ಗಾಜಾದಲ್ಲಿ ಇಸ್ರೇಲ್ ನಡೆಸಿದ ಕೃತ್ಯಕ್ಕೆ, ಕ್ರೌರ್ಯಕ್ಕೆ ಶಿಕ್ಷೆಗೆ ಒಳಗಾಗದ ಇಸ್ರೇಲ್, ಈಗ ಇರಾನ್ ಮೇಲೆ ದಾಳಿ ಮಾಡುತ್ತಿದೆ. ಇದು ಮೂರನೇ ವಿಶ್ವಯುದ್ಧಕ್ಕೆ ಕಾರಣವಾಗಬಹುದು ಎಂದು ಎಲ್ಲರೂ ಅಂದಾಜಿಸುತ್ತಿದ್ದಾರೆ.
ಇಸ್ರೇಲ್ ಮತ್ತು ಅಮೆರಿಕಾದ ದುಷ್ಕೃತ್ಯಗಳಿಂದ ಜಗತ್ತು ದೊಡ್ಡ ಅಪಾಯದತ್ತ ಸಾಗುತ್ತಿದೆ. ಗಾಜಾದಲ್ಲಿ ಯಾರೂ ತಡೆಯದೆ ಮಾರಣಹೋಮ ನಡೆಸಿದ ಇಸ್ರೇಲ್, ಈಗ ಅಮೆರಿಕಾದ ಸಹಾಯದಿಂದ ಇರಾನ್ ಮೇಲೆ ದಾಳಿ ಮಾಡಿದೆ. ಇಸ್ರೇಲ್‌ಗೆ ಯಾವುದೇ ಕಾನೂನು ಮಾನದಂಡವಿಲ್ಲ, ಕೇಳುವವರೂ ಇಲ್ಲ. ಈಗ ಮತ್ತೊಂದು ಯುದ್ಧ ಶುರು ಮಾಡಿದೆ. ಮೂರನೇ ವಿಶ್ವಯುದ್ಧದ ಭೀತಿ ಹುಟ್ಟಿಸಿದೆ.
ಇಸ್ರೇಲ್, ಇರಾನ್‌ನಲ್ಲಿ ಹಲವು ಸ್ಥಳಗಳ ಮೇಲೆ ಬಾಂಬ್ ಹಾಕಿ, ಸೈನ್ಯದ ಪ್ರಮುಖ ನಾಯಕರು ಮತ್ತು ವಿಜ್ಞಾನಿಗಳನ್ನು ಕೊಂದಿದೆ. IRGC ಮುಖ್ಯಸ್ಥ ಜನರಲ್ ಹೊಸೈನ್ ಸಲಾಮ್, ಮುಖ್ಯಸ್ಥ ಮೊಹಮ್ಮದ್ ಬಾಗೇರಿ, ಮೇಜರ್ ಜನರಲ್ ಘೊಲಾಮಾಲಿ ರಶೀದ್ ಮತ್ತು ಆರು ಪರಮಾಣು ವಿಜ್ಞಾನಿಗಳಾದ ಡಾ. ತೆಹ್ರಾಂಚಿ, ಡಾ. ಅಬ್ದುಲ್‌ಹಮೀದ್ ಮಿನೌಚೆಹ್ರಾ ಮತ್ತು ಡಾ. ಫೆರೇಡೂನ್ ಅಬ್ಬಾಸಿ ಕೊಲೆಯಾಗಿದ್ದಾರೆ. ಈ ದಾಳಿಗಳು ಅಮೆರಿಕಾ ನಿಯಂತ್ರಣದ ಇರಾಕ್‌ನಿಂದ ಮಾಡಲಾಗಿದೆ. ಇದಕ್ಕೆ ಇರಾನ್ ಸರ್ಕಾರ, ”ನಾವು ಯುದ್ಧ ಶುರು ಮಾಡಲಿಲ್ಲ, ಆದರೆ ಇರಾನ್ ಅದನ್ನು ಹೇಗೆ ಮುಗಿಸುತ್ತದೆ ಎಂದು ನಿರ್ಧರಿಸುತ್ತದೆ” ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದೆ. ಹೇಳಿಕೆ ಕೊಟ್ಟಿದ್ದಷ್ಟೇ ಅಲ್ಲ, ಇರಾನ್ ಸೈನ್ಯಕ್ಕೆ ಹೊಸ ನಾಯಕರನ್ನು ನೇಮಿಸಿದೆ. ಬ್ರಿಗೇಡಿಯರ್ ಜನರಲ್ ಮೊಹಮ್ಮದ್ ಪಕ್‌ಪೌರ್ ಅವರನ್ನು IRGC ಮುಖ್ಯಸ್ಥರನ್ನಾಗಿ ಮಾಡಿದೆ.
