂದರೆ ನಮ್ಮ ಸೋದರತ್ತೆ ಮನೆಗೆ ಹೋಗಿದ್ದೆ ಎಂದುದು. ಗಂಡನು ಅಂದಿನಿಂದ ತನ್ನ ಕೈಲಿ ಮೂರು ತಿಂಗಳು ಮಾತು ಬಿಟ್ಟಿದ್ದುದು. ತಾನು ದಿನದಿನವೂ ರಾತ್ರಿಯೆಲ್ಲ ಅಳುತ್ತ ಗಂಡನ ಕಾಲು ಹಿಡಿದುಕೊಂಡು ಹೇಳಿಕೊಂಡು, ಮತ್ತೆ ಆತನ ಪ್ರೇಮವನ್ನು ಸಂಪಾದಿಸಿದುದು ಈ ಎಲ್ಲ ಕಥೆಯನ್ನು ಚೆನ್ನಾಗಿ ಒಂದು ಘಂಟೆಯ ಹೊತ್ತು ಹೇಳುವಳು. ಕೊನೆಯಲ್ಲಿ ಒಂದೊಂದು ದಿನ “ಏನಜ್ಜಿ! ಆಗ ನೀನು ಮಾಡಿದುದೆಲ್ಲ ಪಾಪವಲ್ಲವೇ? ನೀನು ಸತ್ತಮೇಲೆ ನಿನ್ನ ಯಮಧರ್ಮರಾಯ ನರಕಕ್ಕೆ ಹಾಕೋಲ್ಲವೇ?” ಎನ್ನುವಳು. ಮುದುಕಿಗೂ ಕೊಂಚ ಬಿಸಿಯೇರುವುದು. ”ಅಲ್ಲ ಕಾಣೇ! ತಾಳಿ ಕಟ್ಟಿದ ಗಂಡನೇ ದೇವರು, ಅವನೇ ಒಪ್ಪಿಕೊಂಡು ಹೋಗಲಿ ಬಿಡು ಅಂತ ಕ್ಷಮಿಸಿ ಬಿಟ್ಟಮೇಲೆ, ಆ ಯಮನಿಗೇನೇ ಅಧಿಕಾರ ನನ್ನ ಮೇಲೆ? ಅದು ಯಾವ ಯಮ ಬರುತ್ತಾನೇ ಬರಲಿ, ಹೂಂ. ಬಿಟ್ಟಿಯಲ್ಲ” ಎನ್ನುವಳು. ಅಂತೂ ಈ ಪುರಾಣವೆಲ್ಲ ಆದಮೇಲೆ ಕಿಟ್ಟಮ್ಮ ಬಿಸಿಬಿಸಿಯಾಗಿ ಸೊಗಸಾದ ಕಾಫಿ ಮಾಡಿಕೊಟ್ಟು ”ಅಜ್ಜಿ! ನಾನೇನಾದರೂ ನಿನ್ನ ಗಂಡನಾಗಿದ್ರೆ ನೀನು ಮಾಡಿದ್ದೆಲ್ಲ ಒಪ್ಪಿಕೊಳ್ಳುತ್ತಿರಲಿಲ್ಲ” ಅನ್ನುವಳು. “ಅಯ್ಯೋ! ಹುಚ್ಚುರಂಡೆ, ಗಂಡಸರ ಸ್ವಭಾವ ನೀನೇನು ಬಲ್ಲೆ ನನ್ನಂತ ಹೆಂಡತಿ ಇದ್ದಿದ್ದರೆ, ಇನ್ನಷ್ಟು ತಪ್ಪು ಮಾಡಿದ್ದರೂ ಒಪ್ಪಿಕೊಳ್ಳೋದೇ: ಬೆಲ್ಲಕ್ಕೆ ನೊಣ ಇರುವೆ ಮುತ್ತಿದೆ ಅಂತ ತೆಗೆದು ಹೊರಕ್ಕೆ ಎಸೆದುಬಿಡ್ತಿ ಏನೋ ಅಲ್ಲವೇ ನೀನು? ಈಗ ನೋಡು, ನಾನೂ ನಿನ್ನ ‘ಸಕೇಶಿ, ಮೈಲಿಗೆಯ ರಂಡೆ’ ಅಂತ ಅನ್ನುತ್ತಿದ್ದರೂ ನಿನ್ನ ಕಾಫಿ ಮಾತ್ರ ಸೊಗಸಾಗಿದೆ ಎಂದು ಚಪ್ಪರಿಸಿಕೊಂಡು ಕುಡೀತಿಲ್ಲವೆ? ಹಾಗೆ ಲೋಕ!” ಎನ್ನುವಳು. ಹೀಗೆ, ಒಬ್ಬರನ್ನೊಬ್ಬರು ಮೆಚ್ಚಿಕೊಳ್ಳುತ್ತಾ ಎರಡು ಜೀವಿಗಳು, ಲೋಕವೆಲ್ಲ ತಮ್ಮನ್ನು ಕಸಕ್ಕಿಂತ ಕಡೆಯಾಗಿ ಗಣಿಸಿರುವುದನ್ನು ಮರೆತು ಸುಖವಾಗಿ ಇರುವರು.

ಮೂರು ಕನಸು ದೇವುಡು1

ಆ ದಿನ ಮುದುಕಿ ಬಂದರೂ ಕಿಟ್ಟಮ್ಮನಿಗೆ ಮನಸ್ಸು ಸಮಾಧಾನವಿಲ್ಲ. ಮುದುಕಿಗೂ ಅದು ತಿಳಿಯಿತು. “ಏನೇ ಅದು! ಯಾರು ಬರುತ್ತಾರೆಯೇ?” ಎಂದಳು. ಕಿಟ್ಟಮ್ಮನು ಸಹಜಭಾವದಿಂದ ‘ನಮ್ಮ ಸುಬ್ಬು’ ಎಂದಳು. ಮುದುಕಿಯು “ಅಯ್ಯೋ! ನಿನ್ನ ಸಂಭ್ರಮ ನೋಡಿ ಏನೇನೋ ಅಂದುಕೊಂಡೆ, ಒಳ್ಳೆಯ ಮದುವಣಗಿತ್ತಿಯ ಹಾಗೆ ಆಡ್ತಿದ್ದೀ. ಅದೇನು ಇವೊತ್ತು ಸುಬ್ಬು ಬರೋಕೆ ನಿನಗಿಷ್ಟು ಸಂಭ್ರಮ?” ಎಂದಳು. ಕಿಟ್ಟಮ್ಮ ಎಂದಿನಂತೆ ಆಗಿದ್ದರೆ ಎಲ್ಲವನ್ನೂ ಹೇಳುತ್ತಿದ್ದಳು. ಈ ದಿನ ಅವಳಿಗೆ ಇಷ್ಟವಿಲ್ಲ, ಅದರಿಂದ ಏನೋ ಎರಡು ಮಾತು ಹೇಳಿದಳು. ಮುದುಕಿಯು “ಈ ರಂಡೆಗೆ ಇವತ್ತು ಏಕೋ ಬುದ್ದಿ ನೇರವಿಲ್ಲ” ಎಂದುಕೊಂಡು, ”ಹೋಗಲಿ ಬಿಡು, ಏನೋ ಹಾಳು ತಲೆನೋವು ಇಲ್ಲಾದರೂ ಬಂದು ಕುಳಿತುಕೊಳ್ಳೋಣ ಅಂತ ಬಂದೆ” ಎಂದಳು. ಆ ವೇಳೆಗೆ ಸುಬ್ಬೂ ಬಂದ.

ಇದನ್ನು ಓದಿದ್ದೀರಾ?: ದ.ರಾ. ಬೇಂದ್ರೆ ಕತೆ | ಮಗುವಿನ ಕರೆ

ಸುಬ್ಬೂ ಬಂದ ಎನ್ನುವ ಸಂಭ್ರಮದಲ್ಲಿ ಕಿಟ್ಟಮ್ಮನಿಗೆ ಮುದುಕಿಯ ತಲೆನೋವಿನ ಮಾತೇ ಕೇಳಲಿಲ್ಲ. “ಬಾರೋ” ಎಂದು ಒಳಕ್ಕೆ ಎಳೆದುಕೊಂಡು ಹೋದಳು. ಅವನ ಕೈಲಿದ್ದ ಪುಸ್ತಕದ ಹೊರೆಯನ್ನು ತೆಗೆದುಕೊಂಡು ಅತ್ತ ಇಟ್ಟಳು. ಸುಬ್ಬೂಗೆ ಹದಿನೆಂಟು ಇಪ್ಪತ್ತು ವರುಷ ಇರಬಹುದು. ಒಳ್ಳೆಯ ಕೆಂಪಗೆ ಎತ್ತರವಾದ ಹುಡುಗ, ಕಣ್ಣು ಕೊಂಚ ಬಾದಾಮಿಯ ಹಾಗಿದ್ದರೂ ಚೆನ್ನಾದ ಕಣ್ಣೆ! ಮೈಕಟ್ಟು ದಪ್ಪವಾಗಿಲ್ಲದಿದ್ದರೂ ದೊಡ್ಡ ಮೂಳೆಯ ದನ ಎಂದು ಯಾರಿಗಾದರೂ ತಿಳಿಯುವುದು. ಮುಖ ಪೆಚ್ಚೂ ಅಲ್ಲ. ತೇಜಸ್ವಿಯೂ ಅಲ್ಲ. ಒಟ್ಟಿನಲ್ಲಿ ಕೆಂಪು ಡೊಂಕು ಮೆಚ್ಚಿತು ಎನ್ನುವ ಹಾಗೆ ಅಂತೂ ಇಂತೂ ನೋಡುವುದಕ್ಕೆ ಚೆನ್ನಾಗಿದ್ದಾನೆ.

ಕಿಟ್ಟಮ್ಮನು ಅವನಿಗೆ ಕಾಫಿ ತಿಂಡಿ ಮಾಡಿಕೊಟ್ಟಳು. ಒಬ್ಬ ಹಿರಿಯಕ್ಕನು ಪ್ರೀತಿಯ ತಮ್ಮನಿಗೆ ಏನೇನು ಉಪಚಾರ ಮಾಡಬಹುದೋ ಅದನ್ನೆಲ್ಲ ಮಾಡಿದಳು. ಮುದುಕಿಯನ್ನು ಕರೆದು “ಅಜ್ಜಿ! ನಮ್ಮ ಸುಬ್ಬೂಗೆ ನಾನು ಏಕೆ ಇಷ್ಟು ಉಪಚಾರ ಮಾಡುವುದು ಗೊತ್ತೇ?” ಎಂದು ಕೇಳಿದಳು. ಅಜ್ಜಿಯು ಮನಸ್ಸಿನಲ್ಲಿಯೇ ಏನೇನೋ ಗೊಣಗಿಕೊಳ್ಳುತ್ತಾ “ನಾನೇನು ಬಲ್ಲೇ? ನೀನೇ ಹೇಳಿಬಿಡು” ಎಂದಳು. “ನೋಡಜ್ಜಿ! ನಾನು ಸತ್ತರೆ ನನಗೆ ಬೆಂಕಿ ಹಾಕೋಕೆ ಯಾರೂ ಇಲ್ಲ. ಅದಕ್ಕೆ ಇವನೇ ಎಂದು ಇವನಿಗೆ ಈಗಲಿಂದ ಬೇಕಾದ ಉಪಚಾರವೆಲ್ಲ ಮಾಡುತ್ತಿದ್ದೇನೆ.”

“ಸಾಕು ಸುಮ್ಮನಿರೆ. ಮದುವೆಯೂ ಆಗಿದೆ. ಇನ್ನೇನು ಹೆಂಡತಿ ಮೈನೆರೆದಿದಾಳೋ, ನೆರೆಯುವುದರಲ್ಲಿದ್ದಾಳೋ? ಪ್ರಸ್ತವಾದ ಮೇಲೆ ಅವನು ಇತ್ತಲಾಕಡೆ ಬರುತ್ತಾನೋ ಬರೋದೇ ಇಲ್ಲವೋ ಅಂಥಾವನಿಗೆ ನೀನು ಈ ಕೆಲಸ ಒಪ್ಪಿಸಿರೋದು?”

ಮುದುಕಿಯ ಮಾತು ಕೇಳಿ ಕಿಟ್ಟಮ್ಮನಿಗೆ ದಿಗಿಲಾಯಿತು. “ಹಾಗೇ ಆದರೂ ಆಗಬಹುದು. ಆ ಹುಡುಗಿ ಬಲು ಚತುರೆ, ಸಾಲದೆ ತಾನಾಗಿ ಒಪ್ಪಿ ಈ ಹುಡುಗನನ್ನು ಮದುವೆ ಮಾಡಿಕೊಂಡಿದೆ. ಹಾಗಾದರೆ, ತನ್ನ ಹೆಣ ತಂಗಳು ಹೆಣವಾಗಿ ಹೋದರೆ…?” ಎಂದು ಅಂಜಿಕೆಯಾಯಿತು.

ಕಿಟ್ಟಮ್ಮನು ”ಹೋಗು ಹಾಳು ಮುದುಕಿ, ಅಪಶಕುನ ನುಡೀತಾಳೆ. ಇನ್ನು ಮೇಲೆ ನಿನಗೆ ಕಾಫಿ ಕೊಡೊಲ್ಲ” ಎಂದು ಗದರಿಸಿಕೊಂಡು, ದೈನ್ಯದಿಂದ ಯಾಚಿಸುವ ಕರುಣಾವ್ಯಂಜಕ ದೃಷ್ಟಿಯಿಂದ “ಏನೋ ಸುಬ್ಬು, ನೀನು ನನಗೆ ಬೆಂಕಿ ಹಾಕೋಲ್ಲವೇನೋ? ಹೇಳೋ” ಎಂದಳು. ಸುಬ್ಬುವು “ನಾನು ಇಲ್ಲ ಎಂದದ್ದು ಯಾವಾಗ? ಯಾರೂ ಇಲ್ಲದಿದ್ರೆ ಮುನ್ಸಿಪಾಲ್ಟಿಯವರಾದರೂ ಎಳಿಸಿ ಹಾಕುತ್ತಾರೆ” ಎಂದನು. ಕಿಟ್ಟಮ್ಮನಿಗೆ ಅದೇಕೋ ಸೊಗಸಾಗಲಿಲ್ಲ; “ಉಂಟೇ? ಹೆಣ ಮಾತ್ರ ತಂಗಳು ಹೆಣ ಆಗಬಾರದು” ಎಂದಳು.

ಮುಂದಕ್ಕೇಕೊ ಮಾತು ಒಂದು ನಡಿಯಲಿಲ್ಲ. ಸುಬ್ಬನು ಅಷ್ಟು ಹೊತ್ತು ಕುಳಿತಿದ್ದು ಎದ್ದು ಹೋದ. ಮುದುಕಿಯೂ ಹೊರಟುಹೋದಳು. ಕಿಟ್ಟಮ್ಮ ನ್ಯಾಯವಾಗಿ ಎಂದಿನಂತೆ ಆಗಿದ್ದರೆ ಹೋಟೆಲಿಗೆ ಹೋಗಬೇಕಾಗಿತ್ತು. ಅವಳು ಅಂದು ಹೋಗಲಿಲ್ಲ, ಮನೆಯಲ್ಲಿಯೇ ಇದ್ದು ಬಿಟ್ಟಳು.

ರಾತ್ರಿ ಸುಮಾರು ಎರಡು ಗಂಟೆಯಿರಬಹುದು. ಕಿಟ್ಟಮ್ಮನಿಗೆ ಒಂದು ಕನಸು. ಅದರಲ್ಲಿ ಎಂದಿನಂತೆ ತಾನು ಒಂದು ಕಡೆ ಕೊಠಡಿಯಲ್ಲಿ ಇದ್ದಾಳೆ. ಕನಸಿನಲ್ಲಿ ರಾತ್ರಿ ಯಾರೋ ಬಂದು “ನಿನ್ನ ಬಳಿ ಇರುವ ಹಣವೆಲ್ಲ ಕೊಟ್ಟುಬಿಡು” ಎನ್ನುತ್ತಾರೆ. ತಾನು ಕೊಡುವುದಿಲ್ಲ ಎಂದು ಹಟ ಮಾಡುತ್ತಾಳೆ, ಬಂದವರು ಹೆಂಗಸೋ ಗಂಡಸೋ ಗೊತ್ತಿಲ್ಲ. ಅಂತೂ ಅವಳ ಕತ್ತು ಕಿವಿಚಿ ಹಾಕಿ ಅಲ್ಲಿದ್ದ ಹಣಗಿಣ ಎಲ್ಲಾ ಹೊತ್ತುಕೊಂಡು ಹೋಗುತ್ತಾರೆ. ಇವಳ ಜೀವ ಆ ಹೆಣದ ಸುತ್ತಲೂ ಹಾರಾಡುತ್ತ ಯಾರೂ ಹೆಣವನ್ನು ಸುಡುವವರಿಲ್ಲವಲ್ಲ ಎಂದು ಕೂಗಿಕೊಳ್ಳುತ್ತದೆ. ಹಾಗೆಯೇ ಅಷ್ಟು ಹೊತ್ತು ತಿರುಗುತ್ತಿದ್ದು ಸುಬ್ಬುವನ್ನು ಹುಡುಕಿಕೊಂಡು ಹೋಗುತ್ತದೆ. ಅಲ್ಲಿ ಅವನು “ನಾನು ಏನು ಮಾಡಲಿ ಕಿಟ್ಟಮ್ಮ, ನೀನು ನನಗೆ ಹೇಳದೆ ಸತ್ತುಹೋದೆ. ಇವೊತ್ತು ನನ್ನ ಕೈಲಿ ವಿಷ ತಕೋಬೇಕು ಎಂದರೂ ಒಂದು ಕಾಸಿಲ್ಲ. ಇಂಥಾ ಹೊತ್ತೇ ನೋಡಿಕೊಂಡು ಸತ್ತರೆ ನಾನೇನು ಮಾಡಲಿ?” ಎನ್ನುತ್ತಾನೆ. ಅದಕ್ಕೆ ಆ ಜೀವ “ಹೋಗೋ! ಯಾರು ಸಾಯಬೇಕು ಅಂತಿದ್ದರು. ಅವನು ಬಂದು ಕತ್ತು ಕಿವಿಚಿಬಿಟ್ಟರೆ ನಾನು ಅಲ್ಲಿ ಇರೋದು ಹ್ಯಾಗೆ? ನನಗೂ ಬದುಕಿರಬೇಕು ಅಂತಲೇ ಆಸೆ ಇತ್ತು” ಎನ್ನುತ್ತದೆ. “ಹಾಗಾದರೆ ಈಗಲೂ ಹೋಗಿ ಆ ದೇಹದೊಳಕ್ಕೆ ಸೇರಿಕೊಂಡು ಬಿಡು. ದೇಹ ಆರಿಹೋಗೋಕೆ ಮುಂಚೆ ಸೇರಿಕೊ” ಎನ್ನುತ್ತಾನೆ ಸುಬ್ಬು. ಆ ಜೀವ “ಹಾಗಾದರೆ ಇಗೋ ಈಗಲೇ ಹೋಗಿ ಸೇರಿಕೊಳ್ಳುತ್ತೇನೆ.” ಎಂದು ಓಡಿ ಬಂದು ದೇಹಕ್ಕೆ ಸೇರಿಕೊಂಡಿತು. ಕಿಟ್ಟಮ್ಮನಿಗೆ ಎಚ್ಚರವಾಯಿತು.

ಇದನ್ನು ಓದಿದ್ದೀರಾ?: ‘ಕ್ಷೀರಸಾಗರ’ ಅವರ ಕತೆ | ನಮ್ಮೂರಿನ ಪಶ್ಚಿಮಕ್ಕೆ

ಕಿಟ್ಟಮ್ಮನಿಗೆ ಎಚ್ಚರವಾದರೂ ಕನಸಿನ ಖಯಾಲಿ ಬಿಡಲಿಲ್ಲ. ಮೊದಲು ಕತ್ತು ಸರಿಯಾಗಿದೆಯೋ ಇಲ್ಲವೋ ಎಂದು ಕತ್ತನ್ನೇ ಮುಟ್ಟಿ ಮುಟ್ಟಿ ನೋಡಿಕೊಂಡಳು. ಆಮೇಲೆ ಉಸಿರಾಡುವುದಕ್ಕೆ ಆಗುವುದೋ ಇಲ್ಲವೋ ಎಂದು ಗಟ್ಟಿಯಾಗಿ ಉಸಿರು ಎಳೆದು ಬಿಟ್ಟಳು. ಕೈಕಾಲು ತಣ್ಣಗಾಗಿದೆಯೋ ಬೆಚ್ಚಗಿದೆಯೋ ಎಂದು ಕೈಕಾಲು ಮುಟ್ಟಿ ನೋಡಿಕೊಂಡಳು. ಎಲ್ಲ ಸರಿಯಾಗಿತ್ತು. ಎದೆ ಮಾತ್ರ ಇನ್ನೂ ಡವಡವಗುಟ್ಟುತ್ತ ಇತ್ತು.

ಕನಸಿನಲ್ಲಿ ಕಂಡದ್ದು ಮೂರು ಅಂಶಗಳು. ಒಂದು ತನ್ನ ಹಣಕ್ಕಾಗಿ ಯಾರೋ ಬಂದುದು. ತನ್ನನ್ನು ಕತ್ತು ಕಿವುಚಿ ಕೊಂದುದು. ಆ ವೇಳೆಗೆ ಸರಿಯಾಗಿ ಸುಬ್ಬೂ ತನ್ನ ಕೈಯಲ್ಲಿ ಹಣವಿರಲಿಲ್ಲ ಎಂದುದು. ಆ ಮೂರು ಒಂದರ ಹಿಂದೆ ಒಂದು ಓಡೋಡಿ ಬಂದು ಎದುರು ನಿಲ್ಲುವವು. ಇವಳು ಬೇರೆಯೇನು ಕೆಲಸ ಮಾಡುವುದಕ್ಕೂ ತೋರದಂತೆ ಅವು ಬಂದು ನಿಂತವು. ಕೊನೆಗೆ ತಾನಿಟ್ಟಿದ್ದ ಹಣ ಭದ್ರವಾಗಿದೆಯೋ ಇಲ್ಲವೋ ನೋಡುವುದಕ್ಕೆಂದು ಎದ್ದಳು. ಅವಳಿಗೆ ದಿಗಿಲು. ಯಾರಾದರೂ ಬಂದು ಅಲ್ಲಿದ್ದ ಹಣ ಹೊತ್ತುಕೊಂಡು ಹೊರಟುಹೋದರೋ, ಏನೋ ಎನ್ನಿಸಿತು. ಹೋದರೆ ಹೋಗಲಿ ಎಂದುಕೊಂಡು ಹಾಗೆಯೇ ಗೋಡೆಗೆ ಒರಗಿಕೊಂಡಳು. ಒಂದು ತಿಂಗಳು ದುಡಿದ ಹಣ. ಸುಮಾರು ನಲವತ್ತು ರೂಪಾಯಿ ಹೋದರೆ ಗತಿಯೇನು? ಎಂದುಕೊಂಡು ಹೋಗಿ ದೀಪ ಹಚ್ಚಿ ಭರಣಿಯನ್ನು ತೆಗೆದು ನೋಡಿದಳು. ಹಣ ಭದ್ರವಾಗಿತ್ತು. ಸರಿಯಾಗಿತ್ತು.

ಅಲ್ಲಿಂದ ಬಂದು ಹಾಸಿಗೆಯ ಮೇಲೆ ಬಿದ್ದುಕೊಂಡಳು. ಮನೆಯಲ್ಲಿ ನೀನೇ ಎನ್ನುವರು ಒಬ್ಬರಿಲ್ಲ. ಆ ದಿನ ಒಂದು ಸೊಳ್ಳೆಯೂ ಕೂಡ ಬಂದು ಅವಳ ಕಿವಿಯ ಹತ್ತಿರ ಗುಯ್ ಗುಯ್ ಎನ್ನಲಿಲ್ಲ. ಆವೊತ್ತು ಅವಳಿಗೆ ಏಕಾಕಿಯಾಗಿರುವುದಕ್ಕೆ ಏಕೋ ದಿಗಿಲು. ಆ ವೇಳೆಗೆ ಕೊನೆಗೆ ಒಂದು ಸೊಳ್ಳೆಯಾಗಲಿ, ತಿಗಣೆಯಾಗಲಿ ಬಂದಿದ್ದರೆ ಕಿಟ್ಟಮ್ಮನು ಅದಕ್ಕೆ ನಿಜವಾಗಿಯೂ ರಾಜೋಪಚಾರ ಮಾಡುತ್ತಿದ್ದಳು.

ಅವಳಿಗೆ ನಿದ್ದೆ ಬರಲಿಲ್ಲ. ”ಇದು ಬೀದಿಯ ಕೊನೆಯ ಮನೆ. ಇಲ್ಲಿದ್ದರೆ ನಡುರಾತ್ರಿಯಲ್ಲಿ ಯಾರಾದರೂ ಬಂದು, ಕನಸಿನಲ್ಲಿ ಆದಹಾಗೇ ಮಾಡಿದರೂ ಕೇಳುವವರಿಲ್ಲ. ಅದರಿಂದ ಬೆಳಗ್ಗೆದ್ದು ಬೇರೆ ಮನೆಯನ್ನು ಹುಡುಕುವುದು ಮೊದಲನೆಯ ಕೆಲಸ. ಅದಾದ ಮೇಲೆ ತನ್ನ ಹಣ ಭದ್ರವಾಗಿಡಬೇಕು. ಅದಕ್ಕಿಂತಲೂ ಮೊದಲು ತನ್ನ ಕರ್ಮಾಂತರಗಳಿಗೆ ಹಣವನ್ನು ಒಂದು ಕಡೆ ಇಟ್ಟಿರಬೇಕು. ಅದನ್ನು ಆದಷ್ಟೂ ಬೇಗ ಸುಬ್ಬುವಿಗೆ ಹೇಳಿಬಿಡಬೇಕು” ಎನ್ನಿಸಿತು. ನಮ್ಮ ಭಾರತದ ಗಾಳಿಯಲ್ಲಿ ತೂರಿಬರುವ ವೇದಾಂತವಿದೆಯಲ್ಲ, ‘ನಂಬಬೇಡ, ನಟ್ಟಬೇಡ, ಕಾಯಸ್ಥಿರವಲ್ಲ’ ಎಂಬುದು ಅದೂ ಕೂಡ ಆಗಲೇ ಬಂದು, ಬೆಳಗೆದ್ದು ಮಾಡಬೇಕಾದ ಕೆಲಸವೇನು ಎನ್ನುವುದನ್ನು ಇನ್ನೂ ಗಟ್ಟಿ ಮಾಡಿತು. ಇನ್ನು ಎಂಟು ದಿನ ಎನ್ನುವುದರೊಳಗಾಗಿ ಕಿಟ್ಟಮ್ಮನು ಬೇರೆ ಕೊಠಡಿಯನ್ನು ಮಾಡಿದ್ದಳು. ಅವಳಿಗೆ ಒಂದು ಭಾನುವಾರದ ದಿನ ಹೋಗಿ ಸುಬ್ಬುವನ್ನು ಕಂಡು ಅವನನ್ನು ಕರೆದುಕೊಂಡು ಬಂದು ಕನಸು ಹೇಳಿ ಮುಂದಿನ ಕೆಲಸಗಳನ್ನೆಲ್ಲ ಹೇಳಿಬಿಟ್ಟಿರಬೇಕು ಎಂದು ಎಷ್ಟೋಸಲ ಎನ್ನಿಸಿತು. ಎಷ್ಟು ಪ್ರಯತ್ನಪಟ್ಟರೂ ಅವಳಿಗೆ ಸುಬ್ಬುವನ್ನು ಹುಡುಕಿಕೊಂಡು ಹೋಗಲು ಆಗಲೇ ಇಲ್ಲ.

2

ಸುಬ್ಬುವಿಗೆ ಒಂದು ಕಾಗದ ಬಂತು. ಅದನ್ನು ರಾಯಚೂರಿನ ಸ್ನೇಹಿತರು ಬರೆದಿದ್ದರು. ಅವರು ಬ್ರಹೋತ್ಸವಕ್ಕೆ ತಿರುಪತಿಗೆ ಹೊರಟಿದ್ದಾರೆ. ಅವರ ಕಡೆಯ ಸಾವುಕಾರ್‍ರು ಯಾರೋ ಬ್ರಹೋತ್ಸವ ಮಾಡಿಸುತ್ತಾರಂತೆ. ಅದಕ್ಕೆ ಸುಬ್ಬುವೂ ಬಂದರೆ ಬಹಳ ಸಂತೋಷ ಎಂದು ಒಕ್ಕಣೆ ಇದ್ದಿತು. ಸುಬ್ಬೂಗೆ ಹೋಗಬೇಕೆಂದು ಆಶೆ. ಆದರೆ ಲಕ್ಷ್ಮೀಪತಿಯಾದ ವೆಂಕಟರಮಣನ ದರ್ಶನಕ್ಕೆ ಹೋಗಬೇಕಾದರೂ ಲಕ್ಷ್ಮೀ ಕೃಪೆಯೇ ಬೇಕಲ್ಲ!

ಸುಬ್ಬೂ ಕಿಟ್ಟಮ್ಮನನ್ನು ನೋಡುವುದಕ್ಕೆ ಹೋಗುವುದು ಎರಡು ವೇಳೆಗಳಲ್ಲಿ: ತನಗೆ ದುಃಖವು ಹೆಚ್ಚಾಗಿ ಆ ಭಾರವು ತಡೆಯುವುದಕ್ಕಾಗದಷ್ಟು ಆದರೆ, ಆಗ ಆ ಭಾರವನ್ನು ಹೇಳಿಕೊಳ್ಳುವುದಕ್ಕೆ ಒಂದು; ಮಾಡುವುದಕ್ಕೆ ಏನೂ ಕೆಲಸವಿಲ್ಲದಿದ್ದರೆ, ತನ್ನನ್ನು ಕಂಡು ಸಂತೋಷಪಡುವ ಕಿಟ್ಟಮ್ಮನ ಬಳಿಯಾದರೂ ಕುಳಿತು ಹರಟೆ ಹೊಡೆದು ಬರುವುದಕ್ಕೆ ಇನ್ನೊಂದು. ಈ ದಿನ ಎರಡೂ ಸೇರಿತ್ತು. “ಶ್ರೀನಿವಾಸನ ದರ್ಶನ ಮಾಡಿ ಕೃತಾರ್ಥನಾಗುವುದಕ್ಕೆ ಅವಕಾಶವಿಲ್ಲವಾಯಿತಲ್ಲಾ” ಎಂದು ಸುಬ್ಬುವಿಗೆ ಬಹಳ ಅಸಮಾಧಾನ. ಅದರ ಜೊತೆಗೆ ಕಾಲೇಜಿಗೆ ರಜ ಬಂದಿದೆ. ಮಾಡುವುದಕ್ಕೆ ಕೆಲಸವಿಲ್ಲ ಎನ್ನುವುದಕ್ಕಿಂತ ಹೆಚ್ಚಾಗಿ ಕೆಲಸ ಮಾಡುವುದಕ್ಕೆ ಮನಸ್ಸಿಲ್ಲದೆ ಹೋಗಿದೆ. ಅಂತಹ ಸನ್ನಿವೇಶದಲ್ಲಿ ಸುಬ್ಬು ಕಿಟ್ಟಮ್ಮನನ್ನು ನೋಡುವುದಕ್ಕೆ ಬಂದಿದ್ದು,

ಇದನ್ನು ಓದಿದ್ದೀರಾ?: ಟೇಂಗ್ಸೆ ಗೋವಿಂದರಾವ್ ಅವರ ಕತೆ | ಗಂಗೆಯ ಗುತ್ತಿಗೆ

ಕಿಟ್ಟಮ್ಮನಿಗೆ ಸುಬ್ಬುವನ್ನು ಕಂಡು ಸಂತೋಷವಾಯಿತು. ಆದರೆ ಅವನ ಮುಖವನ್ನು ಕಂಡು ”ಯಾಕೋ ಹೀಗಿದೆ ಮೊಕ? ಏನು ಸಮಾಚಾರ? ಏನಾಯಿತು?” ಎಂದು ಕೇಳಿದಳು. ಅವನು “ಏನೋ ಬಿಡು ಕಿಟ್ಟಮ್ಮ ಬಡವರಾಗಿ ಹುಟ್ಟೋದೆ ಅಪರಾಧವಾಗಿರುವಾಗ ಯಾಕೆ ಯೋಚಿಸೋದು?” ಎಂದು ಒದರಿಕೊಂಡ. ಇವಳು ಬಿಡಲಿಲ್ಲ. ಒಳ್ಳೆಯ ಮಾತಾಡಿದಳು; ಗದರಿಸಿದಳು; ಬೈದಳು; ತಿರಸ್ಕರಿಸಿದಳು; “ನೀನು ಹೇಳದೇ ಹೋದರೆ ನಾನೂ ನಿನ್ನೊಡನೆಗೆ ಮಾತಾಡುವುದಿಲ್ಲ” ಎಂದು ಮೊಕವನ್ನು ತಿರುಗಿಸಿಕೊಂಡಳು.

ಕೊನೆಗೆ ಸುಬ್ಬುವು “ಏನಿಲ್ಲ ಕಿಟ್ಟಮ್ಮ, ಹೊಟ್ಟೆ ಹಸಿವು. ಅಷ್ಟೇ!” ಎಂದನು. ಅವಳು ಬಿಡಲಿಲ್ಲ. “ಹೊಟ್ಟೆ ಹಸಿವಾದರೆ ಮೊಕ ಸಪ್ಪಗಾಗುವ ರೀತಿಯೇ ಬೇರೆ. ಹೇಳುತೀಯೋ ಇಲ್ಲವೋ?” ಎಂದ ಛಲ ಹಿಡಿದಳು. ಸುಬ್ಬು ಯತ್ನವಿಲ್ಲದೆ ಹೇಳಬೇಕಾಯಿತು. “ನೋಡು ಕಿಟ್ಟಮ್ಮ, ಬ್ರಹೋತ್ಸವ ಎಂದರೆ ಸಾಮಾನ್ಯವಲ್ಲ, ಅದನ್ನು ನೋಡುವುದಕ್ಕೂ ಅದೃಷ್ಟವಿರಬೇಕು. ಅದರಲ್ಲೂ ಅಂತಹ ಉತ್ಸವ ಮಾಡಿಸುವವರ ಜೊತೆಯಲ್ಲಿಯೇ ಹೋಗಿ ಆ ಸ್ವಾಮಿಯನ್ನು ಕಣ್ಣಾರೆ ನೋಡಿಬರಬೇಕೆಂಬ ಆಸೆ ತುಂಬಿದೆ. ಅವರಿಗೆ ಕಾಗದ ಬರೆದರೂ ಅವರೇ ಹಣ ಕಳುಹಿಸುತ್ತಾರೆ. ನಾಚಿಕೆಯಿಲ್ಲದೆ ನಾನು ಬರಬೇಕಾದರೆ ಹಣ ಕಳುಹಿಸಿ ಎಂದು ಹೇಗೆ ಬರೆಯುವುದು ಹೇಳು” ಎಂದನು. ಅವನಿಗೆ ಮಿತಿಮೀರಿದ ದುಃಖದಿಂದ ಅವನೆಷ್ಟು ತಡೆದರೂ ನಿಲ್ಲದೆ ಒಂದು ತೊಟ್ಟು ನೀರೂ ಬಂತು.

ಕಿಟ್ಟಮ್ಮನ್ನು ನೋಡಿದಳು. ಅವಳಿಗೆ ಚುರ್ ಎಂದಿತು. ಹಾಗೆಯೇ ದುರುಗುಟ್ಟಿಕೊಂಡು ಒಂದು ಗಳಿಗೆ ನೋಡಿ “ಇದಕ್ಕೇ ನಿನ್ನ ಹೆಣ್ಣು ಮುಂಡೇಗಂಡ ಎನ್ನುವುದು. ದೇವರು ನಿನ್ನ ಗಂಡಸು ಅಂತ ಹುಟ್ಟಿಸುವ ಬದಲು ಹೆಂಗುಸಾಗಿ ಹುಟ್ಟಿಸಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು. ಈಗಲೂ ಲಕ್ಷಣವಾಗಿ ಸೀರೇ ಉಟ್ಟುಕೊಂಡು ಬಳೇ ಕೊಟ್ಟುಕೋ. ತಿರುಪತಿಗೆ ಹೋಗಬೇಕಾದರೆ ಎಷ್ಟು ಬೇಕೋ?” ಅಂದಳು.

”ಏನು 20 ರೂಪಾಯಿ ಆದರೆ ಸಾಕು”

“ಇಷ್ಟಕ್ಕೆ ಅಳುತ್ತಾ ಕುಳಿತಿದ್ದಾನೆ. ಏನು ಹೇಳಲೋ?” ಎಂದು ಕಿಟ್ಟಮ್ಮನು ಭರ್‍ರನೇ ಹೋಗಿ ತನ್ನ ದುಡ್ಡಿನ ಭರಣಿಯನ್ನು ತಂದಳು. ಅದನ್ನು ತೆಗೆದು ಮುಂದೆ ಸುರಿದು “ತಕ್ಕೊ, ಎಷ್ಟು ಬೇಕೋ?” ಎಂದಳು.

