ಜನಗಣತಿಯಿಂದ ಪಡೆದ ಜಾತಿ ದತ್ತಾಂಶವನ್ನು ವರ್ಗೀಕರಿಸಲು ಬಿಜೆಪಿ ನೇತೃತ್ವದ ಸರ್ಕಾರವು ಅರವಿಂದ್ ಪನಗರಿಯಾ ನೇತೃತ್ವದ ಸಮಿತಿಯನ್ನು ರಚಿಸಿತು. ಆದರೆ ಯಾವುದೇ ಕೆಲಸವಾಗಲಿಲ್ಲ
ಬಿಹಾರ ಚುನಾವಣೆಯ ಹೊಸ್ತಿಲಲ್ಲಿ ಜಾತಿ ಗಣತಿಯ ಅಸ್ತ್ರವನ್ನು ಬಿಜೆಪಿ ಪ್ರಯೋಗಿಸಿದೆ. ಈವರೆಗೆ ಜಾತಿಗಣತಿಯನ್ನು ನಖಶಿಖಾಂತ ವಿರೋಧಿಸುತ್ತಿದ್ದ ಬಿಜೆಪಿ ಮತ್ತು ಸಂಘಪರಿವಾರ ಈಗ ಜಾತಿ ಗಣತಿಗೆ ಜೈ ಎನ್ನುತ್ತಿರುವಲ್ಲಿ ರಾಜಕೀಯ ಲೆಕ್ಕಾಚಾರಗಳು ಇಲ್ಲದೇ ಇಲ್ಲ. ಇತ್ತ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ, ಜಾತಿ ಸಮೀಕ್ಷೆಯ ವರದಿಯನ್ನು ಬಿಡುಗಡೆ ಮಾಡಲು ಪರದಾಡಿತು. ಕೊನೆಗೆ ಮರು ಗಣತಿ ಮಾಡುವುದಾಗಿ ಹೇಳಿಬಿಟ್ಟಿದೆ. ಅತ್ತ ಜಾತಿ ಗಣತಿಯನ್ನು ವಿರೋಧಿಸುತ್ತಿದ್ದ ಬಿಜೆಪಿಯವರು ಈಗ ರಾಷ್ಟ್ರಮಟ್ಟದಲ್ಲಿ ಗಣತಿ ಮಾಡುವ ಮಾತುಗಳನ್ನಾಡಿದ್ದಾರೆ!
ಜಾತಿ ಗಣತಿಯ ನಡೆಸುವ ಸಂಬಂಧ ಹೇಳಿಕೆಯನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, “ಮೋದಿಯವರು ಮಹತ್ವದ ಹೆಜ್ಜೆ ಇರಿಸಿದ್ದಾರೆ. ಸ್ವಾತಂತ್ರ್ಯ ನಂತರದಲ್ಲಿ ಕಾಂಗ್ರೆಸ್ ಸರ್ಕಾರವು ಯಾವುದೇ ಜಾತಿಗಣತಿಯನ್ನು ನಡೆಸಿಲ್ಲ” ಎಂದರು. ವಾಸ್ತವದಲ್ಲಿ 2011ರ ಜನಗಣತಿಯ ವೇಳೆ ಅಂದಿನ ಯುಪಿಎ ಸರ್ಕಾರವು ಜಾತಿಗಳನ್ನೂ ಎಣಿಸಿದೆ. ಆದರೆ ಆ ದಾಖಲೆಗಳನ್ನು ಕಾಂಗ್ರೆಸ್ ಬಿಡುಗಡೆ ಮಾಡಲಿಲ್ಲ. ಸಂಗ್ರಹಿಸಿದ ಮಾಹಿತಿಯನ್ನು ಪರಿಷ್ಕರಿಸುವಷ್ಟರಲ್ಲಿ ಸರ್ಕಾರ ಬದಲಾಗಿ ನರೇಂದ್ರ ಮೋದಿಯವರು ಅಧಿಕಾರಕ್ಕೇರಿದರು. ಆದರೆ ಹೊಸ ಸರ್ಕಾರವಂತೂ ಬೇಕಂತಲೇ ನಿರ್ಲಕ್ಷ್ಯ ತಾಳಿತು.
