ಭಾರತದ ಬಹು ಆಕರ್ಷಕ ಚಾರಣಗಳಲ್ಲಿ ಒಂದೆಂದು ಪರಿಗಣಿಸಬಹುದಾದ ಚಾರಣ ಹಿಮಾಚಲದಲ್ಲಿನ ತ್ರಿಯುಂದ (Triund) ಚಾರಣ. ಈ ಚಾರಣವು ಅಷ್ಟೇನೂ ಕಠಿಣವಲ್ಲದ, ಜನಪ್ರಿಯ ಹಾದಿಯಾಗಿದ್ದು, ಹಿಮದಿಂದ ಆವೃತವಾದ ಧೌಲಾಧರ್ ಶ್ರೇಣಿಗಳು ಮತ್ತು ಕಾಂಗ್ರಾ ಕಣಿವೆಯ ಅದ್ಭುತ ನೋಟಗಳನ್ನು ನೀಡುವುದರಿಂದ ಚಾರಣಿಗ ವಲಯದಲ್ಲಿ ಬಹು ಪ್ರಸಿದ್ದಿ ಪಡೆದ ಚಾರಣ ಕೂಡ ಹೌದು.
ಹಲವೊಮ್ಮೆ ಜೀವನವು ಎಷ್ಟೊಂದು ಕ್ಷಣಿಕ, ಈ ಕ್ಷಣ ಇದ್ದಾರೆ, ಇನ್ನೊಂದು ಕ್ಷಣದ ಭರವಸೆ ಇಲ್ಲ ಎಂಬ ಭಾವನೆ ಮೂಡುತ್ತದೆ. ಆದರೂ, ನಾವು ಬದುಕುವ ರೀತಿ, ನಮ್ಮ ದಿನನಿತ್ಯದ ಚಟುವಟಿಕೆಗಳು, ಅಭ್ಯಾಸಗಳು, ಹಾಗೂ ಅನೇಕ ಜವಾಬ್ದಾರಿಗಳು, ಈ ಎಲ್ಲವೂ ನಮ್ಮನ್ನು ಆ ಕ್ಷಣಿಕತೆಯ ಭಾವನೆಯಿಂದ ದೂರಕ್ಕೆ ಎಳೆದು, ಜೀವನವು ಶಾಶ್ವತವೆಂಬ ಭ್ರಮೆಯೊಂದರಲ್ಲಿ ತೂಗಿಸುತ್ತವೆ. ಇದು ಮಾನವ ಸಹಜ ಭಾವನೆ ಮತ್ತು ಬಹುಮಟ್ಟಿಗೆ ಇದು ನಮ್ಮೆಲ್ಲರಿಗೂ ಅವಶ್ಯವೂ ಹೌದು. ಈ ಭ್ರಮೆಯಲ್ಲಿಯೇ ನಾವು ಜೀವನ ಸಾಗರದಲ್ಲಿ ಮುಳುಗಿ ಹೋಗುತ್ತೇವೆ, ಸಮಯವೆಂಬ ಹರಿವಿನಲ್ಲಿ ನಮ್ಮ ಜೀವನ ಕ್ಷಣಿಕ ಎನ್ನುವ ನಕಾರಾತ್ಮಕ ಭಾವನೆಯಿಂದ ಬಹು ದೂರ ಸಾಗಿರುತ್ತೇವೆ.
ಇಂಗ್ಲಿಷ್‌ನಲ್ಲಿ ಒಂದು ಜನಪ್ರಿಯ ನುಡಿಮುತ್ತು ಇದೆ: “You Only Live Once (YOLO)” – ಅಂದರೆ, ಇರುವುದೊಂದೇ ಜೀವನ. ಈ ನುಡಿಯು ನಿಜಕ್ಕೂ ಜೀವನದ ಅಸಲಿ ಅರ್ಥವನ್ನು ಪ್ರಶ್ನಿಸಲು ಪ್ರೇರಣೆಯಾಗಿ ಕೆಲಸಮಾಡುತ್ತದೆ. ಹೌದು, ನಾವು ಒಂದು ಬಾರಿಯಷ್ಟೇ ಈ ಭೂಮಿಯಲ್ಲಿ ಜೀವಿಸುತ್ತೇವೆ; ಆದರೆ, ಆ ಒಂದು ಬಾರಿಗೆ ನಾವು ಜೀವನವನ್ನು ಪೂರ್ಣತೆಯೊಂದಿಗೆ, ಉತ್ಸಾಹದಿಂದ, ಒಂದಿಷ್ಟು ಆಸೆ, ಕನಸು, ಮಾನವೀಯ ಮೌಲ್ಯಗಳೊಂದಿಗೆ ತೀವ್ರತೆಯಿಂದ ಬದುಕಿದರೆ, ಒಂದು ಜೀವನವೇ ಸಾಕು ಎನ್ನುವುದರಲ್ಲಿ ಸಂದೇಹವಿಲ್ಲ. ಇದು ನನ್ನ ಜೀವನದ ಸತ್ಯವೂ ಕೂಡ. ಆದುದರಿಂದಲೇ, ಇರುವ ಈ ಒಂದು ಜೀವನದಲ್ಲಿ ಎಷ್ಟು ಸಾಧ್ಯವೋ ಅಷ್ಟು ಶಾಶ್ವತ ನೆನಪುಗಳನ್ನು ಗಳಿಸುವುದೇ ಜೀವನದ ಗುರಿ, ಜೀವನಕ್ಕೆ ಪ್ರೇರಣೆ.