ಅದನ್ನು ಕಂಡು ಸುಬ್ಬುವಿಗೆ ದಿಗ್ಭ್ರಮೆಯಾಯಿತು. ಕೂಲಿಯಿಂದ ಜೀವನ ಮಾಡುವ ಹೆಂಗಸು ಒಂದು ಡಬ್ಬಿಯ ಹಣವನ್ನು ತಂದು ತನ್ನ ಮುಂದೆ ಸುರಿದಿದ್ದಾಳೆ. ಹತ್ತಿಪ್ಪತ್ತು ರೂಪಾಯಿಗಳೆಂದರೆ ಲಕ್ಷ್ಯವಿಲ್ಲದೆ ಖರ್ಚು ಮಾಡುವ ಗಂಡಸು ತಾನು ಇಪ್ಪತ್ತು ರೂಪಾಯಿಗೆ ಇಂದು ಅವಳ ಮುಂದೆ ತಿರುಪದವನಾಗಿ ನಿಂತಿದ್ದಾನೆ. ಅವಳು ವರವನ್ನು ಕೊಡುವ ದೇವತೆಗಿಂತ ಹೆಚ್ಚಾಗಿ ದುಡ್ಡಿನ ಸಣ್ಣ ರಾಸಿಯೊಂದನ್ನು ಮುಂದೆ ಸುರಿದಿದ್ದಾಳೆ. ತೆಗೆದುಕೋ ಎನ್ನುತ್ತಿದ್ದಾಳೆ. ಇವಳೇ ಲಕ್ಷಾಧಿಕಾರಿಯಾಗಿದ್ದರೆ? ಎನ್ನಿಸಿತು.

ಇದನ್ನು ಓದಿದ್ದೀರಾ?: ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಕತೆ | ಜೋಗ್ಯೋರ ಅಂಜಪ್ಪನ ಕೋಳಿ ಕತೆ

ಸುಬ್ಬು ಅಷ್ಟು ಹೊತ್ತು ಸುಮ್ಮನಿದ್ದು, “ನನಗಿಷ್ಟೆಲ್ಲ ಬೇಡ ಕಿಟ್ಟಮ್ಮ. ಇಪ್ಪತ್ತು ರೂಪಾಯಿ ಇದ್ದರೆ ಕೊಡು. ಸಾಕು” ಎಂದನು. ಕಿಟ್ಟಮ್ಮನು ಆ ಹಣದಲ್ಲಿ ಇಪ್ಪತ್ತು ರೂಪಾಯಿಗಳನ್ನು ಎಣಿಸಿ ಅವನ ಕೈಲಿಟ್ಟು, “ಇದು ನನ್ನ ಸಾಲ, ನಾನೇನಾದರೂ ಥಟ್ಟನೆ ಸತ್ತುಹೋದರೆ ಹೆಣ ಎತ್ತುವುದಕ್ಕೆ ಇದನ್ನು ಮೀಸಲಾಗಿಟ್ಟಿರಬೇಕು. ತಕೋ” ಎಂದಳು. ಸುಬ್ಬು “ಉಹುಂ, ಅದಾಗುವುದಿಲ್ಲ. ಸಾಲ ಅಂತ ಒಪ್ಪಿಕೊಳ್ಳುತ್ತೇನೆ. ಆದರೆ ನೀನು ಹೇಳುವ ನಿಬಂಧನೆಗೆ ಒಪ್ಪುವುದಿಲ್ಲ. ಸಾಲ ಅಂತ ಒಪ್ಪಿಕೊಂಡು ಹಣ ತಕ್ಕೊಂಡು, ಅಂಥಾ ಕಾಲಕ್ಕೆ ನನ್ನ ಬಳಿ ಇಲ್ಲದೇ ಹೋದರೆ, ಆಗ ಕಣ್ಣು ಬಾಯಿ ಬಿಡಲೆ? ಈಗ ತಿಮ್ಮಪ್ಪನ ದರ್ಶನಕ್ಕೆ ದುಡ್ಡು ಕೊಟ್ಟ ಕಿಟ್ಟಮ್ಮನ ಹೆಣ ಎತ್ತೋ ಸಾಲ ತೀರಿಸುವುದಕ್ಕೆ ಹಣ ಕೊಡಲು ಇನ್ನೊಬ್ಬಳು ಮೊಟ್ಟಮ್ಮನನ್ನು ಎಲ್ಲಿಂದ ತರಲಿ? ನಾನು ಹೋಗಿ ಬಂದು ಈ ಹಣ ನಿನಗೆ ಕೊಟ್ಟುಬಿಡುತ್ತೇನೆ. ಆಮೇಲೆ ನೀನೇ ಏನಾದರೂ ಉಪಾಯ ಮಾಡು” ಎಂದನು.

ಅವಳ ಮನಸ್ಸು ಅವನು ಮಾತನಾಡುತ್ತಿರುವಾಗ ಎಲ್ಲಿಯೋ ಹೋಗಿತ್ತು. ಕನಸಿನಲ್ಲಿ ಸುಬ್ಬುವು ಹೇಳಿದ್ದ ಮಾತು ನೆನಪಾಯಿತು, “ಹೌದು, ಹೌದು, ಶುದ್ಧ ದುಂದುಗಾರ ಹುಡುಗ ಇವನು. ಇವನಿಗೆ ಹಣ ಕೊಟ್ಟರೂ ಇಟ್ಟುಕೊಂಡಿರುವವನಲ್ಲ. ಅದಾಗುವುದಿಲ್ಲ. ಇನ್ನೇನಾದರೂ ಉಪಾಯ ಮಾಡಬೇಕು” ಎಂದುಕೊಂಡಳು. “ಸರಿ, ಏನು ಬೇಕಾದರೂ ಮಾಡು- ಈಗೇನು ದುಡ್ಡು ಬೇಕೋ ಬೇಡವೋ?” ಎಂದಳು. ಸುಬ್ಬು ಮಾತನಾಡಲಿಲ್ಲ. ರೂಪಾಯಿ ಎಣಿಸಿ ಇಟ್ಟುಕೊಂಡನು. ಮಿಕ್ಕ ದುಡ್ಡೆಲ್ಲವನ್ನು ಅವಳು ಡಬ್ಬಿಗೆ ತುಂಬಿಟ್ಟಳು.

ಮೂರು ಕನಸು ದೇವುಡು2

ಕಿಟ್ಟಮ್ಮನ್ನು ಎಂದಿನ ಹಾಗೆ ಒಳ್ಳೆಯ ಉಪ್ಪಿಟ್ಟು ಮಾಡಿಕೊಟ್ಟು ಅವನಿಗೆ ಲಕ್ಷಣವಾಗಿ ತಲೆಬಾಚಿ ಗಂಟು ಹಾಕಿ ಮೊಕ ತೊಳೆದು ಸಾದಿನ ಚುಕ್ಕೆ ಇಟ್ಟು ಕಳುಹಿಸಿಕೊಟ್ಟಳು. ಅವನು ಮನೆಗೆಂದು ಹೊರಟನು. ಅವನ ಮುಖವು ಹಿಡಿದಿದ್ದ ಗ್ರಹಣ ಬಿಟ್ಟ ಚಂದ್ರನಂತಾಗಿತ್ತು. ಹೋಗುತ್ತಿದ್ದವನನ್ನು ಇವಳು ಅಷ್ಟುಹೊತ್ತು ಕಣ್ಣು ತುಂಬಾ ನೋಡುತ್ತಿದ್ದು, “ಸುಬ್ಬು, ಸುಬ್ಬು, ಇಲ್ಲಿ ಬಾ ನಿನ್ನ ಹೆಂಡತಿ ಮೈನೆರೆದಳೆ? ಯಾವಾಗ ಪ್ರಸ್ತ?” ಸುಬ್ಬುವು “ಇನ್ನೂ ಮೈನೆರೆದಿಲ್ಲ” ಎಂದನು. ಕಿಟ್ಟಮ್ಮನಿಗೆ ಏನೋ ಭಾರ ಇಳಿದಂತಾಯಿತು.

3

ಸುಬ್ಬೂವೂ ಅವನ ಸ್ನೇಹಿತರೂ ಬಾಬಾಬುಡನ್ಗಿರಿಗೆ ಹೊರಟಿದ್ದಾರೆ. ದಾರಿಯಲ್ಲಿ ಬೇಲೂರು ನೋಡಿಕೊಂಡು ಹೋಗಬೇಕೆಂದು ಆಶೆಪಟ್ಟು ಬೇಲೂರಿನಲ್ಲಿ ಇಳಿದರು. ಒಂದು ಗುಂಪಿನ ಹುಡುಗರು ಎಲ್ಲರೂ ಸಮ ವಯಸ್ಕರು, ಯಾವ ಕಟ್ಟಿಗೂ ಒಳಪಡಬೇಕಾಗಿಲ್ಲವಾಗಿ ಬಾಯಿಗೆ ಬಂದ ಮಾತು ಆಡಿಕೊಂಡು ಸಿಕ್ಕಿದುದನ್ನು ತಿಂದುಕೊಂಡು ವಿಹಾರ ಮಾಡುತ್ತಿದ್ದಾರೆ. ಬೇಲೂರಿನಲ್ಲಿ ಮೂರು ದಿನ ಕ್ಯಾಂಪು ನಡೆಯಿತು. ಬೇಲೂರಿನ ವಿಚಾರವಾಗಿ ಭಾರಿಯ ಪುಸ್ತಕವನ್ನು ಬರೆಯಬೇಕೆಂದಿರುವವರು ಪ್ರತಿಯೊಂದು ಅಂಶವನ್ನೂ ಕಣ್ಣಿಟ್ಟು ನೋಡುವಂತೆ ಎಲ್ಲವನ್ನೂ ಕಣ್ಣಿಟ್ಟು ನೋಡಿದರು. ಶುದ್ಧ ಹುಡುಗರು, ಅಚ್ಚ ಪಟಿಂಗರು, ಬೇಲೂರಿನ ದೇವಸ್ಥಾನವನ್ನೆಲ್ಲ ನೋಡಿ ಬಂದು, “ಬಿಡೋ ಬಿಡೋ, ಸೋಮನಾಥಪುರದ ದೇವಾಲಯ ನೋಡಿದ ಮೇಲೆ ಇದಲ್ಲ. ಇದು ಬೀಡು ಬೀಡಾಗಿ ದೊಡ್ಡದಾಗಿ ಕಟ್ಟಿದೆ, ಅಷ್ಟೇ, ನಿಜವಾಗಿಯೂ ಸೋಮನಾಥಪುರದ ದೇವಸ್ಥಾನವೇ ಇದಕ್ಕಿಂತ ಸೊಗಸಾದುದು” ಎಂದು ಒಂದು ರೆಸಲ್ಯೂಷನ್ ಪಾಸ್ ಮಾಡಿಯೇಬಿಟ್ಟರು.

ಇದನ್ನು ಓದಿದ್ದೀರಾ?: ನವರತ್ನ ರಾಮರಾವ್ ಕತೆ | ತಾವರೆಕೋಟೆ

ಆ ಗುಂಪಿನಲ್ಲಿ ಒಬ್ಬನು ದೈವಭಕ್ತನು ಹುಟ್ಟಿಕೊಂಡನು. “ಅಯ್ಯಾ! ಮಹಾತ್ಮರಿರಾ! ಕೊಂಚ ತಡೆಯಿರಿ. ಸೋಮನಾಥಪುರದ ದೇವಾಲಯ ದೇವರಿಲ್ಲದ ದೇಗುಲ. ಅಲ್ಲದೆ ದಳವಾಯಿ ಕಟ್ಟಿಸಿದ್ದು. ಈ ಬೇಲೂರಿನ ದೇವಾಲಯದಲ್ಲಿ ಕೇಶವ ದೇವರಿಗೆ ಪೂಜೆ ನಡೆಯುತ್ತಿದೆ. ಅಲ್ಲದೆ ಅರಸನು ಕಟ್ಟಿಸಿದ ದೇವಸ್ಥಾನ. ನಿಜವಾಗಿಯೂ ತಾವೆಲ್ಲರೂ ಹೇಳುವಂತೆ ಸೋಮನಾಥಪುರದ್ದೇ ಶ್ರೇಷ್ಠವಾಗಿದ್ದರೆ ಅಲ್ಲಿ ಏಕೆ ಪೂಜೆ ನಡೆಯುತ್ತಿಲ್ಲ? ಅದರಿಂದ ಈ ರೆಸಲ್ಯೂಷನ್ ಈಗ ವಾಪಸು ತೆಗೆದುಕೊಳ್ಳಬೇಕು” ಎಂದನು.

ಮತ್ತೊಬ್ಬನು ಎದ್ದು ನಿಂತು “ನಾವು ರೆಸಲ್ಯೂಷನ್ ಪಾಸು ಮಾಡುವವರೆಗೂ ಈ ಬೃಹಸ್ಪತಿಗಳು ಮಲಗಿ ಏಕೆ ನಿದ್ದೆ ಹೊಡೆಯುತ್ತಿದ್ದರೋ ನಾನು ಕಾಣೆ! ಒಂದು ಸಲ ರೆಸಲ್ಯೂಷನ್ ಪಾಸಾದರೆ ಇನ್ನು ಮತ್ತೆ ಮೂರು ತಿಂಗಳ ಕಾಲ ಆ ವಿಷಯವನ್ನು ವಿಮರ್ಶೆಗೆ ತೆಗೆದುಕೊಳ್ಳಬಾರದು. ಅದರಂತೆ ಈ ಬೃಹಸ್ಪತಿಗಳ ರೆಸಲ್ಯೂಷನ್‌ನನ್ನು ಅವರ ಜೋಬಿಗೇ ಹಾಕಬೇಕಾಗಿ ನಮ್ಮ ವಿನಯಪೂರ್ವಕ ವಿಶೇಷ ವಿಜ್ಞಾಪನೆಗಳು” ಎಂದು.

ಇನ್ನೊಬ್ಬನು ಎದ್ದು ನಿಂತನು “ಒಂದು ರೆಸಲ್ಯೂಷನ್ ಪಾಸಾದರೆ ಅದಕ್ಕೆ ದೈವದತ್ತವಾದ ಅಧಿಕಾರ ಬಂದುಬಿಡುತ್ತದೆ. ಒಂದು ಸಲ ಫ್ರಾನ್ಸಿನಲ್ಲಿ ಯುದ್ಧದಲ್ಲಿ ಸತ್ತವರ ಹೆಸರುಗಳ ಪಟ್ಟಿ ಬಂತು: ವಾರ್ ಕೌನ್ಸಿಲ್‌ದವರು ಆ ಪಟ್ಟಿಯಲ್ಲಿದ್ದ ಹೆಸರುಗಳವರೆಲ್ಲ ಸತ್ತವರು ಎಂದು ಪ್ರಕಟಿಸಿಬಿಟ್ಟರು. ಆ ಪೈಕಿ ಒಬ್ಬ ನತದೃಷ್ಟನಿಗೆ ಇನ್ನೂ ಆಯುಸ್ಸು ಇತ್ತು. ಅವನು ಹಿಂದಿರುಗಿ ಬಂದು ಬದುಕಿದ್ದೇನೆ ಅಂದ. ಸರಕಾರವು ‘ನೀನು ಸತ್ತಿರುವೆಯೆಂದು ರೆಸಲ್ಯೂಷನ್ ಆಗಿಹೋಗಿದೆ. ಅದರಿಂದ ಈಗ ನಾವು ನಿನ್ನನ್ನು ಬದುಕಿರುವವನೆಂದು ಒಪ್ಪುವುದಕ್ಕೆ ಆಗುವುದಿಲ್ಲ’ ಎಂದರು. ಅವನು ಹಾಗೆಯೇ ಅನೇಕ ಕಾಲವಿದ್ದು ಸರಕಾರದ ಸಿದ್ಧಾಂತವನ್ನು ಕೊನೆಗೆ ತಾನೂ ಒಪ್ಪಿಕೊಂಡು ಸತ್ತವರ ಲೆಕ್ಕದಲ್ಲಿ ಸೇರಿಹೋದನಂತೆ…”

ಇವನು ಹೀಗೆ ಮಾತಾಡುತ್ತಿರುವಾಗಲೇ ಇನ್ನೊಬ್ಬನು ಎದ್ದು ನಿಂತು “ಮಾನ್ಯ ಅಧ್ಯಕ್ಷರೆ, ಬದುಕಿದ್ದರೂ ಸತ್ತಿದ್ದನಲ್ಲ ಅವನ ಹೆಸರೇನು? ಅವನ ಹೆಂಡತಿಯೇನು ವಿಧವೆಯೇ? ಸಧವೆಯೇ? ಅವಳಿಗೆ ವಾರ್ ವಿಡೋ ಪೆನ್‌ಷನ್ ದೊರೆದಿತ್ತೇ? ಇಲ್ಲವೇ? ಈ ಅಂಶವನ್ನು ದಯವಿಟ್ಟು ಅಪ್ಪಣೆ ಕೊಡಿಸಬೇಕೆಂದು ಪ್ರಾರ್ಥನೆ” ಎಂದನು. ಇನ್ನೊಬ್ಬನು ಎದ್ದು ನಿಂತು, “ಸ್ವಾಮಿ ಇದೆಲ್ಲ ಅನ್ನೆಸಸರಿ ಡೀಟೇಲ್ಸ್. ಈಗ ಇರುವ ವಿಷಯ ರೆಸಲ್ಯೂಷನ್ ಪ್ಯಾಸ್ ಆದರೆ ಆ ರೆಸಲ್ಯೂಷನ್ ಮೇಲೆ ಮತ್ತೆ ಮಾತನಾಡಬಹುದೆ ಎಂಬುದು. ಆದ್ದರಿಂದ ಇದನ್ನೆಲ್ಲ ಬಿಟ್ಟು ವಿಷಯವನ್ನು ಓಟಿಗೆ ಹಾಕಬೇಕು” ಎಂದನು.

ಸುಬ್ಬುವು ಎದ್ದು ನಿಂತನು. ಎಲ್ಲರಿಗೂ ಅವನ ವಿಷಯದಲ್ಲಿ ಆದರ. ಅವನಿಗೆ ಅವನ ಸ್ನೇಹಿತರೆಲ್ಲ ”ಫೇರ್ ಇನ್ ಅಂಡ್ ಔಟ್” ಎಂದು ಒಂದು ಸಣ್ಣ ಟೈಟಲ್ ಕೊಟ್ಟಿದ್ದರು. ಅದರಿಂದ ಎಲ್ಲರೂ ವೇಯಿಟ್ ವೇಯಿಟ್ ಸುಬ್ಬೂ ಸ್ಪೀಕ್ಸ್ ಎಂದು ಸುಮ್ಮನಾದರು.