ಭಾರತದಲ್ಲಿ ಜನಗಣತಿ ಆರಂಭವಾಗಿದ್ದು ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ, ಅಂದರೆ 1881ರಲ್ಲಿ. ನಂತರದ ಜನಗಣತಿಗಳಲ್ಲಿ ಜಾತಿಯನ್ನು ಒಳಗೊಳ್ಳುವ ಪ್ರಯತ್ನಗಳಾದವು. 1931ರಲ್ಲಿ ನಡೆದ ಜಾತಿಗಣತಿಯೇ ಅಧಿಕೃತವಾಗಿ ಬಿಡುಗಡೆಯಾದ ಕೊನೆಯ ಕಾಸ್ಟ್ ಸೆನ್ಸಸ್. 1941ರಲ್ಲಿ ಎರಡನೇ ವಿಶ್ವಮಹಾಯುದ್ಧ ನಡೆಯುತ್ತಿದ್ದರಿಂದ ಗಣತಿ ಅರ್ಧಕ್ಕೆ ನಿಂತಿತು. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದೊರೆತು ನೆಹರೂ ಪ್ರಧಾನಿಯಾದರು. ದುರಾದೃಷ್ಟವಶಾತ್ ಕಾಂಗ್ರೆಸ್ ಸರ್ಕಾರ 1951ರಲ್ಲಿ ಜನಗಣತಿ ಮಾಡುವ ವೇಳೆಗೆ ಜಾತಿ ಎಂಬ ಅಂಶವನ್ನು ಕೈಬಿಟ್ಟಿತು. ಆದರೆ ಅದರ ಮಹತ್ವದ ಕುರಿತು ಮತ್ತೆ ಮತ್ತೆ ಚರ್ಚೆಗಳು ಶುರುವಾದಾಗ 2011ರ ಜನಗಣತಿಯಲ್ಲಿ ಜಾತಿಯನ್ನೂ ಯುಪಿಎ ಸರ್ಕಾರ ಪರಿಗಣಿಸಿತು. ಸಾಮಾಜಿಕ ಮತ್ತು ಆರ್ಥಿಕ ದತ್ತಾಂಶಗಳನ್ನೂ ಜನಗಣತಿಯ ವೇಳೆ ಸಂಗ್ರಹಿಸಿದೆ.
ಇದನ್ನೂ ಓದಿರಿ: ಕಳೆದ ಐದು ವರ್ಷಗಳಲ್ಲಿ ಜಗತ್ತು ಕಂಡ ಭೀಕರ ವಿಮಾನ ದುರಂತಗಳಿವು
ಜಾತಿಗಣತಿಯ ವಿಚಾರದಲ್ಲಿ ಈಗ ಬಿಹಾರ ಕೇಂದ್ರ ಬಿಂದುವಾಗಿದೆ. ಶೇ.65ರಷ್ಟು ಒಬಿಸಿಗಳನ್ನು ಹೊಂದಿರುವ ಈ ರಾಜ್ಯದಲ್ಲಿ ಜಾತಿಗಣತಿ ಚುನಾವಣಾ ಫಲಿತಾಂಶವನ್ನು ನಿರ್ಧರಿಸುವ ಕಾರಣ, ಅಲ್ಲಿನ ಪ್ರಧಾನ ಪ್ರತಿಪಕ್ಷ ಆರ್ಜೆಡಿ 2011ರ ಜಾತಿಗಣತಿಯ ವಿಚಾರವನ್ನು ಮುನ್ನೆಲೆಗೆ ತಂದಿದೆ. ಆ ಮೂಲಕ ಮೋದಿಯವರಿಗೆ ಜಾತಿಗಣತಿಯ ಮೇಲೆ ನಿಜವಾದ ಕಾಳಜಿ ಇಲ್ಲ ಎಂದು ಪ್ರತಿಪಾದಿಸಲು ಹೊರಟಿದೆ.
“ಮನಮೋಹನ್ ಸಿಂಗ್ ಸರ್ಕಾರವು 2011ರಲ್ಲಿ ಸಾಮಾಜಿಕ ಆರ್ಥಿಕ ಜಾತಿ ಗಣತಿ (SECC) ನಡೆಸಿತ್ತು. ಎಲ್ಲಾ ಸಂಬಂಧಿತ ದತ್ತಾಂಶಗಳನ್ನು ಹೊಂದಿದ್ದರೂ, ನರೇಂದ್ರ ಮೋದಿಯವರು ಅದನ್ನು ಬಿಡುಗಡೆ ಮಾಡುತ್ತಿಲ್ಲ” ಎಂದು ಆರ್ಜೆಡಿಯ ರಾಷ್ಟ್ರೀಯ ವಕ್ತಾರ ಮನೋಜ್ ಝಾ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಜಾತಿ ಗಣತಿ ದತ್ತಾಂಶವನ್ನು ಬಿಡುಗಡೆ ಮಾಡಲು ನರೇಂದ್ರ ಮೋದಿ ಸರ್ಕಾರ ಇಷ್ಟೊಂದು ಹಿಂಜರಿಯುತ್ತಿರುವುದು ಆಶ್ಚರ್ಯಕರವಾಗಿದೆ ಎಂದೂ ಕುಟುಕಿದ್ದಾರೆ.
