ಹೆಣ್ಣು ಮಕ್ಕಳಿಗೆ ಅಶ್ಲೀಲ ಪದ ಬಳಸಿ ನಿಂದಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಮಹಿಳಾ ಪೇದೆಯೊಬ್ಬರಿಗೆ ದುರಹಂಕಾರಿ ಹೆಡ್ ಕಾನ್‌ಸ್ಟೆಬಲ್ ಒಬ್ಬ ಬೂಟುಗಾಲಿನಿಂದ ಒದ್ದು, ಹಲ್ಲೆಗೈದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ. ಠಾಣೆಯ ಮಹಿಳಾ ಕಾನ್‌ಸ್ಟೆಬಲ್ ರೇಣುಕಾ ಅವರ ಮೇಲೆ ಅದೇ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಬಿ.ಜಿ ಗೋವಿಂದರಾಜು ಎಂಬಾತ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಇಬ್ಬರು ಹೆಣ್ಣು ಮಕ್ಕಳು ಮನೆ ತೊರೆದು ಬಂದಿದ್ದರು. ಅವರಿಗೆ ಅಗತ್ಯ ನೆರವು ಮತ್ತು ಊಟದ ವ್ಯವಸ್ಥೆ ಮಾಡುವಂತೆ ಠಾಣೆಯ ಎಎಸ್‌ಐ ತಿಮ್ಮೇಗೌಡ ಅವರು ರೇಣುಕಾ ಅವರಿಗೆ ಸೂಚಿಸಿದ್ದರು. ಆ ಮಕ್ಕಳಿಗೆ ಊಟ ಕೊಡುವ ವೇಳೆ, ಅವರನ್ನು ಹೆಡ್ ಕಾನ್‌ಸ್ಟೆಬಲ್ ಗೋವಿಂದರಾಜು ಅವಾಚ್ಯವಾಗಿ ನಿಂದಿಸಿದ್ದಾರೆ. ಗೋವಿಂದರಾಜು ವರ್ತನೆಯಿಂದ ಆತಂಕಗೊಂಡ ಹೆಣ್ಣು ಮಕ್ಕಳು ಆ ಬಗ್ಗೆ ರೇಣುಕಾ ಅವರ ಬಳಿ ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮಕ್ಕಳಿಗೆ ನಿಂದಿಸಿದ ಕುರಿತು ಗೋವಿಂದರಾಜು ಅವರನ್ನು ರೇಣುಕಾ ಅವರು ಪ್ರಶ್ನಿಸಿದ್ದಾರೆ. ಆ ಕಾರಣಕ್ಕೆ, ರೇಣುಕಾ ಅವರ ಮೇಲೆ ಗೋವಿಂದರಾಜು ಹಲ್ಲೆ ನಡೆಸಿದ್ದಾರೆ. ಬೂಟು ಕಾಲಿನಿಂದ ಒದ್ದು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆ ಸಂಬಂಧ ರೇಣುಕಾ ಅವರು ತಮ್ಮದೇ ಠಾಣೆಯಲ್ಲಿ ಗೋವಿಂದರಾಜು ವಿರುದ್ಧ ದೂರು ದಾಖಲಿಸಿದ್ದಾರೆ. ಅವರ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿ ಗೋವಿಂದರಾಜು ಅವರನ್ನು ಅಮಾನತುಗೊಳಿಸಲಾಗಿದೆ ಎಂದು ವರದಿಯಾಗಿದೆ.