ಸಹಕಾರಿ ಕ್ಷೇತ್ರದಲ್ಲಿ ಪಕ್ಷಾತೀತ ನಿಲುವು ಮೂಲಕ ಇಡೀ ರಾಜ್ಯದ ಮನೆಮಾತಾದ ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಅವರ 75 ನೇ ಜನ್ಮದಿನದ ಹಿನ್ನಲೆ ಅಮೃತ ಮಹೋತ್ಸವ ಹಾಗೂ ಅಭಿನಂದನಾ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮವನ್ನು ಇದೇ ತಿಂಗಳ 21 ರಂದು ತುಮಕೂರು ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಬೆಳಿಗ್ಗೆ 10 ಗಂಟೆಗೆ ಆಯೋಜಿಸಲಾಗಿದೆ. ರಾಜಣ್ಣ ಅವರ ಅಭಿಮಾನಿಗಳು ಹಾಗೂ ಜಿಲ್ಲೆಯ ಸಹಕಾರಿ ಸಂಘದ ಎಲ್ಲಾ ಸದಸ್ಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹಾಗೂ ಅಮೃತ ಮಹೋತ್ಸವ ಕಾರ್ಯಕ್ರಮ ಸಂಚಾಲಕ ವೆಂಕಟೇಗೌಡ ಮನವಿ ಮಾಡಿದರು.
ಪಟ್ಟಣದ ಟಿಎಪಿಸಿಎಂಎಸ್ ಕಟ್ಟಡ ಸಭಾಂಗಣದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಡಿಸಿಸಿ ಬ್ಯಾಂಕ್ ಜಿಲ್ಲಾಧ್ಯಕ್ಷರಾಗಿ ರಾಜಣ್ಣನವರ ಸಹಕಾರಿ ಸೇವೆ ಇಡೀ ರಾಜ್ಯಕ್ಕೆ ತಿಳಿದಿದೆ. ಗ್ರಾಮೀಣ ಭಾಗದ ಸೊಸೈಟಿಗಳು, ವಿಎಸ್ಎಸ್ಎನ್ ಸಂಘಗಳ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ ರಾಜಣ್ಣನವರು ಪಕ್ಷಾತೀತ ನಿಲುವು ತಾಳಿ ಎಲ್ಲಾ ತಾಲ್ಲೂಕುಗಳಲ್ಲಿ ರೈತರ ಪರ ಕೆಲಸ ಮಾಡಿದ್ದಾರೆ ಎಂದರು.
ಜಿಲ್ಲೆಯಲ್ಲಿ ಸಹಕಾರಿ ರಂಗಕ್ಕೆ ಹೊಸ ಮೆರಗು ತಂದ ರಾಜಣ್ಣನವರ ಕಾರ್ಯವೈಖರಿ ಮೆಚ್ಚಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹಕಾರಿ ಸಚಿವರಾಗಿ ಇಡೀ ರಾಜ್ಯದ ಸಹಕಾರ ಕ್ಷೇತ್ರವನ್ನು ವಿಸ್ತರಿಸಲು ಸೂಚಿಸಿದ್ದಾರೆ. ಅದರಂತೆ ಎಡಬಿಡದೆ ದುಡಿಯುತ್ತಿರುವ ರಾಜಣ್ಣ ಅವರ 75 ನೇ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಅಮೃತ ಮಹೋತ್ಸವ ಹಾಗೂ ಅವರ ಸಾಧನೆಯ ಅಭಿನಂದನಾ ಗ್ರಂಥ ಬಿಡುಗಡೆ ಮಾಡಲಾಗುವುದು. ಈ ನಿಟ್ಟಿನಲ್ಲಿ ಜಿಲ್ಲೆಯ ಸಹಕಾರಿ ಕ್ಷೇತ್ರದ ಎಲ್ಲಾ ರೈತ ಬಂಧುಗಳು ಪಕ್ಷಾತೀತವಾಗಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸುವಂತೆ ಮತ್ತೊಮ್ಮೆ ಮನವಿ ಮಾಡಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾರನಹಳ್ಳಿ ಪ್ರಭಣ್ಣ ಮಾತನಾಡಿ ಸಹಕಾರ ಸಂಘಗಳು ರೈತ ಪರ ಕೆಲಸ ಮಾಡುತ್ತಾ ವಿಶಿಷ್ಟವಾಗಿ ಗುರುತಿಸಿಕೊಂಡು ರಾಜಕೀಯ ರಹಿತವಾಗಿ ಬೆಳೆಸಿದ ಕೀರ್ತಿ ಕೆ.ಎನ್.ರಾಜಣ್ಣ ಅವರಿಗೆ ಸಲ್ಲಬೇಕು. ಪಕ್ಷಾತೀತ ಜೊತೆಗೆ ಜಾತ್ಯತೀತ ನಿಲುವು ಸಹ ಇವರಲ್ಲಿ ಕಾಣುತ್ತಿದೆ. ಇಂದಿಗೂ ಸಹಕಾರಿ ಕ್ಷೇತ್ರದಲ್ಲಿ ಅವರ ಬೆಂಬಲಿಗರು ಎಲ್ಲಾ ಜಾತಿ ಧರ್ಮದವರು ಇರುವುದೇ ಸಾಕ್ಷಿಯಾಗಿದೆ ಎಂದ ಅವರು ಗುಬ್ಬಿ ತಾಲ್ಲೂಕಿನಿಂದ ಸಾವಿರಾರು ರೈತರು ಈ ಕಾರ್ಯಕ್ರಮಕ್ಕೆ ಆಗಮಿಸಿ ರಾಜಣ್ಣನವರನ್ನು ಅಭಿನಂದಿಸಲಿದ್ದಾರೆ ಎಂದು ಹೇಳಿದರು.
