ಇರಾನ್ ವಿರುದ್ಧ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ ನಂತರ ಪಶ್ಚಿಮ ಏಷ್ಯಾ ಸಂಘರ್ಷದತ್ತ ಸಾಗಿದೆ. ಇರಾನ್‌ನ ಪರಮಾಣು ಘಟಕ ಮತ್ತು ಮಿಲಿಟರಿ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ದಾಳಿ 78 ಜನ ಮೃತಪಟ್ಟಿದ್ದು, 320ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಇರಾನ್ ರಾಯಭಾರಿ ಮಾಹಿತಿ ನೀಡಿದ್ದಾರೆ.
ಇಸ್ರೇಲ್ ನಡೆಸಿರುವ ವೈಮಾನಿಕ ದಾಳಿಯಲ್ಲಿ ಇರಾನ್‌ನ ಸೇನಾಪಡೆಗಳ ಮುಖ್ಯಸ್ಥನ ಹತ್ಯೆಗೈಯಲಾಗಿದೆ ಎಂದು ವರದಿಯಾಗಿದೆ. ಈ ಕುರಿತು ಇಸ್ರೇಲ್ ಸೇನೆ ತಿಳಿಸಿದ್ದು, ವೈಮಾನಿಕ ದಾಳಿಯಲ್ಲಿ ಇರಾನ್‌ನ ಸೇನಾಪಡೆಗಳ ಮುಖ್ಯಸ್ಥ ಮೊಹಮ್ಮದ್ ಬಘೇರಿ ಹತ್ಯೆಗೀಡಾಗಿದ್ದಾನೆ ಎಂದು ಹೇಳಿದೆ. ಇರಾನ್ ಪರಮಾಣು ಯೋಜನೆಯ ಇಬ್ಬರು ವಿಜ್ಞಾನಿಗಳು ಹತರಾಗಿರುವ ಸಾಧ್ಯತೆಯಿದೆ ಎಂದೂ ಸಹ ಇಸ್ರೇಲ್ ಸೇನೆ ಹೇಳಿದೆ.
ಹಾಗೆಯೇ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಮುಖ್ಯಸ್ಥ ಜನರಲ್ ಹುಸೇನ್ ಸಲಾಮಿ ಸಾವನ್ನಪ್ಪಿದ್ದಾರೆ ಎಂದು ಇರಾನ್ ಸರ್ಕಾರಿ ಟಿವಿ ದೃಢಪಡಿಸಿದೆ. ರೆವಲ್ಯೂಷನರಿ ಗಾರ್ಡ್ಸ್, ಇರಾನ್ ದೇಶದ ಶಕ್ತಿಕೇಂದ್ರ ಎಂದು ಬಿಂಬಿತವಾಗಿದೆ. ಹಾಗಾಗಿ, ಇದನ್ನೇ ಕೇಂದ್ರೀಕರಿಸಿ ಇಸ್ರೇಲ್ ದಾಳಿ ನಡೆಸಿದ್ದು, ಇರಾನ್ ದೇಶದ ಸ್ವಾಭಿಮಾನಕ್ಕೆ ದೊಡ್ಡ ಪೆಟ್ಟು ಕೊಟ್ಟಂತಾಗಿದೆ.
1979ರ ಇಸ್ಲಾಮಿಕ್ ಕ್ರಾಂತಿಯ ನಂತರ ರೆವಲ್ಯೂಷನರಿ ಗಾರ್ಡ್ಸ್ ಅಸ್ತಿತ್ವಕ್ಕೆ ಬಂದಿತ್ತು. ಇದಾದ ನಂತರ, ಇದು ದೇಶೀಯ ಭದ್ರತಾ ಪಡೆಯಾಗಿ ಮುಂದುವರಿಯಿತು. ಸಿರಿಯಾ, ಲೆಬನಾನ್ ಮತ್ತು ಇರಾಕ್ ನಂತಹ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಸಹಾಯ ಮಾಡುವ ಅಂತರರಾಷ್ಟ್ರೀಯ ಪಡೆಯಾಗಿ ಗುರುತಿಸಿಕೊಂಡಿದೆ.
ಈ ಸುದ್ದಿ ಓದಿದ್ದೀರಾ? ಇಸ್ರೇಲ್ ಮತ್ತು ಅಮೆರಿಕಾದ ದುಷ್ಕೃತ್ಯ: ಜಗತ್ತನ್ನು ಮೂರನೇ ಮಹಾಯುದ್ಧದತ್ತ ದೂಡುವ ಅಪಾಯ
ಇರಾನ್-ಇಸ್ರೇಲ್ ಸಂಘರ್ಷ ತೀವ್ರಗೊಳ್ಳುತ್ತಿದ್ದು, ಇಸ್ರೇಲ್ ಮೇಲೆ ಇರಾನ್ ಪ್ರತೀಕಾರದ ದಾಳಿ ನಡೆಸಲು ಸಿದ್ಧವಾಗಿದೆ. ಇದರಿಂದ ಪಶ್ಚಿಮ ಏಷ್ಯಾ ಯುದ್ಧದ ಅಂಚಿನಲ್ಲಿದೆ ಎಂಬ ಆತಂಕ ಮೂಡಿದೆ. ಪ್ರಮುಖ ಇಸ್ರೇಲಿ ನಗರಗಳ ಮೇಲೆ ಇರಾನ್ ನಡೆಸಿದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಇರಾನ್ ಮೇಲೆ ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸಿದ ನಂತರ ವಿಶ್ವದಾದ್ಯಂತ ಇರುವ ತನ್ನ ಎಲ್ಲ ರಾಯಭಾರ ಕಚೇರಿಗಳನ್ನು ಇಸ್ರೇಲ್ ಮುಚ್ಚುತ್ತಿದೆ.
ಜಗತ್ತಿನ ವಿವಿಧ ರಾಷ್ಟ್ರಗಳು ತನ್ನ ನಾಗರಿಕರು ಜಾಗರೂಕರಾಗಿರಬೇಕು, ಯಹೂದಿ ಅಥವಾ ಇಸ್ರೇಲ್ ನ ಯಾವುದೇ ಲಾಂಛವನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಬಾರದು ಎಂದು ರಾಯಬಾರ ಕಚೇರಿಯ ವೆಬ್ ಸೈಟ್ ಗಳಲ್ಲಿ ಶುಕ್ರವಾರ ಹೇಳಲಾಗಿದೆ.
ಇಸ್ರೇಲ್ ದಾಳಿಗೆ ಪ್ರತ್ಯುತ್ತರವಾಗಿ ನಾವು ‘ಕಠಿಣ ಶಿಕ್ಷೆ’ಗೆ ಗುರಿಪಡಿಸುತ್ತೇವೆ ಎಂದು ಇರಾನ್‌ನ ಪರಮೋಚ್ಚ ನಾಯಕ ಆಯಾತೊಲ್ಲಾ ಅಲಿ ಖಮೇನಿ ಎಚ್ಚರಿಸಿದ್ದಾರೆ. ಈ ಎಲ್ಲ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದಲ್ಲಿ ಅಶಾಂತಿ ಉಂಟಾಗಿದೆ.