ಸುಬ್ಬುವು ಹೇಳಿದನು- “ನಾವು ರೆಸಲ್ಯೂಷನ್ ಪಾಸು ಮಾಡಿದಾಗ ಇಲ್ಲಿ ಪೂಜೆ ಆಗುತ್ತಿದೆ, ಅಲ್ಲಿ ಪೂಜೆಯಾಗುತ್ತಿಲ್ಲ ಎಂಬ ವಿಷಯವಾಗಲಿ, ಇದನ್ನು ಕಟ್ಟಿಸಿದವರು ಯಾರೆಂದಾಗಲಿ ಗಮನಿಸಲಿಲ್ಲ. ಗಮನಿಸಬೇಕಾಗಿಯೂ ಇರಲಿಲ್ಲ. ಶಿಲ್ಪಕಲಾ ನೈಪುಣ್ಯ ಅಲ್ಲಿ ಹೆಚ್ಚೇ ಇಲ್ಲಿ ಹೆಚ್ಚೇ ಎಂಬುದಿಷ್ಟೇ ಗಮನದಲ್ಲಿದ್ದುವು. ಆ ದೃಷ್ಟಿಯಿಂದ ನಾವು ರೆಸಲ್ಯೂಷನ್ ಪಾಸು ಮಾಡಿದ್ದೇವೆ. ಈಗ ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಮ||ರಾ||ಶ್ರೀ॥ ಮೂರ್ತಿಯವರು ತಂದಿರುವ ವಿಷಯವೂ ಬಹಳ ಭಾರಿಯೇ ಆದುದು. ಪೂಜೆ ನಡೆಯುತ್ತಿರುವ ದೇವಸ್ಥಾನದ ಆಶ್ರಯದಲ್ಲಿ ನಿಂತು ಎಲ್ಲಿಯೋ ದೂರದಲ್ಲಿ ಎಂದೋ ಪೂಜೆ ನಡೆಯದೆ ನಿಂತುಹೋಗಿರುವ ದೇವಸ್ಥಾನವೇ ಶ್ರೇಷ್ಠವೆಂದು ಅಭಿಪ್ರಾಯಪಡುವುದು ಈಗ ಅಧಿಕಾರದಲ್ಲಿರುವ ಡೆಪ್ಯುಟಿ ಕಮೀಷನರ ಹತ್ತಿರ ಹೋಗಿ ‘ಸ್ವಾಮಿ! ನಿಮಗಿಂತ ನಿಮ್ಮ ಹಿಂದೆ ಇದ್ದ ಸಾಹೇಬರು ಉತ್ತಮರು’ ಎಂದು ಹೇಳಿ ಅವರ ಕೋಪವನ್ನು ಸಂಪಾದಿಸಿದಂತೆ. ಆದ್ದರಿಂದ ಮ||ರಾ||ಶ್ರೀ॥ ಮೂರ್ತಿಯವರು ತಂದಿರುವ ಈ ಮಹತ್ತರ ವಿಷಯವನ್ನು ಬೇರೊಂದು ರೆಸಲ್ಯೂಷನ್ ಆಗಿ ತರಲಿ. ಜೊತೆಗೆ ಈ ಅಪರಾಧದ ಪ್ರಾಯಶ್ಚಿತ್ತಕ್ಕಾಗಿ ಈ ದಿನ ಕೇಶವಸ್ವಾಮಿಯವರಿಗೆ ಪುಳಿಯೋಗರೆ, ದಧ್ಯೋದನ ನೇವೇದ್ಯವನ್ನು ಮಾಡಿಸಿ, ಇಲ್ಲಿರುವವರೆಲ್ಲರೂ ಆ ಪ್ರಸಾದವನ್ನು ಪುಷ್ಕಳವಾಗಿ ಸ್ವೀಕರಿಸಿ, ಕೇಶವದೇವರಲ್ಲಿ ತಮಗಿರುವ ಭಕ್ತಿಯನ್ನೂ ಗೌರವವನ್ನೂ ಪ್ರಕಟಿಸಬೇಕು” ಎಂದನು.

ಇದನ್ನು ಓದಿದ್ದೀರಾ?: ಸೇಡಿಯಾಪು ಕೃಷ್ಣಭಟ್ಟರ ಕತೆ | ನಾಗರ ಬೆತ್ತ

ಸಭಿಕರೆಲ್ಲರಿಗೂ ಬಹಳ ಸಂತೋಷವಾಯಿತು. “ಹೌದೋ ಸುಬ್ಬು, ನೀನು ಎಲ್ಲಿ ವಿಷಯ ಆರಂಭಿಸಿದರೂ ಅದು ಮುಗಿಯುವುದು ಯಾವುದಾದರೊಂದು ಔತಣದಲ್ಲಿ. ಇಂಥವನೊಬ್ಬ ಪಾರ್ಟಿಯಲ್ಲಿದ್ದರೆ, ನಾವು ಸಹರಾ ಕೂಡ ಸುಖವಾಗಿ ದಾಟಿ ಬರಬಹುದು” ಎಂದರು. ಅದರಂತೆಯೇ ರೆಸಲ್ಯೂಷನ್ ಪಾಸಾಯಿತು. ಆ ದಿನ ಎಲ್ಲರೂ ಸೇರಿ ಕೇಶವಸ್ವಾಮಿಯವರಿಗೆ ಅಮೋಘವಾದ ಪಾರ್ಟಿ ಮಾಡಿದರು.

ಆ ದಿನ ರಾತ್ರಿ ಮನೋಹರವಾದ ಬೆಳದಿಂಗಳಲ್ಲಿ ಹುಳಿಯನ್ನ ಮೊಸರನ್ನಗಳ ರುಚಿಯಲ್ಲಿ ಇವರು ಕಾಲವನ್ನೇ ಮರೆತುಬಿಟ್ಟಿದ್ದರು. ಇವರಿಗೆ ನಿದ್ರಾದೇವಿಯ ಅನುಗ್ರಹವಾದಾಗ ತಾಲೋಕ್ ಆಫೀಸಿನ ನಿದ್ದೆಗಣ್ಣಿನ ಸಂತ್ರಿಯು ಎರಡು ಗಂಟೆಯನ್ನು ಹೊಡೆದನು: ಆದರೆ ಪಾರ್ಟಿಯವರೆಲ್ಲ ನಿದ್ದೆಯ ಕಡೆ ತಿರುಗಿದ್ದರು. ಅದರಿಂದ ಅವರು ಅದನ್ನು ಅಷ್ಟಾಗಿ ಗಮನಿಸಲಿಲ್ಲ.

ಆ ದಿನ ರಾತ್ರಿ ಸುಬ್ಬುವಿಗೆ ನಿದ್ದೆ ಬರಲಿಲ್ಲ. ಅದು ಆ ಹುಳಿಯನ್ನದಲ್ಲಿ ಸೋರುತ್ತಿದ್ದ ಎಣ್ಣೆಯ ಪ್ರಭಾವವೋ, ಅಥವಾ ಮನೆಯಲ್ಲಿ ಬಿಟ್ಟು ಬಂದಿದ್ದ ನಾಲೈದು ತಿಂಗಳ ಬಸುರಿ ಹೆಂಡತಿಯನ್ನು ನೆನೆದುಕೊಂಡುದರ ಪ್ರಭಾವವೋ ಸರಿಯಾಗಿ ಹೇಳಬರುವಂತಿಲ್ಲ. ಅಂತೂ ನಿದ್ದೆ ಬರಲಿಲ್ಲ. ನಿದ್ದೆ ಒಂದು ಬರದೆ ಹೋದರೆ, ತಕ್ಕೊಳ್ಳಿ, ತಲೆಯ ತುಂಬ ಏನೇನೋ ಯೋಚನೆಗಳು ತುಂಬಿ ಹೋಗುವುವು. ಮನಸ್ಸು ಎಲ್ಲಿ ಇಲ್ಲದ ಉತ್ಸಾಹದಿಂದ ಬೇಕು ಬೇಡವಾದ ಎಷ್ಟೋ ಆಲೋಚನೆಗಳನ್ನು ಹಿಡಿದು ತಂದು ಎದುರಿಗೆ ಕುಣಿಸುವುದು. ಅದು ಏನೋ ‘ಕೆಂಚಿನಾಲ್’ ಎಂದು ಒಂದು ಔಷಧಿ ಕಂಡುಹಿಡಿದಿರುವಂತೆ. ಅದೂ ಒಂದು ವನಸ್ಪತಿಯಿಂದ ಆಗುವುದಂತೆ; ಅದನ್ನು ಪ್ರಾಣಿಗಳಿಗೂ ಗಿಡ ಮರಗಳಿಗೂ ಪ್ರಯೋಗಿಸಿದರೆ, ಅದ್ಭುತವಾದ ಪರಿಣಾಮಗಳು ಆಗುವುದಂತೆ. ಬಂಜೆಯವರಿಗೆ ಮಕ್ಕಳಾಗುವುವುವಂತೆ, ಕುರುಚುಗಿಡಗಳು ಎತ್ತರವಾಗಿ ಚೆನ್ನಾಗಿ ಬೆಳೆಯುವುವಂತೆ! ಆ ಕೆಂಚಿನಾಲ್ ತಂದು ಮೂಲಂಗಿ-ಬದನೆಗಳೆರಡರ ಗುಣಗಳನ್ನು ಉಳ್ಳ ಒಂದು ತಳಿಯನ್ನು ಬೆಳೆಸಬೇಕು. ಮೇಲೆ ಗಿಡದ ತುಂಬಾ ಬದನೇಕಾಯಿ ಬಿಟ್ಟರೆ ಬುಡದಲ್ಲೆಲ್ಲಾ ಬೇರಿಗೊಂದು ಮೂಲಂಗಿ ಗಡ್ಡೆಯಾಗಬೇಕು-ಹಾಗೆ ಮಾಡಬೇಕು. ಇರಲಿ ಮೂಲಂಗಿ-ಬದನೆಕಾಯಿ ಬೇಳೆ ಹುಳಿ ಏಕೆ ಮಾಡಬಾರದು? ಎಂದು ಕೊನೆಕೊನೆಯಲ್ಲಿ ಒಂದು ಜಂಪು ಹಿಡಿದು ಕಣ್ಣು ಮುಚ್ಚಿತು. ಕೂಡಲೇ ಒಂದು ಕನಸು.

ಆ ಕನಸಿನಲ್ಲಿ ಒಂದು ದೊಡ್ಡ ಯುದ್ಧವಾಗಿ ಹೋಗಿದೆ. ಅದರಲ್ಲಿ ಯಾರೋ ಶತ್ರುಗಳು ಬಂದು ಒಂದು ನಗರವನ್ನು ಮುತ್ತಿ ಅಲ್ಲಿರುವವರನ್ನೆಲ್ಲ ನಿಷ್ಕರುಣೆಯಿಂದ ಧ್ವಂಸಮಾಡುತ್ತಿದ್ದಾರೆ. ಅಲ್ಲಿಗೆ ತಾನೇ ದಳವಾಯಿಯಾಗಿರುವಂತೆಯೂ ತನಗೆ ಗೊತ್ತಿಲ್ಲದಂತೆಯೇ ದುರ್ಗವು ತನ್ನ ಕೈಬಿಟ್ಟು ಹೋಗಿರುವಂತೆಯೂ ಭಾಸವಾಗುತ್ತಿದೆ. ಕೈಮೀರಿಹೋಯಿತು. ಇನ್ನು ಪ್ರಯೋಜನವಿಲ್ಲ ಎಂದುಕೊಂಡು, ‘ಇರುವುದು ಇವರ ಕೈಗೆ ಬೀಳಬಾರದು’ ಎಂದು ತಾನೇ ಬೆಂಕಿಯನ್ನು ತೆಗೆದುಕೊಂಡು ಮದ್ದಿನ ಮನೆಗೆ ತೋರಿಸಬೇಕೆಂದಿರುವಾಗ ಯಾರೋ ಬಂದು ”ಅಹಹಾ! ಆ ಕೆಲಸ ನೀನು ಮಾಡಬಾರದು. ಕಾಯುವುದಕ್ಕೆಂದಿದ್ದವರು ಕೊಲೆಗಾರರಾಗಬಾರದು. ಆ ಕೆಲಸ ನಮಗೆ ಬಿಡಿ” ಎನ್ನುತ್ತಾರೆ. ಮದ್ದಿನ ಮನೆ ಸಿಡಿಯುತ್ತದೆ, ಆ ಭಾರಿಯ ಸದ್ದುಗಳ ಸಿಡಿಲು ಗುಡುಗುಗಳ ನಡುವೆ ಇವನಿಗೆ ಎಚ್ಚರವಾಗಿ ಹೋಯಿತು.

ಇದನ್ನು ಓದಿದ್ದೀರಾ?: ಎಸ್.ಜಿ. ಶಾಸ್ತ್ರಿಯವರ ಕತೆ | ಹಬ್ಬದ ಉಡುಗೊರೆ

ಸುಬ್ಬು ಕನಸಿನ ಅರ್ಥವನ್ನು ತಿಳಿಯಲಾರದೆ ಹೋದ. ತಾನು ದಳವಾಯಿ. ತನ್ನ ರಕ್ಷಣೆಯಲ್ಲಿದ್ದ ದುರ್ಗ ಕೊಳ್ಳೆಹೋಯಿತು. ಎದ್ದರೆ ಮನಸ್ಸೆಲ್ಲವೂ ಹೆಂಡತಿಯ ಕಡೆಗೆ ಓಡಿತು. ಹೆಂಡತಿಗೆ ಏನಾಗಿ ಹೋಗಿದೆಯೋ ಎನ್ನಿಸಿತು. ಅವಳಿಗೆ ಮೊದಲನೆಯ ಬಸುರು, ಹೀಗೆ ಪಾರ್ಟಿ ಜೊತೆಯಲ್ಲಿ ಹೊರಡುವುದು ಇವನಿಗೂ ಬೇಡ, ಅವಳಿಗೂ ಬೇಡ, ಆದರೂ ಯತ್ನವಿಲ್ಲದೆ ಬಲವಂತಕ್ಕೆಂದು ಇಬ್ಬರೂ ಒಪ್ಪಿದರು. ಈ ರಾತ್ರಿಯೂ ಪುಳಿಯೋಗರೆ ತಿನ್ನುವಾಗಲು ಅವನಿಗೆ ಆ ಹೆಂಡತಿಯ ಯೋಚನೆಯೇ. ಸಾಧ್ಯವಾಗಿದ್ದರೆ ಟೆಲಿಗ್ರಾಂ ಮೇಲೆ ಟೆಲಿಗ್ರಾಂ ಕಳುಹಿಸುವುದಕ್ಕೂ ಅವನು ಹಿಂದೆಗೆಯುತ್ತಿರಲಿಲ್ಲ.

ಬೆಳಗಾಯಿತು. ಬೆಳಗಾಗುತ್ತ ಕನಸಿನ ಕಳವಳ ಹೆಚ್ಚಾಯಿತು. ಪಾರ್ಟಿಯವರಿಗೆ ಏನೂ ಕಾರಣ ಹೇಳದೆ, ಅವರೆಲ್ಲ ಅಸಮಾಧಾನ ಮಾಡುತ್ತಿದ್ದರೂ ಗಮನಿಸದೆ ಸುಬ್ಬೂ ಅಂದಿನ ಬಸ್ಸಿನಲ್ಲಿ ಊರಿಗೆ ಹೊರಟೇ ಬಿಟ್ಟನು.

ಪಾರ್ಟಿಯ ಮಿತ್ರರೆಲ್ಲರೂ ಸುಬ್ಬುವಿನ ಅವಸರ ಪ್ರಯಾಣಕ್ಕೆ ಕಾರಣವೇನಿರಬಹುದು ಎಂದು ಬಹಳವಾಗಿ ವಿಚಾರಿಸಿದರು. ಹೆಂಡತಿಯ ನೆನಪಾಗಿರಬೇಕು. ಹೊಸದಾಗಿ ಪ್ರಸ್ತವಾಗಿದೆ ಎಂದರೊಬ್ಬರು. ಅಂಥವನು ಬಿಟ್ಟು ಏಕೆ ಬರಬೇಕಾಗಿತ್ತು ಎಂದರಿನ್ನೊಬ್ಬರು. ಅಲ್ಲಾ ಕಣೋ, ನಿನ್ನೆ ಕೇಶವದೇವ್ರನ್ನ ಹಾಸ್ಯ ಮಾಡಿದ್ದ. ಅದಕ್ಕಿವತ್ತು ಕೇಶವನ ದರ್ಶನ ಮಾಡೋಕೆ ಹೆದರಿಕೊಂಡ ಎಂದರು ಮತ್ತೊಬ್ಬರು. ಇನ್ನೊಬ್ಬರು, ನಮ್ಮ ಹಿಂದೂ ದೇವತೆಗಳು ಹಾಗೇನು ಮಾಡೋದಿಲ್ಲ. ಅವರಿಗೂ ನಮ್ಮ ಹಾಗೆ ಹಾಸ್ಯ, ತಮಾಷೆ, ವಿನೋದ ಬಹಳ ಬೇಕು, ಕಲ್ಯಾಣೋತ್ಸವಗಳಲ್ಲಿ ನೋಡಿ, ದೇವರು ಸೂಳೆಯ ಮನೆಗೆ ಹೋಗುವ ರಸಿಕ ಶಿಖಾಮಣಿಯೂ ಆಗುವುದಿಲ್ಲವೇ? ಎಂದರು. ಕೊನೆಯವರು ನಮ್ಮ ಧರ್ಮವೂ ಬ್ರಿಟಿಷರ ಹಾಗೆ ಕಾಣೋ. ಅವರೊಬ್ಬ ದೊರೇನ ಕೊಂದರು. ಇನ್ನಿಬ್ಬರು ದೊರೆಗಳನ್ನು ಓಡಿಸಿದರು. ಆದರೂ ಅವರ ಲಾಯಲ್ಟಿ ಇನ್ನು ಯಾರಿಗಾದರೂ ಉಂಟೇ? ಹಾಗೆ ನಾವು ನಮ್ಮ ದೇವರುಗಳನ್ನೆಲ್ಲ ಪಜೀತಿ ಹಿಡಿಸಿದರೂ ನಮ್ಮ ಲಾಯಲ್ಟಿ ಬಿಡುವುದಿಲ್ಲ. ಅದರಿಂದ ನಮ್ಮ ದೇವರುಗಳು ನಾವೇನು ಮಾಡಿದರೂ ಒಪ್ಪಿಕೊಳ್ಳುತ್ತಾರೆ ಎಂದರು.

ಕೊನೆಗೆ ದೇವರುಗಳ ವಿಷಯ ವಿಪುಲವಾಗಿ ಚರ್ಚೆಯಾಗಿ ಸುಬ್ಬೂ ಒಬ್ಬ ಖಯಾಲಿ ಎಂದು ಇತ್ಯರ್ಥವಾಯಿತು.

