ಅಹಮದಾಬಾದ್ ಏರ್ ಇಂಡಿಯಾ ವಿಮಾನ ಅಪಘಾತಕ್ಕೆ ಕಾರಣ ಪರಿಶೀಲನೆಗಾಗಿ ಮತ್ತು ಭವಿಷ್ಯದಲ್ಲಿ ಇಂತಹ ಅನಾಹುತವನ್ನು ತಡೆಗೆ ಮಾರ್ಗಸೂಚಿ ರೂಪಿಸಲು ಕೇಂದ್ರ ಗೃಹ ಕಾರ್ಯದರ್ಶಿ ನೇತೃತ್ವದ ಉನ್ನತ ಮಟ್ಟದ ಬಹು ಶಿಸ್ತಿನ ಸಮಿತಿ ರಚಿಸಲಾಗಿದೆ.
ನಾಗರಿಕ ವಿಮಾನಯಾನ ಸಚಿವಾಲಯ ಶನಿವಾರ ಈ ಕುರಿತು ಮಾಹಿತಿ ನೀಡಿದ್ದು, “ಭವಿಷ್ಯದಲ್ಲಿ ಇಂತಹ ಅಪಘಾತಗಳನ್ನು ತಡೆಗಟ್ಟಲು ಮತ್ತು ಅವು ಸಂಭವಿಸಿದ ಸಂದರ್ಭಗಳಲ್ಲಿ ಅವುಗಳನ್ನು ನಿರ್ವಹಿಸುವ ವಿಧಾನಕ್ಕಾಗಿ ತಂಡವು ಕೆಲವು ಶಿಷ್ಟಾಚಾರಗಳನ್ನು ರೂಪಿಸುತ್ತದೆ. ಈ ಕಾರ್ಯವನ್ನು ಪೂರ್ಣಗೊಳಿಸಲು ಸಚಿವಾಲಯ ಮೂರು ತಿಂಗಳ ಗಡುವು ನೀಡಿದೆ” ಎಂದು ತಿಳಿಸಿದೆ.
ಆದೇಶದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಲ್ಲಿ ಜಂಟಿ ಕಾರ್ಯದರ್ಶಿ ಮಟ್ಟದ ಪ್ರತಿನಿಧಿಗಳನ್ನು ಸಮಿತಿಯು ಒಳಗೊಂಡಿರುತ್ತದೆ. ಸಂಬಂಧಿತ ಸಂಸ್ಥೆಗಳು ನಡೆಸುವ ಇತರ ವಿಚಾರಣೆಗಳಿಗೆ ಈ ಸಮಿತಿಯು ಪರ್ಯಾಯವಾಗಿರುವುದಿಲ್ಲ. ಆದರೆ, ಭವಿಷ್ಯದಲ್ಲಿ ಅಂತಹ ಘಟನೆಗಳನ್ನು ತಡೆಗಟ್ಟಲು ಮತ್ತು ನಿರ್ವಹಿಸಲು ಶಿಷ್ಠಾಚಾರಗಳನ್ನು ರೂಪಿಸುವತ್ತ ಗಮನಹರಿಸುತ್ತದೆ ಎಂದು ಸಚಿವಾಲಯ ಹೇಳಿದೆ.
ಅವಘಡದ ಬಗ್ಗೆ ಈಗಾಗಲೇ ವಿಮಾನ ಅಪಘಾತ ತನಿಖಾ ಬ್ಯೂರೋ ತನಿಖೆ ನಡೆಸುತ್ತಿದೆ. ಉನ್ನತ ಮಟ್ಟದ ಬಹು ಶಿಸ್ತಿನ ಸಮಿತಿಯು ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ ಮೋಹನ್ ಅಧ್ಯಕ್ಷತೆಯಲ್ಲಿ ಕಾರ್ಯ ನಿರ್ವಹಿಸಲಿದೆ. ನಾಗರಿಕ ವಿಮಾನಯಾನ ಕಾರ್ಯದರ್ಶಿ ಮತ್ತು ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಗಳು ಸದಸ್ಯರಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ‘ಪೋಕ್ಸೊ’ ಶಿಕ್ಷೆಯಿಂದ ನುಣುಚಿಕೊಳ್ಳುವ ದಾಳವಾಗದಿರಲಿ ‘ಮದುವೆ’
ಗುಜರಾತ್ ಗೃಹ ಇಲಾಖೆ, ಗುಜರಾತ್ ವಿಪತ್ತು ಪ್ರತಿಕ್ರಿಯೆ ಪ್ರಾಧಿಕಾರ, ಅಹಮದಾಬಾದ್ ಪೊಲೀಸ್ ಆಯುಕ್ತರು, ಭಾರತೀಯ ವಾಯುಪಡೆಯ ತಪಾಸಣೆ ಮತ್ತು ಸುರಕ್ಷತೆಯ ಮಹಾನಿರ್ದೇಶಕರು, ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯ ಮಹಾನಿರ್ದೇಶಕರು ಸಮಿತಿಯ ಭಾಗವಾಗಿದ್ದಾರೆ. ಅಲ್ಲದೆ, ಗುಪ್ತಚರ ಬ್ಯೂರೋದ ವಿಶೇಷ ನಿರ್ದೇಶಕರು ಮತ್ತು ವಿಧಿವಿಜ್ಞಾನ ವಿಜ್ಞಾನ ಸೇವೆಗಳ ನಿರ್ದೇಶನಾಲಯದ ನಿರ್ದೇಶಕರು ಸಮಿತಿಯಲ್ಲಿ ಇರಲಿದ್ದಾರೆ.
ಜೂನ್ 12ರಂದು ಅಹಮದಾಬಾದ್ನಿಂದ ಲಂಡನ್ಗೆ ತೆರಳುತ್ತಿದ್ದ ಬೋಯಿಂಗ್ 787-8 ವಿಮಾನವು ಟೇಕ್ಆಫ್ ಆದ ಕೆಲವೇ ಕ್ಷಣದಲ್ಲಿ ಅಪಘಾತಕ್ಕೀಡಾಗಿ ಅದರಲ್ಲಿದ್ದ 241 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ, ವಿಮಾನವು ವೈದ್ಯಕೀಯ ಕಾಲೇಜು ಹಾಸ್ಟೆಲ್ ಕಟ್ಟಡಕ್ಕೆ ಅಪ್ಪಳಿಸಿದ ಪರಿಣಾಮ ಒಟ್ಟಾರೆ 265ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.