ಇದನ್ನು ಓದಿದ್ದೀರಾ?: ವಿಶ್ವಸಂಸ್ಥೆಯಲ್ಲಿ ಹಮಾಸ್-ಇಸ್ರೇಲ್ ಕದನ ವಿರಾಮ ನಿರ್ಣಯ ಅಂಗೀಕಾರ; ಭಾರತ ಗೈರು
ಇದು ಅಮೆರಿಕಾದ ಯುದ್ಧದಾಹ. ಅಮೆರಿಕ ಇದರಲ್ಲಿ ಸಂಪೂರ್ಣವಾಗಿ ಭಾಗಿಯಾಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ದಾಳಿಗಳನ್ನು ‘ಗುಡ್’ ಎಂದು ಕರೆದಿದ್ದಾರೆ. ಮತ್ತು ಇಸ್ರೇಲ್‌ಗೆ ಅನುಮತಿ ನೀಡಿದ್ದು ‘ನಾನೇ’ ಎಂದು ಹೇಳಿಕೊಂಡಿದ್ದಾರೆ. ಅದನ್ನು ಪುಷ್ಟೀಕರಿಸುವಂತೆ, ದಾಳಿಯಲ್ಲಿ ಬಳಕೆಯಾಗಿರುವ ಶಸ್ತ್ರಾಸ್ತ್ರಗಳೆಲ್ಲ ಅಮೆರಿಕಾದವು. ಮಿಸೈಲ್‌ಗಳನ್ನು ಇರಾಕ್‌ನಿಂದ ಉಡಾಯಿಸಲಾಗಿದೆ. ಇದು 2020ರಲ್ಲಿ ಸೋಲೇಮಾನಿ ಕೊಲೆಯಂತೆಯೇ ಕಾಣುತ್ತಿದೆ. ಅವರು ರಾಜತಾಂತ್ರಿಕ ಕಾರ್ಯದಲ್ಲಿದ್ದಾಗ ಕೊಲ್ಲಲಾಯಿತು. ಅದೇ ರೀತಿ ಈಗ ಓಮನ್‌ನಲ್ಲಿ ಅಮೆರಿಕಾ-ಇರಾನ್ ಮಾತುಕತೆಯಲ್ಲಿರುವಾಗಲೇ ಇಸ್ರೇಲ್ ದಾಳಿ ಮಾಡಿದೆ.
