ಮಾವಿನ ಹಣ್ಣಿನ ಬೆಲೆ ತೀವ್ರ ಕುಸಿತದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಮಾವು ಬೆಳೆಗಾರರ ಹಿತರಕ್ಷಣೆಗೆ ಮುಂದಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚವ್ಹಾಣ್ ಅವರನ್ನು ಮನವಿ ಮಾಡಿದ್ದಾರೆ.
ಶುಕ್ರವಾರ ಈ ಸಂಬಂಧ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚವ್ಹಾಣ್‍ಗೆ ಪತ್ರ ಬರೆದಿರುವ ಸಿದ್ದರಾಮಯ್ಯ, ರಾಜ್ಯದಲ್ಲಿ ಮಾವು ಅತಿದೊಡ್ಡ ತೋಟಗಾರಿಕಾ ಬೆಳೆಯಾಗಿದ್ದು, ಈ ಬಾರಿ ಒಂದು ಲಕ್ಷ 39 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಈ ಹಂಗಾಮಿನಲ್ಲಿ 8 ರಿಂದ 10 ಲಕ್ಷ ಮೆಟ್ರಿಕ್ ಟನ್ ಮಾವು ಉತ್ಪಾದನೆಯನ್ನು ಬೆಂಗಳೂರಿನ ಸುತ್ತಮುತ್ತಲ ಜಿಲ್ಲೆಗಳಲ್ಲಿ ನಿರೀಕ್ಷೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಜಾತಿ ಜನಗಣತಿ: ಬಲಾಢ್ಯ ಸಮುದಾಯಗಳಿಗೆ ಶರಣಾಯಿತೇ ಸರ್ಕಾರ?
ಆರಂಭದಲ್ಲಿ ಕ್ವಿಂಟಾಲ್‍ಗೆ 12 ಸಾವಿರ ರೂ.ಗಳಿದ್ದ ಮಾವಿನ ಹಣ್ಣಿನ ಬೆಲೆ ಈಗ 3 ಸಾವಿರ ರೂ.ಗೆ ಕುಸಿದಿದೆ. ಮಾವು ಉತ್ಪಾದನೆಯ ಖರ್ಚು ಕ್ವಿಂಟಾಲ್‍ಗೆ 5 ಸಾವಿರ ರೂ.ಗಳಿಗಿಂತಲೂ ಹೆಚ್ಚಿದ್ದು, ರೈತರು ನಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಕೇಂದ್ರ ಸಂಸ್ಥೆಗಳಾದ ನೆಫೆಡ್ ಹಾಗೂ ಎನ್‍ಸಿಸಿಎಫ್‍ಗಳ ಮೂಲಕ ಮಾವು ಖರೀದಿಸುವ ಮೂಲಕ ಕೇಂದ್ರ ಸರಕಾರ ಮುಂದಾಗಬೇಕೆಂದು ಸಿದ್ದರಾಮಯ್ಯ ಕೋರಿದ್ದಾರೆ.