ಪ್ರತಿಯೊಂದು ಚಾರಣ, ಪ್ರತಿಯೊಂದು ಪ್ರವಾಸ, ಪ್ರತಿಯೊಂದು ಪಯಣ, ಪ್ರತಿಯೊಂದು ಪರ್ವತ ನಡಿಗೆ, ಹೀಗೆ ಪ್ರಕೃತಿಯ ಪ್ರತಿಯೊಂದು ತಾಳಮೇಳದಲ್ಲಿ ಬದುಕಿದ ಕ್ಷಣ, ಇವು ಜೀವನದ ನಿಜವಾದ ಸೌಂದರ್ಯವನ್ನು ನನಗೆ ತೋರಿಸಿದ್ದಿದೆ. ಈ ಅನುಭವಗಳು ನನ್ನಲ್ಲಿ ಮತ್ತಷ್ಟು ಮನದಟ್ಟಾಗಿಸಿದ ಮಾತು: ಇರುವುದೊಂದೇ ಜೀವನ, ಆದರೆ ಅದನ್ನು ನಿಜವಾಗಿ ಬದುಕಿದರೆ, ಅದೊಂದೇ ಸಾಕು. ಪ್ರತಿ ಚಾರಣದ ಅನುಭವ, ಚಳಿ-ಗಾಳಿ-ಮಳೆ-ಬಿಸಿಲು ಹೀಗೆ ಎಲ್ಲದರ ನಡುವೆ ಸಾಗಿದ ಪಯಣ, ನಡಿಗೆಗಳಿಂದ ಕಲಿತ ತಾಳ್ಮೆ ಇವು ಎಲ್ಲಾ ನನ್ನ ಬದುಕನ್ನು ಮತ್ತಷ್ಟು ಆಳವಾದ ಅರ್ಥ ನೀಡುವಂತೆ ಮಾಡಿವೆ. ಹಾಗೆಯೇ ಅವುಗಳು ತೆರೆದಿಟ್ಟ ನೆನಪುಗಳು ಶಾಶ್ವತ.
ಇಂತಹ ಅರ್ಥಪೂರ್ಣ ಅನುಭವ ನೀಡಿದ, ಇನ್ನೊಂದು ಅಮೋಘ ಜೀವನ ನೆನಪನ್ನು ನೀಡಿದ ಒಂದು ಚಾರಣ ಹಿಮಾಚಲದ ತೆಕ್ಕೆಯಲ್ಲಿರುವ ತ್ರಿಯುಂದ (Triund) ಚಾರಣ.
ಭಾರತದ ಬಹು ಆಕರ್ಷಕ ಚಾರಣಗಳಲ್ಲಿ ಒಂದೆಂದು ಪರಿಗಣಿಸಬಹುದಾದ ಚಾರಣ ಹಿಮಾಚಲದಲ್ಲಿನ ತ್ರಿಯುಂದ (Triund) ಚಾರಣ. ಈ ಚಾರಣವು ಅಷ್ಟೇನೂ ಕಠಿಣವಲ್ಲದ, ಜನಪ್ರಿಯ ಹಾದಿಯಾಗಿದ್ದು, ಹಿಮದಿಂದ ಆವೃತವಾದ ಧೌಲಾಧರ್ ಶ್ರೇಣಿಗಳು ಮತ್ತು ಕಾಂಗ್ರಾ ಕಣಿವೆಯ ಅದ್ಭುತ ನೋಟಗಳನ್ನು ನೀಡುವುದರಿಂದ ಚಾರಣಿಗ ವಲಯದಲ್ಲಿ ಬಹು ಪ್ರಸಿದ್ದಿ ಪಡೆದ ಚಾರಣ ಕೂಡ ಹೌದು. ಅತೀ ಸುಂದರ ದೃಶ್ಯಾವಳಿಗಳನ್ನು ನೀಡಬಲ್ಲ ತ್ರಿಯುಂದ ಚಾರಣ ಆರಂಭಿಕ ಚಾರಣಿಗರಿಂದ ಹಿಡಿದು ಅನುಭವೀ ಚಾರಣಿಗರಿಗೂ ಮುದ ನೀಡುವ ಆಯ್ಕೆಯಾಗಿದೆ ಎಂದರೆ ತಪ್ಪೇನಿಲ್ಲ. ಇಡೀ ಚಾರಣ ಬಹು ಸುಂದರ ಕಣಿವೆಗಳ ದಾರಿಯಲ್ಲಿ ಹಾದು ಹೋಗಬೇಕಾದ ದಾರಿ, ಹಾದಿಯ ಕೊನೆಯಲ್ಲಿ ಒಂದಿಷ್ಟು ಕಡಿದಾದ ಏರಿಕೆ ಇದ್ದರೂ, ಸಾಗಬೇಕಾದ ಮಾರ್ಗವು ಚಿಕ್ಕದಾಗಿದ್ದು, ಈ ಚಾರಣವನ್ನು ಯಾರು ಕೂಡ ಪ್ರಯತ್ನಿಸಬಹುದು. ಹಿಮಾಚಲ ಚಾರಣಗಳಲ್ಲಿ ಅತೀ ಸರಳವಾದ ಚಾರಣಗಳಲ್ಲಿ ಇದೊಂದು. ಹಾಗೆಯೇ ಅತೀ ಸುರಕ್ಷಿತ ಚಾರಣ ಕೂಡ ಹೌದು.

