ಗುಜರಾತ್‌ನ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಗುರುವಾರ ಪತನಗೊಂಡ ಏರ್ ಇಂಡಿಯಾದ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನದ ಬ್ಲ್ಯಾಕ್ ಬಾಕ್ಸ್ ಇಂದು ಪತ್ತೆಯಾಗಿದೆ.
ಮೂಲಗಳ ಪ್ರಕಾರ, ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ)ದ ತಂಡ ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬಳಿಯ ಜನದಟ್ಟಣೆಯ ಮೇಘನಿನಗರ ಪ್ರದೇಶದಲ್ಲಿ ಬ್ಲ್ಯಾಕ್ ಬಾಕ್ಸ್ ಅನ್ನು ವಶಪಡಿಸಿಕೊಂಡಿದೆ.
ಬ್ಲ್ಯಾಕ್ ಬಾಕ್ಸ್ ವಿಮಾನ ಹಾರಾಟದ ಸಮಯದಲ್ಲಿ ವಿಮಾನದ ಬಗ್ಗೆ ಮಾಹಿತಿಯನ್ನು ದಾಖಲಿಸುವ ಒಂದು ಸಣ್ಣ ಸಾಧನವಾಗಿದೆ. ಇದು ವಿಮಾನ ಅಪಘಾತಗಳ ತನಿಖೆಗೆ ಸಹಾಯ ಮಾಡುತ್ತದೆ. ಈ ಸಾಧನವು ಅಹಮದಾಬಾದ್ ಬಳಿ 241 ಜನರ ಸಾವಿಗೆ ಕಾರಣವಾದ ನಿಗೂಢ ಅಪಘಾತದ ಬಗ್ಗೆ ಪ್ರಮುಖ ಸುಳಿವುಗಳನ್ನು ಹೊಂದಿದೆ ಎನ್ನಲಾಗುತ್ತಿದೆ.
ಬ್ಲ್ಯಾಕ್ ಬಾಕ್ಸ್‌ನ ವಿಶೇಷವೇನು ಗೊತ್ತೆ?
ಯಾವುದೇ ವಿಮಾನ ಅಪಘಾತದ ತನಿಖೆಯಲ್ಲಿ ‘ಬ್ಲ್ಯಾಕ್ ಬಾಕ್ಸ್’ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನು ಎಷ್ಟು ಸುರಕ್ಷಿತವಾಗಿ ವಿನ್ಯಾಸಗೊಳಿಸಲಾಗಿರುತ್ತದೆ ಎಂದರೆ ಭೀಕರ ಅಪಘಾತದವಾದಾಗಲೂ ಇದಕ್ಕೆ ಯಾವುದೇ ರೀತಿ ಹಾನಿಯಾಗುವುದಿಲ್ಲ. ಬ್ಲ್ಯಾಕ್ ಬಾಕ್ಸ್ ಇಲ್ಲದಿದ್ದರೆ ಅಪಘಾತಕ್ಕೆ ಕಾರಣವನ್ನು ಹುಡುಕಲು ಕಷ್ಟವಾಗುತ್ತದೆ. ಪೈಲಟ್ ತಪ್ಪು, ತಾಂತ್ರಿಕ ದೋಷಗಳು, ಹವಾಮಾನ ಅಥವಾ ಬಾಹ್ಯ ದಾಳಿಯಿಂದ ವಿಮಾನ ಪತನ ಮುಂತಾದವುಗಳನ್ನು ಗುರುತಿಸಲು ಬ್ಲ್ಯಾಕ್ ಬಾಕ್ಸ್ ಸಹಾಯ ಮಾಡುತ್ತದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಜಾತಿ ಜನಗಣತಿ: ಬಲಾಢ್ಯ ಸಮುದಾಯಗಳಿಗೆ ಶರಣಾಯಿತೇ ಸರ್ಕಾರ?
ಬ್ಲ್ಯಾಕ್ ಬಾಕ್ಸ್ ಜೊತೆ ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್(ಸಿವಿಆರ್) ಕೂಡ ಪ್ರಮುಖ ಪಾತ್ರ ವಹಿಸಲಿದೆ. ಇದೊಂದು ಸಣ್ಣ ಹಾಗೂ ಗಟ್ಟಿಯಾದ ವಿದ್ಯುನ್ಮಾನ ಸಾಧನವಾಗಿದೆ. ಇದು ವಿಮಾನದ ಕಾಕ್‌ಪಿಟ್‌ನಲ್ಲಿ ಕೇಳಿಬರುವ ಎಲ್ಲ ಶಬ್ಧಗಳನ್ನು ರೆಕಾರ್ಡ್ ಮಾಡುತ್ತದೆ. ಇದು ಬ್ಲ್ಯಾಕ್ ಬಾಕ್ಸ್‌ನ ಒಂದು ಭಾಗವಾಗಿದೆ.