ರಾಷ್ಟ್ರಾದ್ಯಂತ ಗಣತಿಯನ್ನು ನಡೆಸುವ ಅಧಿಕಾರವನ್ನು ಕೇಂದ್ರ ಸರ್ಕಾರ ಹೊಂದಿದೆ ಎಂಬುದು ಸ್ಪಷ್ಟ. ಆದರೆ 2011ರ ಗಣತಿಯಲ್ಲಿನ ಜಾತಿ ಮಾಹಿತಿಯನ್ನು ತಡೆದದ್ದು ಏಕೆ ಎಂಬುದು ಸದ್ಯದ ಪ್ರಶ್ನೆ. ಆ ಗಣತಿ ಹೇಗಿತ್ತು? ಅದರ ಸುತ್ತ ನಡೆದ ಬೆಳವಣಿಗೆಗಳೇನು?- ಈ ಎಲ್ಲ ವಿಚಾರಗಳನ್ನು ಚರ್ಚಿಸುವ ಅಗತ್ಯವಿದೆ.
2011ರಲ್ಲಿ ಮೂರು ಸರ್ಕಾರಿ ಇಲಾಖೆಗಳು ಸೇರಿ ಈ ಗಣತಿಯನ್ನು ನಡೆಸಿವೆ. ಗ್ರಾಮೀಣಾಭಿವೃದ್ಧಿ ಸಚಿವಾಲಯವು ಗ್ರಾಮೀಣ ಪ್ರದೇಶದಲ್ಲೂ, ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯವು ನಗರ ಪ್ರದೇಶದಲ್ಲೂ ಸಾಮಾಜಿಕ- ಆರ್ಥಿಕ ಮಾಹಿತಿ ಕಲೆ ಹಾಕಿದವು. ಕೇಂದ್ರ ಗೃಹ ಸಚಿವಾಲಯ, ಭಾರತದ ರಿಜಿಸ್ಟ್ರಾರ್ ಜನರಲ್ (RGI) ಮತ್ತು ಭಾರತದ ಜನಗಣತಿ ಆಯುಕ್ತರ ನಿಯಂತ್ರಣದಲ್ಲಿ ಜನಗಣತಿ ಇತ್ತು.
2011ರ ಎಸ್ಇಸಿಸಿ (ಸಾಮಾಜಿಕ ಆರ್ಥಿಕ ಜಾತಿ ಗಣತಿ) ಏಕೆ ನಡೆಸಲಾಯಿತು?
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ತನ್ನ ಸಾಮಾಜಿಕ ಅಭಿವೃದ್ಧಿ ಕೆಲಸಗಳನ್ನು ವಿಸ್ತರಿಸಲು ಪ್ರಯತ್ನಿಸಿತು. ಆದರೆ ಬಡತನದ ಮಟ್ಟವನ್ನು ಗುರುತಿಸಬೇಕಾದ ಮಾನದಂಡ ಯಾವುದೆಂಬ ಪ್ರಶ್ನೆ ಎದುರಾಯಿತು. ಹೀಗಾಗಿ ಜಾತಿಗಣತಿಯ ಭಾಗವಾಗಿ ಸರ್ಕಾರವು ಸಾಮಾಜಿಕ-ಆರ್ಥಿಕ ಮತ್ತು ಜಾತಿ ದತ್ತಾಂಶ ಸಂಗ್ರಹಕ್ಕೆ ಮುಂದಾಯಿತು. ಬಡತನ ಪಟ್ಟಿಯಲ್ಲಿ ಜನರನ್ನು ಸೇರಿಸುವ ಅಥವಾ ಅದರಿಂದ ಹೊರಗಿಡುವ ಮಾನದಂಡಗಳನ್ನು ಗಣತಿಯಲ್ಲಿ ಒಳಗೊಳ್ಳಲಾಗಿತ್ತು.
ಇದನ್ನೂ ಓದಿರಿ: ಗುಜರಾತ್ | ಅಕ್ರಮ ವಲಸೆ ಹಣೆಪಟ್ಟಿ: 8,500 ಕುಟುಂಬಗಳ ನಿರ್ನಾಮ!
ಕಾರು ಅಥವಾ ಮೂರು ಕೊಠಡಿಗಳಿರುವ ಕಾಂಕ್ರೀಟ್ ಮನೆಯನ್ನು ಹೊಂದಿರುವ ಕುಟುಂಬವನ್ನು ಬಡವರ ಪಟ್ಟಿಯಿಂದ ಹೊರಗಿಡಲಾಯಿತು. ಒಂಟಿ ತಾಯಂದಿರು, ಮ್ಯಾನ್ಯುಯಲ್ ಸ್ಕ್ಯಾವೆಂಜಿಗ್ ಮಾಡುವವರು ಅಥವಾ ನಿರ್ಗತಿಕರನ್ನು ಬಡವರ ಪಟ್ಟಿಯಲ್ಲಿ ಸೇರಿಸಲಾಯಿತು. ಕುಟುಂಬಗಳ ಸಾಮಾಜಿಕ ಆರ್ಥಿಕ ಸ್ಥಿತಿಯ ಆಧಾರದ ಮೇಲೆ ಶ್ರೇಣೀಕರಣ ಮಾಡುವುದು ಮತ್ತು ಜಾತಿವಾರು ಜನಸಂಖ್ಯೆ, ಸಾಮಾಜಿಕ-ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಿತಿಯ ಬಗ್ಗೆ ಅಧಿಕೃತ ಮಾಹಿತಿಯನ್ನು ಪಡೆಯುವುದು ಈ ಕಾರ್ಯದ ಪ್ರಮುಖ ಉದ್ದೇಶಗಳಾಗಿದ್ದವು.
ಆದಿಮ ಬುಡಕಟ್ಟುಗಳು, ಗುರುತಿಸಲ್ಪಟ್ಟ ದಲಿತ ಗುಂಪುಗಳು, ಮಹಿಳೆಯೊಬ್ಬಳೇ ನಿಭಾಯಿಸುವ ಕುಟುಂಬಗಳು, ಅಂಗವಿಕಲರು, ಜೀವನೋಪಾಯಕ್ಕಾಗಿ ದಾನವನ್ನು ಅವಲಂಬಿಸಿರುವವರು ಅಥವಾ ಅಪ್ರಾಪ್ತ ವಯಸ್ಕರು, ನಿರಾಶ್ರಿತರು ಮತ್ತು BPL ಪಟ್ಟಿಯಲ್ಲಿ ಬರುವವರನ್ನು ಬಡತನದ ಗುಂಪಿಗೆ ಸೇರಿಸಲಾಯಿತು. ಉಳಿದ ಕುಟುಂಬಗಳನ್ನು ಜಾತಿ, ಸಮುದಾಯ, ಧರ್ಮ, ಉದ್ಯೋಗ, ಶೈಕ್ಷಣಿಕ ಸ್ಥಿತಿ ಆಧಾರದಲ್ಲಿ ಶ್ರೇಣೀಕರಣ ಮಾಡಲು ತಜ್ಞರ ಗುಂಪು ಸಲಹೆ ನೀಡಿತು.
ಈ ಪ್ರಕ್ರಿಯೆಯು ನಿಜವಾದ ಬಡವರನ್ನು, ವಿಶೇಷವಾಗಿ ಸಮಾಜದ ದುರ್ಬಲ ವರ್ಗಗಳಾದ SC, STಗಳನ್ನು ಗುರುತಿಸುವಲ್ಲಿ ಸಹಾಯ ಮಾಡುವುದಿಲ್ಲ ಎಂಬ ಟೀಕೆಗಳೂ ಬಂದಿದ್ದವು.
ಗ್ರಾಮೀಣಾಭಿವೃದ್ಧಿ ಮತ್ತು ವಸತಿ- ನಗರ ವ್ಯವಹಾರಗಳ ಸಚಿವಾಲಯಗಳು ಎಸ್ಇಸಿಸಿ ದತ್ತಾಂಶಗಳನ್ನು ಅಂತಿಮಗೊಳಿಸಿ ಪ್ರಕಟಿಸಿದವು. ಆ ವರದಿಗಳನ್ನು ಸಾರ್ವಜನಿಕಗೊಳಿಸಲಾಯಿತು. ಆದರೆ ಭಾರೀ ಪ್ರಮಾಣದ ಜಾತಿಗಳು ಕಂಡು ಬಂದವು. ಆ ಮಾಹಿತಿಗೆ ಮತ್ತಷ್ಟು ಜರಡಿ ಆಡಿಸುವ ಕೆಲಸ ಆಗಬೇಕಿತ್ತು. ದುರಾದೃಷ್ಟವಶಾತ್, ಮಾಹಿತಿ ಸಮಪರ್ಕವಾಗಿ ಇಲ್ಲ ಎಂಬ ನೆಪದಲ್ಲಿ ಮುಂದಿನ ಕೆಲಸಗಳನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡಲೇ ಇಲ್ಲ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು 2022ರಲ್ಲಿ ಸಂಸತ್ತಿನಲ್ಲಿ ಮಾಹಿತಿ ಪ್ರಕಟಿಸಿ, “ಜಾತಿ ದತ್ತಾಂಶವನ್ನು ಬಿಡುಗಡೆ ಮಾಡುವ ಯಾವುದೇ ಪ್ರಸ್ತಾಪವಿಲ್ಲ” ಎಂದು ಸ್ಪಷ್ಟವಾಗಿ ತಿಳಿಸಿತು.
