ಔರಾದ್ ತಾಲ್ಲೂಕಿನ ಹಲವೆಡೆ ಶುಕ್ರವಾರ ಮಧ್ಯಾಹ್ನ ಒಂದು ಗಂಟೆಗೂ ಹೆಚ್ಚುಕಾಲ ಧಾರಾಕಾರ ಮಳೆ ಸುರಿಯಿತು.
ಮಳೆ ಅವಾಂತರದಿಂದ ಔರಾದ್ ತಾಲ್ಲೂಕಿನ ಜೋಜನಾ ಗ್ರಾಮದಲ್ಲಿ ರಸ್ತೆಗೆ ಹೊಂದಿಕೊಂಡಿರುವ 10ಕ್ಕೂ ಅಧಿಕ ಮನೆಯೊಳಗೆ ನೀರು ನುಗ್ಗಿದ್ದು, ಮನೆಯಲ್ಲಿರುವ ದವಸ, ಧಾನ್ಯಗಳಿಗೆ ಹಾನಿಯಾಗಿದೆ.
ಬೆಳಿಗ್ಗೆಯಿಂದ ಬಿಸಿಲಿನ ಧಗೆ ಇತ್ತು. ಮಧ್ಯಾಹ್ನ 1 ಗಂಟೆ ನಂತರ ದಟ್ಟ ಕಾರ್ಮೋಡ ಕವಿದು 2 ಗಂಟೆ ಸುಮಾರಿಗೆ ಜೋರು ಮಳೆಯಾಗಿದೆ. ಇದರಿಂದ ಕೆಲ ಓಣಿಯ ರಸ್ತೆಗಳು ಜಲಾವೃತಗೊಂಡವು. ನೀರು ಸರಾಗವಾಗಿ ಹರಿದು ಹೋಗಲು ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿರುವ ಕಾರಣ ನೀರು ಮನೆಗಳಿಗೆ ನುಗ್ಗಿದೆ.
ʼಮಳೆಗೆ ಓಣಿಯ ಹಲವು ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿರುವ ಬೀಜ, ಗೊಬ್ಬರ ಸೇರಿದಂತೆ ದವಸ, ಧಾನ್ಯಗಳಿಗೆ ಹಾನಿಯಾಗಿದೆ. ಮಳೆ ನೀರು ಹೊರಹಾಕಲು ಹರಸಾಹಸ ಪಡಬೇಕಾಯಿತು. ವಿಷಜಂತುಗಳು ಮನೆಗೆ ನುಗ್ಗುವ ಪರಿಸ್ಥಿತಿ ಇದೆ. ಈ ಕುರಿತು ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದಿಸಲಿಲ್ಲʼ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಳೆಗಾಲ ಆರಂಭವಾದರೂ ಚರಂಡಿ ಸ್ವಚ್ಛಗೊಳಿಸುವ ಕಾರ್ಯ ನಡೆದಿಲ್ಲ. ಮುಂದಿನ ದಿನಗಳಲ್ಲಿ ಇಂತಹ ಅನಾಹುತ ಆಗದಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ನಿವಾಸಿಗಳಾದ ಸಂಗಪ್ಪ ರಾಜೋಳೆ, ದಿಗಂಬರ ಮಡಿವಾಳ, ವಿಜಯಕುಮಾರ್ ಕೌಟಗೆ, ಅಹ್ಮಮದ್ ಸೇರಿದಂತೆ ಅನೇಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಶಾಹೀನ್ ಶೈಕ್ಷಣಿಕ ತೀವ್ರ ನಿಗಾ ಘಟಕಕ್ಕೆ ಶಿಕ್ಷಣ ತಜ್ಞರ ಸಮಿತಿ ಭೇಟಿ