ಹೆಸರಿಗಷ್ಟೆ ಬ್ಲ್ಯಾಕ್ ಬಾಕ್ಸ್ ಆದರೂ ಇದು ಕಪ್ಪು ಬಣ್ಣ ಹೊಂದಿರದೆ ಗಾಢ ಕಿತ್ತಳೆ ಬಣ್ಣದಲ್ಲಿರುತ್ತದೆ. ಪೈಲಟ್ ಮತ್ತು ಸಿಬ್ಬಂದಿ ನಡುವಿನ ಸಂಭಾಷಣೆಗಳು, ಪ್ರಯಾಣಿಕರ ನಡುವಿನ ಮಾತುಕತೆಗಳು ಮತ್ತು ಪೈಲಟ್ ಹಾಗೂ ಏರ್ ಟ್ರಾಫಿಕ್ ಕಂಟ್ರೋಲ್ ನಡುವಿನ ಸಂವಹನವನ್ನು ರೆಕಾರ್ಡ್ ಮಾಡುತ್ತದೆ. ಇನ್ನು, ಪ್ರತಿ ರೆಕಾರ್ಡಿಂಗ್‌ನೊಂದಿಗೆ ಸಮಯ ಮತ್ತು ದಿನಾಂಕವನ್ನು ಕೂಡ ಸಿವಿಆರ್ ರೆಕಾರ್ಡ್ ಮಾಡಿರುತ್ತದೆ. ಇದರಿಂದ ತನಿಖಾಧಿಕಾರಿಗಳು ಘಟನೆ ಯಾವಾಗ ಮತ್ತು ಹೇಗೆ ಸಂಭವಿಸಿತು ಎಂಬುದನ್ನು ತಿಳಿಯಲು ಸಹಾಯವಾಗುತ್ತದೆ.
ಅಪಘಾತ ಸಂಭವಿಸಿದರೂ ಸಿವಿಆರ್‌ಗೆ ಏನು ಆಗಬಾರದು ಎಂಬ ಕಾರಣಕ್ಕೆ ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಅನ್ನು ವಿಮಾನದ ಕೊನೆ ಭಾಗದಲ್ಲಿ ಅಳವಡಿಸಲಾಗಿರುತ್ತದೆ. ದೊಡ್ಡ ಮಟ್ಟದ ಅಪಘಾತವಾದರೂ ಬ್ಲ್ಯಾಕ್ ಬಾಕ್ಸ್‌ಗೆ ಹಾನಿಯಾಗಬಾರದು ಎಂದು ಅದನ್ನು ಉಕ್ಕು ಮತ್ತು ಟೈಟಾನಿಯಂನಿಂದ ತಯಾರಿಸಲಾಗಿರುತ್ತದೆ. ಇದು 3400 ಡಿಗ್ರಿ ಸೆಲ್ಸಿಯಸ್ ತಾಪಮಾನ ಹಾಗೂ 5,000 ಜಿ ಫೋರ್ಸ್ ಅಪಘಾತ ಮತ್ತು ಸಾಗರದಲ್ಲಿ 20,000 ಅಡಿ ಆಳದ ಒತ್ತಡವನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿರುತ್ತದೆ.
ಬ್ಲ್ಯಾಕ್ ಬಾಕ್ಸ್ ಮತ್ತು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್‌ನ ಡೇಟಾವನ್ನು 10 ರಿಂದ 15 ದಿನಗಳಲ್ಲಿ ವಿಶ್ಲೇಷಣೆ ಮಾಡಲಾಗುತ್ತದೆ. ತನಿಖೆಯ ವೇಳೆ ಅಪಘಾತಕ್ಕೆ ಸ್ವಲ್ಪ ಮೊದಲು ಪೈಲಟ್‌ಗಳು ಮತ್ತು ಏರ್ ಟ್ರಾಫಿಕ್ ಕಂಟ್ರೋಲರ್ ನಡುವಿನ ಸಂಭಾಷಣೆಯನ್ನು ವಿಶ್ಲೇಷಿಸಲಾಗುತ್ತದೆ. ಡೇಟಾವನ್ನು ವಿಶ್ಲೇಷಿಸಿದ ಬಳಿಕ, ಡಿಜಿಸಿಎ, ಎನ್‌ಟಿಎಸ್‌ಬಿ ಅಥವಾ ಬಿಇಎನಂತಹ ತನಿಖಾ ಸಂಸ್ಥೆಗಳು ವರದಿಯನ್ನು ಸಿದ್ಧಪಡಿಸಲಿವೆ. ಜೊತೆಗೆ ಸಿವಿಆರ್ ಮತ್ತು ಎಫ್‌ಡಿಆರ್ ಡೇಟಾ, ಅವಶೇಷಗಳ ವಿಶ್ಲೇಷಣೆ ಮತ್ತು ಸಾಕ್ಷಿಗಳ ಹೇಳಿಕೆ ಮತ್ತು ಇತರೆ ಪುರಾವೆಗಳನ್ನು ಅಧ್ಯಯನ ಮಾಡಿ ವಿಮಾನ ಪತನದ ಕಾರಣವನ್ನು ಪತ್ತೆ ಹಚ್ಚಲಾಗುತ್ತದೆ.