ಮೂರು ಕನಸು ದೇವುಡು3

ಸುಬ್ಬೂ ಅವಸರವಾಗಿ ಬಸ್ಸು ಇಳಿದು ಗಾಡಿ ಮಾಡಿಕೊಂಡು ಮನೆಗೆ ಓಡಿಬಂದನು. ಬರುತ್ತಿದ್ದ ಹಾಗೆಯೇ ದೂರದಿಂದಲೇ ಬಾಗಿಲ ಕಡೆ ನೋಡಿದನು. ದೀಪ ಕಾಣಿಸಲಿಲ್ಲ. ಎದೆ ಖಳಕ್ಕೆಂದಿತು. ಗಂಟಲಲ್ಲಿ ಏನೋ ತಗಲಿಕೊಂಡು ಉಸಿರಾಡುವುದೇ ಕಷ್ಟವಾಯಿತು. ಏನು ಆಗಿ ಹೋಗಿದೆಯೋ ಎಂದುಕೊಂಡು ಗಾಬರಿ ಗಾಬರಿಪಡುತ್ತ ಮನೆಗೆ ಹೋದನು. ಬಾಗಿಲು ಮುಚ್ಚಿತ್ತು, ಅಗುಳಿ ಹಾಕಿತ್ತು. ಹೆಂಡತಿಯನ್ನು ಹೆಸರಿಟ್ಟು ಕೂಗಿದನು. ಮೊದಲನೆಯ ಕೂಗಿಗೆ ಉತ್ತರ ಬರಲಿಲ್ಲ. ಎದೆ ಝಲ್ಲೆಂದಿತು. ಬಹು ಕಷ್ಟಪಟ್ಟು ಎರಡನೆಯ ಸಲ ಕೂಗಿದನು. ಅದಕ್ಕೂ ಉತ್ತರ ಬರಲಿಲ್ಲ. ಅವನಿಗೆ ಕಳವಳ ಹೆಚ್ಚಾಯಿತು. ಬಾಗಿಲನ್ನು ಧಡಧಡ ಎಂದು ಬಲವಾಗಿ ತಟ್ಟಿದನು. ಕೊನೆಗೆ ಹಿತ್ತಲ ಕೊನೆಯಿಂದ ಬಂದೆ ಎಂದು ಉತ್ತರ ಬಂತು. ಅವನಿಗೆ ಎದೆ ಪಟ್ ಪಟ್ ಎಂದು ಹಾರುತ್ತಿದ್ದುದು నింತಿತು.

ಇದನ್ನು ಓದಿದ್ದೀರಾ?: ಕೊರಡ್ಕಲ್ ಶ್ರೀನಿವಾಸರಾವ್ ಅವರ ಕತೆ | ಧನಿಯರ ಸತ್ಯನಾರಾಯಣ

ಇನ್ನೊಂದು ಗಳಿಗೆಯೊಳಗಾಗಿ ಅವನ ಪ್ರೇಮಪುತ್ಥಳಿಯು ಬೇಗಬೇಗ ಬಂದು ಬಾಗಿಲು ತೆಗೆದಳು. ಸುಬ್ಬೂ ಗಾಡಿಯವನು ಅಲ್ಲಿ ನಿಂತಿರುವನು ಎಂಬುದನ್ನೂ ಮರೆತು “ಚೆನ್ನಾಗಿದ್ದೀಯಾ ತಾನೇ?” ಎಂದು ಹೆಂಡತಿಯನ್ನು ತಬ್ಬಿಕೊಂಡನು. ಅನಿರೀಕ್ಷಿತವಾಗಿ ಲಭಿಸಿದ ಪ್ರಿಯನ ಆಲಿಂಗನವನ್ನು ಆ ಹರೆಯದ ಹುಡುಗಿಯೂ ಆದರದಿಂದ ಸ್ವೀಕರಿಸಿ ತಾನೂ ಅಪ್ಪಿಕೊಂಡಳು. ಒಬ್ಬರನ್ನೊಬ್ಬರು ಗಾಢವಾಗಿ ಅಪ್ಪಿಕೊಂಡು ಚುಂಬಿಸಿದರು. ಆ ಮೋಹದ ಆವೇಶವು ಮೂರನೆಯ ಚುಂಬನದಿಂದ ಅಷ್ಟು ಇಳಿದಾಗ ಇಬ್ಬರಿಗೂ ಗಾಡಿಯವನು ಅಲ್ಲಿಯೇ ಇರುವುದು ಕಾಣಿಸಿತು. ಸುಬ್ಬು ಅವನಿಗೆ ಒಂದಾಣೆ ಹೆಚ್ಚಾಗಿ ಬಾಡಿಗೆಯನ್ನು ಕೊಟ್ಟನು.

ಸುಖಿಗಳ ದರ್ಶನದಿಂದ ತಾನೂ ಸುಖಿಯಾಗಿ ಜಟಕಾದವನು ‘ಅರೆ ಮೇರೆ ಪ್ಯಾರೆ ಸುನೋ’ ಎಂದು ಹಾಡುತ್ತ ಗಾಡಿ ಓಡಿಸಿಕೊಂಡು ಹೋದನು.

4

ಸುಬ್ಬು ಮರುದಿನವೆಲ್ಲ ಯೋಚಿಸಿದ್ದೂ ಯೋಚಿಸಿದ್ದೇ. ಹೆಂಡತಿಯಂತೂ ಆರೋಗ್ಯವಾಗಿದ್ದಾಳೆ. ಇನ್ನು ಯಾರಿಗೆ ಈ ಕನಸು ಅನ್ವಯಿಸುವುದು ಎಂದು ತಲೆಯನ್ನು ಬೇಕಾದಷ್ಟು ಕೆರೆದುಕೊಂಡನು. ಕನಸು ಕೆಟ್ಟದು. ಯಾರಿಗೋ ಹಾನಿಯನ್ನು ಸೂಚಿಸುವುದೆಂದು ಅವನಿಗೆ ಏನೋ ಒಂದು ಭಾವನೆ. ಅವನು ಕನಸಿನ ಅಂಶವೊಂದನ್ನು ತೆಗೆದುಕೊಂಡು ಇದು ಹೀಗೆ ಹೀಗೆ, ಈ ಕಾರಣದಿಂದ ಕೆಟ್ಟುದು ಎಂದು ವಿವರಿಸಿ ಹೇಳಲಾರನಾದರೂ ಅದು ಕೆಟ್ಟದು ಎಂಬ ನಿಶ್ಚಯವನ್ನು ಮಾತ್ರ ಬಿಡಲಾರ. ತನ್ನ ತಾಯಿಗೇನಾಗಿದೆಯೋ ತಂಗಿಗೇನಾಗಿದೆಯೋ ಎಂದುಕೊಂಡು, ತಂಗಿಗೆ ಒಂದು ಟೆಲಿಗ್ರಾಂ ಕಳುಹಿಸಿದ. ತಾಯಿಯನ್ನು ನೋಡಿಕೊಂಡು ಬರುವುದಕ್ಕೆ ತಾನೇ ಹೋದ, ಆ ಎರಡು ಕಡೆಯೂ ಸೌಖ್ಯವಾಗಿರುವುದನ್ನು ಅರಿತು ಮನಸ್ಸಿಗೆ ಅರ್ಧ ಸಮಾಧಾನವಾಯಿತು. ಆದರೂ ಕಳವಳ ತಪ್ಪಲಿಲ್ಲ, ಯಾವ ಕೆಲಸಕ್ಕೆ ಕುಳಿತರೂ ಯಾರೋ ಬಂದು ತನ್ನ ಸುತ್ತಲೂ ಅದೃಶ್ಯವಾಗಿ ತಿರುಗುತ್ತಿರುವಂತೆ ಭಾಸವಾಗುವುದು. ಯಾವುದೋ ಕಾಣದ ಆಕ್ರಂದನವನ್ನು ಕೇಳಿ ಮನಸ್ಸು ಕಾತರವಾಗಿ ಅಲ್ಲಿಗೆ ಓಡಿಹೋಗಿ ಸಹಾಯವನ್ನು ನೀಡಬೇಕು ಎನ್ನಿಸುವುದು. ಆದರೂ ಅದೃಶ್ಯವಾಗಿ ತಿರುಗುವವರು ಯಾರು? ಆ ಆಕ್ರಂದನ ಧ್ವನಿಯು ಯಾರದು? ಎಂಬುದು ಅರ್ಥವಾಗದೆ ಮನಸ್ಸು ಒದ್ದಾಡುವುದು.

ಹೀಗೆ ಎರಡು ದಿನವಾಯಿತು. ಮಧ್ಯಾಹ್ನ ಹನ್ನೆರಡು ಗಂಟೆ, ಆಗ ತಾನೇ ಊಟವಾಗಿದೆ. ಅವನ ಹೆಂಡತಿ ಎಲೆಗೆ ಬಡಿಸಿಕೊಂಡು ಊಟಕ್ಕೆ ಕುಳಿತುಕೊಳ್ಳುತ್ತಿದ್ದಾಳೆ. ಇವನಿಗೆ ಏನೋ ಸಂಕಟ, ಕುಳಿತುಕೊಳ್ಳುವುದಕ್ಕೆ ಆಗದೆ ಹೋಯಿತು. ಹೆಂಡತಿಯು ಊಟಮಾಡಿ ಬಂದು ಅಡಕೆಲೆ ಕೊಡುತ್ತೇನೆ ಎಂದರೆ ಅದಕ್ಕೆ ತಡೆಯುವುದಕ್ಕೂ ಮನಸ್ಸಿಲ್ಲ. ಅವಳೇನಾದರೂ ಅಂದುಕೊಂಡಾಳು ಎಂದು ತಡೆದಿದ್ದು ಅಡಕೆಲೆಯನ್ನು ಅಗಿಯುವುದಕ್ಕೂ ತೋರದೆ ಹೊರಕ್ಕೆ ಹೊರಟುಬಿಟ್ಟನು. ಎಲ್ಲಿಗೆ ಹೊರಟಿರುವೆನೆಂಬುದು ಅವನಿಗೇ ತಿಳಿಯದು, ಅಂತೂ ಹೊರಟಿದ್ದಾನೆ.

ಹೀಗೆ ಎಲ್ಲಿಗೆ ಏತಕ್ಕೆ ಹೋಗುತ್ತಿರುವೆನೆಂಬುದೇ ತಿಳಿಯದೆ, ನೀರು ಬಿದ್ದರೆ ಚೊಯ್ ಎನ್ನುವಷ್ಟು ಕಾದಿರುವ ನೆಲದಮೇಲೆ ಕೊಡೆಯೂ ಇಲ್ಲದೆ ಸುಟ್ಟೂ ಹೋಗುತ್ತಿದ್ದಾನೆ. ಆಗ ಯಾರೋ “ಎಲ್ರಿ ಸುಬ್ಬರಾಯರೇ, ಸುಬ್ಬರಾಯರೇ?” ಎಂದು ಕೂಗಿದರು. ಇವನು ಹಿಂತಿರುಗಿ ನೋಡಿದನು. ಅವನು ಓಡುತ್ತಾ ಬಂದು “ಮೊದಲು ಊರುಬಿಟ್ಟು ಹೊರಟುಹೋಗಿ. ಪೊಲೀಸಿನವರು ನಿಮ್ಮನ್ನು ಹುಡುಕುತ್ತಿದ್ದಾರೆ. ಕಿಟ್ಟಮ್ಮನನ್ನು ನಿನ್ನೆ ಯಾರೋ ಕತ್ತು ಹಿಸಿಕಿ ಕೊಂದು ಅವಳ ಹಣ ಕಾಸು ಎಲ್ಲ ಹೊತ್ತುಕೊಂಡು ಹೋಗಿದ್ದಾರೆ. ಅವಳು ರಾತ್ರಿ ಹತ್ತುಹನ್ನೊಂದು ಗಂಟೆವರೆಗೂ, ಸುಬ್ಬು, ಸುಬ್ಬು, ಎಂತ ಒರಲಿಕೊಳ್ಳುತ್ತಿದ್ದಳಂತೆ. ಆ ಸುತ್ತಮುತ್ತಿನವರಿಗೆ ಯಾರಿಗೂ ಆ ಸುಬ್ಬು ಅನ್ನೋರು ಯಾರು ಎಂಬುದು ತಿಳಿಯದು. ಈಗ ಪೊಲೀಸಿನವರು ಆ ಸುಬ್ಬು ಯಾರು ಎಂದು ಹುಡುಕುತ್ತಿದ್ದಾರೆ. ನೀವು ಅಂತ ತಿಳಿದರೆ ತಕ್ಷಣ ಅರೆಸ್ಟ್ ಮಾಡುತ್ತಾರೆ” ಎಂದನು.

ಇದನ್ನು ಓದಿದ್ದೀರಾ?: ಎಂ. ಎನ್. ಕಾಮತ್‌ರ ಕತೆ | ಕದ್ದವರು ಯಾರು?

ಸುಬ್ಬುವಿಗೆ ತಲೆಯ ಮೇಲೆ ಒಂದು ಭಾರಿಯ ಗುಂಡು ಬಿದ್ದ ಹಾಗಾಯಿತು. ನಾಲ್ಕು ದಿವಸದಿಂದ ಕಳವಳಪಡುತ್ತಿದ್ದ ಮನಸ್ಸಿಗೆ ಕಿಟ್ಟಮ್ಮನ ನೆನಪೂ ಬರಬೇಡವೇ?

“ಎಷ್ಟು ದಿನದಿಂದ ಕಾಯಿಲೆ ಮಲಗಿದ್ದಳು?”

“ಐದಾರು ದಿನವಾಯಿತು.”

“ಏನಾಗಿತ್ತು?”

”ಅದೇನೋ ಹೊಟ್ಟೆನೋವು ಕಾಣಿಸಿತಂತೆ, ನಾನು ಹೋಗಿ ನೋಡಿದೆ. ಕಂಡು ಕೇಳಿದ ಔಷಧಿಯೆಲ್ಲ ಆಯಿತು, ಮಂತ್ರ ತಂತ್ರ ಆಯಿತು, ಆಸ್ಪತ್ರೆ ಔಷಧಿಯೂ ಆಯಿತು. ಕೊನೆಗೆ ಪಂಡಿತರ ಔಷಧಿಯಲ್ಲಿ ಕೊಂಚ ಕಮ್ಮಿಯಾದ ಹಾಗೆ ಆಯಿತು. ಕೊನೆಗೆಲ್ಲ ಸರಿಹೋಯಿತು.”

ವರ್ತಮಾನವನ್ನು ಕೇಳಿ ಸುಬ್ಬುವು ಮಂಕು ಹಿಡಿದುಕೊಂಡನು. ಕನಸೆಲ್ಲ ಮತ್ತೊಮ್ಮೆ ಕಣ್ಣುಮುಂದೆ ಬಂತು. ರೆಪ್ಪೆ ಹೊಡೆಯುವುದರೊಳಗಾಗಿ, ಕಣ್ಣಿನಲ್ಲಿ ಒಂದು ತೊಟ್ಟು ನೀರೂರುವುದರೊಳಗಾಗಿ, ಕನಸಿನ ದುರ್ಗವು ತನ್ನ ಕೈಯಿಂದ ತಪ್ಪಿಹೋದುದು; ಮತ್ತೆ ಕಾಣಿಸಿ, ಅದು ಯಾವುದು ಎನ್ನುವುದು ಅರ್ಥವಾಯಿತು. ಎರಡು ಮೂರು ದಿನದಿಂದ ತನಗೆ ತೋರುತ್ತಿದ್ದ ಅದೃಷ್ಟವಾದರೂ ಸ್ಪಷ್ಟವಾಗಿದ್ದ ಒಂದು ಜೀವಪಕ್ಷಿಯ ಪತರಗುಟ್ಟುವಿಕೆ, ಕಿವಿಗೆ ಕೇಳಿಸಿದಂತಾಗುತ್ತಿದ್ದ ಆಕ್ರಂದನದ ಧ್ವನಿ, ಎಲ್ಲವೂ ಅರ್ಥವಾಯಿತು. ಸುಬ್ಬು ನಿಲ್ಲಲಾರದೆ ದುಃಖದ ಭಾರವನ್ನು ಹೊರಲಾರದವನಂತೆ ಅಲ್ಲಿಯೇ ಮಗ್ಗುಲಲ್ಲಿದ್ದ ಸೇತುವೆಯ ಮೇಲೆ ಕುಳಿತುಬಿಟ್ಟನು. ಕಲ್ಲು ಚುರುಚುರು ಎನ್ನುವ ಹಾಗೆ ಕಾದಿದೆ ಎನ್ನುವುದು ಮನಸ್ಸಿಗೆ ಅರಿವಾಗಲಿಲ್ಲ. ಸುದ್ದಿಕಾರನು “ಕಲ್ಲು-ಕಲ್ಲು ಕಾದಿದೆ” ಎಂದುದೂ ಕಿವಿಗೆ ಕೇಳಿಸಲಿಲ್ಲ. ಹಾಗೆಯೇ ಒಂದು ಗಳಿಗೆ ಕೂತಿದ್ದು ಕಣ್ಣಿನಿಂದ ಉದುರಿದ ಹಲವು ಹನಿಗಳನ್ನು ಒರಸಿಕೊಂಡು ಹೊರಟನು. “ಬೇಡಿರಿ, ನನ್ನ ಮಾತು ಕೇಳಿರಿ, ಸುಮ್ಮನೆ ಮನೆಗೆ ಹೋಗಿರಿ” ಎಂದು ತಡೆದು ಅಡ್ಡಕಟ್ಟಿ ಹಿಡಿದು ಹಿಂತಿರುಗಿಸಿದರೂ ಕೇಳದೆ ಹೊರಟುಬಿಟ್ಟನು.

