2024–25ನೇ ಸಾಲಿನ ಬಿ.ಇಡಿ ಅಂತಿಮ ವರ್ಷದ ನಾಲ್ಕನೇ ಸೆಮಿಸ್ಟರ್ ಫಲಿತಾಂಶಗಳನ್ನು ತಕ್ಷಣವೇ ಪ್ರಕಟಿಸಬೇಕು ಹಾಗೂ ಮೂಲ ಅಂಕಪಟ್ಟಿಗಳನ್ನು ನೀಡಬೇಕು ಎಂದು ಒತ್ತಾಯಿಸಿ ಗುಲಬರ್ಗಾ ವಿಶ್ವವಿದ್ಯಾಲಯ ಬಿ.ಇಡಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಬಿ.ಇಡಿ ವಿದ್ಯಾರ್ಥಿಗಳ ಹೋರಾಟ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ವಿ.ವಿ.ಯ ಕುಲಪತಿಗಳ ಕಚೇರಿ ಎದುರು ಶುಕ್ರವಾರ ಎರಡು ಗಂಟೆಗೂ ಅಧಿಕ ಕಾಲ ಪ್ರತಿಭಟನೆ ನಡೆಸಿದರು.
ಈ ಸಂಬಂಧ ಪ್ರಭಾರ ಕುಲಪತಿ ಪ್ರೊ.ಗೂರು ಶ್ರೀರಾಮುಲು ಅವರಿಗೆ ವಿದ್ಯಾರ್ಥಿಗಳು ಮನವಿ ಪತ್ರ ಸಲ್ಲಿಸಿದರು. ಪ್ರಭಾರ ಕುಲಸಚಿವ ಪ್ರೊ.ರಮೇಶ ಲಂಡನಕರ್ ಹಾಜರಿದ್ದರು
ಅಂತಿಮ ವರ್ಷದ ಬಿ.ಇಡಿ ನಾಲ್ಕನೇ ವರ್ಷದ ಸೆಮಿಸ್ಟರ್ ಪರೀಕ್ಷೆ ಬರೆದು ಏಳು ತಿಂಗಳು ಕಳೆದರೂ ಫಲಿತಾಂಶ ಪ್ರಕಟಿಸಿಲ್ಲ. ಇದರಿಂದಾಗಿ ಬಿ.ಇಡಿ ವೃತ್ತಿ ಶಿಕ್ಷಣ ಪಡೆದು ಶಿಕ್ಷಕರಾಗುವ ಆಕಾಂಕ್ಷೆಯನ್ನು ಹೊತ್ತಿರುವ ಪ್ರಶಿಕ್ಷಣಾರ್ಥಿಗಳಿಗೆ ಸಮಸ್ಯೆ ಉಂಟಾಗಿದೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು
ದೂರಿದರು.

‘ಬಿ.ಇಡಿ ಪ್ರಶಿಕ್ಷಣಾರ್ಥಿಗಳು ಪರೀಕ್ಷೆ ಬರೆದು ಫಲಿತಾಂಶ ಮತ್ತು ಅಂಕಪಟ್ಟಿಗಾಗಿ ಚಾತಕ ಪಕ್ಷಿಯಂತೆ ಕಾಯುವ ಸ್ಥಿತಿ ಬಂದಿದೆ. ಯಾವುದೇ ಪದವಿ, ಸ್ನಾತಕೋತ್ತರ ಪದವಿ, ವೃತ್ತಿ ಪರೀಕ್ಷೆ ತೆಗೆದುಕೊಂಡರೂ 45 ದಿನಗಳ ಒಳಗೆ ಫಲಿತಾಂಶ ಪ್ರಕಟಿಸಬೇಕೆಂಬ ನಿಯಮವಿದೆ. ಆದರೆ, ಗುಲಬರ್ಗಾ ವಿಶ್ವವಿದ್ಯಾಲಯವು ಈ ನಿಯಮವನ್ನು ಕಡೆಗಣಿಸಿದೆ. ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು 2024–25ನೇ ಸಾಲಿನ ನಾಲ್ಕನೇ ಮತ್ತು ಎರಡನೇ ಸೆಮಿಸ್ಟರ್ ಫಲಿತಾಂಶವನ್ನು ಕೂಡಲೇ ಪ್ರಕಟಿಸಬೇಕು’ ಎಂದು ಆಗ್ರಹಿಸಿದರು.
‘ಎಲ್ಲಾ ಸೆಮಿಸ್ಟರ್‌ಗಳ ಮೂಲ ಅಂಕಪಟ್ಟಿ ವಿತರಿಸಬೇಕು. ಘಟಿಕೋತ್ಸವ ಪ್ರಮಾಣಪತ್ರ ನೀಡಬೇಕು. ಅಕ್ರಮ ಅಂಕಪಟ್ಟಿ ನೀಡುವ ಮತ್ತು ಅಂಕಪಟ್ಟಿ ತಿದ್ದುವ ದಂಧೆಗೆ ಕಡಿವಾಣ ಹಾಕಬೇಕು. ಕರ್ತವ್ಯ ಲೋಪ ಎಸಗಿದವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು, ಘಟಿಕೋತ್ಸವ ಪ್ರಮಾಣಪತ್ರವನ್ನೂ ಶೀಘ್ರ ನೀಡಬೇಕು’ ಎಂದು ಒತ್ತಾಯಿಸಿದರು.
ಇದನ್ನೂ ಓದಿ : ಬೀದರ್ | ಬೆರಗು ಹುಟ್ಟಿಸುವ ಕಲ್ಯಾಣದ ಅನುಭವ ಮಂಟಪ : ಕಥೆಗಾರ ಮಹಾಂತೇಶ ನವಲಕಲ್
ಬಿ.ಇಡಿ ವಿದ್ಯಾರ್ಥಿಗಳ ಹೋರಾಟ ಸಮಿತಿ ಸಂಚಾಲಕ ತೇಜಸ್ ಆರ್. ಇಬ್ರಾಹಿಂಪುರ, ವಿದ್ಯಾರ್ಥಿಗಳಾದ ಪ್ರಭಾಕರ ಚಿಂಚೋಳಿ, ಗಣೇಶ ಯಾದವ್, ಜೈಭೀಮ, ಪೂಜಾ ಡೊಮನಾಳ, ಸಚಿನ್, ನಾಗೇಶ್, ಯುವ ಹೋರಾಟಗಾರರಾದ ಜಗನ್ನಾಥ ಎಚ್.ಎಸ್, ಈಶ್ವರ ಕುಂಬಾರ ಇತರರು ಭಾಗವಹಿಸಿದ್ದರು.