ಈ ಚಾರಣ ಮಾಡಬಯಸುವವರು ಮೊದಲು ಹಿಮಾಚಲ ಪ್ರದೇಶದ ಧರ್ಮಶಾಲೆಗೆ ಪ್ರಯಾಣಿಸಬೇಕು. ಈ ಚಾರಣ ಕಾಂಗ್ರಾ ಜಿಲ್ಲೆಯ, ಧರ್ಮಶಾಲಾ ಪಟ್ಟಣದ, ಮಾಕ್ಲಾಯ್ಡಗಂಜ್ (McLeod Ganj) ಎಂಬ ಸ್ಥಳದಿಂದ ಪ್ರಾರಂಭವಾಗುತ್ತದೆ. ಬಹುಕಾಲದಿಂದಲೇ ಹಿಮಾಚಲದ ಬೆಟ್ಟಗಳಲ್ಲಿ ನಡೆಯುತಿದ್ದ ಈ ಟ್ರೆಕ್ಕಿಂಗ್ ಬಗ್ಗೆ ಆಸಕ್ತಿಯಿತ್ತು. ಹಾಗೆಯೇ ಬೌದ್ಧ ಧರ್ಮದ ಕೇಂದ್ರ ಬಿಂದುವಾದ ಧರ್ಮಶಾಲ ಪಟ್ಟಣ, ಅಲ್ಲಿನ ಸುತ್ತಮುತ್ತಲಿನ ಪ್ರಕೃತಿ, ಅಲ್ಲಿನ ಜನ, ಅಲ್ಲಿನ ಸೌಂದರ್ಯ, ಸಣ್ಣ ಪುಟ್ಟ ಕಾಫಿ ಅಂಗಡಿಗಳು, ಬೌದ್ಧ ವಿಹಾರಗಳು, ಪ್ರಪಂಚದ ನಾನಾ ಕಡೆಯಿಂದ ಇಲ್ಲಿ ಬಂದಿರುವ ಯುವಕರು, ಯುವತಿಯರು, ಅಲ್ಲಲ್ಲಿ ಮುಸ್ಸಂಜೆಯ ಹೊತ್ತಿಗೆ ಕೇಳಿಬರುವ ಬೌದ್ಧ ಪ್ರಾರ್ಥನೆಗಳು, ಹೀಗೆ ಧರ್ಮಶಾಲೆಯ ಬಗ್ಗೆ ಕೇಳಿದ್ದು ಅಪಾರ.
ಧರ್ಮಶಾಲಾ ಮತ್ತು ಮಾಕ್ಲಾಯ್ಡಗಂಜ್ (McLeod Ganj) ಗೆ ತಲುಪಿದಾಗಲೇ ಅಲ್ಲಿನ ಸುತ್ತಮುತ್ತಲು ನನ್ನ ಮನ ಸೆಳೆದಿದ್ದವು. ಒಂದು ಸಲ ಸೂರ್ಯನ ಬೆಳಕು ಕಂಡರೆ, ಮತ್ತೊಮ್ಮೆ ನೀಲಿ ಆಕಾಶ ಮಳೆತುಂಬಿದ ಮೋಡಗಳ ಚಪ್ಪರಿಯಿಂದ ಆವರಿಸುತ್ತಿತ್ತು. ಇದುವೇ ಇಲ್ಲಿನ ವೈಶಿಷ್ಟ್ಯ. ಆ ಚಳಿ-ಮಳೆ -ಗಾಳಿಯ ನಡುವೆ ಬದಿಯ ಸಣ್ಣದೊಂದು ಅಂಗಡಿಯಲ್ಲಿ ಇಲ್ಲಿನ ಪ್ರಮುಖ ಖಾದ್ಯವಾದ ತುಕ್ಪಾ (ನೂಡಲ್ ಸೂಪ್ ) ಸವಿಯುವುದೇ ಆನಂದ. ಹಾಗೆಯೇ ಇಲ್ಲಿನ ಜನರ ಸರಳ ಜೀವನ ಶೈಲಿ, ಮಂದಹಾಸದ ಮುಖ, ನಿಮಗೆ ಸ್ವಲ್ಪ ಆಶ್ಚರ್ಯದೊಂದಿಗೆ ಸಂತೋಷ ತರುವುದರಲ್ಲಿ ಸಂದೇಹವೇ ಇಲ್ಲ.
ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ ಚಿತ್ರಗಳು, ಸ್ನೇಹಿತರ ಅನುಭವಗಳು ಮತ್ತು ಬೇರೆ ಬೇರೆ ಕಡೆಯ ಪ್ರಕೃತಿ ನೋಡಬೇಕೆಂಬ ಆಸಕ್ತಿ, ಇವೆಲ್ಲಾ ನನ್ನನ್ನು ತ್ರಿಯುಂದ ಚಾರಣ ಕಡೆ ನನ್ನನ್ನು ಸೆಳೆದಿದ್ದವು. ಸುಮಾರು 9 ರಿಂದ 12 ಕಿಲೋಮೀಟರ್ ದೂರದ ಈ ಟ್ರೆಕ್, ಸಮತಟ್ಟಾದ ಹಾದಿ ಹಾಗೂ ನಿಶ್ಚಿತ ಎತ್ತರ ಹೊಂದಿದ್ದು, ತುಂಬಾ ಆಯಾಸವಿಲ್ಲದೆ ಸಾಗಬಹುದಾದ ಚಾರಣವಾಗಿದೆ. ಉತ್ತಮ ಮಟ್ಟದ ಬೆಚ್ಚನೆಯ ಜಾಕೆಟ್, raincoat, ಕುಡಿಯಲು ಬೇಕಾದ ನೀರು, ಟ್ರೆಕಿಂಗ್ ಶೂ, ಟ್ರೆಕಿಂಗ್ ಕೈಗವಸು, ಟ್ರೆಕಿಂಗ್ ಪೋಲ್, ಚಾರಣದ ಹಾದಿಯಲ್ಲಿ ಒಂದಿಷ್ಟು ಕೆಫೆ ಗಳು ಇದ್ದರೂ ಕೂಡ, ಒಂದಿಷ್ಟು ಆಹಾರವನ್ನು ಪ್ಯಾಕ್ ಮಾಡಿ ಕೊಂಡು ಹೋಗುವುದು ಅತೀ ಅಗತ್ಯ. ಹಾಗೆಯೇ ಮಳೆಗಾಲದ ತರುವಾಯ ಒಂದಿಷ್ಟು ಕೊಚ್ಚೆ ಇರುವುದರಿಂದ, ಟ್ರೆಕಿಂಗ್ ಪೋಲ್ ಅವಶ್ಯಕತೆ ಕೂಡ ಇದೆ. ಇಡೀ ಧರ್ಮಶಾಲೆ, ಇಲ್ಲಿನ ಬೌದ್ಧ ಮಂದಿರ, ಧರ್ಮಕೋಟ, ಮಾಕ್ಲಾಯ್ಡಗಂಜ್ ನಗರ, ಇವೆಲ್ಲವನ್ನೂ ನೋಡಿ ತ್ರಿಯುಂದ ಬೆಟ್ಟ ಚಾರಣ ಮಾಡಲು 3 ದಿನ ಬೇಕಾಗುವುದು. ಹಾಗೆಯೇ ಹೆಚ್ಚಿನ ಚಾರಣಿಗರು ಧರ್ಮಕೋಟದಲ್ಲಿ ಉಳಿದು ಕೊಂಡು (ಇಲ್ಲಿ ಬೇಕಾದಷ್ಟು ಹಾಸ್ಟೆಲ್, ತಂಗುದಾಣ ವ್ಯವಸ್ಥೆ ಇದೆ), ಇಲ್ಲಿಂದ ತ್ರಿಯುಂದ ಬೆಟ್ಟ ಚಾರಣವನ್ನು ಮಾಡುತ್ತಾರೆ. ಇಲ್ಲಿಂದ ಹೋಗಿ ಬರಲು ಸರಿ ಸುಮಾರು 8-10 ಗಂಟೆ ತಗಲುವುದು(ವಿಶ್ರಾಮದ ವೇಳೆ ಸೇರಿ) . ಬೆಳಗಾತ ಬೇಗನೆ ಹೊರಟರೆ, ಮಧ್ಯಾಹ್ನದ ಹೊತ್ತಿಗೆ ಬೆಟ್ಟ ತಲುಪಿ, ಅಲ್ಲಿ ಒಂದಿಷ್ಟು ವಿಶ್ರಮಿಸಿ (ಇಲ್ಲಿ ಸೂರ್ಯಾಸ್ತ ಬೇಗನೆ ಆಗುವುದರಿಂದ) ಸಂಜೆಯ ಹೊತ್ತಿಗೆ ಧರ್ಮಕೋಟೆಗೆ ವಾಪಸ್ ಮರಳಬಹುದು. ಇಲ್ಲಿ ರಾತ್ರಿ ಹೊತ್ತು ಕ್ಯಾಂಪಿಂಗ್ ಮಾಡುವ ವ್ಯವಸ್ಥೆ ಕೂಡ ಇದೆ. ಎಷ್ಟೋ ಪರಿಣಿತ ಚಾರಣಿಗರು ರಾತ್ರಿ ಹೊತ್ತು ಮೇಲೆ ಶಿಖರದಲ್ಲಿ ಕ್ಯಾಂಪಿಂಗ್ ಕೂಡ ಮಾಡುತ್ತಾರೆ. ಆದರೆ ಇದಕ್ಕೆ ಮೊದಲೇ ತಯಾರಿ ಮಾಡಿಕೊಂಡು ಹೋಗಬೇಕು. ಶಿಖರದ ಬಳಿ ಹಲವಾರು ಸಣ್ಣ ಪುಟ್ಟ ಅಂಗಡಿಗಳು ಕೂಡ ಇವೆ. ಇವು ಚಿಕ್ಕ ಪುಟ್ಟ ಆಹಾರ, ಕಾಫಿ, ಚಹಾ, ಮ್ಯಾಗಿ ಹೀಗೆ ಹಲವಾರು ವಸ್ತುಗಳು ಲಭ್ಯವಿದೆ. ನೀವು ಕ್ಯಾಂಪಿಂಗ್ ಮಾಡುವ ವ್ಯವಸ್ಥೆ ಪೂರ್ವ ತಯಾರಿ ಮಾಡದೆ ಹೋದಲ್ಲಿ, ಕೆಳಗಿನ ಕಣಿವೆಯಲ್ಲಿರುವ ಧರ್ಮಕೋಟದಲ್ಲಿನ ತಂಗುದಾಣಕ್ಕೆ ವಾಪಸ್ ಮರಳಬೇಕು. ವಾರಾಂತ್ಯದಲ್ಲಿ ತುಂಬಾ ಚಾರಣಿಗರಿಂದ ನಿಭಿಡವಾಗುವುದರಿಂದ, ವಾರದ ಮಧ್ಯೆ ಈ ಚಾರಣವನ್ನು ಕೈಗೊಳ್ಳುವುದು ಉತ್ತಮ.
ಇನ್ನೊಂದು ಮುಖ್ಯ ವಿಷಯ ಎಂದರೆ, ಇಲ್ಲಿಗೆ ಚಾರಣ ಕೈಗೊಳ್ಳುವ ಮುನ್ನ ಇಲ್ಲಿನ ಹವಾಮಾನವನ್ನು ಪರಿಶೀಲಿಸಿ ಪ್ರಯಾಣ ಕೈಗೊಳ್ಳುವುದು ಅತೀ ಅವಶ್ಯ. ತ್ರಿಯುಂದ ಹವಾಮಾನ ಬಹು ವರ್ಷಪೂರ್ತಿ ಬದಲಾಯಿಸುತ್ತಾ ಇರುತ್ತದೆ – ಅದರಿಂದಾಗಿ, ಟ್ರೆಕ್‌ಗೆ ಹೊರಡುವ ಮೊದಲು ಇಲ್ಲಿನ ಹವಾಮಾನವನ್ನು ತಿಳಿದುಕೊಳ್ಳುವುದು ಅತ್ಯಂತ ಮುಖ್ಯ. ಮಾರ್ಚ್‌ನಿಂದ ಜೂನ್ವರೆಗೆ ಇಲ್ಲಿ ಬೇಸಿಗೆ ಕಾಲ: ಹಗಲು ಬಿಸಿಲಿನ ತಾಪಮಾನವಿದ್ದು, ರಾತ್ರಿ ತಂಪಾದ ಗಾಳಿ ಇರುವುದು. ಆದರೂ ಕೂಡ, ಇಲ್ಲಿ ಕೆಲವೊಮ್ಮೆ ಏಕಾಏಕಿ ಮಳೆಯ ಸಂಭವ ಇರುವುದರಿಂದ, ರೇನ್‌ಕೋಟ್ ಅನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಲೇ ಬೇಕು. ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳ ಸಮಯದಲ್ಲಿ ಹವಾಮಾನ ಇನ್ನೂ ಉತ್ತಮ, ಚಳಿ ಗಾಳಿಯಾ ನಾಡು ನಡುವೆ ಸುತ್ತಮುತ್ತಲಿನ, ಕಣಿವೆ, ಅರಣ್ಯ, ಪರ್ವತಗಳ ದೃಶ್ಯಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಈ ಸಮಯ ಸರ್ವೇ ಸಾಮಾನ್ಯವಾಗಿ ಚಾರಣ ಮಾಡಲು ಪ್ರಶಸ್ತ ಸಮಯ. ಹಾಗೆಯೇ ಇಲ್ಲಿ, ಡಿಸೆಂಬರ್‌ನಿಂದ ಫೆಬ್ರವರಿವರೆಗೆ ಹಿಮಪಾತದ ಋತುಗಾಲ. ಹಲವಾರು ಕಡೆಗಳಲ್ಲಿ ಹಿಮ (snow) ಬೀಳುವುದರಿಂದ: ಆರಂಭಿಕ ಚಾರಣಿಗರಿಗೆ ಟ್ರೆಕಿಂಗ್ ಮಾಡಲು ಸೂಕ್ತ ಸಮಯವಲ್ಲ. ಹಾಗೆಯೇ ಪರಿಣಿತ ಚಾರಣಿಗರು ಕೂಡ ಉತ್ತಮ ಜಾಕೆಟ್, ಉಡುಪುಗಳು, ಮಫ್ಲರ್, ಸ್ನೋ ಬೂಟ್ಸ್ ತೆಗೆದುಕೊಂಡು ಹೋಗುವುದು ಅತ್ಯಾವಶ್ಯಕ. ಒಳ್ಳೆಯ ಅನುಭವ ಉಳ್ಳ ಚಾರಣಿಗರಿಗೆ ಈ ಸಮಯದಲ್ಲಿ ಟ್ರೆಕ್ ಮಾಡುವುದು ನಿಜಕ್ಕೂ ಅದ್ಭುತ ಅನುಭವ. ಇಲ್ಲಿ ಮಾನ್ಸೂನ್ ಕಾಲ : ಜುಲೈನಿಂದ ಸೆಪ್ಟೆಂಬರ್ವರೆಗೆ. ಈ ಸಮಯದಲ್ಲಿ ಟ್ರೆಕ್ ಮಾಡುವುದು ನಿಜಕ್ಕೂ ಅಪಾಯಕಾರಿ. ಈ ಸಮಯದಲ್ಲಿ ಧಾರಾಕಾರ ಮಳೆಯ ಪರಿಣಾಮವಾಗಿ ಹಾದಿ ಕೊಚ್ಚೆಯೆದ್ದು ಜಾರುವ ಸಂಭವ ಬಹು ಜಾಸ್ತಿ. ಜೊತೆ ಜೊತೆಗೆ ಲೆಂಡುಸ್ಲೈಡ್ (landslides) ಅಥವಾ ತೀವ್ರ ಪ್ರವಾಹಗಳ ಅಪಾಯ ಕೂಡ ಇದೆ. ಈ ಕಾರಣದಿಂದಾಗಿ, ಸುರಕ್ಷಿತತೆ ಯಾ ದೃಷ್ಟಿಯಿಂದ ಈ ಸಮಯದಲ್ಲಿ ಚಾರಣವನ್ನು ಕೈಗೊಳ್ಳದಿರುವುದು ಉತ್ತಮ.

ತ್ರಿಯುಂದ ಬೆಟ್ಟ ಸಮುದ್ರ ಮಟ್ಟದಿಂದ ಸುಮಾರು ೨೮೦೦ ಮೀಟರ್ ಎತ್ತರದಲ್ಲಿದ್ದು, ಈ ಚಾರಣದ ಹಾದಿಯಲ್ಲಿ ಭಗ್ಸುನಾಥ ಗ್ರಾಮ, ಮಾಕ್ಲಾಯ್ಡಗಂಜ್ ನಗರ, ಧರ್ಮಶಾಲಾ ಕಣಿವೆ ಹಾಗೂ ದೂರದ ಶಿವಾಲಿಕ್ ಬೆಟ್ಟಗಳು, ಅಲ್ಲದೆ ವಿಶಾಲವಾದ ಕಂಗ್ರಾ ವ್ಯಾಲಿ ನೋಟಗಳು ನಮ್ಮ ಕಣ್ಮುಂದೆ ತೆರೆಯುತ್ತವೆ. ಹಾದಿಯುದ್ದಕ್ಕೂ ಸಾಗುವ ದೃಶ್ಯಪಟಗಳು ಪ್ರಕೃತಿಯ ಶಾಂತತೆಯನ್ನೂ, ಪರ್ವತಗಳ ಭವ್ಯತೆಯನ್ನೂ ಒಟ್ಟಿಗೆ ತೋರಿಸುತ್ತವೆ. ತ್ರಿಯುಂದ ಬೆಟ್ಟ ಹಸಿರು ಹುಲ್ಲು ಪ್ರದೇಶಗಳ ವಿಶಾಲ ಜಾಗವಾಗಿದೆ. ಇದು ಮಾಂಸಾಹಾರ ಪ್ರಾಣಿಗಳನ್ನು ಮೇಯಿಸುವ ಮೇವುಭೂಮಿಯಂತಿದೆ. ಇಲ್ಲಿ ನಿಂತು ಕಣ್ಣೆತ್ತಿ ಎತ್ತ ನೋಡಿದರೂ, ಧೌಲಾಧಾರ್ ಪರ್ವತ ಶ್ರೇಣಿಗಳು ನಿಮ್ಮ ಕಣ್ಣಿಗೆ ನೇರವಾಗಿ ತಲುಪುವಷ್ಟು ಹತ್ತಿರವಾಗಿ ಕಾಣಿಸುತ್ತವೆ. ಈ ಸ್ಥಳವು ಧೌಲಾಧಾರ್ ಶೃಂಗದ ಇಂದ್ರಹಾರಾ ಪಾಸ್ ದಾಟಲು ಪ್ರಯತ್ನಿಸುವ ಉನ್ನತ ಮಟ್ಟದ ಟ್ರೆಕ್ಕರ್‌ಗಳಿಗೆ ಶಿಬಿರದ ತಾಣ ಕೂಡ ಹೌದು.