ಅವನಿಗೆ ಪೊಲೀಸಿನವರ ಯೋಚನೆಗಿಂತಲೂ “ಕಿಟ್ಟಮ್ಮನಿಗೆ ಇಂತಹ ದುರ್ಮೃತ್ತು ಬಂತಲ್ಲ” ಎಂದು ಯೋಚನೆ. ಸುಬ್ಬುವಲ್ಲ, ಭಾರಿಯ ಅಡ್ವೋಕೇಟ್ ಜನರಲ್‌ನೂ ಕೂಡ, ಕಿಟ್ಟಮ್ಮನ ಜೀವನವು ಪವಿತ್ರವಾದುದು ಎಂದು ಧೈರ್ಯವಾಗಿ ಹೇಳಲಾರ. ಚಿಕ್ಕಂದಿನಲ್ಲಿ ಗಂಡನನ್ನು ಕಳೆದುಕೊಂಡು ನೀನೇ ಎನ್ನುವರಿಲ್ಲದೆ, ಇದ್ದುದೆಲ್ಲವೂ ಹೋಗಿದ್ದರೂ ಇನ್ನೂ ಅಷ್ಟು ಚೆಲುವು ಉಳಿದಿದ್ದ ಕಿಟ್ಟಮ್ಮನು ಮಧುಪಾಯಿಗಳ ಗುಂಪಿಗೆ ಸಿಲುಕಿದ ಒಂಟಿ ಹೂವಿನಂತೆ ತನ್ನ ಸೌಜನ್ಯವನ್ನು ನೀಗಿಕೊಂಡಿರುವುದನ್ನು ಅರಿಯದವರು ಬಹಳ ಜನರಿಲ್ಲ. ಸುಬ್ಬವಿಗೂ ಅದು ಸ್ಪಷ್ಟವಾಗಿ ಗೊತ್ತು. ಆದರೂ ಬೇಸಿಗೆಯ ನದಿಯ ನೀರು ಎಲ್ಲೆಲ್ಲೂ ಬಿಸಿಯಾಗಿದ್ದರೂ ಆಳವಾದ ಕಡೆಯಲ್ಲಿ ತಣ್ಣಗೆ ಇರುವಂತೆ, ಅವಳ ಜೀವನದಲ್ಲಿ ಉಪಕಾರಿಯ ಮೃದುಹೃದಯದ ಸೆಲೆಯಷ್ಟು ಇತ್ತು ಎಂಬುದು ಅವನಿಗೆ ಗೊತ್ತು. “ನೋಡು ಸುಬ್ಬು, ಹೇಳಿಕೇಳುವರಿಲ್ಲದೆ, ವಿದ್ಯಾಬುದ್ಧಿಗಳಿಲ್ಲದೆ ನಾನು ಕೆಟ್ಟೆ; ನನ್ನ ಆಸೆಯೇನು ಗೊತ್ತೆ? ನಾನು ದಿನಕ್ಕೆ ಒಂದು ರೂಪಾಯಿ ಸಂಪಾದಿಸುತ್ತೇನೆ. ಇದರಲ್ಲಿ ನನಗೆ ಎರಡಾಣೆಗಿಂತ ಹೆಚ್ಚಾಗಿ ಬೇಕಿಲ್ಲ, ಉಳಿದ ಹದಿನಾಲ್ಕಾಣೆ ಕೂಡಿ ಹಾಕುತ್ತೇನೆ. ಒಂದು ಸಾವಿರ ರೂಪಾಯಿ ಆಗುತ್ತಲೂ ಅದನ್ನು ಸರಕಾರಕ್ಕೆ ಕೊಟ್ಟು ಹೆಣ್ಣು ಮಕ್ಕಳು ಓದಲಿ, ಅವರಿಗೆ ಇದರಿಂದ ಆದಷ್ಟು ಕಾಲಕ್ಷೇಪ (Scholarship) ಕೊಡಿ ಎಂತ ಹೇಳುತ್ತೇನೆ. ಊರಿಗೆಲ್ಲ ಛತ್ರಿ ಹಿಡಿಯೋಕೆ ಆಗದಿದ್ದರೆ ಹೋಗಲಿ ಎಂದು ವರ್ಷಕ್ಕೊಂದು ಸಲ ಒಬ್ಬಗೆ ಒಂದು ಛತ್ರಿಯಾದರೂ ಕೊಡಲಾರನೆ” ಎನ್ನುತ್ತಿದ್ದುದು, ತಾಯಿಗಿಂತ ಹೆಚ್ಚಾಗಿ ತನಗೆ ತಿಂಡಿತೀರ್ಥಗಳನ್ನು ಕೊಟ್ಟು ನೋಡಿಕೊಳ್ಳುತ್ತಿದ್ದುದು, ತಾನಿದ್ದ ಬೀದಿಯ ಎಲ್ಲರ ಮನೆಯ ಯೋಗಕ್ಷೇಮವೂ ತನ್ನದೆಂದುಕೊಂಡು ಒದ್ದಾಡುತ್ತಿದ್ದುದು, ಇದೆಲ್ಲವನ್ನೂ ನೆನೆದು ನೆನೆದು ಸುಬ್ಬುವಿನ ಅಂತಃಕರಣವು ಒದ್ದಾಡಿ ಹೋಯಿತು. ಕಿಟ್ಟಮ್ಮನ ಕಾಮಚಾಪಲ್ಯದ ಕಥೆಗಳು ಒಂದೆರಡು ಅವನ ಕಿವಿಗೂ ಬಿದ್ದಿದ್ದವು. ಆದರೆ ಅವುಗಳ ನೂರು ಮಡಿಯಷ್ಟು ಅವಳ ಒಳ್ಳೆಯ ಗುಣದ ಶ್ರವಣವಾಗಿ ಆ ಪಾಪವನ್ನು ಈ ಹೊಳೆ ಕೊಚ್ಚಿಬಿಟ್ಟಿತು.

ಇದನ್ನು ಓದಿದ್ದೀರಾ?: ‘ಶ್ರೀ ಸ್ವಾಮಿ’ಯವರ ಕತೆ | ಬೀಬೀ ನಾಚ್ಚಿಯಾರ್

ಮೂರು ಕನಸು ದೇವುಡು4

ಸುಬ್ಬುವು ನಾಗಾಲೋಟದಿಂದ ಕುದುರೆಯಂತೆ ಬಿರುಸಾಗಿ ನಡೆದು ಕಿಟ್ಟಮ್ಮನ ಮನೆಗೆ ಹೋದನು. ದಾರಿಯಲ್ಲಿ ಬಿರಬಿರನೆ, ಎಡವಿ ಬೀಳುವುದನ್ನೂ ಕಾಣದೆ ಹೋಗುತ್ತಿರುವ ಇವನನ್ನು ಎಲ್ಲರೂ ತಿರುಗಿ ತಿರುಗಿ ನೋಡುವವರೆ! ಹೀಗೆ ಹಾರುವೆನೋ ಓಡುವೆನೋ ಎಂಬ ಅರಿವಿಲ್ಲದೆ ಅವನು ಬಂದನು. ಮನೆಯ ಮುಂದೆ ಒಂದು ಸಣ್ಣ ಪರಿಷೆ ನಿಂತಿದೆ. ಮುದುಕಿಯೂ ಬಂದು ನಿಂತಿದ್ದಾಳೆ. ಅವಳು ಥಟ್ಟನೆ “ಎಲಾ ಇಲ್ಲಿ ಬಾರೋ ಇಲ್ಲಿ ಬಾರೋ” ಎಂದಳು. ಇವನು ಹೋಗಲು “ಮೊದಲು ಇಲ್ಲಿಂದ ಹೊರಟುಹೋಗು. ಪೊಲೀಸಿನವರು ಬಂದಿದ್ದಾರೆ ನಿನ್ನ ಹಿಡಿಕೊಂಡಾರು” ಎಂದು ಸಣ್ಣಗೆ ಹೇಳಿದಳು. ಸುಬ್ಬುವು “ಬಿಡಜ್ಜಿ, ನನ್ನೇನು ಮಾಡ್ತಾರೆ ಅವರು. ನಾನು ಬಂದಿರೋದು ಸುಡೋಕೆ ಹೆಣ ಕೊಡಿ ಅಂತ ಕೇಳೋಕೆ. ಅವಳ ಆಸ್ತಿ ಪಾಸ್ತಿ ಕೇಳಿದ್ರೆ ಆಗ ದಿಗಿಲು” ಎಂದು ಒದರಿಕೊಂಡು ನೇರವಾಗಿ ಪೊಲೀಸನವರ ಬಳಿ ಹೋದನು. ಆ ಇನ್‌ಸ್ಪೆಕ್ಟರಿಗೆ ನಮಸ್ಕಾರ ಹಾಕಿ ”ಸ್ವಾಮಿ ಆ ಹೆಣಕ್ಕೆ ನಾನು ವಾರಸುದಾರ. ಅಪ್ಪಣೆಯಾದರೆ ತೆಗೆದುಕೊಂಡು ಹೋಗಿ ಸುಟ್ಟು ಬಿಡುತ್ತೇನೆ” ಎಂದನು. ಇನ್‌ಸ್ಪೆಕ್ಟರು ಕನ್ನಡಕದ ಗಾಜಿನ ಕೆಳಗಿಂದ ಒಂದು ಸಲ, ಮೇಲಿಂದ ಒಂದು ಸಲ ನೋಡಿ ಮತ್ತೆ ಅಡ್ಡಡ್ಡವಾಗಿ ನೋಡುತ್ತ “ನೀವು ಯಾರು?” ಎಂದನು.

“ನಾನು ಸುಬ್ಬುರಾವು. ಕಿಟ್ಟಮ್ಮನ ಸುಬ್ಬು.”

ಇನ್‌ಸ್ಪೆಕ್ಟರಿಗೆ ತನ್ನನ್ನು ಯಾರೋ ಕವಣೆಯಲ್ಲಿಟ್ಟು ಬೀಸಿ ತಿರುಗಿಸಿ ರೊಯ್ಯನೆ ಬೀಸಿ ಎಸೆದಂತಾಯಿತು.

5

ಇನ್‌ಸ್ಪೆಕ್ಟರೂ ದಫೆದಾರರೂ ಏನೇನೋ ಮಾತಾಡಿಕೊಂಡರು. ಆಮೇಲೆ ಅವರು ”ಏನ್ರಿ, ನೀವೇನು ಈ ಸತ್ತುಹೋದಾಕೆಗೆ ಏನಾದರೂ ಸಂಬಂಧವೊ?” ಎಂದು ಕೇಳಿದರು. ಸುಬ್ಬು ಸಣ್ಣಗೆ ಶಾಂತವಾಗಿ ”ದೇಹ ಸಂಬಂಧ ಏನೂ ಇಲ್ಲ. ಆದರೆ ಆಕೆ ತಾಯಿಗಿಂತ ಹೆಚ್ಚಾಗಿ ನನ್ನ ಪೋಷಣೆ ಮಾಡಿದ್ದಾರೆ. ಅಲ್ಲದೆ ಈ ಕೊನೆಯ ಕರ್ಮಗಳನ್ನು ನಾನೇ ಮಾಡಬೇಕೆಂದು ನನಗೆ ಹೇಳುತ್ತಿದ್ದರು” ಎಂದನು.

“ಇದಕ್ಕೆ ಯಾರಾದರೂ ಸಾಕ್ಷಿಯಿದ್ದಾರೆಯೇ?”

“ಅಲ್ಲಿ ನೋಡಿ, ಆ ಕೊನೆಯಲ್ಲಿ ಇರುವ ಅಜ್ಜಿ. ಅವರು ಆಕೆ ಹೇಳಿದ್ದುದನ್ನು ಕೇಳಿದ್ದರು.”

“ಆಕೆ ಯಾರು?”

“ನಾನು ಕಾಣೆ.”

“ಈಕೆ ಎಲ್ಲಿಯವಳು?”

“ಅದೂ ನಾನು ಕಾಣೆ?”

“ನೀವು ಎಷ್ಟು ದಿನದಿಂದ ಆಕೆಯನ್ನು ಬಲ್ಲಿರಿ?”

”ಇಷ್ಟುದ್ದ ಹುಡುಗನಾಗಿದ್ದಾಗಲಿಂದ.”

“ಮೊದಲು ನೀವು ಎಲ್ಲಿ ಯಾವಾಗ ಈಕೆಯನ್ನು ಕಂಡುದು?”

“ನನಗೆ ನೆನಪಿಲ್ಲ.”

“ನೀವೇ ಈ ಹೆಣಕ್ಕೆ ವಾರಸುದಾರರು ಎಂದು ಹೇಗೆ ನಂಬುವುದು?”

“ನಾನು ವಾರಸುದಾರನಾಗಿ ಬಂದಿಲ್ಲ. ನನಗೆ ಆಕೆಯ ಆಸ್ತಿ ಪಾಸ್ತಿ ಬೇಕಿಲ್ಲ. ಅವೆಲ್ಲ ಆಕೆಯ ವಾರಸಾಗಿ ಯಾರಾದರೂ ಬಂದರೆ ಅವರಿಗೆ ಕೊಟ್ಟುಕೊಳ್ಳಿ. ಈ ಹೆಣವನ್ನು ಈಗ ಯಾರೂ ಇಲ್ಲದೆ ಹೋದರೆ ಮುನಸಿಪಾಲಿಟಿಯವರಾದರೂ ದಹನ ಮಾಡಿಸಬೇಕು. ಅದರ ಬದಲು ನಾನೇ ದಹನ ಮಾಡಿಸುತ್ತೇನೆ. ಸಾಧ್ಯವಾದಮಟ್ಟಿಗೂ ಉತ್ತರಕ್ರಿಯೆ ಮಾಡಿಸುತ್ತೇನೆ.”

“ಸರಕಾರ ಎಂದರೆ ಏನು ತಿಳಿದುಕೊಂಡಿರಿ? ಸರಿಯಾದ ಆಧಾರ ಕೊಟ್ಟರೇನೆ ನಾವು ಕೊಡುವುದು, ಇಲ್ಲವಾದರೆ ಕೊಡಲಿಕ್ಕಾಗುವುದಿಲ್ಲ.”

“ಆಗಲಿ, ನನಗೆ ಕೊಡದೇ ಹೋದರೆ ನೀವೇನು ಮಾಡುತ್ತೀರಿ?”

“ನಾವು ಇದನ್ನು ಆಸ್ಪತ್ರೆಗೆ ಬೇವಾರಸ್ ಹೆಣ ಎಂದು ಕಳುಹಿಸುತ್ತೇವೆ. ಆಮೇಲೆ ಅವರು ದಹನ ಮಾಡಿಸುತ್ತಾರೆ.”

ಸುಬ್ಬು ಬೇವಾರಿಸ್ ಹೆಣಗಳನ್ನು ಆಸ್ಪತ್ರೆಗೆ ಕಳುಹಿಸುವ ವಿಚಾರವನ್ನು ಕೇಳಿದ್ದನು. ಅಲ್ಲಿ ಅವುಗಳನ್ನು ಕೊಯ್ಯುತ್ತಾರೆ, ಏನೇನೋ ಮಾಡುತ್ತಾರೆ ಎಂಬ ಕಥೆಗಳು ಕಿವಿಗೆ ಬಿದ್ದಿತ್ತು. ಮನಸ್ಸಿನಲ್ಲಿ ಚೆನ್ನಾಗಿ ಮಂಕು ಆಡಿದಂತಾಯಿತು. ಆದರೇನು ಮಾಡಬೇಕು? ಪ್ರಬಲವಾದ ಸಾಕ್ಷ್ಯವು ಬರುವವರೆಗೂ ಪೊಲೀಸು ಹಣವನ್ನು ಕೊಡುವುದಿಲ್ಲ. ಒಂದು ಘಳಿಗೆ ಪೆಚ್ಚು ಮೊಕ ಹಾಕಿಕೊಂಡು ನಿಂತಿದ್ದು ನೇರವಾಗಿ ಅವನು ಆ ಹೆಣದ ಮುಖವನ್ನು ನೋಡುವುದಕ್ಕೆ ಹೋದನು.

ಕಣ್ಣುಗುಡ್ಡೆಗಳು ಈಚೆಗೆ ಬಂದಿವೆ. ಬೇಕಾದ ಹಾಗೆ ಇರುವೆಗಳು ಗುಡ್ಡೆಗುಡ್ಡೆಯಾಗಿ ಹಿಡಿದಿವೆ. ಹೋಗಿ ಅದರ ಮುಂದೆ ನಿಂತುಕೊಂಡು “ಏನು ಕಿಟ್ಟಮ್ಮಾ, ನಿನ್ನ ಹೆಣ ಕೊಡೋದಿಲ್ಲ ಅಂತಾರಲ್ಲ, ನಾನೇನು ಮಾಡಲಿ?” ಎಂದನು.

ಇದನ್ನು ಓದಿದ್ದೀರಾ?: ಪಂಜೆ ಮಂಗೇಶರಾಯರ ಕತೆ | ನನ್ನ ಚಿಕ್ಕತಂದೆಯವರ ‘ಉಯಿಲ್’

ಹೆಣವು ಹೊರಳಿದಂತಾಯಿತು. ಆದರೆ ನಿಜವಾಗಿ ಹೊರಳಿತೋ ಇಲ್ಲವೋ; ಅಂತೂ ಸುಬ್ಬು ಮನಸ್ಸು ಹೊರಳಿತು. ಅಂದು ತಿರುಪತಿಗೆ ಹೋಗುವುದಕ್ಕೆ ಕೊಟ್ಟಿದ್ದ ಸಾಲದ ಹಣವನ್ನು ಹಿಂದಕ್ಕೆ ಕೊಟ್ಟಾಗ ನಡೆದ ಒಂದು ಸಂಗತಿಯು ನೆನಪಾಯಿತು. ಅಂದು ಕಿಟ್ಟಮ್ಮನು ಸೊಗಸಾದ ರವೆ ದೋಸೆ, ಹಾಲು ಕಾಫಿ ಮಾಡಿಕೊಟ್ಟು “ನೋಡೋ ಸುಬ್ಬು! ನಾನು ಒಂದುವೇಳೆ ಥಟ್ಟನೆ ಸತ್ತುಹೋದೇ ಅಂತ ಇಟ್ಟುಕೋ. ಆಗ ನಿನ್ನ ಹತ್ತಿರ ದುಡ್ಡುಗಿಡ್ಡು ಇಲ್ಲದೇ ಹೋಯಿತು. ಅದಕ್ಕೋಸ್ಕರ ಇದೊಂದುಪಾಯ ಮಾಡಿರುತ್ತೇನೆ. ಇದೋ ಈ ಸಣ್ಣ ಒಲೆ ಕೆಳಗೆ ಈ 25 ರೂಪಾಯಿ, ಈ ನಾಗರ, ಈ ಉಂಗುರ, ಇಷ್ಟು ಇಟ್ಟಿರುತ್ತೇನೆ. ಅದರಲ್ಲಿ ನಾಗರ ನಿನ್ನ ಹೆಂಡತಿಗೆ ಕೊಡು. ಉಂಗುರ ನಿನ್ನ ಕೈಯಲ್ಲಿ ಇಟ್ಟುಕೋ. 25 ರೂಪಾಯಿ ಖರ್ಚುಮಾಡಿ ತಿಥಿ ಮಾಡಿಸು. ಅದಕ್ಕಿಂತ ಹೆಚ್ಚಾಗಿ ಒಂದೂ ಕಾಸೂ ಖರ್ಚು ಮಾಡಬೇಡ. ನಾನು ಒಪ್ಪಿಕೊಳ್ಳುತ್ತೇನೆ” ಎಂದಿದ್ದಳು. ಅದಷ್ಟೂ ಥಟ್ಟನೆ ಮಿಂಚಿನ ವೇಗದಿಂದ ಹೊಳೆದುಹೋಯಿತು.

