ನಿನ್ನೆ ಸಂಭವಿಸಿದ ಏರ್ ಇಂಡಿಯಾ ವಿಮಾನ ಅಪಘಾತವು ಇಡೀ ರಾಷ್ಟ್ರದ ಮನಸ್ಸಿಗೆ ಆಘಾತ ನೀಡಿದ ದುರಂತ. ಅನೇಕ ಅಮೂಲ್ಯ ಜೀವಗಳ ನಷ್ಟದಿಂದ ಕೂಡಿದ ಈ ಅಪಾಯದಲ್ಲಿ ಪ್ರಾಣ ಕಳೆದುಕೊಂಡ ಪ್ರಯಾಣಿಕರ ಆತ್ಮಕ್ಕೆ ಶಾಂತಿ ಲಭಿಸಲಿ ಹಾಗೂ ಅವರ ಕುಟುಂಬದವರಿಗೆ ಈ ದುಃಖವನ್ನು ಸಹಿಸುವ ಶಕ್ತಿ ದೇವರು ನೀಡಲೆಂದು ನಾವು ಪ್ರಾರ್ಥಿಸುತ್ತೇವೆ ಎಂದು ಉಡುಪಿ ಜಿಲ್ಲಾ ಮುಸ್ಲೀಮ್ ಒಕ್ಕೂಟದ ಅಧ್ಯಕ್ಷರಾದ ಮಹಮ್ಮದ್ ಮೌಲಾ ಸಂತಾಪ ಸೂಚಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಇಂತಹ ಆಪತ್ತುಗಳು ಅನೇಕ ಕುಟುಂಬಗಳನ್ನು ಒಂದೇ ಕ್ಷಣದಲ್ಲಿ ಅಂಧಕಾರಕ್ಕೆ ತಳ್ಳುತ್ತವೆ. ಆ ಕುಟುಂಬಗಳ ನೋವನ್ನು ಮರೆಯುವಷ್ಟು ಸುಲಭವಲ್ಲ. ಗಾಯಗೊಂಡವರಿಗೂ ಶೀಘ್ರ ಗುಣಮುಖ ಆಗಲಿ ಎಂದು ಪ್ರಾರ್ಥಿಸುತ್ತೇವೆ. ಈ ಅಪಘಾತದ ಸತ್ಯ ಅನಾವರಣಗೊಳ್ಳಬೇಕೆಂಬುದು ನಮ್ಮ ಸ್ಪಷ್ಟ ನಿಲುವು. ವಿಮಾನಯಾನ ಕ್ಷೇತ್ರದಲ್ಲಿ ಸುರಕ್ಷತೆ ಮುಂಚೂಣಿಯ ಆದ್ಯತೆ ಆಗಬೇಕು. ಇಂತಹ ದುರ್ಘಟನೆಗಳು ಪುನರಾವೃತ್ತವಾಗದಂತೆ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.