ಗಾಜಾದಲ್ಲಿ ಮಕ್ಕಳು, ಮಹಿಳೆಯರು, ಮುದುಕರ ಮೇಲೆ ಇಸ್ರೇಲ್ ಮಾರಣಹೋಮ ನಡೆಸಿತು. ‘ಮಾನವಂತರು’ ಎನಿಸಿಕೊಂಡ ಯಾರೂ ತಡೆಯಲಿಲ್ಲ. ಈ ಘನಘೋರ ಕ್ರೌರ್ಯವನ್ನು ಪ್ರಶ್ನಿಸದ, ಶಿಕ್ಷೆಯಾಗದ ಧೈರ್ಯದಿಂದ ಇಸ್ರೇಲ್ ಈಗ ಇರಾನ್ ಮೇಲೆ ದಾಳಿ ಮಾಡಿದೆ. ಇದು BRICS ದೇಶಗಳಾದ ರಷ್ಯಾ ಮತ್ತು ಚೀನಾದ ಶಕ್ತಿ ಕೇಂದ್ರದ ಮೇಲೆ ನಡೆದ ದಾಳಿಯೂ ಆಗಿದೆ. ಇರಾನ್‌ನ ಸುಪ್ರೀಂ ಲೀಡರ್ ಅಲಿ ಖಾಮೇನಿ, ”ಜಿಯೋನಿಸ್ಟ್ ಸರ್ಕಾರ ತನ್ನ ಕೊಳಕು ಕೈಗಳಿಂದ ನಮ್ಮ ಮಣ್ಣಿನಲ್ಲಿ ಅಪರಾಧ ಮಾಡಿದೆ, ಇದಕ್ಕೆ ಕಠಿಣ ಶಿಕ್ಷೆ ಸಿಗಲಿದೆ” ಎಂದು ಹೇಳಿದ್ದಾರೆ. ತನ್ನ ಹೇಳಿಕೆಯನ್ನು ನಿಜವಾಗಿಸಲು ಇರಾನ್ ಪರಮಾಣು ಒಪ್ಪಂದದಿಂದ (NPT) ಹೊರಗುಳಿಯುವ ಬಗ್ಗೆ ಯೋಚಿಸುತ್ತಿದೆ ಮತ್ತು ಅಮೆರಿಕಾದ ಮಾತುಕತೆ ಆಹ್ವಾನವನ್ನು ತಿರಸ್ಕರಿಸಿದೆ.
ಇಸ್ರೇಲ್ ಇದ್ದಕ್ಕಿದ್ದಂತೆ ಇರಾನ್ ಮೇಲೆ ದಾಳಿ ಮಾಡುತ್ತಿದ್ದಂತೆ ಜಾಗತಿಕ ನಾಯಕರು, ಇಸ್ರೇಲ್ ಕೃತ್ಯವನ್ನು ಖಂಡಿಸುತ್ತಿದ್ದಾರೆ. ಸ್ಪೇನ್‌ನ ಉಪ ಪ್ರಧಾನಿ ಯೊಲಾಂಡಾ ಡಯಾಜ್, ”ಗಾಜಾದ ಮಾರಣಹೋಮದಿಂದ ಇರಾನ್ ಮೇಲಿನ ದಾಳಿವರೆಗೆ—ನೆತನ್ಯಾಹು ಜಗತ್ತನ್ನು ಅಪಾಯಕಾರಿ ಯುದ್ಧದತ್ತ ಎಳೆಯುತ್ತಿದ್ದಾರೆ” ಎಂದಿದ್ದಾರೆ. UKಯ ಮಾಜಿ ಲೇಬರ್ ನಾಯಕ ಜೆರೆಮಿ ಕಾರ್ಬಿನ್, ”ಗಾಜಾದಲ್ಲಿ ಮಾರಣಹೋಮವನ್ನು ಜಗತ್ತು ತಡೆಯಬಹುದಿತ್ತು. ಆದರೆ ಸರ್ಕಾರಗಳು ಸುಮ್ಮನಾಗಿ ಇಸ್ರೇಲ್‌ಗೆ ಶಿಕ್ಷೆಯಾಗದಂತಾಯಿತು. ಇರಾನ್ ಮೇಲಿನ ದಾಳಿಗಳು ಆ ಶಿಕ್ಷೆಯಾಗದಿರುವಿಕೆಯ ಫಲ. ಇದು ಜಗತ್ತಿನ ಸುರಕ್ಷತೆಗೆ ಬೆದರಿಕೆ” ಎಂದಿದ್ದಾರೆ. ಎಲ್ಲರೂ ಮೂರನೇ ವಿಶ್ವಯುದ್ಧದ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ.