ಮನಸ್ಸಿಗೆ ಹೊಳೆದ ಹೊಳೆಹಿನ ಬೆಳಕು ಮುಖದ ಮೇಲೆ ಮಿನುಗುತ್ತಿದ್ದ ಹಾಗೆಯೇ ಇನ್‌ಸ್ಪೆಕ್ಟರ್ ಹತ್ತಿರಕ್ಕೆ ಹೋಗಿ “ಸಾರ್, ಯಾರನ್ನಾದರೂ ಕಳುಹಿಸಿಕೊಡಿ, ಒಳಕ್ಕೆ ಹೋಗುವುದಕ್ಕೆ ಅಪ್ಪಣೆ ಕೊಡಿ. ಈ ಹೆಣಕ್ಕೆ ನಾನೇ ವಾರಸುದಾರನೆಂಬುದಕ್ಕೆ ಸಾಕ್ಷಿ ಕೊಡುತ್ತೇನೆ” ಎಂದನು.

ಇನ್‌ ಸ್ಪೆಕ್ಟರು “ಆಲ್ ರೈಟ್” ಎಂದು ತಮ್ಮ ದಫೇದಾರರನ್ನು ಕಳುಹಿಸಿದರು. ಸುಬ್ಬು, ದಫೇದಾರರು ಇಬ್ಬರೂ ಒಳಕ್ಕೆ ಹೋದರು. ಆ ಕಿರು ಮನೆಯಲ್ಲಿ ಒಂದು ಬಿದಿರಿನ ತಟ್ಟಿಯು ಅದನ್ನು ಎರಡು ಪಾಲು ಮಾಡಿತ್ತು. ತಟ್ಟಿಯ ಆ ಕಡೆ ಅಡುಗೆ ಮನೆ, ಈ ಕಡೆ ನಡುಮನೆ. ಇಬ್ಬರೂ ಅಡುಗೆಯ ಮನೆಯೊಳಕ್ಕೆ ಹೋದರು. ಸುಬ್ಬು ಒಲೆಯನ್ನು ಕಿತ್ತು ನೆಲವನ್ನು ಅಗೆದು ಒಳಗೆ ಒಂದು ಸಿಗರೇಟ್ ಡಬ್ಬಿಯಲ್ಲಿದ್ದ ರೂಪಾಯಿಗಳನ್ನೂ ಒಡವೆಗಳನ್ನೂ ತೆಗೆದು ಈಚೆಗೆ ಇಟ್ಟನು. ದಫೇದಾರರಿಗೆ ಮೊದಲೇ ಗೆಡ್ಡೆಗಣ್ಣು. ಈ ವಿಚಿತ್ರವನ್ನು ನೋಡಿದ ಮೇಲಂತೂ ಅವರ ಎರಡು ಕಣ್ಣೂ ಅರಳಿ ಗುಡ್ಡೆಗಳು ಈಚೆಗೆ ಹೊರಟುಕೊಂಡಂತೇ ಆಯ್ತು. “ಹೌದು ಸ್ವಾಮಿ ನೀವೇ ಸರಿಯಾದ ವಾರಸುದಾರರು” ಎಂದನು. ಸುಬ್ಬು “ಇದು ಈಕೆ ತನ್ನ ಉತ್ತರ ಕ್ರಿಯೆಗಳಿಗೆ ಇಟ್ಟುಕೊಂಡಿರುವ ಹಣ” ಎಂದನು.

ದಫೇದಾರರು ಕಣ್ಮುಚ್ಚಿಕೊಂಡರು: “ಸ್ವಾಮಿ, ನಾನು ಇದನ್ನೆಲ್ಲ ನೋಡುವುದಿಲ್ಲ. ನಾವು ಆಫೀಸರು ಇದನ್ನು ಕಂಡರೆ ಸರ್ಕಾರದ ನೋಟೀಸಿಗೆ ತರಬೇಕು. ಮುಂದೆ ಅವರದು ಏನೇನೋ ಫಜೀತಿ, ಅದರಿಂದ ನಾನು ಕಣ್ಮುಚ್ಚಿಕೊಳ್ಳುತ್ತೇನೆ. ನೀವು ಅದನ್ನು ತೆಗೆದು ಜೇಬಿಗೆ ಹಾಕಿಕೊಳ್ಳಿ. ಆಮೇಲೆ ಎಲ್ಲಾ ಹೇಳುತ್ತೇನೆ” ಎಂದನು.

ಸುಬ್ಬು, ದಫೇದಾರರು ಇಬ್ಬರೂ ಹೊರಕ್ಕೆ ಬಂದರು. ದಫೆದಾರರು ಇನ್‌ಸ್ಪೆಕ್ಟರಿಗೆ ಠನ್‌ಚನ್ (attention) ಹೊಡೆದು ”ಇವರೇ ಸರಿಯಾದ ವಾರಸುದಾರರು, ಕೊಟ್ಟುಬಿಡಬಹುದು” ಎಂದರು. ಇವನು ಕಿವಿಯಲ್ಲಿ ಹೇಳಿದ ಮಾತನ್ನೆಲ್ಲ ಕೇಳಿದರೂ ಇನ್‌ಸ್ಪೆಕ್ಟರು ಮಾತ್ರ ಪಂಚಾಯತಿ ಮಾಡದೆ ಹೆಣ ಕೊಡಲಿಲ್ಲ.

ಸುಬ್ಬು ಹೆಣದ ಜೊತೆಯಲ್ಲಿ ತಾನೇ ಹೋಗಿ ಅಗ್ನಿಸಂಸ್ಕಾರ ಮಾಡಿ ಬರಬೇಕು ಅಂತ ಹೊರಟನು. ಅಷ್ಟರಲ್ಲಿ ಯಾರೋ ಗುರುತು ಕಂಡವರು ಬಂದರು. ಅವರು ‘ಉಂಟೇನಯ್ಯಾ? ಗರ್ಭಿಣೀಪತಿ ನೀನು. ನೀನು ಸ್ಮಶಾನಕ್ಕೆ ಹೋಗೋಣ ಎಂದರೇನು?’ ಎಂದು ತಡೆ ಹಾಕಿದರು, ಕೊನೆಗೆ ಯಾರನ್ನೊ ಅಲ್ಲಿಗೆ ಕಳುಹಿಸಿ ಕೊಳದಲ್ಲಿ ಮುಳುಗಿ ಸುಬ್ಬು ಮನೆಗೆ ಹೋದನು.

6

ಕಿಟ್ಟಮ್ಮನ ತಿಥಿ-ಗಿಥಿ ಎಲ್ಲ ಸಾಂಗವಾಗಿ 25 ರೂಪಾಯಿ ಖರ್ಚಿನಲ್ಲಿ ಎಷ್ಟುಮಟ್ಟಿಗೆ ನಡೆಯಬಹುದೋ ಅಷ್ಟುಮಟ್ಟಿಗೆ ನಡೆಯಿತು. ವೈಕುಂಠ ಸಮಾರಾಧನೆಯೂ ನಡೆದುಹೋಯಿತು.

ಇನ್ನು ಒಂದು ವಾರವಾಯಿತು, ಬಾಬಾಬುಡನ್‌ಗಿರಿಗೆ ಹೋಗಿದ್ದ ಮಿತ್ರರ ಗುಂಪು ಹಿಂದಿರುಗಿತು. ಎಲ್ಲರೂ ಒಂದು ದಿನ ಸುದ್ದೀನ ಹುಡುಕಿಕೊಂಡು ಬಂದರು. ಎಲ್ಲರೂ ಸೇರಿ ಹಾಗೆ ಹೇಳದೆ ಕೇಳದೆ ಬೇಲೂರಿಂದ ಪರಾರಿಯಾದನೆಂದು ಅವನನ್ನು ಚೆನ್ನಾಗಿ ಛೀಮಾರಿ ಹಾಕಿದರು. ಇವನೂ ಕೂಡ ಅಲ್ಲಿ ಕನಸು ಬಿದ್ದುದೂ ಅದಕ್ಕೆ ತಕ್ಕ ಹಾಗೆ ಇಲ್ಲಿ ನಡೆದುದು ಎಲ್ಲವನ್ನೂ ಹೇಳಿದನು. ”ಸರಿ. ಕನಸು ಎಂದರೆ ಕನಸೇ ಅದು. ಎಲ್ಲಿಯೋ ಒಂದೊಂದು ವೇಳೆ ಅಡ್ಡೇಟಿಗೊಂದು ಗುಡ್ಡೇಟು ಎಂದು ಸರಿಹೋದರೂ ಸರಿ ಹೋಗಬಹುದು. ಅದನ್ನೇ ಕಟ್ಟಿಕೊಂಡು ಕೆಲಸ ಮಾಡುವುದಕ್ಕಾಗುವುದೇನಯ್ಯಾ?” ಎಂದು ಒಬ್ಬೊಬ್ಬರು ಒಂದೊಂದು ಮಾತಾಡಿ ತಿಂಡಿ ಕಾಫಿ ಗಿಟ್ಟಿಸಿಕೊಂಡು ನಡೆದರು.

ಇದನ್ನು ಓದಿದ್ದೀರಾ?: ಕೆರೂರ ವಾಸುದೇವಾಚಾರ್ಯರ ಕತೆ | ತೊಳೆದ ಮುತ್ತು

ಸುಬ್ಬುವು ಅವರ ಜೊತೆಯಲ್ಲಿಯೇ ಹೋಗಿದ್ದವನು ಸಂಜೆಗೆ ಬಂದನು. ಆ ಗುಂಪಿನ ತಲೆಹರಟೆ ಚರ್ಚೆಗಳಲ್ಲಿ ಇವನಿಗೆ ಬಲು ಆಯಾಸವಾಗಿತ್ತು. ಬೇಕಾದಹಾಗೆ ಹೊಟ್ಟೆಯ ಹಸಿವಾಗಿದ್ದರೂ ಒತ್ತಿಬರುವ ನಿದ್ದೆ ತಡೆಯಲಾರದೆ ಹಾಗೆಯೇ ಮಲಗಿಬಿಟ್ಟನು. ಮತ್ತೆ ಸುಮಾರು ಒಂಭತ್ತುವರೆ ಗಂಟೆಯಲ್ಲಿ ಹೆಂಡತಿಯು ಬಂದು ಎಷ್ಟು ಎಬ್ಬಿಸಿದರೂ ಏಳಲಿಲ್ಲ. ಕೊನೆಗೆ ಒಂದು ಲೋಟ ಹಾಲುಕೊಟ್ಟಳು. ಅದನ್ನೇ ಕುಡಿದು ಮಲಗಿಬಿಟ್ಟನು. ಊರು ಕೊಳ್ಳೆ ಹೋದರೂ ಎಚ್ಚರವಾಗದಂತಹ ಭಾರಿಯ ನಿದ್ದೆ.

ಸುಮಾರು ಬೆಳಗಿನ ಝಾವ ಮೂರು-ಮೂರುವರೆ ಗಂಟೆಯಿರಬಹುದು. ಅವನಿಗೆ ಒಂದು ಕನಸು ಬಿತ್ತು. ಅದರಲ್ಲಿ ಕಿಟ್ಟಮ್ಮ ಬಂದಿದ್ದಾಳೆ. ಬದುಕಿದ್ದಾಗ ಅವಳಿಗೆ ಒಂದೊಂದು ದಿನ ಮಡಿ ಮಾಡುವ ಹುಚ್ಚು ಹಿಡಿಯುವುದು. ಆಗ ಅವಳು ಒಂದು ಬಿಳಿಯ ಬಟ್ಟೆಯನ್ನು ಮೈಗೆ ಸುತ್ತಿಕೊಂಡು ತಿರುಗುತ್ತಿದ್ದಳು. ಈಗಲೂ ಹಾಗೆಯೇ ಒಂದು ಬಿಳಿಯ ಬಟ್ಟೆಯನ್ನು ಉಟ್ಟಿದ್ದಾಳೆ. ಮುಖವನ್ನು ಸೆರಗಿನಿಂದ ಮುಚ್ಚಿಕೊಂಡಿದ್ದಾಳೆ. ಆಕಾರ, ಧ್ವನಿ ಎರಡರಿಂದ ಮಾತ್ರವೇ ಗುರ್ತಿಸಬೇಕು. ಅಂತೂ ಕಿಟ್ಟಮ್ಮನೇ! ಸಂದೇಹವಿಲ್ಲ. ಬಂದು “ಸುಬ್ಬು, ನೀನು ಮಾಡಿದ್ದು ಸರಿಹೋಯಿತು, ಇನ್ನು ಕೊಂಚ ಅನ್ನ ಹಾಕಿಸು ಮತ್ತೆ. ನನಗೆ ಹಸಿವು ಇನ್ನೂ ತೀರಲಿಲ್ಲ. ಇನ್ನಷ್ಟು ಅನ್ನ ಹಾಕಿಸುತ್ತೀಯಾ?” ಎನ್ನುತ್ತಾಳೆ. ಸುಬ್ಬು “ಏನು ಕಿಟ್ಟಮ್ಮ! ನೀನು ಇಪ್ಪತ್ತೈದು ರೂಪಾಯಿ ಮೇಲೆ ಒಂದು ಕಾಸೂ ಖರ್ಚು ಮಾಡಬೇಡ ಎಂದು ಹೇಳಿದ್ದೆಯಲ್ಲ. ನಾನು ಇನ್ನೂ ಒಂದು ರೂಪಾಯಿ ಹೆಚ್ಚಾಗಿಯೇ ಖರ್ಚು ಮಾಡಿದೆನಲ್ಲ” ಎನ್ನುತ್ತಾನೆ. ಅದಕ್ಕೆ ಅವಳು “ಅಲ್ಲವೋ ಸುಬ್ಬು, ಒಂದೊಂದು ದಿನ ಏಕೋ ಹೆಚ್ಚಾಗಿ ಹಸಿಯುವುದಿಲ್ಲವೇ? ಹಾಗೆ. ಏನಾದರೂ ಮಾಡು” ಎನ್ನುತ್ತಾಳೆ. ಸುಬ್ಬು ಯೋಚಿಸಿ “ನೋಡು ಕಿಟ್ಟಮ್ಮ, ನೀನು ಬ್ರಹೋತ್ಸವಕ್ಕೆ ಹೋಗಿಬರುವುದಕ್ಕೆ ದುಡ್ಡು ಕೊಟ್ಟಿದ್ದೆ, ಅದರಿಂದ ಆ ಪುಣ್ಯದಲ್ಲಿ ನಿನಗೊಂದು ಭಾಗ ಉಂಟು. ಅದನ್ನು ಕೇಳು ಹೋಗು. ಅವರು ನಿನಗೆ ಕೊಡುತ್ತಾರೆ” ಎನ್ನುತ್ತಾನೆ. ಅವಳು ದೈನ್ಯದಿಂದ ”ನೀನೇ ಬಂದು ಕೊಡಿಸಿಕೊಟ್ಟು ಬಾ ಮತ್ತೆ” ಎಂದು ಅಂಗಲಾಚುತ್ತಾಳೆ. ಸುಬ್ಬು ಹೊರಡುತ್ತಾನೆ.

ಯಾವುದೋ ಹಾದಿ. ವಾಯುವೇಗ ಮನೋವೇಗಗಳಲ್ಲಿ ಹೋಗುತ್ತಿದ್ದಾರೆ. ಸಾಲುಸಾಲು ಬೆಟ್ಟಗಳು. ಅವುಗಳನ್ನು ಹತ್ತಿ ಇಳಿದು ಹೋದರೆ, ಅಲ್ಲಿ ಒಂದು ಭಾರಿಯ ಕೋಟೆ. ಸುಮಾರು 30 ಅಡಿ ಎತ್ತರದ ಗೋಡೆ. ಅಲ್ಲಿ ಬಾಗಿಲಲ್ಲಿ ಒಳಕ್ಕೆ ಹೋಗುವವರು ಪ್ರತಿಯೊಬ್ಬರನ್ನೂ ಹಿಡಿದು ನಿಲ್ಲಿಸಿಕೊಂಡು ಗುರುತು ನೋಡಿ ಒಳಕ್ಕೆ ಬಿಡುತ್ತಾರೆ. ಈ ಇಬ್ಬರೂ ಅಲ್ಲಿಗೆ ಹೋಗಲು, ಅವರು ಕಿಟ್ಟಮ್ಮನನ್ನು ಒಳಕ್ಕೆ ಬಿಟ್ಟರು. ಸುಬ್ಬುವನ್ನು ತಾನೇ ಕರೆತಂದಿರುವೆನು ಎಂದು ಹೇಳಿ ಅವನು ಬಂದಿರುವ ಕಾರ್ಯವನ್ನು ತಿಳಿಸಿದ್ದರ ಮೇಲೆ ಅವನಿಗೆ ಒಳಕ್ಕೆ ಹೋಗಲು ಅಪ್ಪಣೆ ದೊರೆಯುತ್ತದೆ. ಆದರೆ ಅವನು ಅಲ್ಲಿ ಒಂದು ಯಾಮಕ್ಕಿಂತ ಹೆಚ್ಚಾಗಿ ನಿಲ್ಲಕೂಡದು.

ಕಿಟ್ಟಮ್ಮನು ಸುಬ್ಬುವನ್ನು ಯಮನ ಸಭೆಗೆ ಕರೆದುಕೊಂಡು ಹೋಗುತ್ತಾಳೆ. ಆ ಸಭಾಸ್ಥಾನವು ವಿಶಾಲವಾಗಿ ಭಾರಿಯ ದೇವಸ್ಥಾನವಿದ್ದ ಹಾಗೆ ಇದೆ. ಶ್ರೀರಂಗಪಟ್ಟಣದ ದೇವಸ್ಥಾನದ ಹಜಾರದಲ್ಲಿ ಇರುವ ಹಾಗೆ ಹಿಂದಿನ ಭಾಗ ಭಾರಿಯ ಆಳೆತ್ತರದ ಜಗುಲಿ. ಅದರ ಮೇಲೆ ಯಮಧರ್ಮನು ಕುಳಿತುಕೊಳ್ಳುವನು. ಧರ್ಮಾಸನದ ಎರಡು ಕಡೆಗಳಲ್ಲಿಯೂ ಎತ್ತರವಾದ ಕಾಲಮಣೆಗಳ ಮೇಲೆ ಭಾರಿಭಾರಿಯ ಪುಸ್ತಕಗಳನ್ನು ಇಟ್ಟುಕೊಂಡು ಹಲವರು ಇದ್ದಾರೆ. ಆ ಭಾರಿಯ ಹಜಾರದ ಪೂರ್ವದಿಕ್ಕಿನಲ್ಲಿ ಸಾವಿರಾರು ಮಂದಿಯ ಗುಂಪು ನಿಂತಿದೆ.