ಚಾರಣದ ಒಂದು ಪ್ರಮುಖ ಹಂತದಲ್ಲಿ ವಿಜೃಂಭಿಸುವ ಧೌಲಾಧಾರ್ ಪರ್ವತಶ್ರೇಣಿಯ ದೃಷ್ಠಿಯು ಸ್ಪಷ್ಟವಾಗಿ ಕಾಣಿಸತೊಡಗುತ್ತದೆ. ಅದರಲ್ಲಿಯೂ ಮುನ್ ಶೃಂಗದ ತ್ರಿಕೋನಾಕಾರದ ಶಿಖರ ನಮ್ಮ ಕಣ್ಣ ಮುಂದೆ ಜೀವಂತವಾಗಿ ಎದ್ದು ಬಂದಂತೆ ಭಾಸವಾಗುತ್ತದೆ. ಈ ಪರ್ವತ ಶ್ರೇಣಿಯ ಇನ್ನೊಂದು ವೈಶಿಷ್ಟ್ಯತೆ ಬಹು ತೆರನಾದ ಪಕ್ಷಿ ತಾಣ. ನೀವು ಹಾದು ಹೋಗುವ ಹಾದಿಯಲ್ಲಿ, ಹತ್ತಾರು ರೀತಿಯ ಗಾನಪಕ್ಷಿಗಳು ಅಡಗಿರುವ ಅರಣ್ಯಗಳಿವೆ, ತಮ್ಮ ಮುಗ್ಧ ಧ್ವನಿಯಲ್ಲಿ ನಡುಗಾಡನ್ನು ನಾದಮಯ ಮಾಡುತ್ತವೆ. ಅವುಗಳ ಇಂಚರವನ್ನು ಕೇಳುವುದೇ ಚೆಂದ. ಸೋತ ಕಾಲುಗಳಿಗೆ ಉಲ್ಲಾಸ ಭರಿಸುವ ಚೇತನಗಳವು.
ಕೆಲವು ಕಡೆ ಒಂದಿಷ್ಟು ಕಡಿದಾದ ಇಳಿಜಾರು, ದೊಡ್ಡ ದೊಡ್ಡ ಕಲ್ಲುಗಳಿರುವುದರಿಂದ, ಹಾಗೆಯೇ ಚಾರಣದ ಹಾದಿಯಲ್ಲಿ ಸಾಕಷ್ಟು ತಿರುವುಗಳು (ಸರಿ ಸುಮಾರು 20ಕ್ಕಿಂತಲೂ ಹೆಚ್ಚು) ಇರುವುದರಿಂದ, ಚಾರಣದ ಹಾದಿಯಲ್ಲಿ ಹಲವು ಕಡೆಗಳಲ್ಲಿ ರೈಲಿಂಗ್‌ಗಳು ಇವೆ, ಇದು ಚಾರಣಿಗರಿಗೆ ಭದ್ರತೆ ನಡೆಯುವಲ್ಲಿ ನೀಡುತ್ತವೆ. ಜೊತೆಗೆ, ಈ ಹಾದಿಯಲ್ಲಿ ಹಲವಾರು ಚಹಾ ಹಾಗೂ ಪ್ಯಾಕೇಜ್ ಆಹಾರ ವಿತರಿಸುವ ಕೆಲವು ಸಣ್ಣ ಧಾಬಾ/ಕಾಫೆ ಅಂಗಡಿಗಳು ಕೂಡ ಇವೆ. ಹೌದು, ಇದು ಯಾರೂ ತಲುಪದ ನಾಡಲ್ಲ, ತುಂಬಾ “touristy” ತಾಣ ಎಂದು ಅನಿಸಿದರೆ, ಅದು ನಿಜವಾದ ಭಾವನೆ. ಆದರೆ, ಇಲ್ಲಿನ ಪ್ರಕೃತಿ ವೈಭವವನ್ನು ಒಂದು ಬಾರಿ ನೋಡಲೇಬೇಕು (touristy ಆಗಿದ್ದರೂ ಕೂಡಾ).
ಇಲ್ಲಿನ ಚಾರಣದ ಹಾದಿಯಲ್ಲಿ ಬರುವ ಪ್ರತಿಯೊಂದು ತಿರುವು ಸಹಜವಾಗಿ ಒಂದೊಂದು ಅದ್ಭುತ ದೃಶ್ಯವನ್ನು ಚಾರಣಿಗರಿಗೆ ಪರಿಚಯಿಸುತ್ತಾ ಸಾಗುತ್ತದೆ. ಆ ದೃಶ್ಯಗಳಲ್ಲಿ ಪ್ರಕೃತಿಯ ನೈಜ ಶೈಲಿಯಷ್ಟೇ ಅಲ್ಲ, ಬದುಕಿನ ಒಂದು ತಾತ್ವಿಕತೆಯೂ ಕಾಣಿಸಿಕೊಳ್ಳುತ್ತದೆ.