ಬಯಲು ಸೀಮೆ ಅಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಕೆ.ಎ.ದೇವರಾಜ್ ಮಾತನಾಡಿ ಕಳೆದ 45 ವರ್ಷದ ರಾಜಕಾರಣದಲ್ಲಿ ಎಂದಿಗೂ ಸಹಕಾರ ಕ್ಷೇತ್ರದ ವಿಚಾರ ಬೆರೆಸದ ಸಚಿವ ರಾಜಣ್ಣ ಅವರ ಈ ಗುಣಕ್ಕೆ ಎಲ್ಲಾ ಜಾತಿ ಧರ್ಮದ ಜನ ಹತ್ತಿರವಾಗಿದ್ದಾರೆ. 25 ವರ್ಷ ಡಿಸಿಸಿ ಬ್ಯಾಂಕ್ ಜಿಲ್ಲಾಧ್ಯಕ್ಷ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹಾಗೂ ಮೂರು ಬಾರಿ ಶಾಸಕರಾಗಿ ಮಾಡಿದ ಸೇವೆ ಜನಾನುರಾಗಿ ಶ್ರಮಕ್ಕೆ ಅವರ 75 ನೇ ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ನಡೆಸಲಾಗುವುದು. 727 ಕೋಟಿ ರೂಗಳ ಸಾಲ ಮನ್ನಾ, ಎಪಿಎಂಸಿ ಮೂಲಕ ಮೃತ ರೈತನ ಲಕ್ಷ ಸಾಲ ಮನ್ನಾ, ಬರಗಾಲದಲ್ಲಿ ಗೋಶಾಲೆಗೆ ಮೇವು ವಿತರಣೆ ಹೀಗೆ ಅನೇಕ ಕೆಲಸದಿಂದ ಸಹಕಾರ ರತ್ನ ಎನಿಸಿಕೊಂಡ ರಾಜಣ್ಣ ಅವರ ಅಭಿನಂದನಾ ಗ್ರಂಥ ಬಿಡುಗಡೆಗೆ ಸಾವಿರಾರು ಸಂಖ್ಯೆಯಲ್ಲಿ ರೈತರು ಬರಲಿದ್ದಾರೆ ಎಂದರು.
ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಡಿ.ಸುರೇಶಗೌಡ ಮಾತನಾಡಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಅಮೃತ ಮಹೋತ್ಸವ ಕಾರ್ಯಕ್ರಮ ಹಾಗೂ ಅಭಿನಂದನಾ ಗ್ರಂಥ ಬಿಡುಗಡೆಗೆ ಜೂನ್ 21 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ವಿ.ಸೋಮಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಸೇರಿದಂತೆ ಅನೇಕ ಸಚಿವರು, ಜಿಲ್ಲೆಯ ಶಾಸಕರು, ಮಾಜಿ ಶಾಸಕರು, ಎಲ್ಲಾ ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ತಾಲ್ಲೂಕಿನ ಸಹಕಾರಿ ಸಂಘಗಳ ಎಲ್ಲಾ ಸದಸ್ಯರು, ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಸದಸ್ಯ ಗಂಗಣ್ಣ, ವಕೀಲ ನಾರಾಯಣ್, ಮುಖಂಡ ಜಿ.ಎನ್.ಬೆಟ್ಟಸ್ವಾಮಿ, ಟಿಎಪಿಸಿಎಂಎಸ್ ಸದಸ್ಯರಾದ ನಟರಾಜ್, ಬೋರೇಗೌಡ, ಕೆ.ಬಿ.ಕೃಷ್ಣಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಲಕ್ಷ್ಮೀರಂಗಯ್ಯ ಇನ್ನಿತರರು ಇದ್ದರು.