ಇದನ್ನೂ ಓದಿರಿ: ಮೋದಿ ಕಾಲದ ಮಾಧ್ಯಮ: ಪ್ರಶ್ನೆಗಳಿಗೆ ಹೆದರುವ ‘ಪ್ರಧಾನಿ’; ನೆನಪಾಗುವ ‘ಮೌನಿ’
“ದೊಡ್ಡ ಪ್ರಮಾಣದ ಜನಸಂಖ್ಯೆ ಇರುವ ದೇಶ ನಮ್ಮದು. ಜನರು ತಮ್ಮ ಜಾತಿಗಳನ್ನು ಗುರುತಿಸಲು ವಿಭಿನ್ನ ಮಾರ್ಗಗಳನ್ನು ಆರಿಸಿಕೊಂಡ ಕಾರಣ ಜಾತಿ ದತ್ತಾಂಶದಲ್ಲಿ ಹಲವು ವೈಪರೀತ್ಯಗಳಿವೆ” ಎಂದು ಅಧಿಕಾರಿಗಳು ಹೇಳಿಬಿಟ್ಟರು. ಕೆಲವರು ಉಪಜಾತಿಯನ್ನು ಉಲ್ಲೇಖಿಸಿದರೆ, ಇನ್ನು ಕೆಲವರು ತಮ್ಮ ಸಮುದಾಯಗಳನ್ನು ಪ್ರಧಾನ ಜಾತಿಗಳಾಗಿ ಗುರುತಿಸಿದ್ದಾರೆ. ಆರ್ಜಿಐ ಅದನ್ನು ವಿಂಗಡಿಸಬೇಕಾಗಿತ್ತು. ಜನಗಣತಿಯಿಂದ ಪಡೆದ ಜಾತಿ ದತ್ತಾಂಶವನ್ನು ವರ್ಗೀಕರಿಸಲು ಬಿಜೆಪಿ ನೇತೃತ್ವದ ಸರ್ಕಾರವು ಅರವಿಂದ್ ಪನಗರಿಯಾ ನೇತೃತ್ವದ ಸಮಿತಿಯನ್ನು ರಚಿಸಿತು. ಆದರೆ ಯಾವುದೇ ಕೆಲಸವಾಗಲಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ 2011ರ ಗಣತಿಯು ಕಡತದಲ್ಲಿ ಧೂಳು ಹಿಡಿದು ಬಹಳ ಕಾಲವೇ ಆಗಿದೆ. ಈಗ ಮತ್ತೊಂದು ಜಾತಿ ಗಣತಿಯ ಮಾತುಗಳು ಬಂದಿವೆ. 2021ರಲ್ಲಿ ಜನಗಣತಿ ಆಗಬೇಕಿತ್ತು. ಅದು ಕೂಡ ಆಗಿಲ್ಲ. ಕೋವಿಡ್ ನೆಪದಲ್ಲಿ ಮುಂದೂಡಲ್ಪಟ್ಟ ಗಣತಿ ಬಗ್ಗೆ ಸರ್ಕಾರ ಗಂಭೀರವಾಗಿರಲಿಲ್ಲ. ಈಗ ಚುನಾವಣೆಗಳು ಬರುತ್ತಿವೆ. ಜನಗಣತಿ ಜೊತೆ ಜಾತಿಗಣತಿಯ ಮಾತುಗಳೂ ತೇಲಿಬಂದಿವೆ. ಇದು ಕೇವಲ ಎಲೆಕ್ಷನ್ ಸ್ಟಂಟ್ ಆಗಿ ಪ್ರದರ್ಶಿಸದೆ, ನಿಜ ಕಾಳಜಿಯನ್ನು ಕೇಂದ್ರ ಸರ್ಕಾರ ತೋರಿಸಲೆಂದು ಆಶಿಸೋಣ.

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.