ಚಾರಣದ ಸುಮಾರು ಮಧ್ಯಭಾಗದಲ್ಲಿ ಬರುವ ಮ್ಯಾಜಿಕ್ ವ್ಯೂ ಕಾಫೆ ಎಂಬದು ಅನೇಕರ ನೆಚ್ಚಿನ ವಿಶ್ರಾಂತಿ ತಾಣ. ಹೆಸರೇ ಹೇಳುವಂತೆ, ಇಲ್ಲಿಂದ ಕಾಣಸಿಗುವ ದೃಶ್ಯವೇ ನಿಜವಾದ “ಮ್ಯಾಜಿಕಲ್ ವ್ಯೂ”. ಮುಂದೆ ಹರಡಿರುವ ಧರ್ಮಶಾಲಾ ಕಣಿವೆ, ಆಕಾಶವನ್ನು ಆವರಿಸಿಕೊಂಡಿರುವ ಮೋಡಗಳು, ಅಲ್ಲಲ್ಲಿ ಬೀಳುವ ಸೂರ್ಯನ ಕಿರಣಗಳು — ಎಲ್ಲವೂ ಒಂದೇ ಸಮಯದಲ್ಲಿ ಮನಸ್ಸನ್ನು ತಬ್ಬಿಕೊಳ್ಳುತ್ತವೆ. ಇರುವುದೊಂದೇ ಜೀವನ, ಅಂತಹುದರಲ್ಲಿ, ಇಂತಹ ದೃಶ್ಯಗಳನ್ನು ಒಂದು ಸಲ ಸವಿದರೆ ಇಡೀ ಜೀವನವಿಡೀ ನೆನಪಿಸಿಕೊಳ್ಳಬಹುದು. ಇಲ್ಲಿ ಕುಳಿತು ಒಂದು ಸಣ್ಣ ಚಹಾ ಕುಡಿದು, ನಿಸರ್ಗದ ಸಂಗತಿಯೊಂದಿಗೆ ಒಂದಿಷ್ಟು ಸಮಯ ಕಳೆಯುವುದೇ ಈ ಚಾರಣದ ಮತ್ತೊಂದು ಸುಂದರ ಅನುಭವ.
ಇಲ್ಲಿಂದ ಮುಂದಿನ ದಾರಿ ಮಾತ್ರ ಸ್ವಲ್ಪ ಹೆಚ್ಚು ಬೆವರುಗಟ್ಟಿಸುವ ಅನುಭವವನ್ನು ಚಾರಣಿಗರಿಗೆ ಕೊಡುವುದರಲ್ಲಿ ಅನುಮಾನವಿಲ್ಲ. ಇಲ್ಲಿಂದ ಮುಂದೆ ದಾರಿ ಇನ್ನಷ್ಟು ತೀವ್ರವಾಗಿ ಏರಿಕೆಯಾಗುತ್ತ, ಉಸಿರಾಟವೂ ಗಟ್ಟಿಯಾಗುತ್ತ, ಕಾಲುಗಳು ಹೆಚ್ಚು ಕೆಲಸ ಮಾಡುವಂತಾಗುತ್ತವೆ. ಆದರೆ ಇದೇ ವೇಳೆ, ಸುತ್ತಲಿರುವ ರೋಡೋಡೆಂಡ್ರನ್ ಮರಗಳು, ಓಕ್ ಮರಗಳ ನೆರಳು ಮತ್ತು ಹಕ್ಕಿಗಳ ಕೂಗು, ಈ ಎಲ್ಲವೂ ಆ ದಣಿವು ಭರಿಸಲು ನೆರವಾಗುತ್ತವೆ. ಪ್ರತಿಯೊಂದು ಹೆಜ್ಜೆಯೂ ಇಲ್ಲೊಂದು ಅನುಭವವಾಗಿ ಉಳಿಯುತ್ತದೆ.

ಕೊನೆಯ ಎರಡು-ಮೂರು ತಿರುವುಗಳ ನಂತರ, ನಿಮ್ಮಿಂದ ಇಷ್ಟು ಹೊತ್ತು ಬಚ್ಚಿಟ್ಟಿರುವ ಪ್ರಕೃತಿಯು ತನ್ನ ಒಡಲನ್ನು ಆ ಕ್ಷಣಕ್ಕೆ ತೆರೆದಿಟ್ಟಂತೆ ಭಾಸವಾಗುತ್ತದೆ. ರೋಡೋಡೆಂಡ್ರನ್ ಕಾಡುಗಳು ಮುಂದೆ ತೆರೆದುಕೊಂಡು, ಅಮೋಘ ತ್ರಿಯುಂದ ರಿಡ್ಜ್ ಅನ್ನು ನಿಮಗೆ ಈ ಚಾರಣ ಪರಿಚಯಿಸುತ್ತವೆ. ಇಲ್ಲಿ ಎಲ್ಲೆಂದರೆ ಹಸಿರು ಎತ್ತರ ಪ್ರದೇಶ, ಒಂದು ಕಿಲೋಮೀಟರ್ ವ್ಯಾಪ್ತಿಗೆ ಹರಡಿರುವ ಮೇವು ನೆಲ, ಕಂಗ್ರಾ ಕಣಿವೆಯತ್ತ ಇಳಿದು ಹೋಗಬಹುದಾದ ದಾರಿಯನೋಟ, ಆಕಾಶದ ಕೆಳಗೆ ಓಡಾಡುತ್ತಿರುವ ಮೋಡಗಳು, ಈ ನೋಟವನ್ನು ಕೇವಲ ಕಣ್ಣುಗಳಿಂದ ನೋಡುವುದಷ್ಟೇ ಅಲ್ಲ, ಹೃದಯದಿಂದ ಅನುಭವಿಸಬೇಕಾದದ್ದು.