ಜಾಗತಿಕ ನಾಯಕರ ಮಾತಿಗೆ ಪೂರಕವಾಗಿ ದಿಢೀರ್ ತೈಲ ಬೆಲೆ ಏರಿಕೆ ಜಗತ್ತನ್ನು ತೊಂದರೆಗೆ ಸಿಲುಕಿಸಲು ಸಿದ್ಧವಾಗಿದೆ. ಮಧ್ಯಪ್ರಾಚ್ಯದ ಯುದ್ಧ ಉದ್ವಿಗ್ನತೆಯಿಂದಾಗಿ ಕಚ್ಚಾ ತೈಲ ಪ್ರತಿ ಬ್ಯಾರೆಲ್‌ಗೆ $78ರಷ್ಟು ಏರಿಕೆಯಾಗಿದೆ. 2022ರಿಂದ ಇಲ್ಲಿಯವರೆಗೆ ಕಂಡಿರದಿದ್ದ ಬೆಲೆ, ಈಗ ಇದ್ದಕ್ಕಿದ್ದಂತೆ ಏರಿಕೆ ಕಂಡಿದೆ. ಇದನ್ನು ಅತಿ ದೊಡ್ಡ ಏರಿಕೆ ಎನ್ನಲಾಗುತ್ತಿದೆ. ತೈಲ ಪೂರೈಕೆ ವ್ಯಾಪಾರಿಗಳು ತೊಂದರೆಗೆ ಸಿಲುಕಿದ್ದಾರೆ. ಇದು ಜಾಗತಿಕವಾಗಿ ತೈಲ ಉದ್ಯಮ ಮತ್ತು ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಬೀರಲಿದೆ.

ಗಾಜಾದಲ್ಲಿ ಇಸ್ರೇಲ್ ನಡೆಸಿದ ಕೃತ್ಯಕ್ಕೆ, ಕ್ರೌರ್ಯಕ್ಕೆ ಶಿಕ್ಷೆಗೆ ಒಳಗಾಗದ ಇಸ್ರೇಲ್, ಈಗ ಇರಾನ್ ಮೇಲೆ ದಾಳಿ ಮಾಡುತ್ತಿದೆ. ಇದು ಮೂರನೇ ವಿಶ್ವಯುದ್ಧಕ್ಕೆ ಕಾರಣವಾಗಬಹುದು ಎಂದು ಎಲ್ಲರೂ ಅಂದಾಜಿಸುತ್ತಿದ್ದಾರೆ. ಆದರೆ ಇಸ್ರೇಲ್ ಮತ್ತು ಅಮೆರಿಕಾ ಹುಚ್ಚಾಟದಲ್ಲಿ ಬಿದ್ದು, ಜಗತ್ತನ್ನು ದೊಡ್ಡ ಯುದ್ಧದತ್ತ ದೂಡುತ್ತಿವೆ. ಪ್ರಪಂಚದ ಇತರ ದೇಶಗಳು ಇಸ್ರೇಲ್ ಮತ್ತು ಅಮೆರಿಕಾವನ್ನು ನಿಲುವನ್ನು ದಾಳಿಯನ್ನು ಖಂಡಿಸುತ್ತಿವೆ. ಕಾನೂನು ಜಾರಿ ಮಾಡಿ, ಜಗತ್ತನ್ನು ರಕ್ಷಿಸಬೇಕು ಎಂಬ ಬಗ್ಗೆ ಯೋಚಿಸುತ್ತಿವೆ. ಅದಕ್ಕನುಗುಣವಾಗಿ ಕಾರ್ಬಿನ್, ”ನಾವೆಲ್ಲರೂ ಒಂದೇ ಗ್ರಹದ ಮನುಷ್ಯರು. ಶಾಂತಿಯ ಜಗತ್ತು ನಮ್ಮದಾಗಲಿ” ಎಂದಿರುವುದು ಎಲ್ಲರ ಮಂತ್ರವಾಗಬೇಕು.