ಅಲ್ಲಿ ಯಾರೋ ಒಬ್ಬರು ಗುರುತು ಕಂಡವರು ಸಿಕ್ಕುತ್ತಾರೆ. ಅವರು ”ಇನ್ನೂ ಧರ್ಮರಾಯ ಬರುವುದು ಹೊತ್ತಾಗುತ್ತೆ. ಬನ್ನಿ, ಅವರು ಬರುವ ದಾರಿಯಲ್ಲಿ ಇದ್ದು ಅಲ್ಲೊಂದು ಸಲ ನೋಡಿಕೊಂಡು ಬರೋಣ” ಎಂದು ಸಭಾಸ್ಥಾನದ ಹಿಂದುಗಡೆ ಇರುವ ಧರ್ಮಶಾಲೆಯಂತಹ ತೊಟ್ಟಿಯ ಮನೆಯೊಂದರೊಳಕ್ಕೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಇನ್ನೊಬ್ಬರು ಗುರುತು ಕಂಡವರು, ಅವರು ಓಹೋ ಏನ್ರಿ ಬನ್ನಿ ಬನ್ನಿ ಎಂದು ಕರೆದು ಸ್ಟೋವ್ ಹಚ್ಚಿ ಟೀ ಮಾಡಿಕೊಡುತ್ತಾರೆ. ಸುಬ್ಬುವಿಗೆ ಇದು ಲೋಕಾಂತರ ಎಂಬ ಅರಿವೆ. ”ಏನ್ರೀ, ಇಲ್ಲಿ ಸ್ಟೋವ್, ಸ್ಪಿರಿಟ್, ಟೀ, ಎಲ್ಲಾ ಇದೆಯಲ್ಲಾ” ಎನ್ನುತ್ತಾನೆ. ಅದಕ್ಕವರು “ಇಲ್ಲಿಗೆ ಬಂದಮೇಲೆ ನನ್ನ ಐಡಿಯ ಎಲ್ಲ ಬದಲಾಯಿಸಿ ಹೋಯಿತು. ಇಗೋ ನಿಮ್ಮ ಹಾಗೆ ಯಾರಾದರೂ ಬುದ್ದಿವಂತರು ಇಲ್ಲಿ ಬರುತ್ತಾರೆ. ಬಂದವರು ಇಲ್ಲಿನದನ್ನು ಯಾವುದನ್ನಾದರೂ ನೋಡಿಕೊಂಡು ಹೋಗಿ ಅಲ್ಲಿ ಕಾಫಿ ಮಾಡುತ್ತಾರೆ. ಅದನ್ನು ಅಲ್ಲಿನವರು ಹೊಸದು ಹೊಸದು ಎನ್ನುತ್ತಾರೆ. ಇಲ್ಲಿ ಬನ್ನಿ. ಇಲ್ಲೊಂದು ಯಂತ್ರ ಇದೆ. ಅದಕ್ಕೆ ಯಾವ ಸದ್ದುಕೊಟ್ಟರೂ ಅದನ್ನು ಮನುಷ್ಯ ಧ್ವನಿಯಾಗಿ ಮಾರ್ಪಡಿಸುತ್ತದೆ. ನೋಡಿ. ನೀವು ಬರುವುದಾದರೆ ನಾನೇ ಕರೆದುಕೊಂಡು ಹೋಗಿ ತೋರಿಸುತ್ತೇನೆ. ಇನ್ನೊಂದು ವಿಶೇಷವೇನೆಂದರೆ ಇಲ್ಲಿ ಪದಾರ್ಥಗಳು ಕಾಣುವ ರೀತಿ ಬೇರೆ. ಭೂಲೋಕದಲ್ಲಿ ನಮ್ಮ ಕಣ್ಣು ಎಷ್ಟು ತಿಳಿಸುವದೋ ಅಷ್ಟೇ ತಿಳಿಯುವುದು. ಇಲ್ಲಿ ಹಾಗಲ್ಲ. ನಮ್ಮ ಮನಸ್ಸಿನ ಶಕ್ತಿ ಎಷ್ಟೋ ಅಷ್ಟು ಗ್ರಹಣವಾಗುವುದು” ಎಂದು ಏನೇನೋ ದೊಡ್ಡ ಉಪನ್ಯಾಸ ಮಾಡಿ ಕರೆದುಕೊಂಡು ಹೋಗಿ ಆ ಯಂತ್ರ ತೋರಿಸುತ್ತಾರೆ.

ಆ ಯಂತ್ರವು ಗಾಜಿನ ಕೊಳವಿಗಳಿಂದ ಆಗಿದೆ. ಆ ಕೊನೆಯಲ್ಲಿ ಯಾವುದಾದರೊಂದು ಹಕ್ಕಿಯು ನುಡಿದರೆ, ಹಾವು ಭುಸ್ಸೆಂದರೆ, ಆ ಸದ್ದನ್ನು ಹಿಡಿದು ಅದು ಅದನ್ನು ಮನುಷ್ಯ ಧ್ವನಿಯನ್ನಾಗಿ ಮಾಡುತ್ತದೆ. ಅಲ್ಲಿಂದ ಹಿಂತಿರುಗಿ ಬಂದು ಅವರ ಕಿರುಮನೆಯಲ್ಲಿ ಕುಳಿತುಕೊಳ್ಳುವಾಗ್ಗೆ ಒಂದು ಭಾರಿಯ ಸದ್ದು ಆಗುತ್ತದೆ. ”ಅದೋ ಧರ್ಮರಾಯ ಬರುತ್ತಿದ್ದಾನೆ. ನಡೆಯಿರಿ. ನೋಡೋಣ” ಎನ್ನುತ್ತಾರೆ. ಅವರನ್ನು ಹತ್ತಿರವಾಗಿ ನೋಡಬೇಕಲ್ಲ ಎಂದರೆ ಅವರು ಹೋಹ್ಹೋ ಎಂದು ನಗುತ್ತಾರೆ. ”ಅದೆಲ್ಲ ಸಾಧ್ಯವಿಲ್ಲ. ಆತನ ನೋಟ ಬಹು ಭಯಂಕರ” ಎನ್ನುತ್ತಾರೆ.

ಇಬ್ಬರೂ ಬಂದು ಕಂಬದ ಹಿಂದೆ ನಿಲ್ಲುತ್ತಾರೆ. ಯಮರಾಯ ಮಹಡಿಯ ಮೇಲಿಂದ ಮೆಟ್ಟಿಲು ಇಳಿದು ರಾಜಠೀವಿಯಿಂದ ಬರುತ್ತಿದ್ದಾನೆ. ಸುಬ್ಬು ಧೈರ್ಯಮಾಡಿ ಎದುರಿಗೆ ಹೋಗಿ ದೊಡ್ಡದಾಗಿ ನಮಸ್ಕಾರ ಮಾಡುತ್ತಾನೆ.

ಸುಬ್ಬು ಧರ್ಮರಾಯನನ್ನು ನೋಡಿದನು. ಕೊಂಚ ಕಪ್ಪು ಕೆಂಪು ಸೇರಿದ ಬಣ್ಣ. ಒಳ್ಳೆಯ ಎತ್ತರವಾದ ಭಾರಿಯ ಆಳು. ನಡೆಯುತ್ತಿದ್ದರೆ ನೆಲ ತಗ್ಗುವಂತಹ ಮೈಕಟ್ಟು. ಧೈರ್ಯಮಾಡಿ ಮುಂದೆ ಹೋಗಿ ನಮಸ್ಕಾರ ಮಾಡಿದನು. ಧರ್ಮರಾಯನು ಅವನ ಕಡೆಗೆ ತಿರುಗಿದನು. ಇವನಿಗೆ ಬಾಯಿ ಕಟ್ಟಿಹೋಯಿತು. ಏನು ಹೇಳುವುದಕ್ಕೂ ಆಗಲಿಲ್ಲ. ತಬ್ಬಿಬ್ಬಾಯಿತು. ಹಿಂದಿದ್ದ ಆ ಗುರ್ತು ಕಂಡವರು ಹಿಡಿದುಕೊಳ್ಳದೆ ಹೋಗಿದ್ದರೆ, ಅವನು ಬಿದ್ದುಹೋಗುತ್ತಿದ್ದನು. ಅವನಿಗೆ, ಭರ್‍ರನೆ ಗಂಟೆಗೆ ನಲವತ್ತು ಮೈಲಿ ಓಡುತ್ತಿರುವ ಟ್ರೈನಿನ ಮಗ್ಗುಲಲ್ಲಿ ನಿಂತಾಗ ಆಗುವ ಹಾಗೆ, ತಲೆಯು ತಿರುಗಿದಂತಾಯಿತು.

ಮೂರು ಕನಸು ದೇವುಡು5 1

ಮತ್ತೆ ಸುಬ್ಬುವಿಗೆ ನೆನಪಿದ್ದುದು ಧರ್ಮರಾಯನ ಆಸ್ಥಾನದಲ್ಲಿ ತಾನು ಒಂದು ಕಂಭದ ಹಿಂದೆ ನಿಂತಿದ್ದುದು. ಅಲ್ಲಿ ಕಿಟ್ಟಮ್ಮನು ಮತ್ತೆ ಬಂದು ಧರ್ಮರಾಯನ ಎದುರು ನಿಂತಿದ್ದಾಳೆ. ಧರ್ಮರಾಯನು ಈಗ ಬೆಳ್ಳಗೆ ಬೆಳ್ಳಿಯ ಬೊಂಬೆಯಾಗಿದ್ದಾನೆ. ಕಿಟ್ಟಮ್ಮನು ಬಂದು ನಿಂತುಕೊಳ್ಳುತ್ತಿದ್ದ ಹಾಗೆ ಎಡಭಾಗದಲ್ಲಿದ್ದ ಒಬ್ಬನು ತನ್ನ ಭಾರಿಯ ದಫ್ತರನ್ನು ತೆಗೆದು ಓದಿದನು. “ಈಕೆಯು ತಿರುಪತಿಯಲ್ಲಿ ಶ್ರೀ ವೆಂಕಟೇಶ ದೇವರ ಬ್ರಹೋತ್ಸವಕ್ಕೆ ಹೋದಾಗ ಒಬ್ಬ ಭಕ್ತನಿಗೆ ಹಣವನ್ನು ಸಾಲ ಕೊಟ್ಟಿದ್ದಳಂತೆ. ಆ ಪುಣ್ಯದ ಫಲವನ್ನು ಕೇಳುವುದಕ್ಕೆ ಬಂದಿದ್ದಾಳೆ ಮಹಾಸ್ವಾಮಿ. ಆದರೆ ಆ ಅಂಶ ಇದರಲ್ಲಿ ಸೇರಿಲ್ಲ” ಎನ್ನುತ್ತಾನೆ. ಜೊತೆಯಲ್ಲಿಯೇ ಇನ್ನೊಬ್ಬನು ”ಆ ಅಂಶ ಸತ್ಯ. ಇಲ್ಲಿ ಆ ವಿಷಯವನ್ನು ವಿವರವಾಗಿ ಬರೆದಿದೆ” ಎಂದನು. ಧರ್ಮರಾಯನು “ಸರಿ. ಆ ಪುಣ್ಯದಲ್ಲಿ ಒಂದು ಭಾಗವನ್ನು ಕೊಡಿ” ಎಂದನು. ಸುಬ್ಬು ಆ ವೇಳೆಗೆ ಸರಿಯಾಗಿ ಮುಂದೆ ಬಂದು “ಮಹಾಸ್ವಾಮಿ ಆ ಪುಣ್ಯ ಫಲವನ್ನೆಲ್ಲ ಆಕೆಗೇ ಕೊಟ್ಟುಬಿಡಬಹುದು” ಎಂದನು. ಧರ್ಮರಾಯನು ಹಾಗೇ ಮಾಡಿ ಎಂದನು. ಇನ್ನೊಂದು ಗಳಿಗೆಯಲ್ಲಿ ಕಿಟ್ಟಮ್ಮನೂ ಸುಬ್ಬುವೂ ಈಚೆ ಬಂದರು.

ರಾಜಾಧಿಕಾರಿಯೊಬ್ಬನು ಬಂದು ಕಿಟ್ಟಮ್ಮನಿಗೆ ಒಂದು ಮನೆಯನ್ನು ಮಾಡಿಕೊಟ್ಟನು. ಅವಳು ಬದುಕಿದ್ದಾಗ ಇದ್ದಂಥದೇ ಒಂದು ಮನೆ. ಅದಕ್ಕಿಂತ ಅಚ್ಚುಕಟ್ಟಾಗಿದೆ. ಒಂದು ನಡುಮನೆ. ಅಲ್ಲೇ ಒಂದು ಅಡುಗೆ ಮನೆ: ಅದರ ಪಕ್ಕದಲ್ಲಿ ಬಚ್ಚಲು ಮನೆ. ನಡುಮನೆಯಲ್ಲಿಯೇ ಒಂದು ತಟ್ಟಿ ಕಟ್ಟಿದೆ. ಅದರ ಹಿಂದೆಯೇ ಉಗ್ರಾಣ. ಅಲ್ಲಿ ಎಲ್ಲ ಸಾಮಾನುಗಳೂ ಇಟ್ಟಿವೆ. ”ಇಲ್ಲಿ ನೋಡೀ ಅಮ್ಮ. ತಾವು ಇವರಿಗೆ ಆಗಾಗ ರವೆ ದೋಸೆ, ಉಪ್ಪಿಟ್ಟು, ಹಾಲು ಕಾಫಿ ಮಾಡಿಕೊಡುತ್ತಿದ್ದಿರಿ. ಈಗಲೂ ಮಾಡಿಕೊಡಬಹುದು. ಇದು ರವೆಯ ಡಬ್ಬಿ, ಅದು ತುಪ್ಪದ ಡಬ್ಬಿ, ಇದು ಹಾಲಿನ ತಂಬಿಗೆ. ಇಲ್ಲಿರುವ ಪದಾರ್ಥಗಳು ಎಂದಿಗೂ ಮುಗಿಯುವುದಿಲ್ಲ. ಇನ್ನು ನಾನು ಬರುತ್ತೇನೆ. ಇವರನ್ನು ಬಹಳ ಹೊತ್ತು ಇಲ್ಲಿ ಇಟ್ಟುಕೊಳ್ಳಬೇಡಿ. ಆದಷ್ಟು ಬೇಗ ಕಳುಹಿಸಿಕೊಡಿ” ಎಂದು ಹೇಳಿ ಅಧಿಕಾರಿಯು ಹೊರಡಲು ಸಿದ್ಧನಾದನು.

ಕಿಟ್ಟಮ್ಮನು “ಎಲ್ರೀ ನಾನು ಇವನಿಗೆ ಇಲ್ಲಿಯೂ ರವೆ ದೋಸೆ ಮಾಡಿಕೊಡಬಹುದೇನ್ರೀ’ ಎಂದು ಕೇಳಿದಳು. ಅಧಿಕಾರಿಯು “ಅಗತ್ಯವಾಗಿ, ಈ ಲೋಕದ ಔತಣ ಸಿಕ್ಕಬೇಕಾದರೆ ಅದೃಷ್ಟ ಮಾಡಿರಬೇಕು” ಎಂದನು.

ಕಿಟ್ಟಮ್ಮನು ಕುಣಿಕುಣಿಯುತ್ತಾ ರವೆ ದೋಸೆ, ಹಾಲು ಕಾಫಿ ಮಾಡಿದಳು. ಸುಬ್ಬುವು ಕಂಠಪೂರ್ತಿ ಹೊಡೆದನು. ಅವಳು ಹೊರಟಾಗ ಸೊಗಸಾದ ಮಲ್ಲಿಗೆ ಹೂವಿನ ದಂಡೆಯೊಂದನ್ನು ತಂದುಕೊಟ್ಟು “ತಕ್ಕೊಂಡು ಹೋಗಿ ನಿನ್ನ ಹೆಂಡತಿಗೆ ಕೊಡೋ ಸುಬ್ಬು” ಎಂದು ಹೇಳಿ, ಒಂದು ಗಾಡಿ ಮಾಡಿಕೊಟ್ಟು ಕಳುಹಿಸಿದಳು.

ಉತ್ತರ ಕ್ಷಣದಲ್ಲಿ ಸುಬ್ಬು ಢರ್‍ರನನೇ ತೇಗುತ್ತಾ ಎದ್ದನು. ತೇಗು ಬಿರುಸಾಗಿದ್ದು ಹೆಂಡತಿಗೆ ಎಚ್ಚರವಾಯಿತು. “ಇದೇನು? ರಾತ್ರಿ ಉಪವಾಸ ಮಾಡಿದ್ದರ ಫಲವೋ ಈ ತೇಗು?” ಎಂದಳು. ಸುಬ್ಬಗೆ ಇನ್ನೂ ನಿದ್ದೆ ಕಣ್ಣು, “ಅಲ್ಲ ಕಣೇ ಕಿಟ್ಟಮ್ಮ ಒಳೊಳ್ಳೆ ರವೆದೋಸೆ ಹಾಲು ಕಾಫಿ ಕೊಟ್ಟಳು. ಹೊಟ್ಟೆ ತುಂಬಿದೆ. ಇದೋ, ನಿನಗೆ ಅಂತ ಒಂದು ಮಲ್ಲಿಗೆ ದಂಡೆಯೂ ಕೊಟ್ಟಿದ್ದಾಳೆ” ಎಂದನು.

ಅದೂ ಕೊಂಚ ತುಂಟ ಹುಡುಗಿ, “ಎಲ್ಲಿ? ಕೊಡಿ ಮತ್ತೆ?” ಎಂದಳು. ಅವನಿಗೆ ಚೆನ್ನಾಗಿ ಎಚ್ಚರವಾಯಿತು. “ಆ ಏನು?” ಎಂದನು. “ಕಿಟ್ಟಮ್ಮ ಕೊಟ್ಟ ಮಲ್ಲಿಗೆಯ ದಂಡೆ ಎಲ್ಲಿ” ಎಂದಳು. ಸುಬ್ಬು- “ಛೇ! ಛೇ! ಅವಳು ಕೊಟ್ಟಿದ್ದು ಮಲ್ಲಿಗೆಯ ದಂಡೆಯಲ್ಲ, ಮುತ್ತಿನ ದಂಡೆ” ಎಂದನು.

ನುಡಿಗೆ ತಕ್ಕ ನಡೆಯೂ ಆಗಿ ಹೆಂಡತಿಗೆ ಬಹು ಸಂತೋಷವಾಯಿತು.

(ಕೃಪೆ: ಶತಮಾನದ ಸಣ್ಣ ಕತೆಗಳು, ಸಂ: ಎಸ್.ದಿವಾಕರ್, ಪ್ರ: ಪ್ರಿಸಂ ಬುಕ್ಸ್ ಪ್ರೈ.ಲಿ. ಬೆಂಗಳೂರು)

ದೇವುಡು 1
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆ.ವಿ. ಅಯ್ಯರ್ ಅವರ ಕತೆ | ಅನಾಥೆ ಅನಸೂಯೆ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಕತೆ | ಜೋಗ್ಯೋರ ಅಂಜಪ್ಪನ ಕೋಳಿ ಕತೆ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಭಾರತೀಪ್ರಿಯ ಅವರ ಕತೆ | ಒಂದು ಹಳೆಯ ಕತೆ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಬಾಗಲೋಡಿ ದೇವರಾಯ ಅವರ ಕತೆ | ಅವರವರ ಸುಖದುಃಖ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

Download Eedina App Android / iOS

X