ಇಲ್ಲಿ ಒಂದಿಷ್ಟು ವಿಶ್ರಮಿಸಿ, ನಿಸರ್ಗ ಸಂಗಾತಿಯೊಂದಿಗೆ ಮತ್ತಷ್ಟು ಕಾಲ ಕಳೆದು, ತಂದಿರುವ ತಿಂಡಿ ತಿಂದು, ಫೋಟೋಗಳ ಮೂಲಕ ಈ ಸಮಯವನ್ನು ಬಂಧಿಸಿ. ಫೋಟೋ ಇಲ್ಲದೆ ಹೋದರೂ, ನಿಮ್ಮ ಮನಸಿನಲ್ಲಿ ಉಳಿಯುವ ಫೋಟೋ ಜೀವನವಿಡೀ ಈ ನೆನಪನ್ನು ಮೆಲುಕು ಹಾಕುವುದರಲ್ಲಿ ಸಂಶಯವೇ ಇಲ್ಲ. ನಿಮ್ಮ ಮನಸು ‘ಮುಂದೆ ನಡೆ/ವಾಪಸ್ ಮರಳಬೇಕು’ ಎನ್ನುವ ತನಕ ಇಲ್ಲಿಂದ ಕಾಲುಕೀಳಲು ಮನಸು ಬರದು. ಅಲ್ಲಿ ನಿಮಗೆ ಕ್ಯಾಂಪಿಂಗ್ ಮಾಡುವ ಇಚ್ಛೆಯಿಲ್ಲದೆ ಇದ್ದರೆ, ಹಾಗೆಯೇ ಅದಕ್ಕೆ ಬೇಕಾದ ತಯಾರಿ ಮಾಡಿರದೆ ಇದ್ದರೆ, ವಾಪಸ್ ಧರ್ಮಕೋಟದತ್ತ ಮರಳಲೇಬೇಕು. ಆದರೆ ಈ ಚಾರಣದೊಂದಿಗೆ ನೀವು ಮರಳುವುದು ಕೇವಲ ನಡೆದು ಬಂದದಾರಿಯಷ್ಟೇ ಅಲ್ಲ; ಅದು ನಿಸರ್ಗದ ಮಡಿಲಿನಲ್ಲಿ ಕಳೆದ ಔದಾರ್ಯಪೂರ್ಣ ಕ್ಷಣಗಳ ನೆನಪಿನತ್ತವೂ ಆಗಿರುತ್ತದೆ. ಇಲ್ಲಿನ ನಿಸರ್ಗ ನಿಮ್ಮ ಮನಸಿನ ಕ್ಯಾಮೆರಾದಲ್ಲಿ ಸದಾ ಹಸಿರಾಗಿ ಉಳಿಯುವುದು ನಿಜವಾದ ಮ್ಯಾಜಿಕ್. ಅದುವೇ ನಿಜವಾದ ಮ್ಯಾಜಿಕಲ್ ವ್ಯೂ.
ಇದನ್ನೂ ಓದಿ ಸುತ್ತಾಟ | ಆಫ್ರಿಕಾದ ತಾಂಜಾನಿಯಾ ದೇಶದ ಮೇರು ಪರ್ವತದಲ್ಲಿ ಕಂಡುಕೊಂಡ ಜೀವನ ಸತ್ಯ!
ತ್ರಿಯುಂದ ಚಾರಣವನ್ನು ಭಾರತದಲ್ಲಿ ಅತ್ಯಂತ ಜನಪ್ರಿಯ ಚಾರಣ ಸ್ಥಳಗಳಲ್ಲೊಂದು ಎಂದು ಪರಿಗಣಿಸಲಾಗಿದೆ. ಧೌಲಾಧಾರ್ ಪರ್ವತದ ಹಿಮಶಿಖರಗಳ ನೆರಳಿನಲ್ಲಿ ಇರುವ ಈ ಹಸಿರು ಮಡುಗಟ್ಟು ಪ್ರದೇಶ, ದೇವದಾರು, ಓಕ್, ಪೈನ್ ಮತ್ತು ರೋಡೋಡೆಂಡ್ರಾನ್ ಮರಗಳಿಂದ ಆವರಿಸಲ್ಪಟ್ಟಿರುವ ನಿಸರ್ಗ, ಪ್ರಕೃತಿಯ ಜೊತೆ ಬೆರೆಯಲು, ಒಂದಿಷ್ಟು ಸಮಯ ಕಳೆಯಲು ನಿಜವಾದ ಆದರ್ಶ ತಾಣ. ನೀವು ಬೇಸಿಗೆಯಲ್ಲಿ ಬರುವುದಾದರೂ ಸರಿಯೇ, ಚಳಿಗಾಲದಲ್ಲಿ ಬರುವುದಾದರೂ ಸರಿಯೇ – ಈ ಸ್ಥಳ ನಿಮ್ಮನ್ನು ಖಂಡಿತ ತಬ್ಬಿಕೊಳ್ಳುವುದು, ಹೊಸದೊಂದು ನೆನಪನ್ನು, ಶಾಶ್ವತ ಜೀವನ ಅನುಭವವನ್ನು ನೀಡುವುದಂತೂ ನಿಜ. ಮಳೆಗಾಲವನ್ನು ಹೊರತುಪಡಿಸಿ ಇಡೀ ವರ್ಷ ಈ ಚಾರಣ ಲಭ್ಯವಿದೆ. ಆದರೆ ಯಾವುದೇ ಋತು ಇರಲಿ, ತ್ರಿಯುಂದ ನಮಗೆ ಬೋಧಿಸುವುದು ಒಂದೇ: ಬದುಕು ಚಟುವಟಿಕೆಯಿಂದ ತುಂಬಿರಬೇಕು, ಮನಸ್ಸು ನಿಸರ್ಗದೊಂದಿಗೆ ಒಂದಾಗಿರಬೇಕು, ಮತ್ತು ಜೀವನದ ಪ್ರತಿಯೊಂದು ತಿರುವು ನುಡಿಸುವ ಪಾಠವನ್ನು ಗೌರವದಿಂದ ಸ್ವೀಕರಿಸಬೇಕು. ಹಾಗೆಯೇ ಜೀವನ ಎಷ್ಟೇ ಕ್ಷಣಿಕವಾಗಿದ್ದರೂ ಕೂಡ, ನಾವು ಗಳಿಸುವ ನೆನಪುಗಳು, ನಾವು ಜೀವಿಸುವ ಅನುಭವಗಳು, ನಾವು ನಡೆಯುವ ಜೀವನ ದಾರಿ ಶಾಶ್ವತವಾಗಿರಬೇಕು.

ಸುಚಿತ್ರಾ ಎಸ್ ಎ
ಮೂಲತಃ ಉಡುಪಿಯವರು. ಸ್ವಲ್ಪ ಕಾಲ ಕರ್ನಾಟಕ ಹೈಕೋರ್ಟಿನಲ್ಲಿ ವಕೀಲಿ ವೃತ್ತಿ ಮಾಡಿದ್ದಾರೆ. ಸದ್ಯ ಜರ್ಮನಿಯ ಮ್ಯೂನಿಚ್ ಟೆಕ್ನಿಕಲ್ ಯುನಿವರ್ಸಿಟಿಯಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ.