ಈ ದಿನ ಸಂಪಾದಕೀಯ | ವಿಮಾನಯಾನದ ವಿಶ್ವಾಸ ಕುಂದುತ್ತಿದೆ – ಗಂಭೀರ ಚಿಂತನೆ, ಕ್ರಮಗಳ ಅಗತ್ಯವಿದೆ!

Date:

Advertisements
ವಿಮಾನ ದುರಂತಗಳು ಭಾರತದಲ್ಲಿ ಮಾತ್ರವೇ ಸಂಭವಿಸುತ್ತಿಲ್ಲ. ಎಲ್ಲೆಡೆ ಸಂಭವಿಸುತ್ತಿವೆ ಎಂಬುದು ವಾಸ್ತವವೇ ಆಗಿದ್ದರೂ, ಭಾರತದಲ್ಲಿ ನಾಗರಿಕ ವಿಮಾನಯಾನ ಕ್ಷೇತ್ರವು ನಾನಾ ಸಮಸ್ಯೆಗಳನ್ನು ಎದುರಿಸುತ್ತಿದೆ. 

ಯುದ್ಧ, ಸಂಘರ್ಷ, ಬಾಂಬ್‌-ಕ್ಷಿಪಣಿ ದಾಳಿಗಳಂತಹ ಉದ್ದೇಶಪೂರಿತ ಕೃತ್ಯಗಳ ಹೊರತಾಗಿ ಅತೀ ಹೆಚ್ಚು ಮಾನವ ನಷ್ಟಕ್ಕೆ ಕಾರಣವಾಗುವುದು ವಿಮಾನ ದುರಂತಗಳು. ಆಗಾಗ್ಗೆ ಘಟಿಸುವ ವಿಮಾನ ಪತನದಂತಹ ದುರ್ಘಟನೆಗಳಿಂದ ಸಾಮೂಹಿಕ ಜೀವ ಹಾನಿ ಸಂಭವಿಸುತ್ತಲೇ ಇವೆ. ಅಂತಹದ್ದೇ ಭೀಕರ ಘಟನೆಯಲ್ಲಿ ಗುಜರಾತ್‌ನ ಅಹಮದಾಬಾದ್‌ನಲ್ಲಿ ಏರ್‌ ಇಂಡಿಯಾದ ಬೋಯಿಂಗ್ ವಿಮಾನ ಅಪಘಾತಕ್ಕೀಡಾಗಿ 241 ಪ್ರಯಾಣಿಕರು ಮತ್ತು 24 ಕಟ್ಟಡದಲ್ಲಿದ್ದ ಇತರರು(ವೈದ್ಯಕೀಯ ವಿದ್ಯಾರ್ಥಿಗಳು ಸೇರಿ) ಸಾವನ್ನಪ್ಪಿದ್ದಾರೆ. ಪ್ರಸ್ತುತ ಬಿಕ್ಕಟ್ಟಿನಲ್ಲಿರುವ ರಷ್ಯಾ-ಉಕ್ರೇನ್, ಗಾಜಾ-ಇಸ್ರೇಲ್, ಇರಾನ್-ಇಸ್ರೇಲ್ ಹಾಗೂ ಕದನ ವಿರಾಮದಲ್ಲಿರುವ ಭಾರತ-ಪಾಕ್ ಸಂಘರ್ಷಗಳಲ್ಲಿಯೂ ಒಂದು ದಿನದಲ್ಲಿ ಘಟಿಸದಷ್ಟು ಬೃಹತ್ ಸಾವುಗಳು ಅಹಮದಾಬಾದ್ ವಿಮಾನ ದುರಂತದಲ್ಲಿ ಸಂಭವಿಸಿವೆ.

ಅಹಮದಾಬಾದ್‌ ದುರಂತ ಸೇರಿದಂತೆ ಭಾರತದಲ್ಲಿ ಕಳೆದ ಕೆಲವು ದಶಕಗಳಲ್ಲಿ ಸಂಭವಿಸಿರುವ ವಿಮಾನ ದುರಂತಗಳು ವಿಮಾನಯಾನ ಉದ್ಯಮ ಮತ್ತು ಪ್ರಯಾಣದ ಸುರಕ್ಷತೆ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಜೊತೆಗೆ, ವಿಮಾನಯಾನ ಕ್ಷೇತ್ರವು ಎದುರಿಸುತ್ತಿರುವ ಸವಾಲುಗಳಿಗೆ ಕನ್ನಡಿ ಹಿಡಿದಿವೆ. ಸುಧಾರಣೆಗಳ ಅಗತ್ಯಗಳನ್ನು ಬೆಳಕಿಗೆ ತಂದಿವೆ.

ಭಾರತದಲ್ಲಿ 1996ರ ನವೆಂಬರ್ 12ರಂದು ಹರಿಯಾಣದ ಚಕ್ರಿಡಬ್ರಿ ಬಳಿ ಸೌದಿ ಅರೇಬಿಯಾ ಮತ್ತು ಕಜಕಿಸ್ತಾನದ ವಿಮಾನಗಳ ನಡುವೆ ಆಗಸದಲ್ಲಿ ಮುಖಾಮುಖಿ ಡಿಕ್ಕಿಯಾಗಿ 349 ಜನರು ಸಾವನ್ನಪ್ಪಿದರು. ಇದು ಭಾರತದ ಇತಿಹಾಸದಲ್ಲಿಯೇ ಅತ್ಯಂತ ಘೋರ ವಿಮಾನ ದುರಂತಗಳಲ್ಲಿ ಮೊದಲನೆಯದ್ದು. 2000ರ ಜುಲೈ 17ರಂದು ಪಟ್ನಾದ ವಸತಿ ಪ್ರದೇಶದಲ್ಲಿ ‘ಅಲಯನ್ಸ್ ಏರ್‌ 7412’ ವಿಮಾನ ಪತನಗೊಂಡು 60 ಜನರು ಮೃತಪಟ್ಟಿದ್ದರು. 2010ರ ಮೇ 22ರಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುಬೈನಿಂದ ಬಂದಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಲ್ಯಾಂಡಿಂಗ್ ಸಮಯದಲ್ಲಿ ರನ್‌ವೇಯಿಂದ ಕಂದಕಕ್ಕೆ ಬಿದ್ದು 158 ಜನರು ಸಾವನ್ನಪ್ಪಿದರು. 2020ರ ಆಗಸ್ಟ್ 7ರಂದು ಕೇರಳದ ಕ್ಯಾಲಿಕಟ್‌ನಲ್ಲಿ ದುಬೈನಿಂದ ಬಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ರನ್‌ವೇಯಿಂದ ಹೊರಗೆ ಬಿದ್ದು 18 ಜನರು ಸಾವನ್ನಪ್ಪಿದ್ದರು. ಈಗ, ಅಹಮದಾಬಾದ್‌ನಲ್ಲಿ ಲಂಡನ್‌ಗೆ ಹಾರುತ್ತಿದ್ದ ಇದೇ ಏರ್‌ ಇಂಡಿಯಾ ಕಂಪನಿಯ ವಿಮಾನ AI171 ಹಾರಿದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ. 241+24 ಜನರನ್ನು ಬಲಿ ಪಡೆದಿದೆ.

Advertisements

ಈ ಎಲ್ಲ ದುರಂತಗಳು ಭಾರತೀಯ ವಿಮಾನಯಾನ ಕ್ಷೇತ್ರದಲ್ಲಿ ಸುರಕ್ಷತೆಯ ಕೊರತೆ, ತಾಂತ್ರಿಕ ದೋಷಗಳು, ಮಾನವ ಸೃಷ್ಟಿತ ತಪ್ಪುಗಳು ಮತ್ತು ಮೂಲಸೌಕರ್ಯದ ಸಮಸ್ಯೆಗಳಿಗೆ ಕನ್ನಡಿ ಹಿಡಿದಿವೆ. ಅಹಮಬಾದಾಬಾದ್‌ನಲ್ಲಿ ಪತನಗೊಂಡ ವಿಮಾನವು ಇಂಜಿನ್, ಫ್ಲಾಪ್ಸ್ ಹಾಗೂ ಲ್ಯಾಂಡಿಂಗ್ ಗೇರ್‌ನಲ್ಲಿದ್ದ ದೋಷಗಳಿಂದ ಅಪಘಾತಕ್ಕೀಡಾಯಿತು ಎಂದು ಹೇಳಲಾಗುತ್ತಿದೆ. ಆ ವಿಮಾನವನ್ನು ಇತ್ತೀಚೆಗಷ್ಟೇ ದುರಸ್ತಿ ಮಾಡಲಾಗಿತ್ತು. ಆದಾಗ್ಯೂ, ಕೆಲವು ತಾಂತ್ರಿಕ ಸಮಸ್ಯೆಗಳು ಉಳಿದಿದ್ದವು. ಆದರೂ, ಅದನ್ನು ಪ್ರಯಾಣಕ್ಕೆ ಬಳಸಲಾಗಿದೆ ಎಂಬ ಗಂಭೀರ ಆರೋಪಗಳಿವೆ.

2010ರ ಮಂಗಳೂರು ದುರಂತದಲ್ಲಿ, ರನ್‌ವೇನಲ್ಲಿ ವಿಮಾನವನ್ನು ಲ್ಯಾಂಡಿಂಗ್ ಮಾಡುವಾಗ ಪೈಲಟ್‌ನ ತಪ್ಪು ಲೆಕ್ಕಾಚಾರವೇ ಪ್ರಮುಖ ಕಾರಣವೆಂದು ಗುರುತಿಸಲಾಗಿದೆ. ಚಕ್ರಿಡಬ್ರಿ ದುರಂತಕ್ಕೆ ಏರ್ ಟ್ರಾಫಿಕ್ ಕಂಟ್ರೋಲ್ (ATC) ಮತ್ತು ಪೈಲಟ್‌ಗಳ ನಡುವಿನ ಸಂವಹನದ ಕೊರತೆ ಕಾರಣವಾಗಿದೆ. ಇಂತಹ ಮಾನವ ನಿರ್ಮಿತ ಸಮಸ್ಯೆಗಳು ಹೆಚ್ಚು ಕಳವಳಕಾರಿ.

ಇವುಗಳ ಜೊತೆಗೆ, ಭಾರತದ ಕೆಲವು ವಿಮಾನ ನಿಲ್ದಾಣಗಳಲ್ಲಿ ರನ್‌ವೇ ಉದ್ದ, ತುರ್ತು ಸೌಲಭ್ಯಗಳು ಅಥವಾ ಆಧುನಿಕ ರಾಡಾರ್ ವ್ಯವಸ್ಥೆಯ ಕೊರತೆಗಳೂ ಇವೆ. 2020ರ ಕ್ಯಾಲಿಕಟ್ ದುರಂತಕ್ಕೆ ರನ್‌ವೇ ಉದ್ದವು ಕಡಿಮೆ ಇದ್ದದ್ದೇ ಕಾರಣವೆಂದು ವಿಶ್ಲೇಷಿಸಲಾಗಿದೆ. ಇವಲ್ಲದೆ, ನೈಸರ್ಗಿಕ/ಹವಾಮಾನ ಬದಲಾವಣೆಗಳು ವಿಮಾನ ದುರಂತಗಳಿಗೆ ಕಾರಣವಾಗುತ್ತವೆ ಎಂದು ಹಿಂದಿನಿಂದಲೂ ಹೇಳಲಾಗುತ್ತಿದೆ.

ಆದರೆ, ಕಳೆದ ಎರಡು ದಶಕಗಳಲ್ಲಿ ಭಾರತದಲ್ಲಿ ಸಂಭವಿಸಿರುವ ವಿಮಾನ ದುರಂತಗಳಲ್ಲಿ ಪ್ರಾಕೃತಿಕ ಸವಾಲುಗಳು ಕಾರಣವಾಗಿರುವ ಉದಾಹರಣೆಗಳಿಲ್ಲ. ಎಲ್ಲವೂ ಮಾನವ ಸೃಷ್ಟಿತ ಸಮಸ್ಯೆಗಳೇ ಆಗಿವೆ. ಆಗಾಗ್ಗೆ ಸಂಭವಿಸುವ ವಿಮಾನ ದುರಂತಗಳು ತೀವ್ರ ಜೀವ ಹಾನಿಯನ್ನು ಉಂಟು ಮಾಡುತ್ತಿವೆ. ಅಷ್ಟೇ ಅಲ್ಲ, ತಮ್ಮವರನ್ನು ಕಳೆದುಕೊಂಡ ಕುಟುಂಬಗಳಿಗೆ ಭಾವನಾತ್ಮಕ ಮತ್ತು ಆರ್ಥಿಕ ಆಘಾತವನ್ನೂ ಒಡ್ಡುತ್ತವೆ.

ಈ ಘಟನೆಗಳು ಜನರಲ್ಲಿ ವಿಮಾನಗಳಲ್ಲಿ ಸುರಕ್ಷಿತವಾಗಿ ಪ್ರಯಾಣಿಸಬಹುದು ಎಂಬ ವಿಶ್ವಾಸವನ್ನೇ ಕುಂದಿಸುತ್ತವೆ. ಇದು, ವಿಮಾನಯಾನ ಕಂಪನಿಗಳ ಆದಾಯಕ್ಕೂ ಹೊಡೆತ ಕೊಡುತ್ತದೆ. ಅಂತಹ ನಿದರ್ಶನದಲ್ಲಿ, ಅಹಮದಾಬಾದ್‌ ದುರಂತದಿಂದಾಗಿ ಬೋಯಿಂಗ್‌ನ ಷೇರುಗಳು 5% ಕುಸಿತ ಕಂಡಿವೆ. ಭಾರತದಲ್ಲಿ ಸಂಭವಿಸಿರುವ ಇತ್ತೀಚಿನ ವಿಮಾನ ಪತನ ಪ್ರಕರಣಗಳಲ್ಲಿ ಹೆಚ್ಚಿನವು ಏರ್‌ ಇಂಡಿಯಾ ಸಂಸ್ಥೆಗೆ ಸೇರಿದ್ದು, ಏರ್‌ ಇಂಡಿಯಾ ಮೇಲಿನ ವಿಶ್ವಾಸವು ತೀವ್ರವಾಗಿ ಕುಸಿಯುತ್ತಿದೆ.

ಇದನ್ನು ಓದಿದ್ದೀರಾ?: ಅಪಾಯಕಾರಿ ಪ್ಲಾಸ್ಟಿಕ್: ಮನ್ಸೂರ್ ಮಾತುಗಳನ್ನು ಸರ್ಕಾರ-ಜನ ಆಲಿಸುವರೇ?

ವಿಮಾನ ದುರಂತಗಳು ಭಾರತದಲ್ಲಿ ಮಾತ್ರವೇ ಸಂಭವಿಸುತ್ತಿಲ್ಲ. ಎಲ್ಲೆಡೆ ಸಂಭವಿಸುತ್ತಿವೆ ಎಂಬುದು ವಾಸ್ತವವೇ ಆಗಿದ್ದರೂ, ಭಾರತದಲ್ಲಿ ನಾಗರಿಕ ವಿಮಾನಯಾನ ಕ್ಷೇತ್ರವು ನಾನಾ ಸಮಸ್ಯೆಗಳನ್ನು ಎದುರಿಸುತ್ತಿದೆ. ಆದ್ದರಿಂದ, ಬೃಹತ್ ಮಾನವ ನಷ್ಟಕ್ಕೆ ಕಾರಣವಾಗುವ ವಿಮಾನ ಅಪಘಾತವನ್ನು ತಡೆಯಲು ಸರ್ಕಾರಗಳು ಮತ್ತು ವಿಮಾನಯಾನ ಸಂಸ್ಥೆಗಳು ಹೆಚ್ಚು ಗಮನ ಕೊಡಬೇಕಿದೆ. ಆದರೆ, ದುರಂತಗಳು ಘಟಿಸಿದ ಬಳಿಕವಷ್ಟೇ ಎಚ್ಚೆತ್ತುಕೊಳ್ಳುವ, ಘಟನೆಗಳಿಗೆ ಕಾರಣವಾದ ಅಂಶಗಳ ಮೇಲೆ ನೀತಿ-ನಿಯಮಗಳು ಮತ್ತು ಸುಧಾರಣೆಗಳನ್ನು ರೂಪಿಸುವಂತಹ ನಿರ್ಲಕ್ಷ್ಯ ಧೋರಣೆಯು ದಟ್ಟವಾಗಿದೆ. ಚಕ್ರಿಡಬ್ರಿ ದುರಂತದ ನಂತರ ಏರ್ ಟ್ರಾಫಿಕ್ ಕಂಟ್ರೋಲ್ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ಮಾಡಲಾಗಿತ್ತು ಎಂಬುದು ಗಮನಾರ್ಹ.

ಬದಲಾಗಿ, ವಿಮಾನಪತನ ಅಥವಾ ಅಪಘಾತಗಳು ಸಂಭವಿಸಲು ಕಾರಣವಾಗುವ ಅಂಶಗಳನ್ನು ಗುರುತಿಸಿ, ಅವುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವ ಪ್ರಯತ್ನಗಳು ನಡೆಯಬೇಕಿದೆ. ಅದರ ಭಾಗವಾಗಿ, ವಿಮಾನಗಳ ನಿಯಮಿತ ನಿರ್ವಹಣೆ ಮತ್ತು ದುರಸ್ತಿಯನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅತ್ಯಗತ್ಯವಾಗಿದೆ. ಆಧುನಿಕ ರಾಡಾರ್, ಜಿಪಿಎಸ್‌ ಹಾಗೂ ಎಐ-ಆಧಾರಿತ ತಂತ್ರಜ್ಞಾನವನ್ನು ವಿಮಾನಯಾನಗಳಲ್ಲಿ ಸಂಯೋಜಿಸಬೇಕಿದೆ. ಪೈಲಟ್ ಹಾಗೂ ಎಟಿಸಿ ಸಿಬ್ಬಂದಿಗೆ ಸಂವಹನ ಮತ್ತು ಸಮನ್ವಯದ ತರಬೇತಿ ನೀಡಲು ಒತ್ತು ಕೊಡಬೇಕಿದೆ. ಮೂಲಭೂತವಾಗಿ ರನ್‌ವೇ ವಿಸ್ತರಣೆ, ತುರ್ತು ರಕ್ಷಣಾ ಸೌಲಭ್ಯಗಳು ಹಾಗೂ ಆಧುನಿಕ ರಾಡಾರ್ ವ್ಯವಸ್ಥೆಯನ್ನು ಎಲ್ಲ ವಿಮಾನ ನಿಲ್ದಾಣಗಳಲ್ಲಿ ಅಳವಡಿಸುವ ತುರ್ತು ಅಗತ್ಯವಿದೆ. ಮುಖ್ಯವಾಗಿ, ಜನನಿಬಿಡ ಪ್ರದೇಶಗಳ ಸಮೀಪದಲ್ಲಿರುವ ವಿಮಾನ ನಿಲ್ದಾಣಗಳನ್ನು ಸ್ಥಳಾಂತರಿಸುವ ಅಥವಾ ಸುರಕ್ಷತಾ ಕ್ರಮಗಳನ್ನು ಬಲಪಡಿಸಲು ಹೆಚ್ಚಿನ ಒತ್ತುಕೊಡಬೇಕಿದೆ.

ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು (ಡಿಜಿಸಿಎ) ವಿಮಾನಗಳ ಕಟ್ಟುನಿಟ್ಟಾದ ತಪಾಸಣೆ ನಡೆಸಲು ಕ್ರಮ ತೆಗೆದುಕೊಳ್ಳಬೇಕು. ದೋಷವುಳ್ಳ ವಿಮಾನಗಳನ್ನು ಹಾರಾಟಕ್ಕೆ ಬಳಸಲು ಮುಂದಾಗುವ ಸಂಸ್ಥೆಗಳಿಗೆ ಬೃಹತ್ ದಂಡ ವಿಧಿಸುವ ವ್ಯವಸ್ಥೆಯನ್ನು ಜಾರಿಗೊಳಿಬೇಕು. ತಯಾರಕರು, ವಿಮಾನಯಾನ ಕಂಪನಿಗಳು ಹಾಗೂ ವಿಮಾನ ನಿಲ್ದಾಣ ಅಧಿಕಾರಿಗಳಿಗೆ ಸ್ಪಷ್ಟ ಜವಾಬ್ದಾರಿಯನ್ನು ನಿಗದಿಪಡಿಸಬೇಕು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X